ಒಂದು ವಾರವಾದರೂ ಪುಟ್ಟ ರಾಷ್ಟ್ರ ಉಕ್ರೇನ್ ಉಡಾಯಿಸಲು ಬಲಾಢ್ಯ ರಷ್ಯಾ ಸೇನೆಗೆ ಸಾಧ್ಯವಾಗಿಲ್ಲ! ಯಾಕೆ ಗೊತ್ತಾ?
Russia Ukraine War: ರಷ್ಯಾ ಸೇನೆ ವಿರುದ್ಧ ಸಿಡಿದೆದ್ದಿರುವ ಉಕ್ರೇನ್ ಜನರು ರಸ್ತೆ ರಸ್ತೆಗಳಲ್ಲಿ ರಷ್ಯಾ ಸೈನಿಕರನ್ನು ಅಡ್ಡಗಟ್ಟುತ್ತಿದ್ದಾರೆ. ರಷ್ಯಾದ ಯುದ್ಧ ವಿಮಾನಗಳು ನಗರಗಳನ್ನು ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ರಸ್ತೆಗೆ ಕಬ್ಬಿಣದ ಮೊಳೆ ಹೊಡೆದು ವಾಹನಗಳ ಟೈರ್ ಪಂಕ್ಚರ್ ಆಗುವಂತೆ ವ್ಯವಸ್ಥೆ ಮಾಡಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ದಾಳಿ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಚಿಕ್ಕ ದೇಶ ಉಕ್ರೇನ್ ಅನ್ನು ಮೂರೇ ದಿನಗಳಲ್ಲಿ ರಷ್ಯಾ ಸಂಪೂರ್ಣವಾಗಿ ವಶಪಡಿಸಿಕೊಳ್ಳುತ್ತೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದಕ್ಕೆ ಉಕ್ರೇನ್ ತೀವ್ರ ಪ್ರತಿರೋಧವೇ ಕಾರಣ. ರಾಜಧಾನಿ ಕೀವ್, ಖಾರ್ಕೀವ್ ನಗರಗಳ ಮೇಲೆ ರಷ್ಯಾದ ದಾಳಿ ಮುಂದುವರಿದಿದೆ. ಖೇರ್ಸನ್ ನಗರ ಮಾತ್ರವೇ ಸದ್ಯ ಸಂಪೂರ್ಣವಾಗಿ ರಷ್ಯಾ ವಶವಾಗಿದೆ (Russia Ukraine War).
ಉಕ್ರೇನ್ ನಂಥ ಪುಟ್ಟ ರಾಷ್ಟ್ರದ ಸೇನೆಯನ್ನು ಸೋಲಿಸಲು ಬಲಾಢ್ಯ ರಷ್ಯಾ ಸೇನೆಗೆ ಒಂದು ವಾರವಾದರೂ ಸಾಧ್ಯವಾಗಿಲ್ಲ. ಬೇಗನೇ ಉಕ್ರೇನ್ ಸೋತು ಸುಣ್ಣವಾಗಿ ನಮಗೆ ಶರಣಾಗಿಬಿಡುತ್ತೆ ಎಂಬ ರಷ್ಯಾದ ಲೆಕ್ಕಾಚಾರ ತಲೆಕೆಳಗಾಗಿದೆ. ಬೇರೆ ದೇಶಗಳು ರಷ್ಯಾ ವಿರುದ್ಧ ಯುದ್ಧಕ್ಕಿಳಿಯದೇ ಇದ್ದರೂ, ಉಕ್ರೇನ್ ಗೆ ಶಸ್ತ್ರಾಸ್ತ್ರ ಪೂರೈಸುತ್ತಿವೆ. ಇದು ಉಕ್ರೇನ್ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿದೆ. ಕಳೆದ 8 ದಿನಗಳಲ್ಲಿ 9 ಸಾವಿರ ರಷ್ಯ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಇಂದು ಹೇಳಿದೆ. ಇಂದು ರಷ್ಯಾ ಸೇನೆಗಾದ ದೊಡ್ಡ ನಷ್ಟ. ಜೊತೆಗೆ ರಷ್ಯಾ ಯುದ್ಧ ವಿಮಾನ, ಯುದ್ಧ ಟ್ಯಾಂಕರ್, ಹೆಲಿಕಾಪ್ಟರ್, ಮಿಸೈಲ್ ಗಳನ್ನು ಹೊಡೆದುರುಳಿಸುವಲ್ಲಿ ಉಕ್ರೇನ್ ಯಶಸ್ವಿಯಾಗಿದೆ.
ರಷ್ಯಾ ದೇಶದ ಸೇನೆಯು ಕೇರ್ಸನ್ ನಗರವನ್ನು ಮಾತ್ರ ಇದುವರೆಗೂ ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಉಕ್ರೇನ್ ರಾಜಧಾನಿ ಕೀವ್, ಎರಡನೇ ಅತಿ ದೊಡ್ಡ ನಗರ ಖಾರ್ಕೀವ್ ನಗರವನ್ನ ವಶಪಡಿಸಿಕೊಳ್ಳಲು ರಷ್ಯಾಗೆ ಸಾಧ್ಯವಾಗಿಲ್ಲ. ಕೀವ್ ನಿಂದ ಹತ್ತು ಕಿಲೋಮೀಟರ್ ದೂರದಲ್ಲಿ ರಷ್ಯಾದ ಸೇನೆ ಇದೆ. ಆದರೇ, ರಾಜಧಾನಿ ಕೀವ್ ಹಾಗೂ ಖಾರ್ಕೀವ್ ಮೇಲೆ ಮಿಸೈಲ್ ದಾಳಿಯನ್ನು ರಷ್ಯಾ ಮುಂದುವರಿಸಿದೆ.
ವ್ಯಕ್ತಿಯೊಬ್ಬ ರಾಕೆಟ್ ದಾಳಿಯಿಂದ ಹಾಳಾಗಿದ್ದ ಕಟ್ಟಡವೊಂದರ ಒಳಗೆ ನಿಂತು ಆ ಕಟ್ಟಡದ ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದಾಗಲೇ, ಆ ಕಟ್ಟಡದ ಮೇಲೆ ಮತ್ತೊಂದು ರಾಕೆಟ್ ದಾಳಿಯಾಗಿದೆ. ರಾಕೆಟ್ ದಾಳಿಯಾದರೂ, ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಸ್ವಲ್ಪದ್ದರಲ್ಲೇ ಜೀವ ಅಪಾಯದ ಪಾರಾಗಿದ್ದಾರೆ. ಇದೆಲ್ಲವೂ ಆ ವ್ಯಕ್ತಿಯ ವಿಡಿಯೋದಲ್ಲೇ ಸೆರೆಯಾಗಿದೆ.
ಇನ್ನು ರಷ್ಯಾ ಸೇನೆ ವಿರುದ್ಧ ಸಿಡಿದೆದ್ದಿರುವ ಉಕ್ರೇನ್ ಜನರು ರಸ್ತೆ ರಸ್ತೆಗಳಲ್ಲಿ ರಷ್ಯಾ ಸೈನಿಕರನ್ನು ಅಡ್ಡಗಟ್ಟುತ್ತಿದ್ದಾರೆ. ರಷ್ಯಾದ ಯುದ್ಧ ವಿಮಾನಗಳು ನಗರಗಳನ್ನು ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ರಸ್ತೆಗೆ ಕಬ್ಬಿಣದ ಮೊಳೆ ಹೊಡೆದು ವಾಹನಗಳ ಟೈರ್ ಪಂಕ್ಚರ್ ಆಗುವಂತೆ ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ರಷ್ಯಾ ಸೈನಿಕರು ಉಕ್ರೇನ್ ಜನರ ಮೇಲೆ ಅಲ್ಲಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದಾರೆ. ರಾಕೆಟ್ ದಾಳಿಯಿಂದ ಉಕ್ರೇನ್ ಜನರು ಅಡಗಿ ಕುಳಿತಿದ್ದಾರೆ.
ಉಕ್ರೇನ್ ಅಣ್ವಸ್ತ್ರ ಘಟಕ ಚೆರ್ನೋಬಿಲ್ ಬಳಿ ರಷ್ಯಾ ಸೇನೆಯು ತೈಲ ಘಟಕಗಳ ಮೇಲೆ ಶೆಲ್ ದಾಳಿ ನಡೆಸಿದೆ. ಇದರಿಂದ ತೈಲ ಘಟಕವು ಹೊತ್ತಿ ಉರಿದಿದೆ. ಬಾಂಗ್ಲಾ ದೇಶವು ಈಗ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತ ಚಲಾಯಿಸಿದೆ. ಇದರಿಂದ ಬಾಂಗ್ಲಾದೇಶದ ವಿರುದ್ಧ ಸಿಟ್ಟಿಗೆದ್ದಿರುವ ರಷ್ಯಾ ಸೇನೆಯು ಉಕ್ರೇನ್ ನ ಬಂದರಿನಲ್ಲಿದ್ದ ಬಾಂಗ್ಲಾದೇಶದ ಹಡಗಿನ ಮೇಲೆ ದಾಳಿ ನಡೆಸಿದೆ. ಬಾಂಗ್ಲಾ ಹಡಗಿನಲ್ಲಿದ್ದ ಬಾಂಗ್ಲಾ ನಾಗರಿಕರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ರಷ್ಯಾ ಸೇನೆಯ ದಾಳಿಗೆ ಉಕ್ರೇನ್ ತತ್ತರಿಸಿ ಹೋಗಿದೆ. ರಷ್ಯಾ ಸೇನೆಯ ಶೆಲ್ ದಾಳಿಗೆ ಉಕ್ರೇನ್ 134 ಶಾಲಾ ಕಟ್ಟಡಗಳು ಧ್ವಂಸವಾಗಿವೆ.
ಇನ್ನೂ ಉಕ್ರೇನ್ ನಲ್ಲಿರುವ ರಷ್ಯಾ ಸೈನಿಕರಿಗೆ ಆಹಾರ ಸಾಮಗ್ರಿ ಪೂರೈಸುತ್ತಿದ್ದ ಟ್ರಕ್ ಗಳ ಮೇಲೆ ಉಕ್ರೇನ್ ಜನರು ದಾಳಿ ಮಾಡಿದ್ದಾರೆ. ರಷ್ಯಾದ ಟ್ರಕ್ ಗಳನ್ನು ತಡೆದು ಅವುಗಳಿಗೆ ಬೆಂಕಿ ಹಚ್ಚಿದ್ದಾರೆ. ಕೆಲವೆಡೆ ರಷ್ಯಾ ಸೈನಿಕರನ್ನು ಉಕ್ರೇನ್ ಸೇನೆಯು ಬಂಧಿಸಿದೆ. ಆದರೇ, ಯುದ್ಧ ಖೈದಿಗಳನ್ನು ಗೌರವಯುತವಾಗಿ ಉಕ್ರೇನ್ ನಡೆಸಿಕೊಂಡಿದೆ. ಬಂಧಿತ ರಷ್ಯಾ ಸೈನಿಕರಿಗೆ ಚಹಾ, ತಿಂಡಿ ನೀಡಿ ತಾಯಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡಲು ಅವಕಾಶ ಕೊಟ್ಟಿದ್ದಾರೆ. ಈ ವೇಳೆ ರಷ್ಯಾ ಸೈನಿಕ ಕಣ್ಣೀರು ಹಾಕಿದ್ದಾನೆ.
ಇನ್ನೂ ಕೆಲ ಸೈನಿಕರನ್ನು ಉಕ್ರೇನ್ ಸೇನೆಯು ಸೆರೆ ಹಿಡಿದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಹೇಳಿಕೆ ಕೊಡುವಂತೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ರಷ್ಯಾ ಸೇನೆಯು ಕೂಡ ಉಕ್ರೇನ್ ಸೈನಿಕರನ್ನು ತಮ್ಮ ವಶಕ್ಕೆ ಪಡೆದು ರಷ್ಯಾಕ್ಕೆ ನಿಷ್ಠೆಯಿಂದ ಇರಬೇಕೆಂದು ತಾಕೀತು ಮಾಡಿದ್ದಾರೆ. ರಷ್ಯಾ ಸೇನೆ ವಿರುದ್ಧ ಹೋರಾಡದಂತೆ ಉಕ್ರೇನ್ ಸೈನಿಕರಿಗೆ ಎಚ್ಚರಿಕೆ ನೀಡಿದೆ.