ವೈರಸ್ ಸೋಂಕಿನಿಂದ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿಯ ಸಾವಿಗೆ ವೈರಸ್ ಸೋಂಕು ಕಾರಣ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 06, 2022 | 1:15 PM

ರೋಗಿಯ ದೇಹದಲ್ಲಿ ಪ್ರಾಣಿಯ ಸೋಂಕು ಬಲಿತು ಇತರ ಮನುಷ್ಯರಿಗೆ ಹರಡಿದರೆ ಅದು ಮತ್ತೊಂದು ಜಾಗತಿಕ ಪಿಡುಗಿಗೆ ನಾಂದಿ ಹಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ವೈರಸ್ ಸೋಂಕಿನಿಂದ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿಯ ಸಾವಿಗೆ ವೈರಸ್ ಸೋಂಕು ಕಾರಣ
ಹಂದಿಯ ಹೃದಯ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ
Follow us on

ವಂಶವಾಹಿ ರೂಪಾಂತರಿಸಿದ್ದ ಹಂದಿಯ ಹೃದಯವನ್ನು ಕಸಿ ಮಾಡಿಸಿಕೊಂಡಿದ್ದ ವಿಶ್ವದ ಮೊದಲ ವ್ಯಕ್ತಿಯು ಮೃತಪಡಲು ಪಾರ್ಸಿನ್ ವೈರಸ್ ಸೋಂಕು ಕಾರಣ ಎಂದು ಇದೀಗ ದೃಢಪಟ್ಟಿದೆ. ಈ ವೈರಾಣುಗಳು ಹಂದಿಯ ಹೃದಯದಲ್ಲಿ ಕಂಡು ಬರುತ್ತವೆ. ಕಳೆದ ಜನವರಿಯಲ್ಲಿ ಅಮೆರಿಕದ ಮೆರಿಲ್ಯಾಂಡ್​ನಲ್ಲಿ ಸಾವಿನಂಚಿನಲ್ಲಿದ್ದ ವ್ಯಕ್ತಿಯ ಜೀವ ಉಳಿಸಲು ವಂಶವಾಹಿಗಳನ್ನು ಬದಲಿಸಿದ್ದ ಹಂದಿಯ ಹೃದಯವನ್ನು ಕಸಿ ಮಾಡಲಾಯಿತು. ಕಸಿ ಶಸ್ತ್ರ ಚಿಕಿತ್ಸೆ ಆದ 40 ದಿನಗಳ ನಂತರ ಅವರು ಮೃತಪಟ್ಟರು. 57 ವರ್ಷದ ಈ ವ್ಯಕ್ತಿ ಮೃತಪಡಲು ನಿಖರ ಕಾರಣ ಏನು ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಹೃದಯ ಕಸಿ ಶಸ್ತ್ರ ಚಿಕಿತ್ಸೆಗಳ ಪರಿಣಾಮಗಳ ಬಗ್ಗೆ ಆತಂಕದ ಮಾತುಗಳು ಕೇಳಿಬಂದಿದ್ದವು.

ಶಸ್ತ್ರಚಿಕಿತ್ಸೆ ನಡೆಸಿದ್ದ ತಜ್ಞರ ತಂಡದಲ್ಲಿದ್ದವರಿಗೆ ಈ ಸಾವಿನ ನಿಖರ ಕಾರಣವನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಶ್ಲೇಷಣೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿರಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಕಸಿ ಮಾಡಿದ ಹೃದಯವು ಕೆಲ ವಾರಗಳವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸಿತ್ತು. ಈ ಅವಧಿಯಲ್ಲಿ ಅವರ ದೇಹವು ಹೃದಯವನ್ನು ನಿರಾಕರಿಸಿರಲಿಲ್ಲ. ಆದರೆ ಶಸ್ತ್ರಚಿಕಿತ್ಸೆಯ ಕೆಲ ದಿನಗಳ ನಂತರ ಅವರ ಆರೋಗ್ಯ ಕ್ಷೀಣಿಸಿತು ಎಂದು ಯೂನಿವರ್ಸಿಟಿ ಆಫ್ ಮೆರಿಲೆಂಡ್​ನ ವರದಿಯು ಹೇಳಿದೆ.

ಕಸಿ ಹೃದಯದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲು ಹಂದಿಗಳ ಹೃದಯದಲ್ಲಿ ಕಂಡು ಬರುವ ವೈರಾಣುಗಳೇ ಕಾರಣ ಎಂದು ವರದಿಯು ಗಮನ ಸೆಳೆದಿದೆ. ಮೃತ ಬೆನೆಟ್ ಅವರಿಗೆ ಹೃದಯ ಕಸಿ ಮಾಡಿದ್ದ ತಂಡಕ್ಕೆ ಸಿಕ್ಕಿದ್ದ ಹೃದಯದಲ್ಲಿ ಪೊರ್​ಸಿನ್ ಸೈಟೊಮೆಗಲೊವೈರಸ್ ಸೋಂಕು ಇತ್ತು. ಕಸಿ ಸಂದರ್ಭದಲ್ಲಿ ಇದನ್ನು ಗಮನಿಸಿದ್ದರೆ ಹೃದಯ ಅಳವಡಿಸಿದ ವ್ಯಕ್ತಿಗೆ ಸೋಂಕು ಉಂಟಾಗುವುದನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.

ಹಂದಿ ಹೃದಯದಲ್ಲಿ ವೈರಾಣು ಸೋಂಕು ಇಲ್ಲದಿದ್ದರೆ ಬೆನೆಟ್ ಇನ್ನಷ್ಟು ತಿಂಗಳು ಬದುಕಿ ಉಳಿಯುತ್ತಿದ್ದರು. ಮುಂದಿನ ದಿನಗಳಲ್ಲಿ ಹೃದಯ ಕಸಿಗೆ ಮೊದಲು ವೈರಾಣುಗಳ ಪತ್ತೆ ಬಗ್ಗೆ ಕಠಿಣ ಪರಿಶೀಲನೆ ಶಿಷ್ಟಾಚಾರಗಳನ್ನು ಅನುಸರಿಸಬೇಕು ಎಂದು ಹಲವು ತಜ್ಞರು ಸಲಹೆ ಮಾಡಿದ್ದಾರೆ. ಇಂಥ ಸೋಂಕುಗಳನ್ನು ಮುಂದಿನ ದಿನಗಳಲ್ಲಿ ಖಂಡಿತ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.

ಹಂದಿಗಳ ಹೃದಯವನ್ನು ಮನುಷ್ಯರಿಗೆ ಕಸಿ ಮಾಡಬಹುದು ಎಂದು ಪ್ರಯೋಗಾಲಯ ಮಟ್ಟದಲ್ಲಿ ಈಗಾಗಲೇ ಕಂಡುಕೊಳ್ಳಲಾಗಿದೆ. ಈ ಸಾಧ್ಯತೆಯನ್ನು ಇನ್ನಷ್ಟು ವಿಸ್ತರಿಸುವ ಪ್ರಯೋಗಾಲಯಗಳು ನಡೆಯುತ್ತಿವೆ. ಯಾವುದೇ ಪ್ರಾಣಿಯ ಅಂಗವನ್ನು ಮನುಷ್ಯನ ದೇಹಕ್ಕೆ ಅಳವಡಿಸಿದಾಗ ಮನುಷ್ಯನ ದೇಹದಲ್ಲಿರುವ ರೋಗನಿರೋಧಕ ವ್ಯವಸ್ಥೆಯು ಆ ಅಂಗದ ವಿರುದ್ಧ ಯುದ್ಧ ಸಾರುತ್ತದೆ. ಇದರಿಂದ ಹತ್ತಾರು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ತಪ್ಪಿಸಲು ಹಂದಿಗಳ ವಂಶವಾಹಿಗಳನ್ನು ಮಾರ್ಪಡಿಸುವ ತಂತ್ರವನ್ನು ಕೆಲ ಕಂಪನಿಗಳು ಚಾಲ್ತಿಗೆ ತಂದಿವೆ. ಕೆಲ ವಂಶವಾಹಿಗಳನ್ನು ತೆಗೆದು, ಕೆಲ ವಂಶವಾಹಿಗಳನ್ನು ಸೇರಿಸಿ ನಿರ್ದಿಷ್ಟ ಅಂಗವನ್ನು ಸ್ವೀಕರಿಸುವ ಮನುಷ್ಯನ ದೇಹದಂಥದ್ದೇ ವಂಶವಾಹಿಯನ್ನು ಕೃತಕವಾಗಿ ರೂಪಿಸಿ, ಹಂದಿಗಳ ವಂಶವಾಹಿಗಳನ್ನು ಬದಲಿಸಲಾಗುತ್ತದೆ.

ಈ ಪ್ರಕ್ರಿಯೆಯ ಹಲವು ಪ್ರಯೋಗಗಳು ಅಂತಿಮ ಹಂತಕ್ಕೆ ಬಂದಿವೆಯಾದರೂ ಇದರ ಪರಿಣಾಮಗಳ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ. ರೋಗಿಯ ದೇಹದಲ್ಲಿ ಪ್ರಾಣಿಯ ಸೋಂಕು ಬಲಿತು ಇತರ ಮನುಷ್ಯರಿಗೆ ಹರಡಿದರೆ ಅದು ಮತ್ತೊಂದು ಜಾಗತಿಕ ಪಿಡುಗಿಗೆ ನಾಂದಿ ಹಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ. ಹೀಗಾದಾಗ ಇಂಥ ರೋಗಿಗಳನ್ನು ಜೀವಮಾನ ಪೂರ್ತಿ ನಿಗಾವಣೆಯಲ್ಲಿಯೇ ಇರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ‘ಉಚಿತ ಅಂಗಾಂಗ ಕಸಿ ಯೋಜನೆ ಮೂಲಕ ಕರ್ನಾಟಕ ಬೇರೆಲ್ಲಾ ರಾಜ್ಯಗಳಿಗಿಂತ ಮುಂದಿದೆ’; ಕೇಂದ್ರ ಸಚಿವ ಮಾಂಡವೀಯ ಶ್ಲಾಘನೆ

ಇದನ್ನೂ ಓದಿ: ಹಿಜಾಬ್ ತೀರ್ಪು: ಭಟ್ಕಳದಲ್ಲಿ ಅಂಗಡಿ ಮುಚ್ಚಿದ ಮುಸ್ಲಿಂ ವರ್ತಕರು, ನಾಳೆ ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸುವಂತೆ ಕರೆ