ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಸಾಧಿಸಬಹುದು ಅನ್ನೋ ಮಾತು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಮಾರಾಯ್ರೇ. ಬೇರೆ ದೇಶಗಳಲ್ಲೂ ದುಡ್ಡಿರುವವನೇ ದೊಡ್ಡಪ್ಪ. ಇನ್ನು ಆ ದೊಡ್ಡಪ್ಪ ವಿಶ್ವದ ದೊಡ್ಡಣ್ಣ ಅಮೇರಿಕದವನಾಗಿದ್ದರೆ (US) ಅವನು ದೊಡ್ಡ ದೊಡ್ಡಪ್ಪ ಅನ್ನೋದು ನಿಸ್ಸಂದೇಹ. ಇದನ್ನ ಯಾಕೆ ಹೇಳಬೇಕಾಗಿದೆಯೆಂದರೆ, ಅಮೆರಿಕದ ಬಿಲಿಯನ್ನೇರ್ ಉದ್ಯಮಿ ಜೆಫ್ ಬಿಜೋಸ್ ಅವರಿಗೋಸ್ಕರ ನೆದರ್ಲ್ಯಾಂಡ್ಸ್ (ಹಾಲೆಂಡ್) (Netherlands) ತನ್ನ ಐತಿಹಾಸಿಕ, ಐಕಾನಿಕ್ ಅಂತ ಗುರುತಿಸಿಕೊಂಡಿರುವ ಕೊನಿಂಗ್ಶೇವನ್ ಸೇತುವೆಯನ್ನು (Koningshaven Bridge ) ತಾತ್ಕಾಲಿಕವಾಗಿ ಬೀಳಿಸಿ ಪುನಃ ಕಟ್ಟಿಕೊಳ್ಳಲು ಸಿದ್ಧವಾಗಿದೆ. ಇದನ್ನೇ ನಾವು ಪವರ್ ಆಫ್ ಮನೀ ಅಂತ ಹೇಳುತ್ತಿರೋದು. ಅಂದಹಾಗೆ ಹಾಲೆಂಡ್ ಸೇತುವೆಯನ್ನು ಕೆಡವಲು ಯಾಕೆ ಮುಂದಾಗಿದೆ ಗೊತ್ತಾ? ಬಿಜೋಸ್ ಅವರ ಬೃಹದಾಕಾರದ ಯಾಚ್ (yatch) (ವಿಹಾರ ನೌಕೆ) ಹಾಲೆಂಡಿನ ರಾಟ್ಟರ್ ಡ್ಯಾಮ್ ಕರಾವಳಿ ನಗರದ (Rotterdam Port City) ಬಂದರಿನಲ್ಲಿರುವ ಕೊನಿಂಗ್ಶೇವನ್ ಬ್ರಿಜ್ ಕೆಳಗಿನಿಂದ ಹಾದು ಹೋಗುವುದು ಸಾಧ್ಯವಾಗುತ್ತಿಲ್ಲ. ಅಂದರೆ ಈ ಯಾಚ್ ಅಷ್ಟು ದೊಡ್ಡದಾಗಿದೆ. ಹಾಗಾಗಿ ರಾಟ್ಟರ್ ಡ್ಯಾಮ್ ನ ಸ್ಥಳೀಯ ಆಡಳಿತ ಅದನ್ನು ಕೆಡವಲು ಮುಂದಾಗಿದೆ. ಒಮ್ಮೆ ಯಾಚ್ ಅಲ್ಲಿಂದ ಪಾಸ್ ಆದ ಬಳಿಕ ಸೇತುವೆಯನ್ನು ಪುನರ್ ನಿರ್ಮಿಸಲಾಗುವುದು.
ನಿಮಗೆ ನೆನಪಿರಲಿ, ಕೊನಿಂಗ್ಶೇವನ್ ಬ್ರಿಜ್ ಅನ್ನು 1878 ರಲ್ಲಿ ನಿರ್ಮಿಸಲಾಗಿತ್ತು. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ನಾಜಿ ಸೈನಿಕರ ಬಾಂಬ್ ದಾಳಿಯಲ್ಲಿ ಕುಸಿದುಬಿದ್ದ ಸೇತುವೆಯನ್ನು 1940ರಲ್ಲಿ ಪುನಃ ನಿರ್ಮಿಸಲಾಗಿತ್ತು.
ಅಂದಹಾಗೆ, ವಿಶ್ವದ ಆಗರ್ಭ ಶ್ರೀಮಂತ ಮತ್ತು ಅಮೇಜಾನ್ ಸಂಸ್ಥೆಯ ಸಂಸ್ಥಾಪಕ ಬಿಜೋಸ್ ಅವರ ಯಾಚ್ ಬೆಲೆ ಎಷ್ಟಿರಬಹುದೆಂದು ಊಹಿಸಬಲ್ಲಿರಾ? ನಮ್ಮ ದೇಶದ ಕರೆನ್ಸಿಯಲ್ಲಿ ಹೇಳುವುದಾದರೆ ರೂ. 3640 ಕೋಟಿ!!
ಬಿಜೋಸ್ ಅವರ ಯಾಚ್ ನಿರ್ಮಿಸಿದ ಅಲ್ಬಸ್ಸರ್ಡ್ಯಾಮ್ ನಲ್ಲಿರುವ ಶಿಪ್ಯಾರ್ಡ್ ಸಂಸ್ಥೆಯು ಮೂರು-ಮಾಸ್ಟ್ ಇರುವ ಯಾಚ್ ಹಾದು ಹೋಗಲು ಬ್ರಿಜ್ನ ಕೇಂದ್ರ ಭಾಗವನ್ನು ಕೆಡುವುವಂತೆ ಸ್ಥಳೀಯ ಆಡಳಿತವನ್ನು ಕೇಳಿದೆ.
‘ಸಮುದ್ರದ ಮೂಲಕ ಹಾದು ಹೋಗಲು ಯಾಚ್ ಗೆ ಬೇರೆ ಮಾರ್ಗವಿರದ ಕಾರಣ ಅವರ ಮನವಿಯನ್ನು ನಾವು ಒಪ್ಪಿಕೊಳ್ಳಬೇಕಾಯಿತು. ಆದರೆ ನಾನಿಲ್ಲಿ ಒಂದು ಮಾತನ್ನು ಸ್ಪಷ್ಟಪಡಿಸಬೇಕು. ಬ್ರಿಜ್ ಕೆಡವುವ ಮತ್ತು ಪುನಃ ನಿರ್ಮಿಸುವ ವೆಚ್ಚವನ್ನು ಜೆಫ್ ಬಿಜೋಸ್ ಅವರು ಭರಿಸುತ್ತಿದ್ದಾರೆ,’ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತಾಡುವಾಗ ರಾಟರ್ ಡ್ಯಾಮ್ ಮೇಯರ್ ಹೇಳಿದ್ದಾರೆ.
ಆದರೆ ಈ ನಿರ್ಧಾರ ಹಾಲೆಂಡ್ನಲ್ಲಿ ಕೆಲವರಿಗೆ ಕೋಪ ತರಿಸಿದೆ. 2017 ರಲ್ಲಿ ಸೇತುವೆಯ ಮೇಜರ್ ನವೀಕರಣ ನಡೆದ ಬಳಿಕ ಅದನ್ನು ಯಾವತ್ತೂ ಕೆಡವುದಿಲ್ಲ ಎಂದು ಹೇಳಲಾಗಿತ್ತು. ಈ ಸೇತುವೆಯನ್ನು ರಾಟರ್ಡ್ಯಾಮ್ ನಿವಾಸಿಗಳು ಡಿ ಹೆಫ್ ಅಂತ ಕರೆಯುತ್ತಾರೆ.
ನೌಕೆಯನ್ನು ನಿರ್ಮಿಸುವಾಗ ಅನೇಕ ಸ್ಥಳೀಯರಿಗೆ ಕೆಲಸ ಸಿಕ್ಕಿದ್ದು ಮತ್ತು ಪೌರ ಆಡಳಿತಕ್ಕೆ ಆಗಿರುವ ಹಣಕಾಸಿನ ಲಾಭದ ಬಗ್ಗೆ ಮಾತಾಡಿರುವ ಮೇಯರ್ ಸೇತುವೆಯನ್ನು ಮೊದಲಿದ್ದಂತೆಯೇ ನಿರ್ಮಿಸಲಾಗುವುದು ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.
ಡಚ್ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಉಕ್ಕಿನಿಂದ ನಿರ್ಮಿಸಲಾಗಿರುವ ಸೇತುವೆಯ ಮಧ್ಯಭಾಗವನ್ನು ಕೆಡವಿ 130 ಅಡಿ ಎತ್ತರದ ಯಾಚ್ ಹಾದುಹೋಗಲು ಅನುವು ಮಾಡಿಕೊಡಲಾಗುವುದು. ಸದರಿ ಪ್ರಕ್ರಿಯೆಯು ಕೆಲ ವಾರಗಳವರೆಗೆ ನಡೆಯಲಿದ್ದು ಬೇಸಿಗೆ ಹೊತ್ತಿಗೆ ಪೂರ್ಣಗೊಳ್ಳಲಿದೆ ಅಂತ ಹೇಳಲಾಗುತ್ತಿದೆ.
ನೋಡಿದ್ರಾ ದುಡ್ಡಿನ ಕರಾಮತ್ತು? ಬ್ರಿಜ್ ಕೆಡವಲು ರಾಟ್ಟರ್ಡ್ಯಾಮ್ ಸ್ಥಳೀಯ ಆಡಳಿತ ಒಪ್ಪದ ಹೋಗಿದ್ದರೆ ಅದನ್ನು ಖರೀದಿಸಲು ಅವರು ಮುಂದಾಗುತ್ತಿದ್ದರೇನೋ?
ಇದನ್ನೂ ಓದಿ: 25 ವರ್ಷಗಳ ಹಿಂದೆ ಅಮೆಜಾನ್ ವೆಬ್ಸೈಟ್ ಬಗ್ಗೆ ಡೆಮೋ ನೀಡಿದ ವಿಡಿಯೋ ಹಂಚಿಕೊಂಡ ಸಂಸ್ಥಾಪಕ ಜೆಫ್ ಬೆಜೋಸ್