ಸನ್ಮಾನ ಆದ ವೇದಿಕೆಯಲ್ಲೇ ಅವಮಾನ ಆದರೆ ಹೇಗಾಗುತ್ತದೆ. ಸಹಜವಾಗಿಯೇ ನೋವು, ಮುಜುಗರ, ಕೋಪ ಬರುತ್ತದೆ. ಇಂಥ ಪರಿಸ್ಥಿತಿಯನ್ನು ಎದುರಿಸಿ, ಕಣ್ಣೀರು ಹಾಕುತ್ತ ವೇದಿಕೆಯನ್ನು ನಿರ್ಗಮಿಸಿ, ಕೊನೆಗೂ ನ್ಯಾಯಪಡೆದವರು ಮಿಸಸ್ ಶ್ರೀಲಂಕಾ ಪುಷ್ಪಿಕಾ ಡಿಸಿಲ್ವಾ. ಶ್ರೀಲಂಕಾದ ಬ್ಯೂಟಿ ಕ್ವೀನ್ ಪುಷ್ಪಿಕಾ ಡಿಸಿಲ್ವಾ ಏಪ್ರಿಲ್ 4ರಂದು ಮಿಸಸ್ ಶ್ರೀಲಂಕಾ 2020 ರ ಗರಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಆದರೆ ಕೆಲವೇ ಕ್ಷಣದಲ್ಲಿ ಅವರ ಮುಡಿಗೇರಿದ ಕಿರೀಟವನ್ನು ಬಲವಂತವಾಗಿ ತೆಗೆದು ರನ್ನರ್ಅಪ್ಗೆ ಹಾಕಲಾಗುತ್ತದೆ. ಈ ವೇಳೆ ಅವರ ತಲೆಗೆ ಗಾಯವೂ ಆಗುತ್ತದೆ. ಕಣ್ಣೀರು ಹಾಕುತ್ತ ವೇದಿಕೆಯಿಂದ ತೆರಳುತ್ತಾರೆ.
ಮಿಸಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯ ಫೈನಲ್ ಭಾನುವಾರ (ಏಪ್ರಿಲ್ 4) ರಾತ್ರಿ ಕೊಲಂಬೋದಲ್ಲಿ ನಡೆದಿದೆ. ಕೊನೆಗೆ ಪುಷ್ಪಿಕಾ ಡಿಸಿಲ್ವಾ ವಿನ್ನರ್ ಎಂದು ತೀರ್ಪುಗಾರರು ಘೋಷಿಸಿದರು. ಅದರಂತೆ ಡಿಸಿಲ್ವಾ ಅವರಿಗೆ ಕಿರೀಟವನ್ನು ಹಾಕಿ, ಪುಷ್ಪಗುಚ್ಛವನ್ನು ಕೊಡಲಾಯಿತು. ಅವರೂ ಸಹ ನಗುತ್ತ, ಖುಷಿಯಾಗಿಯೇ ಇದ್ದರು. ಇದೇ ವೇಳೆ ಅಲ್ಲಿಯೇ ಇದ್ದ 2019ರ ಮಿಸಸ್ ಶ್ರೀಲಂಕಾ ವಿನ್ನರ್ ಹಾಗೂ ಮಿಸ್ ವರ್ಲ್ಡ್ ವಿನ್ನರ್ ಕ್ಯಾರೋಲಿನ್ ಜ್ಯೂರಿ ವೇದಿಕೆಗೆ ಬಂದು, ಈ ಸ್ಪರ್ಧೆಯ ಮುಖ್ಯ ನಿಯಮವೆಂದರೆ, ಸ್ಪರ್ಧಿಗಳಿಗೆ ಮದುವೆಯಾಗಿರಬೇಕು. ಆದರೆ ವಿಚ್ಛೇದಿತರಾಗಿರಬಾರದು. ಆದರೆ ಪುಷ್ಪಿಕಾ ವಿಚ್ಛೇದಿತೆ ಎಂಬುದು ಗೊತ್ತಾಗಿದೆ. ಹಾಗಾಗಿ ಮಿಸಸ್ ಶ್ರೀಲಂಕಾ ಕಿರೀಟ ಎರಡನೇ ರನ್ನರ್ ಅಪ್ಗೆ ಹೋಗಬೇಕು ಎಂದು ನೆರೆದಿದ್ದ ಪ್ರೇಕ್ಷಕರಿಗೆ ಹೇಳಿದರು. ಅಷ್ಟೇ ಅಲ್ಲ, ಪುಷ್ಪಿಕಾ ಬಳಿ ತೆರಳಿ ಅವರ ತಲೆಯ ಮೇಲಿದ್ದ ಕಿರೀಟವನ್ನು ತೆಗೆದಿದ್ದಾರೆ. ಹಾಗೇ ತೆಗೆಯುವಾಗ ಪುಷ್ಪಿಕಾ ತಲೆಗೆ ಗಾಯವೂ ಆಗಿದೆ. ಕಿರೀಟವನ್ನು ತಂದು ಎರಡನೇ ರನ್ನರ್ ಅಪ್ಗೆ ತೊಡಿಸಿ, ಆಕೆಗೆ ಮುತ್ತಿಟ್ಟು ಸಂಭ್ರಮಿಸಿದ್ದಾರೆ. ಡಿಸಿಲ್ವಾ ಅಳುತ್ತ ವೇದಿಕೆಯಿಂದ ಹೊರನಡೆದಿದ್ದನ್ನು ವಿಡಿಯೋದಲ್ಲಿ ನೋಡಬಹುದು.
ಆದರೆ ಪುಷ್ಪಿಕಾ ಡಿಸಿಲ್ವಾ ವಿಚ್ಛೇದಿತೆಯಲ್ಲ. ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬುದನ್ನು ಕಾರ್ಯಕ್ರಮ ಆಯೋಜಿಸಿದ ಸಂಸ್ಥೆ ಸ್ಪಷ್ಟಪಡಿಸಿದೆ. ಬಳಿಕ ಡಿಸಿಲ್ವಾ ಬಳಿ ಕ್ಷಮೆಯನ್ನೂ ಕೇಳಿ, ಕಿರೀಟವನ್ನು ವಾಪಸ್ ನೀಡಿದೆ. ಆದರೆ ತನಗಾದ ಅವಮಾನವನ್ನು ಪುಷ್ಪಿಕಾ ಡಿಸಿಲ್ವಾ ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೀಗೆ ಕಾರಣವೇ ಇಲ್ಲದೆ, ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ. ಪೊಲೀಸರು ಈಗಾಗಲೇ ವಿಚಾರಣೆ ಶುರು ಮಾಡಿದ್ದು, ಕಿರೀಟವನ್ನು ತೆಗೆದ ಕ್ಯಾರೋಲಿನ್ ಜ್ಯೂರಿ ಅವರನ್ನು ಪ್ರಶ್ನೆಯನ್ನೂ ಮಾಡಿದ್ದಾರೆ.
ಅದೆಷ್ಟೋ ಅಮ್ಮಂದಿರು ಒಬ್ಬಂಟಿಯಾಗಿ ತಮ್ಮ ಮಕ್ಕಳನ್ನು ಬೆಳೆಸುತ್ತಾರೆ. ಜೀವನದ ಪ್ರತಿಕ್ಷಣದಲ್ಲೂ ಹೋರಾಟ ನಡೆಸುತ್ತಾರೆ. ನಾನು ಇಂದು ಗಳಿಸಿದ ಕಿರೀಟ ಅಂತಹ ತಾಯಂದಿರಿಗೆ ಸಮರ್ಪಿಸುತ್ತೇನೆ ಎಂದು ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸೀರಿಯಲ್ ನೋಡಿ ದೇವ್ರೇ ಕಾಪಾಡಪ್ಪ ಎಂದ ಅನಿತಾ ಭಟ್! ಅಂಥದ್ದೇನಿದೆ ಈ ದೃಶ್ಯದಲ್ಲಿ?
ಕೂಡಲೇ ಸಾರಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ
Published On - 5:53 pm, Wed, 7 April 21