ಸ್ವಂತ ಸಂಬಂಧಿಗಳನ್ನೇ ಮುಗಿಸಿದ್ದ ಆಡಳಿತಗಾರ: ಕಿಮ್ ಜಾಂಗ್ ಉನ್ ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಗಳಿಸಿದ್ದೇಕೆ? ಇಲ್ಲಿದೆ ಮಾಹಿತಿ
ಕಿಮ್ ಜಾಂಗ್ ಉನ್ ಹಿನ್ನೆಲೆ, ಅಧಿಕಾರಕ್ಕೆ ಬಂದ ನಂತರ ಸಂಬಂಧಿಗಳನ್ನೇ ಮುಗಿಸಿದ ಕ್ರೂರ ಕಥನ. ಉತ್ತರ ಕೊರಿಯಾದಲ್ಲಿ ಜಾರಿಯಲ್ಲಿರುವ ಹೇರ್‌ಸ್ಟೈಲ್‌ನಿಂದ ಇಂಟರ್ನೆಟ್‌ವರೆಗೆ ಸರ್ಕಾರದ ನಿಯಂತ್ರಣ ಮತ್ತು ಕಠಿಣ ಶಿಕ್ಷೆಗಳ ಬಗ್ಗೆ ಮಾಹಿತಿ. ಕಿಮ್ ನಂತರ, ಅವರ ಮಗಳು ಕಿಮ್ ಜು-ಏ ಅಥವಾ ಸಹೋದರಿ ಕಿಮ್ ಯೋ ಜಾಂಗ್ ಯಾರು ಉತ್ತರಾಧಿಕಾರಿಯಾಗಬಹುದು ಎಂಬುದರ ಕುರಿತು ವಿಶ್ಲೇಷಣೆ.

ಪ್ಯೋಂಗ್ಯಾಂಗ್, ಅಕ್ಟೋಬರ್ 20: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಮತ್ತೆ ಊಹಾಪೋಹಗಳೆದ್ದಿವೆ. ಅವರ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಚೀನಾದ ಬೀಜಿಂಗ್ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರು ಕೋಮಾದಲ್ಲಿದ್ದಾರೆ ಎನ್ನುವ ಅಂತೆ ಕಂತೆಗಳುಗಳು ಹರಿದಾಡುತ್ತಿವೆ. ಈ ಸಮಯದಲ್ಲಿ ಕಿಮ್ ಜಾಂಗ್ ಉನ್ ಯಾರು, ಉತ್ತರ ಕೊರಿಯಾದಲ್ಲಿರುವ ಕಾನೂನುಗಳೇನು ಎನ್ನುವ ಮಾಹಿತಿ ಇಲ್ಲಿ ನೀಡಲಾಗಿದೆ.
ಕಿಮ್ ಜಾಂಗ್ ಉನ್ ಯಾರು? ಹಿನ್ನೆಲೆ ಏನು?
ಕಿಮ್ ಜಾಂಗ್ ಉನ್ ಉತ್ತರ ಕೊರಿಯಾವನ್ನು ಆಳುತ್ತಿರುವ ಕಿಮ್ ರಾಜವಂಶದ 3ನೇ ತಲೆಮಾರಿನ ಸರ್ವಾಧಿಕಾರಿ. ಅವರ ಅಜ್ಜ ಕಿಮ್ ಇಲ್ ಸುಂಗ್ , ತಂದೆ ಕಿಮ್ ಜಾಂಗ್ ಇಲ್. 2011 ರ ಡಿಸೆಂಬರ್‌ನಲ್ಲಿ ತಂದೆಯ ಮರಣದ ನಂತರ, ಕೇವಲ 27-28 ನೇ ವಯಸ್ಸಿನಲ್ಲಿ ಕಿಮ್ ಜಾಂಗ್ ಉನ್ ಅಧಿಕಾರ ವಹಿಸಿಕೊಂಡರು.
ಇವರು ಸ್ವಿಟ್ಜರ್ಲೆಂಡ್‌ನ ಬರ್ನ್‌ನಲ್ಲಿ ‘ಪಾಕ್ ಉನ್’ ಎಂಬ ನಕಲಿ ಹೆಸರಿನಲ್ಲಿ ರಹಸ್ಯವಾಗಿ ಶಾಲಾ ಶಿಕ್ಷಣ ಪೂರೈಸಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ತನ್ನ ಅಧಿಕಾರಕ್ಕೆ ಅಡ್ಡಬರಬಹುದು ಎಂಬ ಕಾರಣಕ್ಕೆ ತನ್ನ ಸ್ವಂತ ಚಿಕ್ಕಪ್ಪ ಜಾಂಗ್ ಸಾಂಗ್-ಥೇಕ್‌ನನ್ನು ಮರಣದಂಡನೆಗೆ ಒಳಪಡಿಸಿದರು. 2017ರಲ್ಲಿ ಮಲೇಷ್ಯಾದ ವಿಮಾನ ನಿಲ್ದಾಣದಲ್ಲಿ ತನ್ನ ಮಲಸಹೋದರ ಕಿಮ್ ಜಾಂಗ್-ನಾಮ್‌ನನ್ನು ವಿಷ ಪ್ರಯೋಗಿಸಿ ಕೊಲ್ಲಿಸಿದ ಆರೋಪವೂ ಇವರ ಮೇಲಿದೆ. ಕಿಮ್ ನೇತೃತ್ವದಲ್ಲಿ ಉತ್ತರ ಕೊರಿಯಾ ಅಂತರಖಂಡ ಕ್ಷಿಪಣಿಗಳು ಮತ್ತು ಹೈಡ್ರೋಜನ್ ಬಾಂಬ್‌ಗಳನ್ನು ಯಶಸ್ವಿಯಾಗಿ ಪರೀಕ್ಷಿಸಿ ವಿಶ್ವಕ್ಕೆ ದೊಡ್ಡ ಸವಾಲಾಗಿ ಬೆಳೆದಿದೆ.
ಉತ್ತರ ಕೊರಿಯಾದಲ್ಲಿರುವ ವಿಲಕ್ಷಣ ಮತ್ತು ಕಠಿಣ ನಿಯಮಗಳು
ಹೇರ್‌ಸ್ಟೈಲ್ ಮತ್ತು ಫ್ಯಾಷನ್ ಸರ್ಕಾರ ಅನುಮೋದಿಸಿದ 15 ರಿಂದ 28 ಹೇರ್‌ಸ್ಟೈಲ್‌ಗಳನ್ನು ಮಾತ್ರ ಮಾಡಿಸಿಕೊಳ್ಳಬಹುದು. ಪಾಶ್ಚಿಮಾತ್ಯ ಸಂಸ್ಕೃತಿಯ ಸಂಕೇತವೆಂದು ಪರಿಗಣಿಸಿ ಬ್ಲೂ ಜೀನ್ಸ್ , ಪಿಯರ್ಸಿಂಗ್ ಮತ್ತು ಚರ್ಮದ ಜಾಕೆಟ್‌ಗಳನ್ನು ನಿಷೇಧಿಸಲಾಗಿದೆ. ಮಾಧ್ಯಮ ಮತ್ತು ಇಂಟರ್ನೆಟ್ ಜಾಗತಿಕ ಇಂಟರ್ನೆಟ್ ಸಂಪರ್ಕವಿಲ್ಲ: ಸರ್ಕಾರದ ನಿಯಂತ್ರಣದಲ್ಲಿರುವ ‘ಕ್ವಾಂಗ್ಮ್ಯೊಂಗ್’ಎಂಬ ಇಂಟರ್ನೆಟ್ ಮಾತ್ರ ಲಭ್ಯ. ಮೂರು ಸರ್ಕಾರಿ ಟಿವಿ ಚಾನೆಲ್‌ಗಳಿದ್ದು, ಅವು ಕೇವಲ ಸರ್ಕಾರದ ಪ್ರಚಾರವನ್ನು ಮಾತ್ರ ಪ್ರಸಾರ ಮಾಡುತ್ತವೆ.
ವಿದೇಶಿ ಸಂಸ್ಕೃತಿ ನಿಷೇಧ ದಕ್ಷಿಣ ಕೊರಿಯಾದ ಕೆ-ಪಾಪ್ (K-Pop) ಹಾಡುಗಳನ್ನು ಕೇಳುವುದು, ಸಿನಿಮಾಗಳನ್ನು ನೋಡುವುದು ದೇಶದ್ರೋಹ. ಈ ಅಪರಾಧಕ್ಕೆ ಜೀವಾವಧಿ ಜೈಲು ಅಥವಾ ಮರಣದಂಡನೆಯೇ ಶಿಕ್ಷೆ ವಿಧಿಸಲಾಗುತ್ತದೆ. ಒಬ್ಬ ವ್ಯಕ್ತಿ ರಾಜಕೀಯ ಅಪರಾಧ ಎಸಗಿದರೆ ಅಥವಾ ದೇಶ ಬಿಟ್ಟು ಓಡಿಹೋಗಲು ಯತ್ನಿಸಿದರೆ, ಆತನೊಂದಿಗೆ ಆತನ ಪೋಷಕರು ಮತ್ತು ಮಕ್ಕಳನ್ನೂ ಬಂಧಿಸಿ ಕಾರ್ಮಿಕ ಶಿಬಿರಗಳಿಗೆ ಕಳುಹಿಸಲಾಗುತ್ತದೆ.
ಧರ್ಮ ಮತ್ತು ನಂಬಿಕೆ: ಬೈಬಲ್ ಹೊಂದುವುದು ಅಥವಾ ಧಾರ್ಮಿಕ ಆಚರಣೆಗಳನ್ನು ನಡೆಸುವುದು ಕಠಿಣ ಅಪರಾಧ. ದೇಶದಲ್ಲಿ ಕಿಮ್ ಕುಟುಂಬದ ಪೂಜೆಯೇ ಸರ್ವಶ್ರೇಷ್ಠ. ನಾಗರಿಕರು ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣಿಸಲು ಸರ್ಕಾರದ ಪಾಸ್ ಬೇಕು. ಸರ್ಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಸಂಪೂರ್ಣ ನಿಷೇಧ.
ಇದನ್ನೂ ಓದಿ:
ಮುಂದಿನ ಸರ್ವಾಧಿಕಾರಿ ಅಥವಾ ಉತ್ತರಾಧಿಕಾರಿ ಯಾರು? ಕಿಮ್ ಕುಟುಂಬದ ರಕ್ತ ಸಂಬಂಧ ಹೊಂದಿರುವವರು ಮಾತ್ರ ದೇಶವನ್ನು ಆಳಬಹುದು ಎಂಬುದು ಅಲ್ಲಿನ ಸಾಂವಿಧಾನಿಕ ನಂಬಿಕೆ. ಕಿಮ್ ಜಾಂಗ್ ಉನ್ ನಂತರ ಉತ್ತರಾಧಿಕಾರತ್ವದ ರೇಸ್‌ನಲ್ಲಿ ಇಬ್ಬರು ಪ್ರಮುಖರಿದ್ದಾರೆ. ಕಿಮ್ ಜಾಂಗ್ ಉನ್ ಅವರ ಎರಡನೇ ಮಗಳು ಎನ್ನಲಾದ ಕಿಮ್ ಜು-ಏ.
2022 ರ ನವೆಂಬರ್‌ನಲ್ಲಿ ಖಂಡಾಂತರ ಕ್ಷಿಪಣಿ ಉಡಾವಣೆಯ ವೇಳೆ ಮೊದಲ ಬಾರಿಗೆ ಈಕೆಯನ್ನು ಸಾರ್ವಜನಿಕವಾಗಿ ಪರಿಚಯಿಸಲಾಯಿತು. ನಂತರ ಮಿಲಿಟರಿ ಪರೇಡ್‌ಗಳು, ಪ್ರಮುಖ ರಾಜತಾಂತ್ರಿಕ ಸಭೆಗಳಲ್ಲಿ ತಂದೆಯ ಪಕ್ಕದಲ್ಲೇ ನಿಲ್ಲಿಸಲಾಗುತ್ತಿದೆ. ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ (NIS) ಪ್ರಕಾರ, ಕಿಮ್ ಜಾಂಗ್ ಉನ್ ಅವರು ತಮ್ಮ ಮಗಳನ್ನು ಮುಂದಿನ ನಾಯಕಿಯಾಗಿ ರೂಪಿಸಲು ತರಬೇತಿ ನೀಡುತ್ತಿದ್ದು, ಆಕೆ ಈಗಾಗಲೇ ಅಧಿಕೃತ ಉತ್ತರಾಧಿಕಾರಿಯ ಹಂತವನ್ನು ತಲುಪಿದ್ದಾಳೆ.
ಕಿಮ್ ಯೋ ಜಾಂಗ್
ಈಕೆ ಕಿಮ್ ಜಾಂಗ್ ಉನ್ನ ಸಹೋದರಿ. ಉತ್ತರ ಕೊರಿಯಾದ ಆಡಳಿತದಲ್ಲಿ ಪ್ರಸ್ತುತ ಅತ್ಯಂತ ಶಕ್ತಿಶಾಲಿ ಮಹಿಳೆ. ವರ್ಕರ್ಸ್ ಪಾರ್ಟಿಯ ಪ್ರಚಾರ ವಿಭಾಗದ ಉಪ ನಿರ್ದೇಶಕಿ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ವಿರುದ್ಧ ಕಟು ಹೇಳಿಕೆಗಳನ್ನು ನೀಡುವುದು ಮತ್ತು ದೇಶದ ಆಂತರಿಕ ಭದ್ರತೆಯನ್ನು ನಿಯಂತ್ರಿಸುವುದರಲ್ಲಿ ಈಕೆ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಕಿಮ್ ಜಾಂಗ್ ಉನ್ ಅನಿರೀಕ್ಷಿತವಾಗಿ ಅಕಾಲಿಕ ಮರಣ ಹೊಂದಿದರೆ ಮತ್ತು ಅವರ ಮಗಳು ಅಪ್ರಾಪ್ತ ವಯಸ್ಕಳಾಗಿದ್ದರೆ, ಕಿಮ್ ಯೋ ಜಾಂಗ್ ಮಧ್ಯಂತರವಾಗಿ ಅಥವಾ ಪೂರ್ಣಪ್ರಮಾಣದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಪ್ರಬಲ ಸಾಧ್ಯತೆಯಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Tue, 20 October 26




