ಭಾರತ ಹಾಗೂ ಮಾಲ್ಡೀವ್ಸ್ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು(Mohamed Muizzu) ಶೀಘ್ರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಯಿಝು ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರಕ್ಕೆ ಬಂದ ನಂತರ ಅವರು ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಭೇಟಿ ನೀಡಿದ್ದಾರೆ. ಸದ್ಯ ಅವರು ಸೋಮವಾರದಿಂದ ಚೀನಾ ಪ್ರವಾಸದಲ್ಲಿದ್ದಾರೆ. ಮಾಲ್ಡೀವ್ಸ್‌ನ ಅಧ್ಯಕ್ಷರು ಭಾರತಕ್ಕೆ ಮೊದಲ ಭೇಟಿ ನೀಡುವ ಸಂಪ್ರದಾಯವನ್ನು ಮುಯಿಝು ಮುರಿದಿದ್ದರು.
ಮುಯಿಝು ಸರ್ಕಾರದ ಸಚಿವರು ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವ ಮುನ್ನವೇ ಜನವರಿಯಲ್ಲಿ ಭಾರತಕ್ಕೆ ಮುಯಿಝು ಭೇಟಿ ನೀಡುವುದಾಗಿ ಹೇಳಲಾಗಿತ್ತು.
ಮತ್ತಷ್ಟು ಓದಿ: ಮಾಲ್ಡೀವ್ಸ್‌ನ ಕರಾಳ ಮುಖ: ದ್ವೀಪದಲ್ಲಿ ಪ್ರವಾಸಿಗರು ಅನುಭವಿಸಿದ ನೋವಿನ ಕತೆಗಳು
ಮೊಹಮ್ಮದ್ ಇದೀಗ ಒಂದು ವಾರಗಳ ಚೀನಾ ಪ್ರವಾಸದಲ್ಲಿದ್ದಾರೆ, ಅಲ್ಲಿ ಫುಜಿಯಾನ್ ಪ್ರಾಂತ್ಯದ ವ್ಯಾಪಾರ ವಲಯಕ್ಕೆ ಭೇಟಿ ನೀಡಿದ್ದಾರೆ. ಅವರು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ರನ್ನು ಭೇಟಿಯಾಗಲಿದ್ದಾರೆ. ಮಾಲ್ಡೀವ್ಸ್ ನ ಜನಸಂಖ್ಯೆ 5.2 ಲಕ್ಷ.ಪ್ರಧಾನಿ ಮೋದಿ ಇತ್ತೀಚೆಗೆ ಲಕ್ಷದ್ವೀಪಕ್ಕೆ ಹೋಗಿದ್ದರು. ಅವರ ಭೇಟಿಯ ಬಗ್ಗೆ ಮಾಲ್ಡೀವ್ಸ್ ಸಚಿವರು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು, ನಂತರ ಉಭಯ ದೇಶಗಳ ನಡುವೆ ಉದ್ವಿಗ್ನತೆ ಉಂಟಾಗಿದೆ.
ಪರಿಸ್ಥಿತಿಯನ್ನು ನಿಭಾಯಿಸಲು ಮಾಲ್ಡೀವ್ಸ್ ಸರ್ಕಾರ ಎಲ್ಲಾ ಮೂವರು ಸಚಿವರನ್ನು ಅಮಾನತುಗೊಳಿಸಿದೆ. ಮೊಹಮ್ಮದ್ ಮುಯಿಝು ಅಧಿಕಾರ ಸ್ವೀಕರಿಸುವ ಮೊದಲು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸಕಾರಾತ್ಮಕವಾಗಿದ್ದವು.
2004 ರ ಸುನಾಮಿ ಮತ್ತು 2014 ರಲ್ಲಿ ನೀರಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮೊದಲು ಸಹಾಯಕ್ಕೆ ಬಂದಿತ್ತು. ಕೊರೊನಾ ಸಮಯದಲ್ಲೂ ಭಾರತವು ಮಾಲ್ಡೀವ್ಸ್‌ಗೆ ಲಸಿಕೆ ಮೂಲಕ ಸಹಾಯ ಮಾಡಿತ್ತು.
ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ಗೆ ದುಬಾರಿಯಾಗಿ ಪರಿಣಮಿಸಿದೆ.
ಇದಿಗ ಮುಯಿಝು ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಅವರನ್ನು ಪದಚ್ಯುತಿಗೊಳಿಸುವ ನಿರ್ಣಯವನ್ನು ಸಂಸದೀಯ ಅಲ್ಪಸಂಖ್ಯಾತ ನಾಯಕ ಅಲಿ ಅಜೀಮ್ ತೆಗೆದುಕೊಂಡಿದ್ದಾರೆ.
ಮುಯಿಝು ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಸಹಾಯ ಮಾಡುವಂತೆ ಮಾಲ್ಡೀವ್ಸ್ ನಾಯಕರನ್ನು ವಿನಂತಿಸಿದ್ದಾರೆ.
ಮಾಲ್ಡೀವ್ಸ್ ವಿದೇಶಾಂಗ ನೀತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ನಮ್ಮ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಕ್ಷ ಬದ್ಧವಾಗಿದೆ ಎಂದು ಅಲಿ ಅಜೀಮ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:43 am, Tue, 9 January 24