ನೆಲ್ಲೂರು ಮೂಲದ ಹಸು 36 ಕೋಟಿಗೆ ಮಾರಾಟವಾಯ್ತು! ಯಾಕೆ ಗೊತ್ತಾ? ಇಲ್ಲಿದೆ ಪೈಸಾ ವಸೂಲ್ ಕಹಾನಿ

|

Updated on: May 10, 2024 | 6:00 PM

ಒಂದು ಮಾಮೂಲಿ ನೆಲ್ಲೂರು ಹಸು ಕೇವಲ ಕೆಲವು ಡಜನ್ ಕರುಗಳನ್ನು ಹುಟ್ಟುಹಾಕಬಹುದು. ಅದೇ ಬ್ರೆಜಿಲ್​​ನಲ್ಲಿ ಅಭಿವೃದ್ಧಿಪಡಿಸಲಾದ ರಾಣಿ ಹಸು ಬಲಾಢ್ಯ ಹತ್ತಾರು ಜಾನುವಾರುಗಳನ್ನು ಹುಟ್ಟುಹಾಕುತ್ತದೆ. ಇಲ್ಲಿನ ಸಂತಾನೋತ್ಪತ್ತಿ ಪ್ರಕ್ರಿಯೆಯೇ ಕ್ರಾಂತಿಕಾರಿಯಾಗಿದೆ. ಇದು ಶಾಖ ಪ್ರತಿರೋಧ, ರೋಗ ನಿರೋಧಕ ಶಕ್ತಿ, ಫೀಡ್ ದಕ್ಷತೆ, ಉತ್ತಮ ಗುಣಮಟ್ಟದ ಕೊಬ್ಬು ಬೆಳವಣಿಗೆ ಮತ್ತು ಸಮೃದ್ಧ ಸಂತಾನೋತ್ಪತ್ತಿ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ, Viatina-19 ತಳಿ ಮಾರುಕಟ್ಟೆಯಲ್ಲಿ ಬಿಲಿಯನ್-ಡಾಲರ್-ಆಭರಣದ ಪ್ರತಿನಿಧಿಯಾಗಿ ಕಂಗೊಳಿಸುತ್ತಿದೆ.

ನೆಲ್ಲೂರು ಮೂಲದ ಹಸು 36 ಕೋಟಿಗೆ ಮಾರಾಟವಾಯ್ತು! ಯಾಕೆ ಗೊತ್ತಾ? ಇಲ್ಲಿದೆ ಪೈಸಾ ವಸೂಲ್ ಕಹಾನಿ
ದಾಖಲೆ ಮಾರಾಟದ ನಡುವೆಯೂ ಬ್ರೆಜಿಲ್‌ನ ಜಾನುವಾರು ದಿಗಂತದಲ್ಲಿ ಕಾರ್ಮೋಡಗಳು!?
Follow us on

ಜಾನುವಾರು ಸಂತಾನೋತ್ಪತ್ತಿ, ಸಾಕಣೆ ಮತ್ತು ಪಾಲನೆ ಇತಿಹಾಸದಲ್ಲಿ ಕಳೆದ ವರ್ಷ ಬ್ರೆಜಿಲ್‌ನಲ್ಲಿ ಹಾಲುಬಿಳುಪಿನ ನೆಲ್ಲೂರು ಹಸು ಹರಾಜು ಮೂಲಕ ದಾಖಲೆಯ ಮಟ್ಟದಲ್ಲಿ ಮಾರಾಟವಾಯಿತು. ಮಧ್ಯ ಬ್ರೆಜಿಲ್​​ ನಲ್ಲಿ ನಡೆದ ಹರಾಜಿನಲ್ಲಿ ಈ ನೆಲ್ಲೂರು ಹಸು ನೀವು ನಂಬಲಾಗದ ಮೌಲ್ಯದಲ್ಲಿ 36 ಕೋಟಿ ರೂ.ಗೆ ಮಾರಾಟವಾಯಿತು. ಅದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್​​​​​ಗೂ ಸೇರ್ಪಡೆಯಾಯಿತು. ಇದೂ ಸಹ ಹೆಚ್ಚುಗಾರಿಕೆಯೆ ಆಗಿದೆ. ಹಾಗೆ ನೋಡಿದರೆ ಇಲ್ಲಿನ ಜಾನುವಾರು ಸಂತಾನೋತ್ಪತ್ತಿ ಪ್ರಕ್ರಿಯೆಯೇ ಕ್ರಾಂತಿಕಾರಿಯಾಗಿದೆ. ಇದು ಪ್ರಸ್ತುತ ಭೂಮಿಯ ಮೇಲಿನ ಅತ್ಯಮೂಲ್ಯ ಜಾನುವಾರು ಆಗಿದೆ.

ಹಸುವಿಗೆ ವಯಾಟಿನಾ-19 ಎಫ್‌ಐವಿ ಮಾರಾ ಇಮೊವೆಸ್ (Viatina-19 FIV Mara Imóveis) ಎಂದು ಹೆಸರಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಜಾನುವಾರು ವ್ಯಾಪಾರದಲ್ಲಿ ಕ್ರಾಂತಿಯನ್ನುಂಟುಮಾಡುವ ರೀತಿಯಲ್ಲಿ ಜೈವಿಕ ತಂತ್ರಜ್ಞಾನದ ಆವಿಷ್ಕಾರದ ಪ್ರಮುಖ ಸಾಧನೆಯನ್ನು ಇದು ಪ್ರತಿನಿಧಿಸುತ್ತದೆ. ಈ ಹಿಂದೆಯೆಲ್ಲಾ ನೆಲ್ಲೂರು ಎತ್ತುಗಳು ನಿಯಮಿತವಾಗಿ 2,000 ಡಾಲರ್​ ಬೆಲೆ ಪಡೆಯುತ್ತಿದ್ದರೂ, ಅದೇ ತಳಿಯ ಹಸುವನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಲು ನಿರ್ದಿಷ್ಟ ಕಾರಣಗಳಿವೆ. ಎತ್ತುಗಳನ್ನು ಸಾಮಾನ್ಯವಾಗಿ ಅವುಗಳ ಮಾಂಸ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಗಳಿಗಾಗಿ ಮಾರಾಟ ಮಾಡಲಾಗುತ್ತದೆ. ಹಾಗಾಗಿ ವಯಾಟಿನಾ -19 ಹಸುವಿನ ಮೌಲ್ಯವು ಅದರ ವಂಶವಾಹಿಯಲ್ಲಿಯೇ ಅಡಗಿದೆ.

Viatina-19 ಭಾರತೀಯ ವಂಶಾವಳಿಯನ್ನು ಹೊಂದಿದೆ. ನೆಲ್ಲೂರು ತಳಿಯನ್ನು ವೈಜ್ಞಾನಿಕವಾಗಿ ಬಾಸ್ ಇಂಡಿಕಸ್ ಎಂದು ಕರೆಯಲಾಗುತ್ತದೆ, ಇದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಒಂಗೋಲ್ ಜಾನುವಾರುಗಳಿಂದ ಬಂದಿದೆ. ಒಂಗೋಲ್ ಜಾನುವಾರುಗಳು ಸುಡುವ ಬೇಸಿಗೆ ಶಾಖ ಮತ್ತು ತೀವ್ರ ಬರ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುವ ಅಸಾಧಾರಣ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಭಾರತದಲ್ಲಿ ಶತಮಾನಗಳಿಂದಲೂ ಅದನ್ನು ಪವಿತ್ರ ಜೀವಿಗಳಾಗಿ ಪೂಜಿಸಲಾಗುತ್ತಿದೆ.

ಒಂಗೋಲ್ ಮತ್ತು ನೆಲ್ಲೂರು ಎರಡೂ ತಳಿಗಳು ಝೆಬು ಎಂಬ ಜಾನುವಾರು ಉಪಜಾತಿಗಳ ಮೂಲದಿಂದ ಬಂದಿವೆ. 1868 ರಲ್ಲಿ ಝೆಬು ಜಾನುವಾರುಗಳು ಬ್ರೆಜಿಲಿಯನ್ ತೀರಕ್ಕೆ ಬಂದವು – ಒಂಗೋಲ್ ತಳಿಯ ಎರಡು ಎತ್ತುಗಳು ಮತ್ತು ಎರಡು ಹಸುಗಳು ನೆಲ್ಲೂರಿನಿಂದ 13,000 ಕಿಲೋ ಮೀಟರ್ ಪ್ರಯಾಣ ಮಾಡಿ ಬ್ರೆಜಿಲ್‌ನ ವಿಶಾಲವಾದ ಪಶುಪಾಲನಾ ರಾಜ್ಯವಾದ ಬಹಿಯಾವನ್ನು ಸೇರಿಕೊಂಡವು ಎನ್ನುತ್ತದೆ ಭಾರತದ ಪ್ರಮುಖ ವ್ಯಾಪಾರ ಪುಸ್ತಕದ ಕ್ಯಾಟಲ್ ಹಸ್ಬೆಂಡ್ರಿ. ಖಂಡಾಂತರ ಮಾಡಿ ಸಾಗಿದ ಈ ಜಾನುವಾರುಗಳನ್ನು ಹಾಲು-ಭರಿತ ಡಚ್ ತಳಿಗಳೊಂದಿಗೆ ಬೆರೆಯುವಂತಾಗಲು ಅಲ್ಲಿ ಉತ್ತಮ ವಾತಾವರಣ ಕಲ್ಪಿಸಲಾಯಿತು ಎಂಬುದು ಗಮನಾರ್ಹ.

ಅದಾದಮೇಲೆ ಮುಂದಿನ ದಶಕದಲ್ಲಿ ಬ್ರೆಜಿಲ್‌ನಲ್ಲಿ ಝೆಬು ತಳಿ ಬಲವರ್ಧನೆ ವಿರಳವಾಗಿ ನಡೆಯಿತು. 1960 ರ ದಶಕದಲ್ಲಿ 100 ಒಂಗೋಲ್ ಜಾನುವಾರುಗಳನ್ನು ಬ್ರೆಜಿಲ್​ಗೆ ತಂದುಬಿಡಲಾಯಿತು. ಬ್ರೆಜಿಲ್‌ನ ಹೊಸ ಜಾನುವಾರು ಹಿಂಡುಗಳಿಗೆ ಭಾರತೀಯ ರಕ್ತಸಂಬಂಧ ಹರಿಸಲಾಯಿತು. ಇದರಿಂದ ನಿಜಾರ್ಥದಲ್ಲಿ ಭಾರತೀಯ ತಳಿಯ ಅಧಿಪತ್ಯ ಸ್ಥಾಪಿಸುವಂತಾಯಿತು. ಇಂದು, ಗೌಚೋಸ್ ಅಂದರೆ ಬ್ರೆಜಿಲ್‌ನ ಗೌಳಿಗಳು ತಮ್ಮನ್ನು ತಾವು ಈ ಪೌರಾಣಿಕ ವಂಶಾವಳಿಯ ಸಂಭಾವಿತ ಪಾಲಕರು ಎಂದು ಕಾಣುತ್ತಾರೆ.

ಬ್ರೆಜಿಲ್‌ನಲ್ಲಿ ಜಾನುವಾರು ಸಂತಾನೋತ್ಪತ್ತಿ ಪ್ರಕ್ರಿಯೆಯೇ ಕ್ರಾಂತಿಕಾರಿಯಾಗಿದೆ!

ಜೈವಿಕ ತಂತ್ರಜ್ಞಾನದ ಅತ್ಯಾಧುನಿಕ ಆವಿಷ್ಕಾರಗಳ ಮೂಲಕ ಇಲ್ಲಿನ ಪಶುಪಾಲಕರು ತಮ್ಮ ಉತ್ತಮ ಭವಿಷ್ಯಕ್ಕಾಗಿ ಜೀಬು ಜಾನುವಾರುಗಳನ್ನು ಮತ್ತಷ್ಟು ದೃಢಗೊಳಿಸುತ್ತಿದ್ದಾರೆ. ಜೆಬು ತಳಿಶಾಸ್ತ್ರವು ಸುಸ್ಥಿರತೆಯನ್ನು ಕಾಪಾಡುವ ಪ್ರಮುಖ ಸಾಧನಗಳಲ್ಲಿ ಒಂದಾಗಿದೆ. ನೆಲ್ಲೂರು ಜಾನುವಾರುಗಳು ಬ್ರೆಜಿಲ್‌ನ ಜಾನುವಾರು ಉದ್ಯಮದ ತಳಹದಿಯಾಗಿವೆ. ಇಂದು ಬ್ರೆಜಿಲ್‌ನ 225 ಮಿಲಿಯನ್ ಜಾನುವಾರು ಹಿಂಡಿನಲ್ಲಿ ಶೇ. 80 ರಷ್ಟು ಇವೆ. ಬ್ರೆಜಿಲ್‌ನ ವೈವಿಧ್ಯಮಯ ಪರಿಸರಗಳಲ್ಲಿ ಬಿಸಿಲಿಂದ ಸುಡುವ ಕ್ಯಾಟಿಂಗಾ ಪೊದೆ ಸಸ್ಯಗಳಿಂದ ಹಿಡಿದು ಅಮೆಜಾನ್ ಜಲಾನಯನ ಪ್ರದೇಶದ ವೈವಿಧ್ಯಮಯ ಆರ್ದ್ರ ವಾತಾವರಣದವರೆಗೂ ವ್ಯಾಪಿಸಿದೆ. ಬ್ರೆಜಿಲ್ ವಿಶ್ವದ ಅತಿದೊಡ್ಡ ಗೋಮಾಂಸ ರಫ್ತುದಾರ ರಾಷ್ಟ್ರವಾಗಿದ್ದು, 2022 ರಲ್ಲಿ 8 ಶತಕೋಟಿ ಡಾಲರ್​ ಮೌಲ್ಯದ ಗೋಮಾಂಸ ರಫ್ತು ಮಾಡಿದೆ. ಹೆಚ್ಚು ಸಹಿಷ್ಣುತೆಯ, ಅಲ್ಪ ನಿರ್ವಹಣೆಯ ನೆಲ್ಲೂರು ಜಾನುವಾರುಗಳಿಗೆ ಇವರು ಬಹಳಷ್ಟು ಋಣಿಯಾಗಿದ್ದಾರೆ. ಇಂತಹ ಬೆಲೆಬಾಳುವ ಹಸುವನ್ನು ಸೃಷ್ಟಿಸಿದ ಬ್ರೆಜಿಲಿಯನ್ ಜೈವಿಕ ವಿಜ್ಞಾನಿಗಳ ಯಶಸ್ಸನ್ನು ಅದರ ದಾಖಲೆ ಬೆಲೆಗೆ ತಾಳೆಹಾಕಬಹುದಾಗಿದೆ ಎನ್ನುತ್ತಾರೆ ಬ್ರೆಜಿಲ್‌ನಲ್ಲಿರುವ ಭಾರತದ ರಾಯಭಾರಿ ಸುರೇಶ್ ರೆಡ್ಡಿ.

ವಂಶಾವಳಿಯ ಮೇರುಶಕ್ತಿ ಹೊರತಾಗಿ Viatina-19 ನ ಜೀನೋಮ್ ಮಾದರೀಯ ಗುಣಲಕ್ಷಣಗಳನ್ನು ಸಂಕೇತಿಸುತ್ತದೆ. ಅಂದರೆ ಶಾಖ ಪ್ರತಿರೋಧ, ರೋಗ ನಿರೋಧಕ ಶಕ್ತಿ, ಫೀಡ್ ದಕ್ಷತೆ, ಉತ್ತಮ ಗುಣಮಟ್ಟದ ಕೊಬ್ಬು ಬೆಳವಣಿಗೆ ಮತ್ತು ಸಮೃದ್ಧ ಸಂತಾನೋತ್ಪತ್ತಿ ಶಕ್ತಿಯನ್ನು ಹೊಂದಿದೆ. ಭ್ರೂಣ ವರ್ಗಾವಣೆ, ಇನ್ ವಿಟ್ರೊ ಫಲೀಕರಣ ಮತ್ತು ಅಬೀಜ ಸಂತಾನೋತ್ಪತ್ತಿಯಂತಹ (ಕ್ಲೋನಿಂಗ್​​) ಆಧುನಿಕ ಜೈವಿಕ ತಂತ್ರಜ್ಞಾನದ ಪ್ರಕ್ರಿಯೆಗಳಿಂದಾಗಿ ಜೀಬು ಜೀನ್‌ಗಳನ್ನು ಕೈಗಾರಿಕಾ ಪ್ರಮಾಣದಲ್ಲಿ ರವಾನಿಸಬಹುದಾಗಿದೆ. ಒಂದು ಮಾಮೂಲಿ ನೆಲ್ಲೂರು ಹಸು ಕೇವಲ ಕೆಲವು ಡಜನ್ ಕರುಗಳನ್ನು ಹುಟ್ಟುಹಾಕಬಹುದು. ಅದೇ ಬ್ರೆಜಿಲ್​​ನಲ್ಲಿ ಅಭಿವೃದ್ಧಿಪಡಿಸಲಾದ ರಾಣಿ ಹಸು ಸಬಲ, ಸಮರ್ಥ ಮತ್ತು ಹೆಚ್ಚು ಉತ್ಪಾದಕ ಹತ್ತಾರು ಜಾನುವಾರುಗಳನ್ನು ಹುಟ್ಟುಹಾಕುತ್ತದೆ. ಗೋವಿನ ಮಾಂಸಕ್ಕಾಗಿ ಜಾಗತಿಕ ಬೇಡಿಕೆಯು 20 ವರ್ಷಗಳಲ್ಲಿ 35 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯೊಂದಿಗೆ, Viatina-19 ಮಾರುಕಟ್ಟೆಯಲ್ಲಿ ಬಿಲಿಯನ್-ಡಾಲರ್-ಆಭರಣದ ಪ್ರತಿನಿಧಿಯಾಗಿ ಕಂಗೊಳಿಸುತ್ತಿದೆ.

ವಯಾಟಿನಾ-19 ದಾಖಲೆ ನಿರ್ಮಿಸಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ, ಇದರ ಮಾಲೀಕತ್ವದ ಅರ್ಧದಷ್ಟು ಹಕ್ಕುಗಳನ್ನು ದಾಖಲೆಯ 8,00,000 ಡಾಲರ್​ಗೆ (6.7 ಕೋಟಿ ರೂ) ಹರಾಜು ಮಾಡಲಾಗಿತ್ತು. ಅದು ಇತ್ತೀಚಿನ ವಹಿವಾಟಿನಲ್ಲಿಯೂ ಅದೇ ಮೌಲ್ಯವನ್ನು ಉಳಿಸಿಕೊಂಡಿದೆ.

ಬ್ರೆಜಿಲಿಯನ್ ಗೋಪಾಲಕರಿಗೆ ನೆಲ್ಲೂರು ಜಾನುವಾರುಗಳು ಮುಖ್ಯವಾಗಿ ಉಷ್ಣವಲಯದ ಹವಾಮಾನದಲ್ಲಿ ಅಭಿವೃದ್ಧಿ ಹೊಂದುವ ಗಮನಾರ್ಹ ಸಾಮರ್ಥ್ಯದ ಕಾರಣದಿಂದ ಅಪೇಕ್ಷಣೀಯವಾಗಿದೆ. ಓಂಗೋಲ್ ಜಾನುವಾರುಗಳು ತೀಕ್ಷಣ ಒಣ ಹವೆ, ಸುಡುವ ಶಾಖ, ಬರ-ತರಹದ ಪರಿಸ್ಥಿತಿಗಳನ್ನು ಸಹಿಸಿಕೊಳ್ಳುವ ಮತ್ತು ಶುಷ್ಕ ಡೆಕ್ಕನ್ ಪ್ರಸ್ಥಭೂಮಿಯನ್ನು ತಾಳುತ್ತವೆ. ಅತ್ಯುತ್ತಮ ನೆಲ್ಲೂರು ತಳಿಯ ಜಾನುವಾರುಗಳು ಗುಣಮಟ್ಟದ, ಪ್ರಕಾಶಮಾನವಾದ, ಬಿಳಿ ಕೋಟ್ ನಂತಹ ತುಪ್ಪಳ, ದಪ್ಪ ಮತ್ತು ಸಡಿಲವಾದ ಚರ್ಮವನ್ನು ಒಳಗೊಂಡಿರುತ್ತದೆ.

ಅಲ್ಲದೆ, ನೆಲ್ಲೂರು ತಳಿಯ ವಿಕಸನದ ಹಾದಿಯನ್ನು ಗಮನಿಸಿದಾಗ ಅದು ಉಷ್ಣವಲಯದ ನಾನಾ ಕಾಯಿಲೆಗಳು ಮತ್ತು ಬ್ರೆಜಿಲ್​​ನಲ್ಲಿ ವಿದೇಶಿ ಜಾನುವಾರುಗಳನ್ನು ನಾಶ ಮಾಡಿದ ಪರಾವಲಂಬಿ ಸೋಂಕುಗಳನ್ನು ಮೆಟ್ಟಿ ನಿಲ್ಲುವಂತಹ ಬಲವನ್ನು ಗಳಿಸಿಕೊಂಡಿದೆ. ಈ ತಳಿಯ ಅಸಾಧಾರಣ ರೋಗ ನಿರೋಧಕತೆ ಅಂಶವನ್ನು ಶತಮಾನಗಳಿಂದಲೂ ಅಭಿವೃದ್ಧಿಪಡಿಸಲ್ಪಟ್ಟಿದೆ. ನೆಲ್ಲೂರು ತಳಿ ಇದೀಗ ಎಷ್ಟರಮಟ್ಟಿಗೆ ವಿಕಸನಗೊಂಡಿದೆ ಎಂದರೆ ಅವುಗಳ ಪೈಕಿ ದುರ್ಬಲ ಜಾನುವಾರುಗಳು ಕಾಣಿಸಿಕೊಂಡರೆ ಅವು ಸ್ವಯಂ ಆ ಕಾಯಿಲೆಗಳಿಂದ ದೂರವಿರುವಷ್ಟು ಸದೃಢವಾಗಿವೆ.

2000 ರ ದಶಕದ ಆರಂಭದಲ್ಲಿ ಬ್ರೆಜಿಲಿಯನ್ ಜಾನುವಾರು ಉದ್ಯಮವು ನೆಲ್ಲೂರು ತಳಿ ಅಭಿವೃದ್ಧಿಗಾಗಿ ಬೋಯಿ ಇಕೊಲೊಜಿಕೊ ಅಥವಾ ಪರಿಸರದ ಎತ್ತು ಎಂಬ ಅಭಿಯಾನವನ್ನು ಪ್ರಾರಂಭಿಸಿ, ಅದಕ್ಕೆ ಮತ್ತಷ್ಟು ಮಣೆ ಹಾಕಿತು. ಸುಸ್ಥಿರವಾಗಿ ಗೋಮಾಂಸ ಉತ್ಪಾದನೆ ಮಾಡಬಲ್ಲ ಅನನ್ಯ ತಳಿ ಇದಾಗಿದೆ ಎಂದು ಗುರುತಿಸಲ್ಪಟ್ಟಿತು. ಇಲ್ಲಿನ ತರ್ಕ ಸರಳವಾಗಿತ್ತು: ನೆಲ್ಲೂರು ಜಾನುವಾರುಗಳು ಕಳಪೆ ಗುಣಮಟ್ಟದ ಮೇವು ಜೀರ್ಣಿಸಿಕೊಂಡೇ ಬಾಳಬಹುದಾಗಿದೆ. ಹಾಗಾಗಿ ಮೇವಿಗಾಗಿಯೇ ಭೂಮಿಯನ್ನು ಪರಿವರ್ತಿಸುವ ಮತ್ತು ಭಾರೀ ಪ್ರಮಾಣದಲ್ಲಿ ಆಹಾರ ಕೃಷಿ ಕೈಗೊಳ್ಳುವುದರ ಅಗತ್ಯವನ್ನು ಸಹ ನೆಲ್ಲೂರು ಜಾನುವಾರು ಕಡಿಮೆ ಮಾಡುತ್ತದೆ. ಅದರ ಹೆಚ್ಚಿನ ಸದೃಢ ಸ್ನಾಯು ರಾಶಿಯು ಗೋಮಾಂಸ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಕಾರಣಗಳಿಂದಾಗಿ, ಸೈದ್ಧಾಂತಿಕವಾಗಿ ಪರಿಸರ ನಾಶವನ್ನು ಅವು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡುತ್ತವೆ.

ಬ್ರೆಜಿಲ್​ ಜಾನುವಾರುಗಳು ಹೊರಸೂಸುವ ಹೂಸು ಆತಂಕಕಾರಿ ಪ್ರಮಾಣದಲ್ಲಿದೆ!

ಆತಂಕದ ವಿಚಾರವೆಂದರೆ ನೆಲ್ಲೂರು ಜಾನುವಾರುಗಳ ಅಪಾಯಕಾರಿ ಇಂಗಾಲದ ಹೆಜ್ಜೆಗುರುತು (ಮೀಥೇನ್ ಹೊರಸೂಸುವ ಜಾನುವಾರುಗಳ ಹೂಸು) ಇತರ ಜಾನುವಾರು ತಳಿಗಳಿಗಿಂತ ಹಸಿರಾಗಿಯೆನೂ ಇಲ್ಲ ಎಂದು ಸಂಶೋಧಕರು ಅರಿತುಕೊಂಡಿದ್ದಾರೆ. ಇದರಿಂದಾಗಿ ಬೋಯಿ ಜಾನುವಾರುಗಳ ಮಾರಾಟ ಪ್ರವೃತ್ತಿ ಕಡಿಮೆಯಾಗಿದೆ. ಆದರೆ ಸುಸ್ಥಿರ, ಸಮರ್ಥ ಜಾನುವಾರುಗಳ ಅನ್ವೇಷಣೆಯ ಸಮ್ಮುಖದಲ್ಲಿ ಅದರ ಸಾಕಣೆ ಉಳಿದುಕೊಂಡಿದೆ. ಹಸಿರು ಜಾನುವಾರುಗಳ ಪಾಲನೆಯನ್ನು ಅನ್ವೇಷಿಸುವ ನಿಟ್ಟಿನಲ್ಲಿ ನೆಲ್ಲೂರು ಆನುವಂಶಿಕ ಭಂಡಾರವು ಅಪಾರ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಹೊಂದಿದೆ. ನೆಲ್ಲೂರು ಜಾನುವಾರು ತಳಿಯ ಫೀಡ್ ದಕ್ಷತೆಯನ್ನು ಹೆಚ್ಚಿಸುವ, ಮೀಥೇನ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಮಾಂಸ ಉತ್ಪಾದನೆಯನ್ನು ಉತ್ತಮಗೊಳಿಸುವ ಗುಣಲಕ್ಷಣಗಳನ್ನು ಕರಾರುವಕ್ಕಾಗಿ ಆಯ್ಕೆ ಮಾಡುತ್ತಿದ್ದಾರೆ – ಇದು ಜಾನುವಾರು ಸಾಕಣೆಯ ಆರ್ಥಿಕತೆಯನ್ನು ಮರುವ್ಯಾಖ್ಯಾನಿಸುವುದಕ್ಕೆ ಉತ್ತಮ ಮಾರ್ಗವಾಗಿದೆ. ಈಗ ವಯಾಟಿನಾ-19-ಕಾಸಾ ಬ್ರಾಂಕಾ ಆಗ್ರೋಪಾಸ್ಟೋರಿಲ್, ಆಗ್ರೊಪೆಕ್ಯುವಾರಿಯಾ ನಪೆಮೊ ಮತ್ತು ನೆಲ್ಲೂರು ಹೆಚ್‌ಆರ್‌ಒ (Viatina-19―Casa Branca Agropastoril, Agropecuária Napemo and Nelore HRO) ಎಂಬ ಮೂರು ತಳಿಗಳ ಮಾಲೀಕತ್ವವನ್ನು ಹೊಂದಿರುವ ಬ್ರೀಡರ್‌ಗಳು ಅವುಗಳ ಜೀನ್‌ಗಳನ್ನು ವಿಸ್ತಾರಗೊಳಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ. ಇದು ತಳಿಯ ವಿಕಾಸಕ್ಕೆ ಕ್ಷಿಪ್ರ ಮತ್ತು ಕ್ರಾಂತಿಕಾರಿ ಹಾದಿಯಾಗಿದೆ.

“Viatina-19 ತಳಿಯು ಬ್ರೆಜಿಲ್​​​ ಪಶುಪಾಲಕರಿಗೆ ಅತ್ಯಗತ್ಯವಾಗಿರುವ ಉತ್ತಮ ಗುಣಮಟ್ಟದ ತಳಿಯನ್ನು ಸಂಕೇತಿಸುತ್ತದೆ. ಇದಕ್ಕೆ ಗಿನ್ನೆಸ್ ವಿಶ್ವ ದಾಖಲೆ ಪ್ರಾಪ್ತಿಯಾಗಿರುವುದು, ಇದರ ವಿಭಿನ್ನ ಉತ್ಪನ್ನಗಳು, ಹಣಕಾಸಿನ ಲಾಭಗಳು ಮತ್ತು ಹೂಡಿಕೆಯ ಆದಾಯವನ್ನು ಅಧಿಕಗೊಳಿಸುತ್ತದೆ ಎಂಬುದಕ್ಕೆ ಪುರಾವೆ ಒದಗಿಸುತ್ತದೆ. ತಳಿ ಅಭಿವೃದ್ಧಿಗಾರರು ಆನುವಂಶಿಕ ಸುಧಾರಣೆಗಳ ಪ್ರಾಮುಖ್ಯತೆಯನ್ನು ಆಳವಾಗಿ ಅರಿತುಕೊಂಡಿದ್ದಾರೆ. ಇದರ ಹೊರತಾಗಿ, ಪ್ರಧಾನವಾಗಿ ಭೂಮಿಯ ಮೇಲಿನ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯು ಜಾನುವಾರು ಸಾಕಣೆಯ ಭವಿಷ್ಯಕ್ಕೆ ಮೂಲವಾಗಿದೆ ಎಂದು ಬ್ರೆಜಿಲ್ ತಳಿ ಶಾಸ್ತ್ರಜ್ಞರು ವ್ಯಾಖ್ಯಾನಿಸಿದ್ದಾರೆ.

ಈಗ ಬ್ರೆಜಿಲ್​ನಲ್ಲಿ ಜಾನುವಾರು ಸಾಕಣೆಯಲ್ಲಿ ಜೆನೆಟಿಕ್ಸ್ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಜಾನುವಾರು ಹಿಂಡುಗಳನ್ನು ಇಷ್ಟಾನುಸಾರ ಅಡ್ಡಾದಿಡ್ಡಿಯಾಗಿ ಸಂತಾನಾಭಿವೃದ್ಧಿಗೆ ಬಿಡುತ್ತಿದ್ದ ದಿನಗಳು ಇತಿಹಾಸ ಸೇರಿ ಯಾವುದೋ ಕಾಲವಾಗಿದೆ. ಇಂದು, ಜಾನುವಾರು ಜೆನೆಟಿಕ್ಸ್ ಪ್ರಕ್ರಿಯೆಯು ಒಂದು ವಿಜ್ಞಾನವಾಗಿದೆ. ಅತ್ಯಾಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನಗಳು ಜಾನುವಾರಿನ ಅಪೇಕ್ಷಣೀಯ ಗುಣಲಕ್ಷಣಗಳನ್ನು ಬೆರಗುಗೊಳಿಸುವ ವೇಗದಲ್ಲಿ ಅಭಿವರ್ಧಿಸುತ್ತಿವೆ!

ಈ ಬದಲಾವಣೆಯ ಮುಂಚೂಣಿಯಲ್ಲಿ ಬ್ರೆಜಿಲ್ಲಿನ ಮ್ಯಾಟೊ ಗ್ರೊಸೊ ರಾಜ್ಯದ ರಾಜಧಾನಿ ಕ್ಯುಯಾಬಾದಲ್ಲಿ ಬಯೋಎಂಬ್ರಿಯೊ (Bioembryo) ಅಭಿವೃದ್ಧಿ ಘಟಕವೊಂದು ಸ್ಥಾಪಿತಗೊಂಡಿದೆ. ಇದು ಪ್ರಧಾನ ಗೋವಿನ ಸಂತಾನೋತ್ಪತ್ತಿ ಪ್ರಯೋಗಾಲಯವಾಗಿದೆ. Bioembryo ಘಟಕದಲ್ಲಿ Viatina-19 ನಂತಹ ಚಾಂಪಿಯನ್ ಜಾನುವಾರಿನಿಂದ ಅಂಡಾಶಯ ದಾನವನ್ನು ಸೂಕ್ಷ್ಮವಾಗಿ ನಿರ್ಣಯಿಸಲಾಗುತ್ತದೆ. ಪ್ರತಿ ದಾನಿ ಅಂಡಾಣುವನ್ನು ಸೂಕ್ಷ್ಮದರ್ಶಕದ ಅಡಿಯಲ್ಲಿ ಪಕ್ವವಾದ, ಹೆಚ್ಚು ಕಾರ್ಯಸಾಧುವಾದ ಮೊಟ್ಟೆಗಳನ್ನು ಪತ್ತೆ ಹಚ್ಚಲು ಪರೀಕ್ಷಿಸಲಾಗುತ್ತದೆ. ಆಯ್ದ ಮೊಟ್ಟೆಗಳನ್ನು ನಂತರ ಅತ್ಯುತ್ಕೃಷ್ಟ ಜಾನುವಾರುಗಳ ವೀರ್ಯದೊಂದಿಗೆ ಫಲವತ್ತತೆ ಮಾಡಿಸಲಾಗುತ್ತದೆ. ತನ್ಮೂಲಕ ಆನುವಂಶಿಕ ಶ್ರೇಷ್ಠತೆಗಾಗಿ ಪೂರ್ವನಿರ್ಧರಿತ ಭ್ರೂಣಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿನ ಸಂತಾನೋತ್ಪತ್ತಿ ಪ್ರಕ್ರಿಯೆಯೇ ಕ್ರಾಂತಿಕಾರಿಯಾಗಿದೆ. ನೈಸರ್ಗಿಕವಾಗಿ ಎದುರಾಗಬಹುದಾದ ತೊಂದರೆಗಳನ್ನು ತಪ್ಪಿಸಲು ತಳಿಗಾರರು ಶಸ್ತ್ರಚಿಕಿತ್ಸೆಯ ಮೂಲಕ ಭ್ರೂಣಗಳನ್ನು ಬಾಡಿಗೆ ತಾಯಂದಿರ (ಹಸುವಿನಲ್ಲಿ) ಗರ್ಭಕ್ಕೆ ವರ್ಗಾಯಿಸುತ್ತಾರೆ.

ಕ್ಲೋನಿಂಗ್ ಕೂಡ ಒಂದು ಪ್ರಧಾನ ಸಾಧನವಾಗಿ ಮಾರ್ಪಟ್ಟಿದೆ. ಬ್ರೆಜಿಲ್‌ನ ಪ್ರಧಾನ ಗೋವಿನ ಅಬೀಜ ಸಂತಾನೋತ್ಪತ್ತಿ ಸೌಲಭ್ಯಗಳಲ್ಲಿ ಒಂದಾದ ಜೆನಿಯಲ್ ಪ್ರಯೋಗಾಲಯದಲ್ಲಿ ಪ್ರತಿ ವರ್ಷ ಸುಮಾರು 70 ಅಬೀಜ ಸಂತಾನೋತ್ಪತ್ತಿ ಕರುಗಳು ಜನಿಸುತ್ತವೆ. ಈ ಸಂತಾನೋತ್ಪತ್ತಿ ತಂತ್ರಜ್ಞಾನಗಳಿಂದಾಗಿ Viatina-19 ನಂತಹ ಹಸುಗಳಲ್ಲಿ ಕೋಟ್ಯಂತರ ಹೂಡಿಕೆ ಮಾಡುವ ಬ್ರೀಡರ್‌ಗಳು ತಾವು ಹೊಂದಿರುವ ಆನುವಂಶಿಕ ಆಸ್ತಿಗಳ ಷೇರು ಮೌಲ್ಯವನ್ನು ಅಗಾಧ ಪ್ರಮಾಣದಲ್ಲಿ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.

ದಾಖಲೆ ಮಾರಾಟದ ನಡುವೆಯೂ ಬ್ರೆಜಿಲ್‌ನ ಜಾನುವಾರು ದಿಗಂತದಲ್ಲಿ ಕಾರ್ಮೋಡಗಳು!?

ಆದರೆ, Viatina-19 ಅಂತಹ ಚಾಂಪಿಯನ್ ಜಾನುವಾರಿನ ದಾಖಲೆ ಮಾರಾಟದ ಮಧ್ಯೆಯೇ ಬ್ರೆಜಿಲ್‌ನ ಜಾನುವಾರು ದಿಗಂತದಲ್ಲಿ ಕಾರ್ಮೋಡಗಳು ಮೂಡಿವೆ. ಪ್ರಪಂಚದ ಅತ್ಯಮೂಲ್ಯ ಕಾರ್ಬನ್ ಸಿಂಕ್‌ಗಳಲ್ಲಿ ಒಂದಾದ ಅಮೆಜಾನ್ ಮಳೆಕಾಡಿನಲ್ಲಿ ಅರಣ್ಯನಾಶಕ್ಕೆ ಅಪಾಯಕಾರಿ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದೆ ಎಂದು ಪರಿಸರವಾದಿಗಳು ದೀರ್ಘಕಾಲದಿಂದ ಪಶುಪಾಲನೆ ಉದ್ಯಮವನ್ನು ದೂಷಿಸುತ್ತಾ ಬಂದಿದ್ದಾರೆ. ಕಳೆದ 60 ವರ್ಷಗಳಲ್ಲಿ, ಬ್ರೆಜಿಲ್‌ನ ಸುಮಾರು ಐದನೇ ಒಂದು ಭಾಗದಷ್ಟು ಮಳೆಕಾಡುಗಳು ಜಾನುವಾರುಗಳ ಹುಲ್ಲುಗಾವಲುಗಳಿಗೆ ದಾರಿ ಮಾಡಿಕೊಡಲು ನೆಲಸಮ ಮಾಡಲಾಗಿದೆ. ಸ್ಥಳೀಯ ಭೂಮಿಯನ್ನು ಅಕ್ರಮಣಕಾರರಿಂದ ತೆರವುಗೊಳಿಸಿದ ಜಾಗದಲ್ಲಿ ನಿರ್ಲಜ್ಜ ಸಾಕಣೆದಾರರು ಪ್ರಕೃತಿಗೆ ಮಾರಕವಾಗುವ ಈ ಪ್ರವೃತ್ತಿಯನ್ನು ದುಪ್ಪಟ್ಟುಗೊಳಿಸಿದ್ದಾರೆ.

ಝೆಬು ಜಾನುವಾರುಗಳ ಅಗಾಧ ಬೆಳವಣಿಗೆಯು ನಿಜಕ್ಕೂ ಪರಿಸರದ ಮೇಲಿನ ಒತ್ತಡವನ್ನು ತೀವ್ರಗೊಳಿಸಿದೆ. ಝೆಬು ಜಾನುವಾರುಗಳು ಬಾಯಿಯಿಂದ ಮತ್ತು ಗುದದ್ವಾರದಿಂದ ಹೊರಸೂಸುವ ಮಾರಕ ವಾಯು (ಮೀಥೇನ್​) ಪ್ರಮಾಣವು ಒಟ್ಟಾರೆ ಜಾಗತಿಕ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಶೇ. 15 ಪ್ರಮಾಣದಷ್ಟು ಕೊಡುಗೆಯನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷ, ಒಂದು ಹಸು ನೂರು ಪೌಂಡ್‌ಗಿಂತ ಹೆಚ್ಚು ಮೀಥೇನ್ ಅನ್ನು ಹೊರಸೂಸುತ್ತದೆ – ಇದು ಇಂಗಾಲದ ಡೈಆಕ್ಸೈಡ್‌ಗಿಂತ ಹೆಚ್ಚು ಮಾರಕವಾಗಿದೆ ಎಂಬುದು ಆತಂಕಕಾರಿಯಾಗಿದೆ.

ಈ ಮಾರಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬ್ರೆಜಿಲ್​ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಅರಣ್ಯನಾಶಕ್ಕೆ ಕಡಿವಾಣ ಹಾಕುವ ಪ್ರತಿಜ್ಞೆಯನ್ನು ಮಾಡಿದ್ದಾರೆ. ಆದರೆ ಬ್ರೆಜಿಲ್‌ನ ಗೋಮಾಂಸ ಉದ್ಯಮದ ಆರ್ಥಿಕ ಶಕ್ತಿಯು ದೊಡ್ಡ ದೊಡ್ಡ ಪ್ರಸ್ತಾಪ, ಘೋಷಣೆಗಳಿಗಷ್ಟೇ ಸೀಮಿತವಾಗಿದೆ. ವಾಸ್ತವದ ನೆಲೆಗಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಬಲವಾಗಿದೆ. ಇನ್ನು ಹಾಲು ಉತ್ಪನ್ನಗಳ ಹೊರತಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದನದ ಮಾಂಸಕ್ಕೆ ಬೇಡಿಕೆಯು ವಿಪರೀತವಾಗಿ ಹೆಚ್ಚುತ್ತಿದೆ. ಹಾಗಾಗಿ ಅದು ಪರಿಸರಕ್ಕೆ ಮಾರಕವಾಗುವುದನ್ನು ಸೀಮಿತಗೊಳಿಸುವುದಕ್ಕೆ ಜಾನುವಾರು ಸಾಕಣೆ ಬಗ್ಗೆ ಮರು ಆಲೋಚಿಸಬೇಕಿದೆ.

ಈ ಬೆಳವಣಿಗೆಗಳ ಸಮ್ಮುಖದಲ್ಲಿ ಭವಿಷ್ಯದಲ್ಲಿ ‘ಹಸಿರು ಪಶುಸಂಗೋಪನೆ’ ಮಾರ್ಗವನ್ನು (green cow rearing) ಅಳವಡಿಸಿಕೊಳ್ಳುವುದು ಅನಿವಾರ್ಯವಾಗಬಹುದು. ಇದರಿಂದ ಜಾನುವಾರು ಉತ್ಪಾದಕತೆಯ ಮೇಲೆ ರಾಜಿ ಮಾಡಿಕೊಳ್ಳದೆ ಪರಿಸರದ ಮೇಲಿನ ಮಾರಕ ಹೆಜ್ಜೆಗುರುತನ್ನು ತೀವ್ರವಾಗಿ ಕಡಿಮೆ ಮಾಡಬೇಕಿದೆ. ಆದರೆ ಸದ್ಯಕ್ಕೆ ಬ್ರೆಜಿಲ್‌ನ ಹೆಮ್ಮೆಯ ಗೋಪಾಲಕರು ಮಾತ್ರ Vatina-19 ತಳಿಗೆ ಜಾಗತಿಕ ಮನ್ನಣೆ ದೊರೆತಿರುವುದು ಬ್ರೆಜಿಲ್​ನ ಜಾನುವಾರು ಸಾಕಣೆಯ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆ ಎಂದು ಬೀಗುತ್ತಿದ್ದಾರೆಯೇ ಹೊರತು ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಮನಗಾಣುತ್ತಿಲ್ಲ ಎಂಬುದು ಖೇದಕರ ಸಂಗತಿಯಾಗಿದೆ.

Published On - 5:13 pm, Fri, 10 May 24