ಪಾಕ್ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತದ ಕೈವಾಡ ಆರೋಪ ತಿರಸ್ಕರಿಸಿದ ಸರ್ಕಾರ
13 ಸೈನಿಕರನ್ನು ಬಲಿತೆಗೆದುಕೊಂಡ ವಜೀರಿಸ್ತಾನ ಆತ್ಮಾಹುತಿ ಬಾಂಬ್ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನ ಸೇನೆಯ ಹೇಳಿಕೆಯನ್ನು ವಿದೇಶಾಂಗ ಸಚಿವಾಲಯ ಭಾನುವಾರ ಬಲವಾಗಿ ತಿರಸ್ಕರಿಸಿದೆ.ಖೈಬರ್ ಪಖ್ತುನ್ಖ್ವಾದ ಉತ್ತರ ವಜೀರಿಸ್ತಾನ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿದ್ದ. 2021 ರಲ್ಲಿ ಕಾಬೂಲ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಪಾಕಿಸ್ತಾನ- ಅಫ್ಘಾನಿಸ್ತಾನ ಗಡಿ ಪ್ರದೇಶಗಳಲ್ಲಿ ಹಿಂಸಾಚಾರದಲ್ಲಿ ತೀವ್ರ ಏರಿಕೆ ಕಂಡಿದೆ.

ನವದೆಹಲಿ, ಜೂನ್ 29: ಪಾಕಿಸ್ತಾನ(Pakistan) ದ ವರಿಜಿಸ್ತಾನದಲ್ಲಿ ಜೂನ್ 28ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಹೊತ್ತುಕೊಂಡಿದ್ದರೂ ಕೂಡ, ಪಾಕ್ ಭಾರತದತ್ತ ಬೆರಳು ಮಾಡುತ್ತಿದೆ. ಪಾಕಿಸ್ತಾನದ ವರಿಜಿಸ್ತಾನದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 13 ಮಂದಿ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನೆಯು ಈ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದೆ. ಇದಕ್ಕೆ ವಿದೇಶಾಂಗ ಸಚಿವಾಲಯ ಉತ್ತರ ನೀಡಿದ್ದು, ಈ ದಾಳಿಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಘಟನೆಯಲ್ಲಿ 13 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರೆ, 24 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೂನ್ 28 ರಂದು ವಜಿರಿಸ್ತಾನದಲ್ಲಿ ನಡೆದ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನ ಸೇನೆಯ ಅಧಿಕೃತ ಹೇಳಿಕೆಯನ್ನು ನಾವು ನೋಡಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಪಾಕಿಸ್ತಾನ ಸೇನೆಯ ಈ ಹೇಳಿಕೆ ಖಂಡನೀಯ. ನಾವು ಈ ಹೇಳಿಕೆಯನ್ನು ಸಂಪೂರ್ಣ ತಿರಸ್ಕಾರದಿಂದ ತಿರಸ್ಕರಿಸುತ್ತೇವೆ ಎಂದು ಹೇಳಿದೆ.
ಶನಿವಾರ, ವಾಯುವ್ಯ ಪಾಕಿಸ್ತಾನದಲ್ಲಿ ಮಿಲಿಟರಿ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 13 ಸೈನಿಕರು ಸಾವನ್ನಪ್ಪಿದ್ದಾರೆ. ಮೂಲಗಳ ಪ್ರಕಾರ, ಉತ್ತರ ವಜೀರಿಸ್ತಾನ್ ಜಿಲ್ಲೆಯ ಖಡ್ಡಿ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ಘಟಕದ ಮೈನ್-ರೆಸಿಸ್ಟೆಂಟ್ ಆಂಬುಶ್ ಪ್ರೊಟೆಕ್ಟೆಡ್ (ಎಂಆರ್‌ಎಪಿ) ವಾಹನಕ್ಕೆ ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ್ದಾನೆ.
ಮತ್ತಷ್ಟು ಓದಿ: ಬಲೂಚಿಸ್ತಾನ: ಶಾಲಾ ಬಸ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ, ನಾಲ್ವರು ಮಕ್ಕಳು ಸಾವು, 38 ಮಂದಿಗೆ ಗಾಯ
ಈ ಪ್ರದೇಶದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಇದೆ. ಹಫೀಜ್ ಗುಲ್ ಬಹದ್ದೂರ್ ಸಂಘಟನೆಯ ಉಪ-ಬಣವಾದ ಉಸುದ್ ಅಲ್-ಹರ್ಬ್ ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿದೆ. ಇದರ ಹೊರತಾಗಿಯೂ, ಪಾಕಿಸ್ತಾನವು ಈ ದಾಳಿಗೆ ಭಾರತವನ್ನು ದೂಷಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ವಜಿರಿಸ್ತಾನ್‌ನಲ್ಲಿ ನಡೆದ ಅತ್ಯಂತ ಭೀಕರ ಘಟನೆಗಳಲ್ಲಿ ಇದು ಒಂದು, ಇದು ಗಂಭೀರ ಭದ್ರತಾ ಕಳವಳಗಳನ್ನು ಹುಟ್ಟುಹಾಕಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




