ಶ್ರೀಲಂಕಾದಲ್ಲಿ ಖಾಸಗಿ ಬ್ಯಾಂಕ್ಗಳು ವಿದೇಶಿ ವಿನಿಮಯ ಕೊರತೆಯಿಂದ ಬಳಲುತ್ತಿದ್ದು, ಆಮದು ಮಾಡಿಕೊಳ್ಳಲು ಹಣಕಾಸು ವ್ಯವಸ್ಥೆ ಒದಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಆಹಾರ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅಧ್ಯಕ್ಷರಾದ ಗೊಟಬಾಯಾ ರಾಜಪಕ್ಸ ಮಂಗಳವಾರದಂದು ಮಾತನಾಡಿ, ಸಕ್ಕರೆ, ಅಕ್ಕಿ ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳನ್ನು ಸಂಗ್ರಹಿಸುವಂತಿಲ್ಲ ಎಂದು ತುರ್ತು ನಿಯಮಾವಳಿ ರೂಪಿಸಿ, ಆದೇಶ ಹೊರಡಿಸಲಾಗಿದೆ. ಈ ಆದೇಶದ ಮೂಲಕವಾಗಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ದೊರೆಯುತ್ತದೆ. ಸರ್ಕಾರದಿಂದ ಈಗ ಆಹಾರ ಪದಾರ್ಥಗಳ ಬೆಲೆಯನ್ನು ನಿಯಂತ್ರಣ ಮಾಡಬೇಕಿರುವುದರಿಂದ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸುವ ವರ್ತಕರಿಂದ ಅವುಗಳನ್ನು ವಶಪಡಿಸಿಕೊಳ್ಳುವ, ಬಂಧಿಸುವ ಅಧಿಕಾರವನ್ನು ನೀಡಲಾಗಿದೆ.