ಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 12, 2022 | 10:21 AM

ರಷ್ಯಾದ ಸೈನಿಕರು ಉಕ್ರೇನ್​ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ 9 ಘಟನೆಗಳು ಅಧಿಕೃತವಾಗಿ ವರದಿಯಾಗಿವೆ. 12 ಮಹಿಳೆಯರು ಮತ್ತು ಹಲವು ಬಾಲಕಿಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರಲಾಗಿದೆ.

ಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ
ಉಕ್ರೇನ್​ನ ಮಹಿಳೆಯರು ಮತ್ತು ಮಕ್ಕಳ ಮೇಲೆ ರಷ್ಯಾ ಸೇನೆ ದೌರ್ಜನ್ಯ ಎಸಗಿದೆ
Follow us on

ವಿಶ್ವಸಂಸ್ಥೆ: ಉಕ್ರೇನ್ ಮೇಲೆ ದಾಳಿ ನಡೆಸಿರುವ ರಷ್ಯಾ ಸೇನೆಯು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯವನ್ನೂ ಆಯುಧವಾಗಿಸಿಕೊಂಡಿದೆ. ದಿನದಿಂದ ದಿನಕ್ಕೆ ರಷ್ಯಾ ಸೇನೆ ನಡೆಸಿರುವ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ. ಉಕ್ರೇನ್​ನ ಮಾನವಹಕ್ಕುಗಳ ಹೋರಾಟಗಾರರು ಮಾಡಿರುವ ಆರೋಪಗಳು ಇದೀಗ ವಿಶ್ವಸಂಸ್ಥೆಯಲ್ಲಿಯೂ ಪ್ರತಿಧ್ವನಿಸಿವೆ. ರಷ್ಯಾದ ಸೈನಿಕರು ಉಕ್ರೇನ್​ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ 9 ಘಟನೆಗಳು ವರದಿಯಾಗಿವೆ. 12 ಮಹಿಳೆಯರು ಮತ್ತು ಹಲವು ಬಾಲಕಿಯರ ಮೇಲೆ ದೌರ್ಜನ್ಯ ನಡೆದಿದೆ ಎಂದು ದೂರಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಉಕ್ರೇನ್​ನ ಮಾನವ ಹಕ್ಕುಗಳ ಹೋರಾಟಗಾರ್ತಿ, ‘ರಷ್ಯಾದ ಸೈನಿಕರು ಅತ್ಯಾಚಾರವನ್ನು ಆಕ್ರಮಣದ ಆಯುಧವನ್ನಾಗಿಸಿಕೊಂಡಿರುವ ಬಗ್ಗೆ ನಮಗೆ ಗೊತ್ತಾಗಿದೆ. ನಮಗೆ ತಿಳಿದಿರುವ ವಿಷಯ ನಿಮಗೂ ಅರ್ಥವಾಗಬೇಕು ಎಂದು ಬಯಸುತ್ತೇವೆ’ ಎಂದು ಅವರು ವಿಡಿಯೊ ಕಾನ್​ಫರೆನ್ಸ್ ಮೂಲಕ ಭದ್ರತಾ ಮಂಡಳಿಗೆ ಹೇಳಿಕೆ ನೀಡಿದರು.

ಉಕ್ರೇನ್ ವಿರುದ್ಧ ಫೆಬ್ರುವರಿ 24ರಂದು ದಾಳಿ ಆರಂಭಿಸಿದ ರಷ್ಯಾ, ತಾನು ನಾಗರಿಕರ ಮೇಲೆ ದಾಳಿ ಮಾಡುತ್ತಿಲ್ಲ ಎಂದು ಹಲವು ಬಾರಿ ಹೇಳಿದೆ. ಆದರೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಮಕ್ಕಳ ಎದುರು ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಹೀನ ಕೃತ್ಯಗಳನ್ನು ರಷ್ಯಾ ಸೇನೆ ಎಸಗಿದೆ ಎಂದು ಉಕ್ರೇನ್ ದೂರಿದೆ. ಉಕ್ರೇನ್​ನ ಸೇನೆ ಮತ್ತು ನಾಗರಿಕ ರಕ್ಷಣಾ ಪಡೆಗಳು ಸಹ ಲೈಂಗಿಕ ದೌರ್ಜನ್ಯ ಎಸಗಿವೆ ಎಂಬ ಆರೋಪಗಳೂ ಕೇಳಿಬಂದಿವೆ.

ಉಕ್ರೇನ್ ಸೇನಾಪಡೆಗಳ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆಯಲ್ಲಿರುವ ಉಕ್ರೇನ್ ಪ್ರತಿನಿಧಿಗಳು ನಿರಾಕರಿಸಿದರು. ಆದರೆ ರಷ್ಯಾ ಪ್ರತಿನಿಧಿಗಳು ಮಾತ್ರ ತಮ್ಮ ಸೇನಾಪಡೆಗಳು ಎಂದಿಗೂ ನಾಗರಿಕರ ಮೇಲೆ ದಾಳಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ರಷ್ಯಾದ ಸೈನಿಕರನ್ನು ಹಿಂಸಾವಾದಿಗಳು ಮತ್ತು ಅತ್ಯಾಚಾರಿಗಳು ಎಂದು ಬಿಂಬಿಸಲು ಉಕ್ರೇನ್ ಯತ್ನಿಸುತ್ತಿದೆ ಎಂದು ದೂರಿದರು. ವಿಶ್ವ ಸಂಸ್ಥೆಯಲ್ಲಿ ಮಹಿಳಾ ವಿದ್ಯಮಾನಗಳ ವಿಭಾಗದ ನಿರ್ದೇಶಕಿ ಸಿಮಾ ಬಹೌಸ್, ‘ಈ ದೂರುಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು. ಹೊಣೆಗಾರಿಕೆ ನಿಗದಿಪಡಿಸಿ ನ್ಯಾಯ ಸಿಗುವಂತೆ ಗಮನಕೊಡಬೇಕು. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸಾಮೂಹಿಕ ಸ್ಥಳಾಂತರ, ಹತ್ಯೆ ಸೇರಿದಂತೆ ಉಕ್ರೇನ್ ನಿವಾಸಿಗಳ ವಿರುದ್ಧ ದೌರ್ಜನ್ಯ ವ್ಯಾಪಕವಾಗಿ ನಡೆದಿದೆ’ ಎಂದು ಹೇಳಿದರು.

ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಎರಡೂ ಪಾಳಯಗಳಲ್ಲಿ ಬಲವಂತದ ದುಡಿಮೆ ಕಂಡುಬಂದಿದೆ. ಯುವಜನರನ್ನು ಬಲವಂತವಾಗಿ ಹೋರಾಟಕ್ಕೆ ಕಳುಹಿಸಲಾಗುತ್ತಿದೆ. ಬಾಡಿಗೆ ಬಂಟರನ್ನು ನೇಮಿಸಿಕೊಂಡು ಸೈನಿಕರ ವೇಷದಲ್ಲಿ ಯುದ್ಧಕ್ಕೆ ಕಳಿಸುವುದು ಸಾಮಾನ್ಯ ಸಂಗತಿ ಎನಿಸಿದೆ. ಪೂರ್ವ ಉಕ್ರೇನ್​ನ ಎರಡು ಪ್ರಾಂತ್ಯಗಳಲ್ಲಿ ಬಂಡುಕೋರರು ಈಗಾಗಲೇ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದಾರೆ. ಪ್ರತ್ಯೇಕತಾವಾದಿಗಳಿಗೆ ಬೆಂಬಲ ಸೂಚಿಸಲೆಂದು ರಷ್ಯಾ ‘ವಿಶೇಷ ಮಿಲಿಟರಿ ಕಾರ್ಯಾಚರಣೆ’ ನಡೆಸುತ್ತಿದೆ. ‘ಉಕ್ರೇನ್ ಮಹಿಳೆಯರ ಮೇಲೆ ರಷ್ಯಾ ಸೈನಿಕರು ನಡೆಸಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ಸಂಗ್ರಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ವಿಶ್ವಸಂಸ್ಥೆಯ ಉಕ್ರೇನ್ ರಾಯಭಾರಿ ಸೆರ್​ಗಿ ಕ್ಯಸ್ಲಿಸ್ಟಯ ಹೇಳಿದ್ದಾರೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮಗಳ ಚರ್ಚೆ ಮುಂದುವರಿಕೆ: ಮೋದಿ ಜೊತೆಗಿನ ಮಾತುಕತೆಯಲ್ಲಿ ಬೈಡೆನ್ ಪುನರುಚ್ಚಾರ

ಇದನ್ನೂ ಓದಿ: Russia-Ukraine War: ಕೀವ್​​ ವಶಪಡಿಸಿಕೊಳ್ಳಲು ವಿಫಲವಾದ ಹಿನ್ನೆಲೆ; ರಷ್ಯಾದಿಂದ ಉಕ್ರೇನ್​ಗೆ ಹೊಸ ಸೇನಾ ಕಮಾಂಡರ್​ ನೇಮಕ