ಜರ್ಮನಿಯಿಂದ ಬೆಂಗಳೂರಿಗೆ ಬರಬೇಕಿದ್ದ ಲುಫ್ತಾನ್ಸಾ ವಿಮಾನದ ಮಾರ್ಗ ಬದಲಾವಣೆ: ಟರ್ಕಿಯಲ್ಲಿ ತುರ್ತು ಭೂಸ್ಪರ್ಶ

| Updated By: Rakesh Nayak Manchi

Updated on: Oct 20, 2022 | 7:34 AM

ಬೆಂಗಳೂರಿಗೆ ಬರುತ್ತಿದ್ದ ಲುಫ್ತಾನ್ಸಾದ ಫ್ರಾಂಕ್ಫರ್ಟ್ ವಿಮಾನವು ವೈದ್ಯಕೀಯ ತುರ್ತುಸ್ಥಿತಿ ಹಿನ್ನೆಲೆ ಇಸ್ತಾಂಬುಲ್​ ಕಡೆಗೆ ತಿರುಗಿಸಲಾಗಿದೆ. ಇದರಿಂದಾಗಿ ಹಿರಿಯರು, ಮಕ್ಕಳು ಸೇರಿದಂತೆ ಪ್ರಯಾಣಿಕರು ಯಾವುದೇ ವಿಮಾನಯಾನ ಸಂಸ್ಥೆಗಳ ಸಂಪರ್ಕವಿಲ್ಲದೆ ಸಿಲುಕಿಕೊಂಡಿದ್ದಾರೆ.

ಜರ್ಮನಿಯಿಂದ ಬೆಂಗಳೂರಿಗೆ ಬರಬೇಕಿದ್ದ ಲುಫ್ತಾನ್ಸಾ ವಿಮಾನದ ಮಾರ್ಗ ಬದಲಾವಣೆ: ಟರ್ಕಿಯಲ್ಲಿ ತುರ್ತು ಭೂಸ್ಪರ್ಶ
ಬೆಂಗಳೂರಿಗೆ ಬರುತ್ತಿದ್ದ ಲುಫ್ತಾನ್ಸಾ ವಿಮಾನ ಇಸ್ತಾಂಬುಲ್​ ಏರ್ಪೋರ್ಟ್​ನಲ್ಲಿ ಲ್ಯಾಂಡಿಂಗ್
Follow us on

ಬೆಂಗಳೂರು: ಜರ್ಮನಿಯ ಫ್ರಾಂಕ್​ಫರ್ಟ್​ನಿಂದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದ ಲುಫ್ತಾನ್ಸಾ ವಿಮಾನವನ್ನು ವೈದ್ಯಕೀಯ ತುರ್ತುಸ್ಥಿತಿ ಹಿನ್ನೆಲೆ ಟರ್ಕಿಯ ಇಸ್ತಾಂಬುಲ್​ನಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ. ಪರಿಣಾಮವಾಗಿ ಹಿರಿಯರು, ಮಕ್ಕಳು ಸೇರಿದಂತೆ ಪ್ರಯಾಣಿಕರು ಯಾವುದೇ ವಿಮಾನಯಾನ ಸಂಸ್ಥೆಗಳ ಸಂಪರ್ಕವಿಲ್ಲದೆ ಕಳೆದ 24 ಗಂಟೆಗಳಿಂದ ಪರದಾಡುವಂತಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಲುಫ್ತಾನ್ಸಾ, ತುರ್ತುಸ್ಥಿತಿಯ ನಂತರ ಬಳಸಿದ ಆಮ್ಲಜನಕ ಸಿಲಿಂಡರ್​ಗಳನ್ನು ಬದಲಾಯಿಸಬೇಕಾಗಿತ್ತು. ಇದು ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು ಎಂದು ತಿಳಿಸಿದೆ.

“ಮಕ್ಕಳು, ಹಿರಿಯರು, ನಡೆಯಲು ಸಾಧ್ಯವಾಗದವರು, ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರು, ಇಂಗ್ಲಿಷ್ ಅಥವಾ ಕನ್ನಡ ಅರ್ಥವಾಗದವರು, ಮಾತನಾಡಲು ಬಾರದ ಪ್ರಯಾಣಿಕರಿದ್ದಾರೆ” ಎಂದು ಇಸ್ತಾಂಬುಲ್​ಗೆ ತಿರುಗಿದ ವಿಮಾನದಲ್ಲಿದ್ದ ಪ್ರಯಾಣಿಕರಾದ ಸೌಭಾಗ್ಯಲಕ್ಷ್ಮಿ ಎಂಬವರು ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್​ಗೆ ಮಾಹಿತಿ ನೀಡಿದ್ದಾರೆ.

“ಸುಮಾರು 30 ಗಂಟೆಗಳ ಕಾಲ ಲುಫ್ತಾನ್ಸಾದಿಂದ ಯಾವುದೇ ಅಧಿಕೃತ ಸಂವಹನ ಇರಲಿಲ್ಲ. ತಾಂತ್ರಿಕ ಸಮಸ್ಯೆ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಪರಿಷ್ಕೃತ ಸಮಯವನ್ನು ಪ್ರಯಾಣಿಕರಿಗೆ ತಿಳಿಸದೇ ಇರುವುದು ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿದೆ” ಎಂದು ಅವರು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ 1.05 ಕ್ಕೆ ಫ್ರಾಂಕ್‌ಫರ್ಟ್‌ನಿಂದ ಹೊರಟ LH 754 ವಿಮಾನವು ಬುಧವಾರ 1.25ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿತ್ತು. ಆದರೆ ಟೇಕ್​ಆಫ್ ಆದ ಒಂದು ಗಂಟೆಯ ನಂತರ ತುರ್ತುಸ್ಥಿತಿ ಕಂಡುಬಂದು ಮಧ್ಯಾಹ್ನ 2 ಗಂಟೆಗೆ ಇಸ್ತಾಂಬುಲ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಯಿತು. ಇಂದು ಬೆಳಗ್ಗೆ ಬೆಂಗಳೂರಿಗೆ ತಲುಪುವ ನಿರೀಕ್ಷೆ ಇದೆ.

ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಹೋಟೆಲ್ ಕೊಠಡಿ ಮತ್ತು ತ್ವರಿತ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದೆ. ಅದಾಗ್ಯೂ ಅನೇಕರು ವಿಮಾನಯಾನ ಸಂಸ್ಥೆಯ ಕಳಪೆ ನಿರ್ವಹಣೆಯನ್ನು ಸಾಮಾಜಿಕ ಜಾಲತಾಣವಾದ ಟ್ವಿಟರ್​ನಲ್ಲಿ ಟೀಕಿಸಿದರು.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:26 am, Thu, 20 October 22