ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ದಾಳಿ-ಪ್ರತಿದಾಳಿ ಮುಂದುವರಿದಿದ್ದು, ಮೊನ್ನೆ ಹಮಾಸ್ ನಡೆಸಿದ್ದ ರಾಕೆಟ್ ದಾಳಿಗೆ ಪ್ರತಿಯಾಗಿ ಇಂದು ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಗಾಜಾವನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಿಂದ ಗಾಜಾ ಸ್ಟ್ರಿಪ್ನಲ್ಲಿದ್ದ 13 ಅಂತಸ್ತಿನ ಕಟ್ಟಡ ನೆಲಸಮಗೊಂಡಿದೆ. ಈ ಕಟ್ಟಡದಲ್ಲಿ ಅಲ್ ಜಝೀರಾ ಸೇರಿ ಹಲವು ಮಾಧ್ಯಮಗಳ ಕಚೇರಿಯೂ ಇತ್ತು ಎಂದು ಅಲ್ ಜಝೀರಾ ಟ್ವೀಟ್ ಮಾಡಿದೆ. ಇಸ್ರೇಲ್ನ ರಾಕೆಟ್ ದಾಳಿಗೆ ಗಾಜಾ ಸ್ಟ್ರಿಪ್ ಸುತ್ತಲಿನ ಪ್ರದೇಶ ಹೊಗೆಯಿಂದ ಕೂಡಿತ್ತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ತಿಳಿಸಿದ್ದಾರೆ.
ಇನ್ನು ಏರ್ಸ್ಟ್ರೈಕ್ ನಡೆಸುವುದಕ್ಕೂ ಮೊದಲು ಇಸ್ರೇಲ್ ಸೈನ್ಯ ಕಟ್ಟಡದ ಮಾಲೀಕರಲ್ಲಿ ಒಬ್ಬರಾದ ಜವಾದ್ ಮೆಹೆಂದಿ ಎಂಬುವರಿಗೆ ಕರೆ ಮಾಡಿತ್ತು. ಈ ಕಟ್ಟಡ ಕೇವಲ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಯನ್ನಷ್ಟೇ ಅಲ್ಲ, ಹಮಾಸ್ ಉಗ್ರ ಸಂಘಟನೆಯ ಕಚೇರಿಯನ್ನೂ ಒಳಗೊಂಡಿದೆ. ಹಾಗಾಗಿಯೇ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸೈನ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಕೂಡ ಇಸ್ರೇಲ್ ಗಾಜಾದಲ್ಲಿ ದಾಳಿ ನಡೆಸಿತ್ತು. ಇನ್ನು ಇಸ್ರೇಲ್ ಭೂಸೇನೆ ಕೂಡ ಸುಮಾರು 9 ಸಾವಿರ ಸೈನಿಕರೊಂದಿಗೆ ದಾಳಿಗೆ ಸಜ್ಜಾಗಿದೆ. ಹಮಾಸ್ ಬಂಡುಕೋರರನ್ನು ಬಗ್ಗುಬಡೆಯುವುದೇ ನಮ್ಮ ಗುರಿ. ಇದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.
ಇದನ್ನೂ ಓದಿ: ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ
Published On - 11:41 pm, Sat, 15 May 21