Sri Lanka: ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದಲ್ಲಿ 5 ವಾರಗಳಲ್ಲಿ ಎರಡನೇ ಬಾರಿಗೆ ತುರ್ತು ಪರಿಸ್ಥಿತಿ ಜಾರಿ
Sri Lanka emergency: ಇದೀಗ ದ್ವೀಪ ರಾಷ್ಟ್ರದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. 5 ವಾರಗಳಲ್ಲಿ ಇದು ಎರಡನೇ ಬಾರಿಗೆ ಘೋಷಣೆಯಾಗುತ್ತಿರುವ ತುರ್ತು ಪರಿಸ್ಥಿತಿಯಾಗಿದೆ.
ಶ್ರೀಲಂಕಾದಲ್ಲಿ (Sri Lanka) ಸೃಷ್ಟಿಯಾದ ಆರ್ಥಿಕ ಬಿಕ್ಕಟ್ಟು, ಇಡೀ ದೇಶದ ಚಿತ್ರಣವನ್ನೇ ಬದಲಿಸಿದೆ. ಇದೀಗ ದ್ವೀಪ ರಾಷ್ಟ್ರದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ತುರ್ತು ಪರಿಸ್ಥಿತಿ (Sri Lanka emergency) ಘೋಷಿಸಲಾಗಿದೆ. 5 ವಾರಗಳಲ್ಲಿ ಇದು ಎರಡನೇ ಬಾರಿಗೆ ಘೋಷಣೆಯಾಗುತ್ತಿರುವ ತುರ್ತು ಪರಿಸ್ಥಿತಿಯಾಗಿದೆ. ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ಹಿನ್ನೆಲೆಯಲ್ಲಿ ಭದ್ರತಾ ಪಡೆಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ (economic crisis) ಬಗ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಶುಕ್ರವಾರ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಿದ ನಂತರ ಅವರು “ಸಾರ್ವಜನಿಕ ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು” ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ಅಗತ್ಯವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆ ನಿಲುಕದಷ್ಟು ಏರಿಕೆಯಾಗಿವೆ. ಹಣದುಬ್ಬರದ ಪರಿಣಾಮ ಜನಸಾಮಾನ್ಯರು ಜೀವನ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಅಧ್ಯಕ್ಷ ಗೋಟಬಯ ರಾಜಪಕ್ಸೆ ವಕ್ತಾರರು ತಿಳಿಸಿದ್ದಾರೆ.
ಗುರುವಾರದಿಂದ ರಾಜಧಾನಿ ಕೊಲಂಬೊದ ಸರೋವರದ ಮೇಲೆ ಮಾನವ ನಿರ್ಮಿತ ದ್ವೀಪದಲ್ಲಿರುವ ಶಾಸಕಾಂಗಕ್ಕೆ ಹೋಗುವ ರಸ್ತೆಯಲ್ಲಿ ಸಾವಿರಾರು ವಿದ್ಯಾರ್ಥಿ ಪ್ರತಿಭಟನಾಕಾರರು ಮೊಕ್ಕಾಂ ಹೂಡಿದ್ದರು. ಅಧಿಕಾರಿಗಳು ಎರಡು ಟ್ರಕ್‌ಗಳಿಂದ ಜಲಫಿರಂಗಿ ಹಾಗೂ ಅಶ್ರುವಾಯುವನ್ನು ಸಿಡಿಸಿದರು, ಆದರೆ ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮತ್ತೆ ಅಶ್ರುವಾಯು ಮತ್ತು ಜಲಫಿರಂಗಿಯನ್ನು ಹಾರಿಸಿದರು. ಈಗ ತುರ್ತುಪರಿಸ್ಥಿತಿ ಹೇರಿಕೆ ಮಾಡಿರುವುದರಿಂದ ಸೇನೆಗೆ ಶಂಕಿತರನ್ನು ಬಂಧಿಸಿ ದೀರ್ಘಾವಧಿಯವರೆಗೂ ನ್ಯಾಯಾಂಗದ ಮೇಲ್ವಿಚಾರಣೆ ಇಲ್ಲದೇ ಬಂಧನದಲ್ಲಿಡುವುದಕ್ಕೆ ಸಾಧ್ಯವಾಗಲಿದೆ.
ಕಳೆದೊಂದು ತಿಂಗಳಿನಿಂದ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೆಲೆದೂಡಿತ್ತು. ಆರ್ಥಿಕ ಸಮಸ್ಯೆ ಬಿಗಡಾಯಿಸಿರುವುದರಿಂದ ಶ್ರೀಲಂಕಾದಲ್ಲಿ ಆಹಾರವಸ್ತು, ಇಂಧನ ಮತ್ತು ಔಷಧದ ತೀವ್ರ ಕೊರತೆಯಿದೆ. ಅಲ್ಲದೆ ದೈನಂದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಜನತೆ ಹತಾಶರಾಗಿದ್ದು ಸರಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಈ ಮಧ್ಯೆ, ಅಧ್ಯಕ್ಷ ಗೊತಬಯ ರಾಜಪಕ್ಸ ಮತ್ತು ಸರಕಾರದ ವಿರುದ್ಧ ಮುಂದಿನ ವಾರ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ ಹೇಳಿದ್ದಾರೆ.
ಇದೀಗ ಹೊಸದಾಗಿ ಹೇರಿರುವ ತುರ್ತು ಪರಿಸ್ಥಿತಿಯ ನಿಬಂಧನೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಹಿಂದಿನ ತುರ್ತು ಪರಿಸ್ಥಿತಿಯ ಕಾನೂನುಗಳ ಪ್ರಕಾರ, ಮಿಲಿಟರಿ ನಿಯೋಜನೆ, ಯಾವುದೇ ಆರೋಪವಿಲ್ಲದೇ ಜನರನ್ನು ಬಂಧಿಸುವುದು ಮತ್ತು ಪ್ರತಿಭಟನೆ ಹತ್ತಿಕ್ಕುವುದು ಸೇರಿದಂತೆ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 7:23 am, Sat, 7 May 22