ಲೈಂಗಿಕ ಹಗರಣದಿಂದ ಎನ್ವಿಡಿಯಾದಿಂದ ಹೊರಬೀಳಲಿರುವ ಜೆನ್ಸೆನ್ ಹುವಾಂಗ್ಗೆ ಇಲಾನ್ ಮಸ್ಕ್ ಅವರಿಂದ ಮಸ್ತ್ ಆಫರ್
ಲೈಂಗಿಕ ಹಗರಣದಿಂದಾಗಿ ಎನ್ವಿಡಿಯಾದ ಸಿಇಒ ಸ್ಥಾನ ಕಳೆದುಕೊಳ್ಳಲಿರುವ ಜೆನ್ಸೆನ್ ಹುವಾಂಗ್ ಅವರಿಗೆ ಕೆಲಸದ ಆಫರ್ ಇಲ್ಲದಿಲ್ಲ. ಜೆನ್ಸೆನ್ ಅವರಿಗೆ ಕೆಲಸ ಕೊಡಲು ಇಲಾನ್ ಮಸ್ಕ್ ತುದಿಗಾಲಲ್ಲಿ ನಿಂತಿದ್ದಾರೆ. ಜೆನ್ಸೆನ್ ಅವರನ್ನು ನೇಮಕ ಮಾಡಿಕೊಳ್ಳಿ ಎಂದು ಎಕ್ಸ್ ಬಳಕೆದಾರರೊಬ್ಬರ ಮನವಿಗೆ, ಅದೊಂದು ತನಗೆ ಗೌರವ ಎಂದು ಮಸ್ಕ್ ಹೇಳಿದ್ದಾರೆ.

ವಾಷಿಂಗ್ಟನ್, ನವೆಂಬರ್ 12: ಚೀನೀ ಮೂಲದ ಗೂಢಚಾರಿಣಿ ಎನ್ನಲಾದ ಮಹಿಳೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಜೆನ್ಸೆನ್ ಹುವಾಂಗ್ ಅವರನ್ನು ಎನ್ವಿಡಿಯಾದ ಸಿಇಒ ಸ್ಥಾನದಿಂದ ಕೆಳಗಿಳಿಸಲು ಕಂಪನಿಯ ಆಡಳಿತ ಮಂಡಳಿಯು ಯೋಜಿಸಿದೆ. ಇದರ ಬೆನ್ನಲ್ಲೇ ವಿಶ್ವದ ನಂಬರ್ ಒನ್ ಉದ್ಯಮಿ ಇಲಾನ್ ಮಸ್ಕ್ ಅವರು ಜೆನ್ಸೆನ್ ಅವರನ್ನು ಬರಮಾಡಿಕೊಳ್ಳಲು ಸಿದ್ಧವಾಗಿದ್ದಾರೆ.
ಜೆನ್ಸೆನ್ ಅವರು ಎನ್ವಿಡಿಯಾ ತೊರೆದು ಬಂದರೆ ಕೆಲಸ ಕೊಡಿ ಎಂದು ಎಕ್ಸ್ ಬಳಕೆದಾರರೊಬ್ಬರು ಇಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ ಬಹಿರಂಗವಾಗಿ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಇಲಾನ್ ಮಸ್ಕ್ ಅವರು ಜೆನ್ಸೆನ್ ಅವರನ್ನು ನೇಮಕ ಮಾಡುವುದು ತಮಗೆ ಒಂದು ಗೌರವ ಎಂದು ಹೇಳಿಕೊಂಡಿದ್ದಾರೆ.
ಈ ಹಿಂದೆಯೂ ಇಲಾನ್ ಮಸ್ಕ್ ಅವರು ಜೆನ್ಸೆನ್ ಹುವಾಂಗ್ ಅವರಿಗೆ ನೈತಿಕ ಬೆಂಬಲ ನೀಡಿದ್ದಿದೆ. ಜೆನ್ಸೆನ್ ಅವರ ಅಕ್ರಮ ಸಂಬಂಧ ಬಹಿರಂಗಗೊಂಡಾಗ ಅವರಿಗೆ ಇಲಾನ್ ಮಸ್ಕ್ ಸೇರಿ ಕೆಲ ಪ್ರಮುಖ ಉದ್ಯಮಿಗಳು ಬೆಂಬಲ ಕೊಟ್ಟಿರುವುದುಂಟು.
ಜೆನ್ಸೆನ್ ಬಂದರೆ ಮಸ್ಕ್ಗೆ ಏನು ಲಾಭ?
ಜೆನ್ಸೆನ್ ಹುವಾಂಗ್ ಅವರು ಎನ್ವಿಡಿಯಾದ ಮೂವರು ಸಹ-ಸಂಸ್ಥಾಪಕರಲ್ಲಿ ಒಬ್ಬರು. ಇವತ್ತು ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಎಐ ಮಾಡಲ್ಗಳಿಗೆ ಶಕ್ತಿ ನೀಡುತ್ತಿರುವುದು ಎನ್ವಿಡಿಯಾದ ಶಕ್ತಿಶಾಲಿ ಚಿಪ್ಗಳೇ.
ಇಲಾನ್ ಮಸ್ಕ್ ಅವರ ಸೂಪರ್ ಕಂಪ್ಯೂಟರ್ಗಳಿಗೆ ಎನ್ವಿಡಿಯಾದ ಚಿಪ್ಗಳನ್ನೇ ಬಳಸಲಾಗುತ್ತಿದೆ. ಜೆನ್ಸೆನ್ ಅವರು ಮನಸ್ಸು ಮಾಡಿದರೆ ಎನ್ವಿಡಿಯಾ ರೀತಿಯಲ್ಲೇ ಮತ್ತೊಂದು ಚಿಪ್ ಕಂಪನಿ ಕಟ್ಟಬಲ್ಲುರು. ಮಸ್ಕ್ ಅವರ ವಿಸ್ತೃತ ಉದ್ಯಮಗಳಿಗೆ ಹೊಸ ಸೇರ್ಪಡೆಯಾಗಬಹುದು. ಎಐ ಟೆಕ್ನಾಲಜಿ ಅಭಿವೃದ್ಧಿಯಲ್ಲಿ ಬಹುತೇಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಜೆನ್ಸೆನ್ ಸಂಪತ್ತಿಗೆ ಡಬಲ್ ಹೊಡೆತ; ಎಐ ಶಾಕ್ ಜೊತೆಗೆ ಈಗ ಲೈಂಗಿಕ ಹಗರಣದ ಆಘಾತ; ಟಾಪ್-10 ಪಟ್ಟಿಯಿಂದ ಹೊರಕ್ಕೆ
ಜೆನ್ಸೆನ್ ಹುವಾಂಗ್ ಅವರ ಹಗರಣಗಳೇನು?
62 ವರ್ಷದ ಜೆನ್ಸೆನ್ ಹುವಾಂಗ್ ಅವರು ತಾನು ಚೀನಾ ಮೂಲದ ಅಲೈಸ್ ಹುವಾಂಗ್ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ. ತನ್ನ ಮಡದಿ ಮತ್ತು ಮಕ್ಕಳಿಗೆ ಹಾಗೂ ಕಂಪನಿ ಉದ್ಯೋಗಿಗಳಿಗೆ ದ್ರೋಹ ಎಸಗಿಬಿಟ್ಟೆ ಎಂದು ಕೆಲ ದಿನಗಳ ಹಿಂದೆ ತಪ್ಪೊಪ್ಪಿಕೊಂಡು ಕ್ಷಮೆ ಕೋರಿದ್ದರು. ಆದರೆ, ಅಲೈಸ್ ಹುವಾಂಗ್ ಅವರು ಚೀನಾದ ಗೂಢಚಾರಿಣಿ ಎನ್ನುವ ಆರೋಪ ಇದೆ. ಈಕೆಯನ್ನು ಬಳಸಿ ಚೀನಾ ಎನ್ವಿಡಿಯಾದ ಅತ್ಯಾಧುನಿಕ ಚಿಪ್ಗಳನ್ನು ಪಡೆಯುತ್ತಿತ್ತು ಎನ್ನಲಾಗಿದೆ.
ಚೀನೀ ಗೂಢಚಾರಿಣಿ ಜೊತೆಗಿನ ಅಫೇರ್ ಬೆಳಕಿಗೆ ಬಂದ ಬೆನ್ನಲ್ಲೇ ಎನ್ವಿಡಿಯಾದ ಹೆಲ್ತ್ಕೇರ್ ವಿಭಾಗದ ಉಪಾಧ್ಯಕ್ಷೆಯೊಬ್ಬಳೊಂದಿಗೂ ಜೆನ್ಸೆನ್ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎನ್ವಿಡಿಯಾದ ಆಡಳಿತ ಮಂಡಳಿಯು ಸಿಇಒ ಸ್ಥಾನದಿಂದ ಜೆನ್ಸೆನ್ ಅವರನ್ನು ಕೆಳಗಿಳಿಸಲು ಯೋಜಿಸಿದೆ. ಹಂಗಾಮಿಯಾಗಿ ಸಿಇಒ ಸ್ಥಾನಕ್ಕಾಗಿ ಅಭ್ಯರ್ಥಿಯನ್ನು ಶೋಧಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
