Sri Lanka Economic Crisis ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗೆ ನಿರ್ಬಂಧ; 36 ಗಂಟೆಗಳ ಕರ್ಫ್ಯೂ ವಿಧಿಸಿದ ಸರ್ಕಾರ

Sri Lanka Economic Crisis ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗೆ ನಿರ್ಬಂಧ; 36 ಗಂಟೆಗಳ ಕರ್ಫ್ಯೂ ವಿಧಿಸಿದ ಸರ್ಕಾರ
ಶ್ರೀಲಂಕಾದಲ್ಲಿ ಪ್ರತಿಭಟನೆ

ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಕರ್ಫ್ಯೂ ಮತ್ತು ತುರ್ತು ಪರಿಸ್ಥಿತಿಯನ್ನು ಹೇರುವ ಅಧ್ಯಕ್ಷರ ಕ್ರಮವನ್ನು ವಿರೋಧಿಸಿ ಶ್ರೀಲಂಕಾದ ವಿರೋಧ ಪಕ್ಷದ ಶಾಸಕರು ಭಾನುವಾರ ರಾಜಧಾನಿ ಕೊಲಂಬೊದಲ್ಲಿ ಮೆರವಣಿಗೆ ನಡೆಸಿದರು.

TV9kannada Web Team

| Edited By: Rashmi Kallakatta

Apr 03, 2022 | 4:08 PM

ಆರ್ಥಿಕ ಬಿಕ್ಕಟ್ಟಿನ (Economic Crisis) ನಡುವೆಯೇ ಅಶಾಂತಿಯನ್ನು ನಿಭಾಯಿಸಲು ಸರ್ಕಾರವು ಕರ್ಫ್ಯೂ ವಿಧಿಸಿದ ನಂತರ ಶ್ರೀಲಂಕಾವು (SriLanka) ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿದೆ ಎಂದು ಇಂಟರ್ನೆಟ್ ಮಾನಿಟರಿಂಗ್ ಸಂಸ್ಥೆ ನೆಟ್‌ಬ್ಲಾಕ್ಸ್ ಭಾನುವಾರ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಶ್ರೀಲಂಕಾ ಸರ್ಕಾರವು ಶನಿವಾರ 36 ಗಂಟೆಗಳ ಕರ್ಫ್ಯೂ (Curfew) ವಿಧಿಸಿದ್ದು ರಾಷ್ಟ್ರವ್ಯಾಪಿ ಸಾರ್ವಜನಿಕ ತುರ್ತುಸ್ಥಿತಿಯನ್ನು ಜಾರಿಗೊಳಿಸಲಾಗಿದೆ. ಶನಿವಾರ ಸಂಜೆ 6 ರಿಂದ ಸೋಮವಾರ (ಏಪ್ರಿಲ್ 4) ಬೆಳಿಗ್ಗೆ 6 ರವರೆಗೆ ಜಾರಿಯಾಗುವಂತೆ ದ್ವೀಪದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.  ಏತನ್ಮಧ್ಯೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರತೀಯ ಸಶಸ್ತ್ರ ಪಡೆಗಳು ದ್ವೀಪ ರಾಷ್ಟ್ರಕ್ಕೆ ಆಗಮಿಸಿವೆ ಎಂಬ ಸಾಮಾಜಿಕ ಮಾಧ್ಯಮದ ವದಂತಿಯನ್ನು ಶ್ರೀಲಂಕಾ ರಕ್ಷಣಾ ಸಚಿವಾಲಯ ಶನಿವಾರ ತಳ್ಳಿಹಾಕಿದೆ. ಯಾವುದೇ ರಾಷ್ಟ್ರೀಯ ಭದ್ರತಾ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳೀಯ ಪಡೆಗಳು ಸಮರ್ಥವಾಗಿವೆ.  ಹೊರಗಿನಿಂದ ಅಂತಹ ಯಾವುದೇ ನೆರವು ಅಗತ್ಯವಿಲ್ಲ ಎಂದು ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಕಮಲ್ ಗುಣರತ್ನೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಶ್ರೀಲಂಕಾದಲ್ಲಿ ವಿರೋಧ ಪಕ್ಷದ ಶಾಸಕರ ಪ್ರತಿಭಟನೆ ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಕರ್ಫ್ಯೂ ಮತ್ತು ತುರ್ತು ಪರಿಸ್ಥಿತಿಯನ್ನು ಹೇರುವ ಅಧ್ಯಕ್ಷರ ಕ್ರಮವನ್ನು ವಿರೋಧಿಸಿ ಶ್ರೀಲಂಕಾದ ವಿರೋಧ ಪಕ್ಷದ ಶಾಸಕರು ಭಾನುವಾರ ರಾಜಧಾನಿ ಕೊಲಂಬೊದಲ್ಲಿ ಮೆರವಣಿಗೆ ನಡೆಸಿದರು. ಶ್ರೀಲಂಕಾದ ಹೆಚ್ಚಿನ ಇಂಟರ್ನೆಟ್ ಬಳಕೆದಾರರು ಭಾನುವಾರ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅಧ್ಯಕ್ಷ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಬೇಕೆಂದು ನೆಟ್ಟಿಗರು ಕರೆ ನೀಡಿದ್ದಾರೆ. ಜಾಗತಿಕ ಇಂಟರ್ನೆಟ್ ಮಾನಿಟರ್ ನೆಟ್‌ಬ್ಲಾಕ್ಸ್, ಶ್ರೀಲಂಕಾದಾದ್ಯಂತ 100 ಕ್ಕೂ ಹೆಚ್ಚು ವಾಂಟೇಜ್ ಪಾಯಿಂಟ್‌ಗಳಿಂದ ಸಂಗ್ರಹಿಸಲಾದ ನೆಟ್‌ವರ್ಕ್ ಡೇಟಾವು ಮಧ್ಯರಾತ್ರಿಯಿಂದ ಬಹು ಪೂರೈಕೆದಾರರಲ್ಲಿ ನಿರ್ಬಂಧಗಳನ್ನು ಜಾರಿಗೆ  ತಂದಿದೆ ಎಂಬುದನ್ನು ದೃಢಪಡಿಸಿದೆ.

ಸಾಮಾಜಿಕ ಮಾಧ್ಯಮ ನಿರ್ಬಂಧ ವಿರೋಧಿಸಿದ ಶ್ರೀಲಂಕಾದ ಸಚಿವ ನಮಲ್ ರಾಜಪಕ್ಸೆ ಶ್ರೀಲಂಕಾದ ಯುವಜನ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರು ದೇಶದಲ್ಲಿ ಹೇರಲಾದ ಸಾಮಾಜಿಕ ಮಾಧ್ಯಮ ನಿರ್ಬಂಧವನ್ನು ವಿರೋಧಿಸುವುದಾಗಿ ಹೇಳಿದ್ದಾರೆ. “ಸಾಮಾಜಿಕ ಮಾಧ್ಯಮವನ್ನು ನಿರ್ಬಂಧಿಸುವುದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ವಿಪಿಎನ್ ಲಭ್ಯತೆ, ನಾನು ಈಗ ಬಳಸುತ್ತಿರುವಂತೆಯೇ, ಇಂಥಾ ನಿಷೇಧಗಳನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕಗೊಳಿಸುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರವ್ಯಾಪಿ ಕರ್ಫ್ಯೂ ಉಲ್ಲಂಘಿಸಿದ 600 ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ 36 ಗಂಟೆಗಳ ರಾಷ್ಟ್ರವ್ಯಾಪಿ ಕರ್ಫ್ಯೂ ಉಲ್ಲಂಘಿಸಿದ ಮತ್ತು ದೇಶದ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಪ್ರತಿಭಟಿಸಲು ಸರ್ಕಾರದ ವಿರೋಧಿ ರ್ಯಾಲಿಯನ್ನು ನಡೆಸಲು ಪ್ರಯತ್ನಿಸಿದ್ದಕ್ಕಾಗಿ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದಲ್ಲಿ ಭಾನುವಾರ 600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. “ಪ್ರತಿಭಟಿಸುವ ಸಾರ್ವಜನಿಕರ ಹಕ್ಕನ್ನು ನಿರಾಕರಿಸಲು ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿರುವುದನ್ನು ನಾವು ಪ್ರತಿಭಟಿಸುತ್ತಿದ್ದೇವೆ” ಎಂದು ಪ್ರೇಮದಾಸ ಎಂಬವರು ಹೇಳಿರುವುದಾಗಿ ದಿ ಇಂಡಿಯನ್  ಎಕ್ಸ್​​ಪ್ರೆಸ್  ವರದಿ ಮಾಡಿದೆ. ಪ್ರಸ್ತುತ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಅಗತ್ಯ ವಸ್ತುಗಳ ಕೊರತೆಯಿಂದ ಜನರು ಎದುರಿಸುತ್ತಿರುವ ಸಂಕಷ್ಟಗಳ ವಿರುದ್ಧ ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಪ್ರತಿಭಟನೆಯನ್ನು ಆಯೋಜಿಸಿದ್ದರು. ಭಾನುವಾರ ಪಶ್ಚಿಮ ಪ್ರಾಂತ್ಯದಲ್ಲಿ ಒಟ್ಟು 664 ಜನರನ್ನು ಬಂಧಿಸಲಾಗಿದೆ. ಭಾನುವಾರ ನಡೆಯಲಿರುವ “ಅರಬ್ ಸ್ಪ್ರಿಂಗ್” ಶೈಲಿಯ ಪ್ರತಿಭಟನೆಗೆ ಮುನ್ನ ದೇಶಾದ್ಯಂತ ಕರ್ಫ್ಯೂ ಘೋಷಿಸಲಾಗಿದೆ ಎಂದು ಕೊಲಂಬೊ ಗೆಜೆಟ್ ವರದಿ ಮಾಡಿದೆ.

ಇದನ್ನೂ ಓದಿ: ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ

Follow us on

Related Stories

Most Read Stories

Click on your DTH Provider to Add TV9 Kannada