ಹವಾನಾ ಹೋಟೆಲ್ನಲ್ಲಿ ಅನಿಲ ಸೋರಿಕೆಯಿಂದ ಭಾರೀ ಸ್ಫೋಟ; 22 ಜನ ಸಾವು, 74 ಜನರಿಗೆ ಗಾಯ
ಅದೃಷ್ಟವಶಾತ್ ಹವಾನಾದ 96 ಕೊಠಡಿಗಳ ಹೋಟೆಲ್ ಸರಟೋಗಾದಲ್ಲಿ ಯಾವುದೇ ಪ್ರವಾಸಿಗರು ಉಳಿದುಕೊಂಡಿರಲಿಲ್ಲ. ಇಲ್ಲವಾದರೆ ಇನ್ನಷ್ಟು ದೊಡ್ಡ ದುರಂತ ಸಂಭವಿಸುತ್ತಿತ್ತು ಎಂದು ಹವಾನಾ ಗವರ್ನರ್ ರೆನಾಲ್ಡೊ ಗಾರ್ಸಿಯಾ ತಿಳಿಸಿದ್ದಾರೆ.
ಕ್ಯೂಬಾ: ನೈಸರ್ಗಿಕ ಅನಿಲ ಸೋರಿಕೆಯಿಂದ ಕ್ಯೂಬಾದ (Cuba) ರಾಜಧಾನಿಯ ಹೃದಯಭಾಗದಲ್ಲಿರುವ ಹವಾನಾದ (Havana Hotel) ಐಷಾರಾಮಿ ಹೋಟೆಲ್ನಲ್ಲಿ ಭಾರೀ ಸ್ಫೋಟವಾಗಿದ್ದು, ಹೋಟೆಲ್‌ನ ಹೊರಗಿನ ಗೋಡೆಗಳು ಸ್ಫೋಟಗೊಂಡಿವೆ. ಈ ದುರಂತದಲ್ಲಿ ಒಂದು ಮಗು ಸೇರಿದಂತೆ 22ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಡಜನ್ಗಟ್ಟಲೆ ಜನರು ಗಾಯಗೊಂಡಿದ್ದಾರೆ. ನವೀಕರಣ ಕಾರ್ಯ ನಡೆಯುತ್ತಿದ್ದುದರಿಂದ ಅದೃಷ್ಟವಶಾತ್ ಹವಾನಾದ 96 ಕೊಠಡಿಗಳ ಹೋಟೆಲ್ ಸರಟೋಗಾದಲ್ಲಿ ಯಾವುದೇ ಪ್ರವಾಸಿಗರು ಉಳಿದುಕೊಂಡಿರಲಿಲ್ಲ. ಇಲ್ಲವಾದರೆ ಇನ್ನಷ್ಟು ದೊಡ್ಡ ದುರಂತ ಸಂಭವಿಸುತ್ತಿತ್ತು ಎಂದು ಹವಾನಾ ಗವರ್ನರ್ ರೆನಾಲ್ಡೊ ಗಾರ್ಸಿಯಾ ತಿಳಿಸಿದ್ದಾರೆ.
ಈ ದುರಂತದಲ್ಲಿ ಆರಂಭದಲ್ಲಿ 15ರಿಂದ 20 ಮಂದಿ ಗಾಯಗೊಂಡಿದ್ದರು. ಇದೀಗ ಗಾಯಗೊಂಡವರ ಸಂಖ್ಯೆ 74 ದಾಟಿದೆ ಎಂದು ಆರೋಗ್ಯ ಸಚಿವಾಲಯದ ಆಸ್ಪತ್ರೆ ಸೇವೆಗಳ ಮುಖ್ಯಸ್ಥ ಡಾ ಜೂಲಿಯೊ ಗುರ್ರಾ ಇಜ್ಕ್ವಿರ್ಡೊ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರಲ್ಲಿ 14 ಮಕ್ಕಳೂ ಸೇರಿದ್ದಾರೆ. ಈ ಭಾರೀ ಸ್ಫೋಟದ ಬಳಿಕ ಆ ಹೋಟೆಲ್ ಬಳಿಯ ಕಟ್ಟಡಗಳಲ್ಲಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲಾಗಿದೆ ಎಂದು ಡಿಯಾಜ್-ಕನೆಲ್ ಹೇಳಿದ್ದಾರೆ.
ಹೋಟೆಲ್‌ಗೆ ನೈಸರ್ಗಿಕ ಅನಿಲವನ್ನು ಪೂರೈಸುತ್ತಿದ್ದ ಟ್ರಕ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಕ್ಯೂಬಾದ ಸ್ಟೇಟ್ ಟಿವಿ ವರದಿ ಮಾಡಿದೆ. ಆದರೆ ಅನಿಲವು ಹೇಗೆ ಸೋರಿಕೆಯಾಯಿತು ಎಂಬುದರ ಕುರಿತು ವಿವರಗಳನ್ನು ನೀಡಿಲ್ಲ. ಸ್ಫೋಟವು ಹೋಟೆಲ್‌ನ ಸುತ್ತ ಗಾಳಿಯಲ್ಲಿ ಹೊಗೆಯನ್ನು ಹರಡಿತು. ಬೀದಿಯಲ್ಲಿ ಜನರು ಇದನ್ನು ಅಚ್ಚರಿಯಿಂದ ದಿಟ್ಟಿಸಿ ನೋಡುತ್ತಿದ್ದರು. ಪ್ರವಾಸೋದ್ಯಮವೇ ಇಲ್ಲಿನ ಪ್ರಮುಖ ಆದಾಯವಾಗಿದ್ದು, ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದ ಧ್ವಂಸಗೊಂಡ ತನ್ನ ಪ್ರಮುಖ ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಕ್ಯೂಬಾ ಹೆಣಗಾಡುತ್ತಿರುವಾಗಲೇ ಈ ದುರಂತ ಸಂಭವಿಸಿದೆ.
“ನಾವು ಇನ್ನೂ ಅವಶೇಷಗಳಡಿಯಲ್ಲಿ ಇರುವ ಜನರ ದೊಡ್ಡ ಗುಂಪನ್ನು ಹುಡುಕುತ್ತಿದ್ದೇವೆ” ಎಂದು ಅಗ್ನಿಶಾಮಕ ಇಲಾಖೆಯ ಲೆಫ್ಟಿನೆಂಟ್ ಕರ್ನಲ್ ನೋಯೆಲ್ ಸಿಲ್ವಾ ಹೇಳಿದ್ದಾರೆ. ಇದು ಬಾಂಬ್ ದಾಳಿಯಲ್ಲ, ಇದು ನೈಸರ್ಗಿಕ ಅನಿಲ ಸೋರಿಕೆಯಿಂದ ಉಂಟಾಗಿರುವ ಸ್ಫೋಟ ಎಂದು ಕ್ಯೂಬಾ ಸಚಿವಾಲಯ ಸ್ಪಷ್ಟಪಡಿಸಿದೆ.
ಇನ್ನಷ್ಟು ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ