‘ಪಾಕಿಸ್ತಾನ ಶಾಂತಿಯುತ ಬಾಂಧವ್ಯವನ್ನು ಬಯಸುತ್ತದೆ’: ಪ್ರಧಾನಿ ಮೋದಿಗೆ ಪ್ರತಿಕ್ರಿಯಿಸಿದ ಪಾಕ್ ಪಿಎಂ ಶಹಬಾಜ್ ಷರೀಫ್

| Updated By: ರಶ್ಮಿ ಕಲ್ಲಕಟ್ಟ

Updated on: Apr 12, 2022 | 6:19 PM

ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಾಕಿ ಉಳಿದಿರುವ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವುದು ಅನಿವಾರ್ಯವಾಗಿದೆ ಎಂದು ಷರೀಫ್ ಮಂಗಳವಾರ ಟ್ವೀಟ್ ಮಾಡಿದ್ದಾರೆ.

‘ಪಾಕಿಸ್ತಾನ ಶಾಂತಿಯುತ ಬಾಂಧವ್ಯವನ್ನು ಬಯಸುತ್ತದೆ’: ಪ್ರಧಾನಿ ಮೋದಿಗೆ ಪ್ರತಿಕ್ರಿಯಿಸಿದ ಪಾಕ್ ಪಿಎಂ ಶಹಬಾಜ್ ಷರೀಫ್
ಶಹಬಾಜ್ ಷರೀಫ್
Follow us on

ದೆಹಲಿ: ಭಾರತ ಮತ್ತು ಪಾಕಿಸ್ತಾನ (Pakistan) ಶಾಂತಿಯನ್ನು ಭದ್ರಪಡಿಸಬೇಕು ಮತ್ತು ತಮ್ಮ ಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶಹಬಾಜ್ ಷರೀಫ್ (Shehbaz Sharif) ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಭಿನಂದನಾ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ. ಶಹಬಾಜ್  ಷರೀಫ್ ಅವರು ಸೋಮವಾರ ಪ್ರಧಾನಿಯಾಗಿ ಆಯ್ಕೆಯಾದ ಸ್ವಲ್ಪ ಸಮಯದ ನಂತರ ತಮ್ಮ ಚೊಚ್ಚಲ ಭಾಷಣದಲ್ಲಿ ಕಾಶ್ಮೀರ ಸಮಸ್ಯೆಯ ಪರಿಹಾರವು ಬಡತನ ಮತ್ತು ಉದ್ಯೋಗದಂತಹ ಹಂಚಿಕೆಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಲು ಉಭಯ ದೇಶಗಳಿಗೆ ಅವಕಾಶ ನೀಡುತ್ತದೆ ಎಂದು ಹೇಳಿದರು. ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಮೋದಿ, ಷರೀಫ್ ಅವರ ಆಯ್ಕೆಗೆ ಅಭಿನಂದನೆಗಳು. ಭಾರತವು ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ, ಇದರಿಂದ ನಾವು ನಮ್ಮ ಅಭಿವೃದ್ಧಿ ಸವಾಲುಗಳ ಮೇಲೆ ಕೇಂದ್ರೀಕರಿಸಬಹುದು ಮತ್ತು ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಬಹುದು ಎಂದಿದ್ದಾರೆ.  “ಪ್ರಧಾನಿ ನರೇಂದ್ರ ಮೋದಿಯವರ ಅಭಿನಂದನೆಗಳಿಗಾಗಿ ಧನ್ಯವಾದಗಳು. ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯುತ ಮತ್ತು ಸಹಕಾರ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಾಕಿ ಉಳಿದಿರುವ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸುವುದು ಅನಿವಾರ್ಯವಾಗಿದೆ ಎಂದು ಷರೀಫ್ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ತ್ಯಾಗಗಳು ಎಲ್ಲರಿಗೂ ತಿಳಿದಿವೆ. ನಾವು ಶಾಂತಿಯನ್ನು ಭದ್ರಪಡಿಸೋಣ ಮತ್ತು ನಮ್ಮ ಜನರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸೋಣ ಎಂದು ಅವರು ಹೇಳಿದರು.


ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ 100 ಕ್ಕೂ ಹೆಚ್ಚು ಸಂಸದರು ಬಹಿಷ್ಕರಿಸಿದ ಸಂಸತ್ತಿನ ಮತದಾನದ ಸಂದರ್ಭದಲ್ಲಿ ಶಹಬಾಜ್ ಷರೀಫ್ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ಬಳಿಕ ಸೋಮವಾರ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು.

ತನ್ನ ಚುನಾವಣೆಯ ನಂತರ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಶಹಬಾಜ್ ಷರೀಫ್, ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವ ಮತ್ತು ಕಾಶ್ಮೀರಿ ಜನರಿಗೆ ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ನೀಡುವ ತನ್ನ ದೇಶದ ಮಾನದಂಡದ ನಿಲುವನ್ನು ಮಂಡಿಸಿದರು. ಆದಾಗ್ಯೂ, ಅವರು ತಮ್ಮ ಭಾಷಣದ ವಿದೇಶಾಂಗ ನೀತಿ ವಿಷಯದ ಬಗ್ಗೆ ಮಾತನಾಡುವಾಗ ಚೀನಾ ಮತ್ತು ಯುಎಸ್ ಸೇರಿದಂತೆ ಇತರ ಯಾವುದೇ ದೇಶಗಳಿಗಿಂತ ಹೆಚ್ಚು ಸಮಯವನ್ನು ಭಾರತಕ್ಕೆ ಮೀಸಲಿಟ್ಟರು.

ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ಆದರೆ ಕಾಶ್ಮೀರ ಸಮಸ್ಯೆಯ ನ್ಯಾಯಯುತ ಪರಿಹಾರದವರೆಗೆ ಶಾಶ್ವತ ಶಾಂತಿ ಇರಲು ಸಾಧ್ಯವಿಲ್ಲ ಎಂದು ಅವರು ಉರ್ದುವಿನಲ್ಲಿ ಹೇಳಿದರು. “ಎರಡೂ ಕಡೆಯ ಬಡತನ, ನಿರುದ್ಯೋಗ, ಅನಾರೋಗ್ಯದ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕು ಎಂದು ನಾನು ಪ್ರಧಾನಿ ಮೋದಿಯವರಿಗೆ ಈ ಸಲಹೆಯನ್ನು ನೀಡುತ್ತೇನೆ. ಜನರಿಗೆ ಔಷಧಿ, ಶಿಕ್ಷಣ, ವ್ಯಾಪಾರ ಅಥವಾ ಉದ್ಯೋಗವಿಲ್ಲ. ನಮಗೇಕೆ ಮತ್ತು ಮುಂಬರುವ ಪೀಳಿಗೆಗೆ ಹಾನಿಯನ್ನುಂಟುಮಾಡಲು ನಾವು ಬಯಸುತ್ತೇವೆ? ಅವರು ಹೇಳಿದರು.

“ಬನ್ನಿ, ನಾವು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ಕಾಶ್ಮೀರಿ ಜನರ ಆಶಯಗಳ ಪ್ರಕಾರ ನಿರ್ಧರಿಸೋಣ. ಎರಡೂ ಕಡೆಯ ಬಡತನವನ್ನು ಕೊನೆಗೊಳಿಸೋಣ ಮತ್ತು ಉದ್ಯೋಗಗಳನ್ನು ಸೃಷ್ಟಿಸೋಣ ಮತ್ತು ಪ್ರಗತಿ ಮತ್ತು ಸಮೃದ್ಧಿಯನ್ನು ತರೋಣ.” ನೆರೆಹೊರೆ “ಆಯ್ಕೆಯ ವಿಷಯವಲ್ಲ” ಮತ್ತು “ನೀವು ಅದರೊಂದಿಗೆ ಬದುಕಬೇಕಿದೆ ” ಎಂದು ಶಹಬಾಜ್ ಷರೀಫ್ ಒತ್ತಿ ಹೇಳಿದರು.  ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ನಡೆಸಿದ 2008 ರ ಮುಂಬೈ ದಾಳಿಯ ನಂತರ ಉಭಯ ದೇಶಗಳು ಯಾವುದೇ ರಚನಾತ್ಮಕ ಮಾತುಕತೆಯನ್ನು ಹೊಂದಿಲ್ಲ. ಆಗಸ್ಟ್ 2019ರಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನವು ವಾಸ್ತವಿಕವಾಗಿ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿತು.

ಇದನ್ನೂ ಓದಿ: ಭಾರತ ಶಾಂತಿ, ಸ್ಥಿರತೆ, ಭಯೋತ್ಪಾದನೆ ಮುಕ್ತ ವಲಯ ಬಯಸುತ್ತದೆ; ಪಾಕ್ ಪ್ರಧಾನಿಗೆ ಅಭಿನಂದನೆ ಸಲ್ಲಿಸಿದ ಮೋದಿ