ಕರಾಚಿ ವಿಶ್ವವಿದ್ಯಾಲಯದಲ್ಲಿ ಬಾಂಬ್ ಸ್ಫೋಟಿಸಿದ ಮಹಿಳಾ ಬಾಂಬರ್ ಎಂಫಿಲ್ ವಿದ್ಯಾರ್ಥಿನಿ; ಆಕೆಯ ಕೃತ್ಯ ಬಗ್ಗೆ ಹೆಮ್ಮೆಯಿಂದ ಬೀಗುತ್ತಿರುವೆ ಎಂದ ಪತಿ
ಬಲೂಚಿಸ್ತಾನದ ಟರ್ಬತ್‌ನ ನಿಯಾಜರ್ ಅಬಾದ್‌ನ 30 ವರ್ಷದ ಶಾರಿ ಬಲೋಚ್ ಎಂಬ ಆತ್ಮಹತ್ಯಾ ಬಾಂಬರ್, ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ ಪದವೀಧರೆ ಆಗಿದ್ದು ಡೆಂಟಿಸ್ಟ್ನ್ನು ಮದುವೆಯಾಗಿದ್ದರು.
ಕರಾಚಿ: ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾನಿಲಯದಲ್ಲಿ (Karachi University) ತನ್ನನ್ನು ತಾನೇ ಸ್ಫೋಟಿಸಿಕೊಂಡ ಮಹಿಳೆಯ ಪತಿ ಈ ನಿಸ್ವಾರ್ಥ ಕೃತ್ಯದ ಬಗ್ಗೆ ಹೇಳಲು ಮಾತುಗಳಿಲ್ಲ. ಅವಳು ಈ ಕೃತ್ಯ ಮಾಡಿದ್ದಾಳೆ ಎಂಬುದಕ್ಕೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ಮಂಗಳವಾರ ಕರಾಚಿ ವಿಶ್ವವಿದ್ಯಾನಿಲಯದ ಚೀನೀ ಭಾಷಾ ಬೋಧನಾ ಕೇಂದ್ರವಾದ ಕನ್ಫ್ಯೂಷಿಯಸ್ ಇನ್ಸ್ಟಿಟ್ಯೂಟ್ (Confucius Institute) ಬಳಿ ಸ್ಫೋಟ ಸಂಭವಿಸಿದೆ. ಮಹಿಳಾ ಆತ್ಮಹತ್ಯಾ ಬಾಂಬರ್ ಶಾರಿ ಬಲೋಚ್ಳ (Shari Baloch) ಪತಿ ಹಬಿಟನ್ ಬಶೀರ್ ಬಲೋಚ್ ಅವರು ಅಜ್ಞಾತ ಸ್ಥಳದಿಂದ ಟ್ವೀಟ್ ಮಾಡಿದ್ದಾರೆ ಎಂದು ಅಫ್ಘಾನ್ ಪತ್ರಕರ್ತ ಬಶೀರ್ ಅಹ್ಮದ್ ಗ್ವಾಖ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಶಾರಿ ಬಲೋಚ್‌ಗೆ 8 ಮತ್ತು 5 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ, ಹಬಿಟನ್ ಬಶೀರ್ ಬಲೋಚ್, ದಂತವೈದ್ಯರಾಗಿದ್ದಾರೆ ಮತ್ತು ಆಕೆಯ ತಂದೆ ಉಪನ್ಯಾಸಕರಾಗಿದ್ದರು. ಶಾರಿ ಬಲೂಚ್ ಅವರ ಪತಿ ಪೋಸ್ಟ್ ಮಾಡಿದ ಟ್ವೀಟ್‌ನ ಸ್ನ್ಯಾಪ್‌ಶಾಟ್ ಅನ್ನು ಸಹ ಗ್ವಾಖ್ ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ “ಶಾರಿ ಜಾನ್, ನಿನ್ನ ನಿಸ್ವಾರ್ಥ ಕಾರ್ಯವು ನನ್ನನ್ನು ಮೂಕನನ್ನಾಗಿಸಿದೆ. ಆದರೆ ನಾನು ಇಂದು ಹೆಮ್ಮೆಯಿಂದ ಬೀಗುತ್ತಿದ್ದೇನೆ. ಮಹ್ರೋಚ್ ಮತ್ತು ಮೀರ್ ಹಾಸನ್ ಅವರು ಎಂತಹ ಮಹಾನ್ ಮಹಿಳೆ ನೀನು ಎಂದು ಯೋಚಿಸುತ್ತಾ ಬಹಳ ಹೆಮ್ಮೆಯ ಮನುಷ್ಯರಾಗಿ ಬೆಳೆಯುತ್ತಾರೆ. ನೀನು ನಮ್ಮ ಜೀವನದ ಪ್ರಮುಖ ಭಾಗವಾಗಿ ಉಳಿಯುತ್ತೀರಿ ಎಂದಿದ್ದಾರೆ. ಆತ್ಮಹತ್ಯಾ ದಾಳಿ ನಡೆಸಿದ ಮೊದಲ ಬಲೂಚ್ ಮಹಿಳೆಯ ಕುರಿತು ಮಾತನಾಡುತ್ತಾ, ಅಫ್ಘಾನಿಸ್ತಾನದ ಪತ್ರಕರ್ತ ಗ್ವಾಖ್, 30 ವರ್ಷ ವಯಸ್ಸಿನ ಆಕೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA)ಯನ್ನು ಎರಡು ವರ್ಷಗಳ ಹಿಂದೆ ಸೇರಿಕೊಂಡರು ಮತ್ತು “ಸ್ವ-ತ್ಯಾಗದ ಕಾರ್ಯಾಚರಣೆಗಾಗಿ ಸ್ವಯಂಸೇವಕರಾಗಿದ್ದರು” ಎಂದಿದ್ದಾರೆ. ಈ ಹಿಂದೆ, ಗ್ವಾಖ್ ಬುರ್ಖಾ ಧರಿಸಿದ ಮಹಿಳೆಯೊಬ್ಬರು ವ್ಯಾನ್ ರಸ್ತೆಯ ಮೂಲಕ ಹಾದುಹೋಗುವಾಗ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಸ್ಫೋಟದಲ್ಲಿ ಮೂವರು ಚೀನಾದ ನಾಗರಿಕರು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಕರಾಚಿಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಸ್ಫೋಟವನ್ನು ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರ ಕಚೇರಿ ಖಂಡಿಸಿದೆ. ಏತನ್ಮಧ್ಯೆ, ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಾರಣಾಂತಿಕ ದಾಳಿಯ ಹಿನ್ನೆಲೆಯಲ್ಲಿ ಬುಧವಾರದವರೆಗೆ ನಿರ್ಬಂಧ ವಿಧಿಸಲಾಗಿದೆ.
2 ಮಕ್ಕಳ ತಾಯಿ, ವೈದ್ಯರ ಪತ್ನಿ, ಕರಾಚಿ ಆತ್ಮಾಹುತಿ ಬಾಂಬರ್ ಸ್ನಾತಕೋತ್ತರ ಪದವೀಧರೆ ಬಲೂಚಿಸ್ತಾನದ ಟರ್ಬತ್‌ನ ನಿಯಾಜರ್ ಅಬಾದ್‌ನ 30 ವರ್ಷದ ಶಾರಿ ಬಲೋಚ್ ಎಂಬ ಆತ್ಮಹತ್ಯಾ ಬಾಂಬರ್, ಪ್ರಾಣಿಶಾಸ್ತ್ರದಲ್ಲಿ ಎಂಎಸ್ಸಿ ಪದವೀಧರೆ ಆಗಿದ್ದು ಡೆಂಟಿಸ್ಟ್ನ್ನು ಮದುವೆಯಾಗಿದ್ದರು. ಆಕೆ ಎಂ ಫಿಲ್ ವ್ಯಾಸಂಗ ಮಾಡುತ್ತಿದ್ದು, ವಿಜ್ಞಾನ ಶಿಕ್ಷಕಿಯಾಗಿದ್ದಳು ಎಂದು ಅಫ್ಘಾನಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಶಾರಿ ಬಲೋಚ್ ಎರಡು ವರ್ಷಗಳ ಹಿಂದೆ ಬಿಎಲ್‌ಎ ಮಜೀದ್ ಬ್ರಿಗೇಡ್‌ನ ವಿಶೇಷ ಸ್ವಯಂ ತ್ಯಾಗ ತಂಡಕ್ಕೆ ಸೇರಿದರು. ಇಬ್ಬರು ಚಿಕ್ಕ ಮಕ್ಕಳ ಇರುವ ಕಾರಣ ತಂಡದಿಂದ ಹೊರಗುಳಿಯುವ ಆಯ್ಕೆಯನ್ನು ಆಕೆಗೆ ನೀಡಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದರು.
ಮಜೀದ್ ಬ್ರಿಗೇಡ್ ಈಗ ಬಲೂಚಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಚೀನಾದ ಪ್ರಜೆಗಳಿಗೆ ಮತ್ತು ಚೀನಾದ ಹಿತಾಸಕ್ತಿಗಳನ್ನು ಗುರಿಯಾಗಿಸುವ ಬೆದರಿಕೆ ಹಾಕಿದೆ.
“ಇಂದಿನ ಕಾರ್ಯಾಚರಣೆಯನ್ನು ಮಜೀದ್ ಬ್ರಿಗೇಡ್‌ನ ನಿಯಾಜರ್ ಅಬಾದ್ ಟರ್ಬತ್‌ನ ನಿವಾಸಿ ಫಿದಾಯೀನ್ ಶಾರಿ ಬಲೋಚ್ ಅಲಿಯಾಸ್ ಬ್ರಾಮ್ಶ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ”. ವಿದ್ಯಾರ್ಥಿಯಾಗಿದ್ದಾಗ, ಶಾರಿ ಬಲೂಚ್ ವಿದ್ಯಾರ್ಥಿಗಳ ಸಂಘಟನೆಯ ಸದಸ್ಯರಾಗಿದ್ದರು ಮತ್ತು “ಬಲೂಚ್ ನರಮೇಧ ಮತ್ತು ಬಲೂಚಿಸ್ತಾನದ ಆಕ್ರಮಣದ ಬಗ್ಗೆ ತಿಳಿದಿದ್ದರು” ಎಂದು ಬಿಎಲ್‌ಎ ಹೇಳಿದೆ.
ಮಜೀದ್ ಬ್ರಿಗೇಡ್‌ನ ಕಾರ್ಯವಿಧಾನಗಳನ್ನು ಅನುಸರಿಸಿ, ಆಕೆಯ ನಿರ್ಧಾರವನ್ನು ಮರುಪರಿಶೀಲಿಸಲು ಸಮಯವನ್ನು ನೀಡಲಾಯಿತು. ಈ ಎರಡು ವರ್ಷಗಳಲ್ಲಿ, ಶಾರಿ ಮಜೀದ್ ಬ್ರಿಗೇಡ್‌ನ ವಿವಿಧ ಘಟಕಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸಿದಳು. ಆರು ತಿಂಗಳ ಹಿಂದೆ ಸ್ವಯಂ ತ್ಯಾಗದ ದಾಳಿ ನಡೆಸುವ ತನ್ನ ನಿರ್ಧಾರಕ್ಕೆ ತಾನು ಬದ್ಧ ಎಂದು ಖಚಿತಪಡಿಸಿದಳು. ಅದರ ನಂತರ, ಆಕೆ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಳು ಎಂದು ಬಿಎಲ್‌ಎ ಹೇಳಿದೆ.
ಇದನ್ನೂ ಓದಿ: ಕರಾಚಿ ವಿಶ್ವವಿದ್ಯಾಲಯದಲ್ಲಿನ ಸ್ಫೋಟದ ಹೊಣೆ ಹೊತ್ತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ; ಕೃತ್ಯವೆಸಗಿದ್ದು ಮಹಿಳಾ ಬಾಂಬರ್