ಸರ್ವಾಧಿಕಾರದ ಕಪಿಮುಷ್ಟಿಯಲ್ಲಿ ಸಿಲುಕಿರುವ ಕೆಲವು ದೇಶಗಳಲ್ಲಿ ಉತ್ತರ ಕೊರಿಯಾ ಸಹ ಒಂದು. ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನುಡಿದಿದ್ದೇ ಆಜ್ಞೆ, ಬರೆದದ್ದೇ ಶಾಸನ! ಇದೀಗ ಈ ಹುಚ್ಚು ಮನಸ್ಸಿನ ಕೆಟ್ಟ ಹಠದ ಸರ್ವಾಧಿಕಾರಿ ಬಹು ಚಾಣಾಕ್ಷ ಆಜ್ಞೆಯೊಂದನ್ನ ಹೊರಡಿಸಿದ್ದಾನಂತೆ.
‘ಬಡವರು ಹಸು ಸಾಕುತ್ತಾರೆ, ಶ್ರೀಮಂತರು ಶ್ವಾನಗಳನ್ನು’
ಅಂದ ಹಾಗೆ, ಕಿಮ್ ಜಾಂಗ್ನ ಈ ನಡೆ ಕೊಂಚ ಜಿಗುಪ್ಸೆ ತರುವಂತಿದ್ರೂ ಅದರ ಹಿಂದಿನ ಯೋಚನೆ ನಿಜಕ್ಕೂ ಸರ್ವಾಧಿಕಾರಿಯ ಚಾಣಾಕ್ಷತೆಯನ್ನ ಎದ್ದುತೋರಿಸುತ್ತದೆ. ಕೊರೊನಾ ವೈರಸ್ನಿಂದ ಜಗತ್ತಿನಾದ್ಯಂತ ಉಂಟಾಗಿರುವ ಆರ್ಥಿಕ ಸಂಕಷ್ಟ ಉತ್ತರ ಕೊರಿಯಾವನ್ನೂ ಬಿಟ್ಟಿಲ್ಲ. ಇದರ ಜೊತೆಗೆ, ದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಹಾಗಾಗಿ, ಜನರು ತಿನ್ನೋಕೆ ಆಹಾರವಿಲ್ಲದೆ ಪರದಾಡುತ್ತಿದ್ದಾರೆ.
ಮನೆಗೊಂದು ಶ್ವಾನ ಹಿಡಿದು ತಿನ್ನಿ
ಹಸಿದ ಹೊಟ್ಟೆ ಯಾರ ಮಾತಿಗೂ ಬಗ್ಗೋದಿಲ್ಲ ಅನ್ನೋದು ಕಿಮ್ಗೆ ಚೆನ್ನಾಗಿ ಗೊತ್ತು. ಹೀಗಾಗಿ, ಆತ ದೇಶದಲ್ಲಿ ಬಹು ಜನಪ್ರಿಯವಾಗಿರುವ ಶ್ವಾನದ ಮಾಂಸವನ್ನು ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂಥ ವ್ಯವಸ್ಥೆ ಮಾಡಿದ್ದಾನೆ. ಜೊತೆಗೆ, ಉತ್ತರ ಕೊರಿಯಾದಲ್ಲಿ ಶ್ವಾನಗಳನ್ನ ಸಾಕುವುದು ಕೇವಲ ಶ್ರೀಮಂತರು. ಬಡವರಿಗೆ ಸಾಕು ಪ್ರಾಣಿ ಅಂದರೆ ಹಸು. ಹಂದಿ ಮತ್ತು ಎಮ್ಮೆಗಳು. ಹೀಗಾಗಿ, ತನಗೆ ಬಡವರ ಪರ ಕಾಳಜಿಯಿದೆ ಎಂಬ ಧೋರಣೆಯನ್ನ ಪ್ರದರ್ಶಿಸಲು ಕಿಮ್ ಮುಂದಾಗಿದ್ದಾನಂತೆ. ಶ್ವಾನಗಳನ್ನು ಸಾಕುವುದು ಬಂಡವಾಳಶಾಹಿಯ ಪ್ರತೀಕ ಎಂಬ ನೆಪವೊಡ್ಡಿ ಬಡವರನ್ನ ಸಂತೈಸುವ ನಾಟಕಕ್ಕೆ ಮುಂದಾಗಿದ್ದಾನೆ.