ಕುವೈತ್: ವಿಶ್ವದೆಲ್ಲೆಡೆ ಕೊರೊನಾದಿಂದ ಕಂಗಾಲಾಗಿ ಹೋಗಿದ್ದ ಹಲವಾರು ಅನಿವಾಸಿ ಭಾರತೀಯರು ಕಳೆದ ಕೆಲವು ದಿನಗಳಿಂದ ತಾಯ್ನಾಡಿಗೆ ಮರಳುತ್ತಿದ್ದಾರೆ. ಇತ್ತ ಇವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರೆ ಅತ್ತ ಕುವೈತ್ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಂಕಷ್ಟ ಎದುರಾಗಿದೆ.
ವಲಸೆ ಕಾನೂನಿಗೆ ಸಿಕ್ತು ಸಂಸದೀಯ ಸಮಿತಿಯ ಅನುಮೋದನೆ
ಕುವೈತ್ನಲ್ಲಿ ಸ್ಥಳೀಯರಿಗಿಂತ ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಜಾರಿಮಾಡಲು ನಿರ್ಧರಿಸಲಾಗಿತ್ತು ಎಂದು ತಿಳಿದುಬಂದಿದೆ. ಜೊತೆಗೆ, ಕುಸಿದ ತೈಲ ಬೆಲೆ ಹಾಗೂ ಕೊರೊನಾ ಮಹಾಮಾರಿಯಿಂದ ಕುವೈತ್ ತತ್ತರಿಸಿ ಹೋಗಿದೆ. ಹೀಗಾಗಿ, ತನ್ನ ಆರ್ಥಿಕ ಸಂಪನ್ಮೂಲಗಳನ್ನ ಉಳಿಸಿಕೊಳ್ಳಲು ದೇಶದಲ್ಲಿ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲೇಬೇಕೆಂಬ ಕೂಗು ದೇಶದ ಹಲವೆಡೆಯಿಂದ ಕೇಳಿಬಂದಿದ್ದ ಕಾರಣದಿಂದ ಅಲ್ಲಿನ ಆಡಳಿತವು ಈ ನಿರ್ಧಾರವನ್ನ ಕೈಗೊಂಡಿದೆ.
ಸದ್ಯಕ್ಕೆ, ಕುವೈತ್ನ ಒಟ್ಟು ಜನಸಂಖ್ಯೆ 4.3 ಮಿಲಿಯನ್. ಅದರಲ್ಲಿ ಸ್ಥಳೀಯರ ಸಂಖ್ಯೆ ಕೇವಲ 1.3 ಮಿಲಿಯನ್ ಆದರೆ ಇನ್ನುಳಿದ 3 ಮಿಲಿಯನ್ ಜನಸಂಖ್ಯೆ ವಲಸಿಗರಿಂದಲೇ ಕೂಡಿದ್ದು. ಈ 3 ಮಿಲಿಯನ್ನಲ್ಲಿ ಅನಿವಾಸಿ ಭಾರತೀಯರೇ ಬಹುಪಾಲು (1.45 ಮಿಲಿಯನ್). ಇದೀಗ ಅನುಮೋದನೆ ಸಿಕ್ಕಿರುವ ಮಸೂದೆಯ ಪ್ರಕಾರ ಭರತೀಯರ ಸಂಖ್ಯೆ ಕುವೈತ್ ಜನಸಂಖ್ಯೆಯ ಶೇಕಡಾ 15ರಷ್ಟು ದಾಟಬಾರದು. ಹೀಗಾಗಿ , ಈ ಮಸೂದೆಯಿಂದ ಲಕ್ಷಾಂತರ ಅನಿವಾಸಿ ಭಾರತೀಯರು ತಾಯ್ನಾಡಿಗೆ ಮರಳಬೇಕಾಗುತ್ತದೆ.
ಪ್ರತಿವರ್ಷ ಇಳಿಮುಖವಾಗಲಿದೆ ವಲಸಿಗರ ಸಂಖ್ಯೆ
ಭಾರತದ ಆದಾಯಕ್ಕೂ ಬೀಳಲಿದೆ ಹೊಡೆತ
ಕುವೈತ್ನಲ್ಲಿರುವ ಭಾರತದ ರಾಯಭಾರ ಕಚೇರಿ ನೀಡಿರುವ ಅಂಕಿಗಳ ಪ್ರಕಾರ, 28,000 ಜನ ಸರ್ಕಾರಿ ಉದ್ಯೋಗದಲ್ಲಿದ್ದರೆ ಇನ್ನುಳಿದವರು ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ತಮ್ಮ ಕೆಲಸಕ್ಕೆ ಸಮರ್ಪಕ ವೇತನವೂ ಪಡೆಯುತ್ತಿದ್ದಾರೆ. ಬರುವ ವರಮಾನವನ್ನು ಭಾರತದಲ್ಲಿರುವ ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿದ್ದರಿಂದ ದೇಶದ ವಿದೇಶಿ ವಿನಿಮಯದ ಒಳಹರಿವಿನಲ್ಲಿ ಕುವೈತ್ನ ಭಾರತೀಯರು ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ 2018ರಲ್ಲಿ ಕುವೈತ್ನ ಅನಿವಾಸಿ ಭಾರತೀಯರಿಂದ ದೇಶಕ್ಕೆ ಸರಿಸುಮಾರು 480 ಕೋಟಿ ರೂಪಾಯಿ ಸಂದಾಯವಾಗಿದೆ. ಆದ್ದರಿಂದ, ಕುವೈತ್ನ ಈ ಒಂದು ನಿರ್ಧಾರ ಭಾರತದ ವಿದೇಶಿ ಆದಾಯಕ್ಕೆ ಭಾರೀ ಪೆಟ್ಟು ನೀಡುವ ಸಾಧ್ಯತೆ ಉಂಟಾಗಿದೆ.
ಒಟ್ನಲ್ಲಿ, ಕುವೈತ್ ಸರ್ಕಾರದ ಆ ಒಂದು ನಿರ್ಧಾರದ ಪರಿಣಾಮ ಭಾರತದಲ್ಲೂ ಪ್ರತಿಧ್ವನಿಸಲಿದೆ ಎಂಬುದು ತಜ್ಞರ ಅಭಿಪ್ರಾಯ. ಆರ್ಥಿಕ ಕೊರತೆಯ ಜೊತೆಗೆ ತಾಯ್ನಾಡಿಗೆ ಮರಳಲಿರುವ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಹಲವು ತೊಡಕುಗಳು ಎದುರಾಗಬಹುದು ಎಂಬ ಮಾತೂ ಸಹ ಕೇಳಿಬಂದಿದೆ.
Published On - 6:40 pm, Mon, 6 July 20