ಕಾಬೂಲ್: ಕಾಬೂಲ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರಬಲ ಸ್ಫೋಟದಲ್ಲಿ (Kabul Blast) ಸುಮಾರು 50 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ಇಸ್ಲಾಂನ ಪವಿತ್ರ ತಿಂಗಳಾದ ರಂಜಾನ್ ಸಮಯದಲ್ಲಿ ನಾಗರಿಕರನ್ನು ಗುರುಯಾಗಿಸಿ ಸರಣಿ ದಾಳಿಗಳು ನಡೆಯುತ್ತಿದ್ದು, ಇದು ಇತ್ತೀಚಿನದ್ದಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ರಾಜಧಾನಿಯ ಪಶ್ಚಿಮದಲ್ಲಿರುವ ಖಲೀಫಾ ಸಾಹಿಬ್ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ಸಚಿವಾಲಯದ ಉಪ ವಕ್ತಾರ ಬೆಸ್ಮುಲ್ಲಾ ಹಬೀಬ್ ಹೇಳಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ನಂತರ ಸುನ್ನಿ ಮಸೀದಿಯಲ್ಲಿನ ಆರಾಧಕರು ‘ಝಿಕ್ರ್’ ಎಂದು ಕರೆಯಲ್ಪಡುವ ಸಭೆಯೊಂದಕ್ಕೆ ಜಮಾಯಿಸಿದಾಗ ಈ ದಾಳಿ ನಡೆದಿದೆ. ಕೆಲವು ಮುಸ್ಲಿಮರು ಅಭ್ಯಸಿಸುವ ಧಾರ್ಮಿಕ ಸ್ಮರಣೆಯ ಕ್ರಿಯೆ ಇದಾಗಿದೆ. ಆದರೆ ಕೆಲವು ಗುಂಪುಗಳು ಇದನ್ನು ಧರ್ಮದ್ರೋಹಿಯಾಗಿ ಪರಿಗಣಿಸುತ್ತವೆ. ಮಸೀದಿಯ ಮುಖ್ಯಸ್ಥ ಸೈಯದ್ ಫಾಜಿಲ್ ಅಘಾ ಮಾಹಿತಿ ನೀಡುತ್ತಾ, ಬಾಂಬ್ ದಾಳಿಗೆ ಆತ್ಮಾಹುತಿ ಬಾಂಬರ್ ಕಾರಣ. ಈ ದಾಳಿಯಲ್ಲಿ ತಾವು ಬದುಕುಳಿದಿದ್ದು, ಪ್ರೀತಿಪಾತ್ರರು ಇನ್ನಿಲ್ಲವಾಗಿದ್ದಾರೆ ಎಂದು ‘ರಾಯಿಟರ್ಸ್’ಗೆ ತಿಳಿಸಿದ್ದಾರೆ.
ಆಸ್ಪತ್ರೆಗೆ ಇದುವರೆಗೆ 66 ಮೃತದೇಹಗಳು ಬಂದಿದ್ದು, 78 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಅಮೇರಿಕಾ ಹಾಗೂ ವಿಶ್ವಸಂಸ್ಥೆಯು ಈ ದಾಳಿಯನ್ನು ಖಂಡಿಸಿದೆ. ಅಫ್ಘಾನಿಸ್ತಾನದಲ್ಲಿ ಇತ್ತೀಚಿಗೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಹೆಚ್ಚಳವಾಗಿದ್ದು, ದಾಳಿಯ ಸಮಯದಲ್ಲಿ ಕನಿಷ್ಠ ಇಬ್ಬರು ವಿಶ್ವಸಂಸ್ಥೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳು ಮಸೀದಿಯಲ್ಲಿದ್ದರು ಎಂದು ಹೇಳಲಾಗಿದೆ. ‘ಈ ಹೇಯ ಕೃತ್ಯವನ್ನು ಖಂಡಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ’ ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆ ಪ್ರತಿನಿಧಿ ಮೆಟ್ಟೆ ಕ್ನುಡ್ಸೆನ್ ಹೇಳಿದ್ದಾರೆ.
ಆಡಳಿತಾರೂಢ ತಾಲಿಬಾನ್‌ನ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಸ್ಫೋಟವನ್ನು ಖಂಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ. ಈ ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಇತ್ತೀಚಿನ ವಾರಗಳಲ್ಲಿ ಹಲವಾರು ಅಫ್ಘನ್ ನಾಗರಿಕರು ಸ್ಫೋಟಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವುಗಳಲ್ಲಿ ಕೆಲವು ಸ್ಫೋಟಗಳ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಅನೇಕ ದಾಳಿಗಳು ಶಿಯಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿವೆ. ಮತ್ತೆ ಕೆಲವು ದಾಳಿಗಳು ಸುನ್ನಿ ಮಸೀದಿಗಳ ಮೇಲೂ ನಡೆದಿದೆ. ಗುರುವಾರ ಉತ್ತರದ ನಗರವಾದ ಮಜಾರ್-ಎ-ಷರೀಫ್‌ನಲ್ಲಿ ಶಿಯಾ ಮುಸ್ಲಿಮರನ್ನು ಹೊತ್ತೊಯ್ಯುತ್ತಿದ್ದ ಎರಡು ಪ್ರಯಾಣಿಕರ ವ್ಯಾನ್‌ಗಳಲ್ಲಿ ಬಾಂಬ್‌ಗಳು ಸ್ಫೋಟಗೊಂಡಿದ್ದು, ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದರು. ಕಳೆದ ಶುಕ್ರವಾರ, ಕುಂದುಜ್ ನಗರದಲ್ಲಿ ಶುಕ್ರವಾರದ ಪ್ರಾರ್ಥನೆಯ ವೇಳೆ ಸುನ್ನಿ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿ 33 ಮಂದಿ ಸಾವನ್ನಪ್ಪಿದ್ದರು.
ಇನ್ನೂ ಹೆಚ್ಚು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಝೆಲೆನ್ಸ್ಕಿ ಮತ್ತು ಕುಟುಂಬವನ್ನು ಬಂಧಿಸಲು ರಷ್ಯಾ ಕೆಲವೇ ನಿಮಿಷಗಳ ದೂರದಲ್ಲಿತ್ತು’; ಆಮೇಲೇನಾಯ್ತು ಎಂದು ವಿವರಿಸಿದ ಆಪ್ತರು