AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್‌ವಿಡಿಯಾ: ರಾಜೀನಾಮೆ ಕೊಟ್ಟ ಕೆಲವೇ ದಿನಗಳಲ್ಲಿ ಪುನರಾಗಮನದ ಚರ್ಚೆ: ಜೆನ್ಸನ್ ಹುವಾಂಗ್‌ಗೆ ಮಸ್ಕ್ ಬೆಂಬಲ

ಜೆನ್ಸನ್ ಹುವಾಂಗ್ ಎನ್‌ವಿಡಿಯಾ ಸಿಇಒ ಸ್ಥಾನಕ್ಕೆ ಮರಳುವ ಸಾಧ್ಯತೆ ಬಗ್ಗೆ ಚರ್ಚೆ. ವೈಯಕ್ತಿಕ ಸಂಬಂಧಗಳ ವರದಿ ಹಾಗೂ ಬೇಹುಗಾರಿಕೆ ಅನುಮಾನಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಎಲಾನ್ ಮಸ್ಕ್ ಸೇರಿದಂತೆ ಹಲವು ತಂತ್ರಜ್ಞಾನ ದಿಗ್ಗಜರು ಅವರ ಮರು ನೇಮಕಕ್ಕೆ ಬೆಂಬಲ ಸೂಚಿಸಿದ್ದಾರೆ. ಮಧ್ಯಂತರ ಸಿಇಒ, ಸಂಭಾವ್ಯ ಉತ್ತರಾಧಿಕಾರಿಗಳು ಮತ್ತು ಹುವಾಂಗ್ ಪುನರಾಗಮನದ ಸವಾಲುಗಳ ಕುರಿತು ಲೇಖನ ಚರ್ಚಿಸುತ್ತದೆ, AI ಚಿಪ್‌ಗಳಲ್ಲಿ ಎನ್‌ವಿಡಿಯಾ ಪಾತ್ರವೂ ಉಲ್ಲೇಖವಾಗಿದೆ.

ಎನ್‌ವಿಡಿಯಾ: ರಾಜೀನಾಮೆ ಕೊಟ್ಟ ಕೆಲವೇ ದಿನಗಳಲ್ಲಿ ಪುನರಾಗಮನದ ಚರ್ಚೆ: ಜೆನ್ಸನ್ ಹುವಾಂಗ್‌ಗೆ ಮಸ್ಕ್ ಬೆಂಬಲ
ಜೆನ್ಸೆನ್ ಹುವಾಂಗ್ Image Credit source: Reuters
ನಯನಾ ರಾಜೀವ್
|

Updated on: Nov 16, 2026 | 7:23 AM

Share

ವಾಷಿಂಗ್ಟನ್, ನವೆಂಬರ್ 16: ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿಗಳಲ್ಲಿ ಒಂದಾದ ಎನ್​ವಿಡಿಯಾದ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಮತ್ತೆ ಕಂಪನಿಯ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚರ್ಚೆ ಶುರುವಾಗಿದೆ. ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಅವರು ಮರಳಿ ಬರಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್, ಹುವಾಂಗ್ ಅವರನ್ನು ಮತ್ತೆ ಸಿಇಒ ಆಗಿ ನೇಮಿಸಬೇಕೆಂದು ಒತ್ತಾಯಿಸುವ ಅರ್ಜಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಎಪಿಕ್ ಗೇಮ್ಸ್ ಸಿಇಒ ಟಿಮ್ ಸ್ವೀನಿ ಸೇರಿದಂತೆ ಹಲವು ತಂತ್ರಜ್ಞಾನ ಉದ್ಯಮದ ಪ್ರಮುಖರೂ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ನವೆಂಬರ್ 13ರಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದ ಮಸ್ಕ್, ಜೆನ್ಸನ್ ಅವರನ್ನು ಮರಳಿ ನೇಮಿಸುವ ಅರ್ಜಿ ನಡೆಯುತ್ತಿದೆ. ನಾನೂ ಅದಕ್ಕೆ ಸಹಿ ಹಾಕುತ್ತಿದ್ದೇನೆ ಎಂದು ಹೇಳಿದ್ದಾರೆ.

ಹುವಾಂಗ್ ರಾಜೀನಾಮೆಗೆ ಕಾರಣವೇನು?

ಜೆನ್ಸನ್ ಹುವಾಂಗ್ 1993ರಲ್ಲಿ ಎನ್‌ವಿಡಿಯಾ ಕಂಪನಿಯನ್ನು ಸಹ-ಸ್ಥಾಪಿಸಿದ್ದರು. ಸುಮಾರು 33 ವರ್ಷಗಳ ಕಾಲ ಕಂಪನಿಯ ನೇತೃತ್ವ ವಹಿಸಿದ್ದರು. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಅಗತ್ಯವಿರುವ ಶಕ್ತಿಶಾಲಿ ಚಿಪ್‌ಗಳ ಪ್ರಮುಖ ಪೂರೈಕೆದಾರನಾಗಿ ಎನ್‌ವಿಡಿಯಾ ಬೆಳೆಯುವಲ್ಲಿ ಅವರ ಪಾತ್ರ ದೊಡ್ಡದು.

ಆದರೆ ಇತ್ತೀಚೆಗೆ ಅವರ ವೈಯಕ್ತಿಕ ಸಂಬಂಧಗಳ ಬಗ್ಗೆ ವರದಿಗಳು ಪ್ರಕಟವಾದವು. ಚೀನಾದ ಉದ್ಯಮಿ ಆಲಿಸ್ ಹುವಾಂಗ್ ಅವರೊಂದಿಗಿನ ಸಂಬಂಧದ ಬಗ್ಗೆ ಅಮೆರಿಕದ ಕೆಲವು ಗುಪ್ತಚರ ಅಧಿಕಾರಿಗಳಿಗೆ ಅನುಮಾನಗಳಿವೆ ಎಂಬ ವರದಿಯೂ ವಿವಾದಕ್ಕೆ ಕಾರಣವಾಯಿತು. ಎನ್‌ವಿಡಿಯಾ ಮಂಡಳಿ ಈ ಆರೋಪಗಳು ಮತ್ತು ವಿದೇಶಿ ಗುಪ್ತಚರ ಪ್ರಯತ್ನದ ಸಾಧ್ಯತೆ ಕುರಿತು ಸ್ವತಂತ್ರ ತನಿಖೆ ಆರಂಭಿಸಿತ್ತು. ಈ ಬೆಳವಣಿಗೆಗಳ ನಡುವೆಯೇ ನವೆಂಬರ್ 12ರಂದು ಹುವಾಂಗ್ ಸಿಇಒ ಮತ್ತು ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ ಕಂಪನಿಯ ಅಧಿಕೃತ ಪ್ರಕಟಣೆಯಲ್ಲಿ ರಾಜೀನಾಮೆಗೆ ನಿರ್ದಿಷ್ಟ ಕಾರಣವನ್ನು ತಿಳಿಸಿಲ್ಲ.

ಇದನ್ನೂ ಓದಿ:

‘ನಮ್ಮ ಬಾಸ್ ಬೇಕು’: ಜೆನ್ಸೆನ್ ಹುವಾಂಗ್ ಪರ ನಿಂತ ಎನ್​ವಿಡಿಯಾದ 1,600ಕ್ಕೂ ಹೆಚ್ಚು ಉದ್ಯೋಗಿಗಳು

ಎನ್‌ವಿಡಿಯಾದ ಮುಂದಿನ ಸಿಇಒ ಯಾರು?

ಹುವಾಂಗ್ ರಾಜೀನಾಮೆ ಬಳಿಕ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಕೊಲೆಟ್ ಕ್ರೆಸ್ ಅವರನ್ನು ಮಧ್ಯಂತರ ಸಿಇಒ ಆಗಿ ನೇಮಿಸಲಾಗಿದೆ. ಶಾಶ್ವತ ಸಿಇಒ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಮಂಡಳಿ ಆರಂಭಿಸಿದೆ. ಬ್ರಿಟನ್‌ನ ಪ್ರಮುಖ ಚಿಪ್ ಕಂಪನಿಯಾದ ಆರ್ಮ್ ಹೋಲ್ಡಿಂಗ್ಸ್‌ನ ಸಿಇಒ ರೆನೆ ಹಾಸ್ ಅವರ ಹೆಸರೂ ಸಂಭಾವ್ಯ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಕೇಳಿಬಂದಿದೆ. ಅವರು ಈ ಹಿಂದೆ ಎನ್‌ವಿಡಿಯಾದಲ್ಲಿಯೂ ಕೆಲಸ ಮಾಡಿದ್ದರು. ಆದರೆ ಯಾರನ್ನೂ ಅಧಿಕೃತವಾಗಿ ಆಯ್ಕೆ ಮಾಡಿಲ್ಲ ಎಂದು ಕಂಪನಿ ಮಂಡಳಿ ತಿಳಿಸಿದೆ.

ಹುವಾಂಗ್ ಮರಳುವ ಹಾದಿಗೆ ಅಡ್ಡಿಯಿದೆಯೇ?

ಹುವಾಂಗ್ ಅವರನ್ನು ಮರಳಿ ಕರೆತರಲು ಸಿಲಿಕಾನ್ ವ್ಯಾಲಿಯ ಪ್ರಭಾವಿ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ. ಮಂಡಳಿಯ ಮೇಲೆ ಪ್ರಭಾವ ಬೀರಲು ಹಿರಿಯ ತಂತ್ರಜ್ಞಾನ ಉದ್ಯಮಿಗಳ ತಂಡವೊಂದನ್ನು ರಚಿಸಲಾಗುತ್ತಿದೆ. ಶ್ವೇತಭವನದ ಬೆಂಬಲ ಪಡೆಯುವ ಪ್ರಯತ್ನವೂ ನಡೆಯುತ್ತಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ.

ಆದರೆ ಅಮೆರಿಕದ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಇದಕ್ಕೆ ವಿರುದ್ಧವಾದ ನಿಲುವು ವ್ಯಕ್ತಪಡಿಸಿದ್ದಾರೆ. ಎನ್‌ವಿಡಿಯಾ ಹೊಸ ಸಿಇಒ ಆಯ್ಕೆ ಮಾಡುವಾಗ ಕಂಪನಿಯ ಹೊರಗಿನ ವ್ಯಕ್ತಿಯನ್ನು ಪರಿಗಣಿಸಬೇಕು ಮತ್ತು ನಾಯಕತ್ವದಲ್ಲಿ ದೊಡ್ಡ ಬದಲಾವಣೆ ತರಬೇಕು ಎಂದು ಹೇಳಿದ್ದಾರೆ. ಹೀಗಾಗಿ ಹುವಾಂಗ್ ಅವರ ಪುನರಾಗಮನ ಸುಲಭವಾಗಿಲ್ಲ

ಎನ್‌ವಿಡಿಯಾ ಎಂದರೇನು?

ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿ. 1993ರಲ್ಲಿ ಜೆನ್ಸನ್ ಹುವಾಂಗ್, ಕ್ರಿಸ್ ಮಲಚೋವ್ಸ್ಕಿ ಮತ್ತು ಕರ್ಟಿಸ್ ಪ್ರೀಮ್ ಸೇರಿ ಸ್ಥಾಪಿಸಿದರು. ಕಂಪ್ಯೂಟರ್ ಗ್ರಾಫಿಕ್ಸ್, ಗೇಮಿಂಗ್ ಮತ್ತು ಕೃತಕ ಬುದ್ಧಿಮತ್ತೆಗೆ ಬೇಕಾದ ಜಿಪುಯು ಚಿಪ್‌ಗಳನ್ನು ತಯಾರಿಸುತ್ತದೆ. ಎಐ ಕ್ಷೇತ್ರದಲ್ಲಿ ಮಹತ್ವವೇನು? ಚಾಟ್​ಜಿಪಿಟಿ ಸೇರಿದಂತೆ ಹಲವು ಎಐ ವ್ಯವಸ್ಥೆಗಳಿಗೆ ತರಬೇತಿ ನೀಡಲು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಎನ್‌ವಿಡಿಯಾದ ಜಿಪಿಯು ಚಿಪ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More