ನ್ಯಾಟೊ ಸದಸ್ಯ ರಾಷ್ಟ್ರ ಪೊಲೆಂಡ್ ಗಡಿಯಲ್ಲಿ ಕ್ಷಿಪಣಿಗಳು ಸ್ಫೋಟಿಸಿರುವುದು 3ನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕಕ್ಕೆ ಇದೀಗ ತೆರೆಬಿದ್ದಿದೆ. ‘ಇದೊಂದು ಆಕಸ್ಮಿಕ ಘಟನೆ, ಉದ್ದೇಶಪೂರ್ವಕವಾಗಿ ನಡೆದ ದಾಳಿಯಲ್ಲ’ ಎಂದು ನ್ಯಾಟೊ ಸದಸ್ಯ ದೇಶಗಳು ಘಟನೆಯ ನಂತರ ನೆಲೆಗೊಂಡಿದ್ದ ಉದ್ವಿಗ್ನತೆ ಕಡಿಮೆ ಮಾಡಲು ಯತ್ನಿಸಿವೆ. ಆದರೆ ಉಕ್ರೇನ್ ಮಾತ್ರ ಈ ಹೇಳಿಕೆಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದೆ. ‘ಉಕ್ರೇನ್ ಹಾರಿಬಿಟ್ಟ ವಿಮಾನ ನಿರೋಧಕ ರಾಕೆಟ್ಗಳಿಂದ ಪೊಲೆಂಡ್ ಗಡಿಯೊಳಗೆ ಸ್ಫೋಟ ಸಂಭವಿಸಿತು ಎಂಬ ಮಾತು ಒಪ್ಪಲು ಸಾಧ್ಯವಿಲ್ಲ’ ಎಂದು ತನ್ನ ನಿಲುವು ಸ್ಪಷ್ಟಪಡಿಸಿದೆ.
ಪೊಲೆಂಡ್ನಲ್ಲಿ ಸ್ಫೋಟ ಸಂಭವಿಸಿದೆ ಎಂಬ ಮಾಹಿತಿ ಬಹಿರಂಗಗೊಂಡ ಕ್ಷಣದಿಂದಲೂ ನ್ಯಾಟೊ ಒಕ್ಕೂಟವನ್ನು ರಷ್ಯಾ ವಿರುದ್ಧ ಎತ್ತಿಕಟ್ಟಲು ಉಕ್ರೇನ್ ಯತ್ನಿಸುತ್ತಿತ್ತು. ಆದರೆ ಇದೀಗ ಅಮೆರಿಕ ಕೂಡ ಇತರ ನ್ಯಾಟೊ ಸದಸ್ಯ ದೇಶಗಳಂತೆ ಇದು ಉಕ್ರೇನ್ ಹಾರಿಬಿಟ್ಟ ರಾಕೆಟ್ನಿಂದ ಸಂಭವಿಸಿದ ಸ್ಫೋಟ ಎಂದು ಒಪ್ಪಿಕೊಂಡಿದೆ. ಪ್ರಾಥಮಿಕ ತನಿಖೆಗಳ ನಂತರ ಈ ಮಾಹಿತಿಯನ್ನು ಮೊದಲು ಪೊಲೆಂಡ್ ಬಹಿರಂಗಪಡಿಸಿತ್ತು. ಉಕ್ರೇನ್ ಗಡಿಯ ಪೊಲೆಂಡ್ನ ಹಳ್ಳಿಯಲ್ಲಿ ಕ್ಷಿಪಣಿ ದಾಳಿಯಿಂದಾಗಿ ಮಂಗಳವಾರ (ನ 15) ಇಬ್ಬರು ಮೃತಪಟ್ಟಿದ್ದರು. ಈ ವೇಳೆ ರಷ್ಯಾ ಉಕ್ರೇನ್ನಲ್ಲಿರುವ ಮೂಲಸೌಕರ್ಯ ವ್ಯವಸ್ಥೆಯ ಮೇಲೆ ವ್ಯಾಪಕ ದಾಳಿ ನಡೆಸಿತ್ತು.
ಉಕ್ರೇನ್ ಗಡಿಯಾಚೆ ಸಂಭವಿಸಿದ ಸ್ಫೋಟವು ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟುಹಾಕಿತ್ತು. ಆದರೆ ಕೆಲ ಹೊತ್ತಿನ ನಂತರ ಈ ಸ್ಫೋಟಕ್ಕೆ ರಷ್ಯಾದಿಂದ ಹಾರಿಬಂದ ಕ್ಷಿಪಣಿ ಕಾರಣವಲ್ಲ ಎಂಬುದು ದೃಢಪಟ್ಟ ನಂತರ ಹಲವು ದೇಶಗಳು ನಿಟ್ಟುಸಿರು ಬಿಟ್ಟಿದ್ದವು. ರಷ್ಯಾದಿಂದ ಬರುತ್ತಿದ್ದ ಕ್ಷಿಪಣಿಯನ್ನು ತಡೆಗಟ್ಟಲು ಉಕ್ರೇನ್ ಹಾರಿಬಿಟ್ಟ ಬರಾಜ್ (ಕ್ಷಿಪಣಿಗಳನ್ನು ಆಗಸದಲ್ಲಿಯೇ ತಡೆಯುವ ಯುದ್ಧೋಪಕರಣ) ಪೊಲೆಂಡ್ ಗಡಿಯೊಳಗೆ ಬಂದಿರಬಹುದು. ಅಂತಿಮವಾಗಿ ಇದಕ್ಕೆ ರಷ್ಯಾವೇ ಮುಖ್ಯ ಕಾರಣ ಎಂದು ನ್ಯಾಟೊ ಒಕ್ಕೂಟ ಹೇಳಿತ್ತು. ‘ಪೊಲೆಂಡ್ನಲ್ಲಿ ಆದ ಜೀವಹಾನಿಗೆ ರಷ್ಯಾ ಮುಖ್ಯ ಕಾರಣ ಎಂಬ ಮಾತಿನಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಅಮೆರಿಕ ಸಹ ತನ್ನ ನಿಲುವು ಸ್ಪಷ್ಟಪಡಿಸಿತ್ತು.
ಆರಂಭದಿಂದಲೂ ಪೊಲೆಂಡ್ ದಾಳಿಯ ಆರೋಪವನ್ನು ನಿರಾಕರಿಸುತ್ತಿದ್ದ ರಷ್ಯಾದ ರಕ್ಷಣಾ ಸಚಿವಾಲಯವು, ‘ಸ್ಫೋಟಿಸಿದ ಕ್ಷಿಪಣಿಯ ಅವಶೇಷಗಳ ಚಿತ್ರಗಳನ್ನು ಪರಿಶೀಲಿಸಿರುವ ತಜ್ಞರು ಇದು ಉಕ್ರೇನ್ನ ಎಸ್-300 ವಾಯುರಕ್ಷಣಾ ವ್ಯವಸ್ಥೆಯ ಕ್ಷಿಪಣಿ ಎಂಬುದನ್ನು ದೃಢಪಡಿಸಿದ್ದಾರೆ. ಪೊಲೆಂಡ್ ಗಡಿಯಿಂದ ಕನಿಷ್ಠ 35 ಕಿಮೀ ಅಂತರವಿರುವಂತೆ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ’ ಎಂದು ಹೇಳಿದೆ. ‘ರಷ್ಯಾ ಸೇನೆ ಸಂಪೂರ್ಣವಾಗಿ ಕುಸಿಯದೇ ಈ ಯುದ್ಧ ಕೊನೆಗೊಳ್ಳುವುದಿಲ್ಲ. ಆದರೆ ಎಂದಿಗೂ ರಷ್ಯಾ ಸೇನೆಯು ಈ ಸ್ಥಿತಿಗೆ ತಲುಪುವುದಿಲ್ಲ’ ಎಂದು ಅಮೆರಿಕದ ಉನ್ನತ ಸೇನಾಧಿಕಾರಿ ಹೇಳಿದ್ದಾರೆ. ಈ ಮೂಲಕ ಈಗಾಗಲೇ 200 ದಿನ ದಾಟಿರುವ ರಷ್ಯಾ-ಉಕ್ರೇನ್ ಯುದ್ಧವು ಇನ್ನಷ್ಟು ದಿನಗಳ ಕಾಲ ಮುಂದುವರಿಯಬಹುದು ಎಂಬ ಸೂಚನೆಯನ್ನು ಅಮೆರಿಕ ನೀಡಿದೆ.
Published On - 9:12 am, Thu, 17 November 22