ಕೂಡಲೇ ದೇಶದಲ್ಲಿ ಚುನಾವಣೆ ನಡೆಸಬೇಕು, ಜನರೇ ಪ್ರಧಾನಿಯನ್ನು ನಿರ್ಧರಿಸಬೇಕು: ಇಮ್ರಾನ್ ಖಾನ್ ಟ್ವೀಟ್
ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ದೇಶದಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಸಬೇಕು. ಆಗಷ್ಟೇ ಪ್ರಧಾನಿ ಆಯ್ಕೆ ಪಾರದರ್ಶಕವಾಗಿ ನಡೆಯುತ್ತದೆ. ಬುಧವಾರ ನಾನು ಪೇಶಾವರದಲ್ಲಿ ರ್ಯಾಲಿ ನಡೆಸುತ್ತೇನೆ ಎಲ್ಲರೂ ಬನ್ನಿ ಎಂದೂ ಹೇಳಿದ್ದಾರೆ.
ಅವಿಶ್ವಾಸ ನಿರ್ಣಯ ಮಂಡನೆಯಾಗಿ, ಬಹುಮತ ಸಾಬೀತು ಸಾಧ್ಯವಾಗದೆ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದ ಇಮ್ರಾನ್ ಖಾನ್, ದೇಶದಲ್ಲಿ ಕೂಡಲೇ ಚುನಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಶೆಹಬಾಜ್ ಶರೀಫ್ ಪಾಕಿಸ್ತಾನದ 23ನೇ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಹೊತ್ತಲ್ಲಿ ಇಮ್ರಾನ್ ಖಾನ್ ಈ ಬೇಡಿಕೆ ಮುಂದಿಟ್ಟಿದ್ದಾರೆ. ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್, ಈ ದೇಶದ ಪ್ರಧಾನಮಂತ್ರಿ ಯಾರಾಗಬೇಕು ಎಂಬುದನ್ನು ಜನರ ನಿರ್ಧಾರಕ್ಕೆ ಬಿಡಬೇಕು. ಹೀಗಾಗಿ ಚುಣಾವಣೆ ನಡೆಯಬೇಕು ಎಂದಿದ್ದಾರೆ. ಏಪ್ರಿಲ್ 13ರಂದು ಪೇಶಾವರದಲ್ಲಿ ರ್ಯಾಲಿ ನಡೆಸುವುದಾಗಿಯೂ ಹೇಳಿದ್ದಾರೆ.
ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ದೇಶದಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಸಬೇಕು. ಆಗಷ್ಟೇ ಪ್ರಧಾನಿ ಆಯ್ಕೆ ಪಾರದರ್ಶಕವಾಗಿ ನಡೆಯುತ್ತದೆ. ಬುಧವಾರ ನಾನು ಪೇಶಾವರದಲ್ಲಿ ರ್ಯಾಲಿ ನಡೆಸುತ್ತೇನೆ. ವಿದೇಶಿ ಕುತಂತ್ರದ ಮೂಲಕ ನನ್ನನ್ನು ಹುದ್ದೆಯಿಂದ ಕೆಳಗೆ ಇಳಿಸಲಾದ ಬಳಿಕ ಇದು ನನ್ನ ಮೊದಲ ರ್ಯಾಲಿ. ನನ್ನ ರ್ಯಾಲಿಗೆ ನೀವೆಲ್ಲರೂ ಬನ್ನಿ. ಪಾಕಿಸ್ತಾನವನ್ನು ಸ್ವತಂತ್ರ, ಸಾರ್ವಭೌಮ ರಾಷ್ಟ್ರವಾಗಿ ನಿರ್ಮಾಣ ಮಾಡಲಾಗಿದೆ. ಅದು ವಿದೇಶಿ ಶಕ್ತಿಯ ಕೈಗೊಂಬೆಯಲ್ಲ ಎಂಬುದನ್ನು ತೋರಿಸಬೇಕು ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.
We are demanding immediate elections as that is the only way forward — to let the people decide, through fair & free elections, whom they want as their prime minister.
— Imran Khan (@ImranKhanPTI) April 11, 2022
ಇನ್ನು ಅಧಿಕಾರ ಕಳೆದುಕೊಂಡ ಬಳಿಕ ಪ್ರತಿಕ್ರಿಯೆ ನೀಡಿದ್ದ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟ ಮತ್ತೆ ಪ್ರಾರಂಭವಾಗಿದೆ ಎಂದು ಹೇಳಿದ್ದರು. ಅದಕ್ಕೂ ಮೊದಲು ಹುದ್ದೆಯಲ್ಲಿ ಮುಂದುವರಿಯಲು ಇಮ್ರಾನ್ ಖಾನ್ ಇನ್ನಿಲ್ಲದ ಕಸರತ್ತು ಮಾಡಿದ್ದರು. ಆದರೆ ಸುಪ್ರೀಂಕೋರ್ಟ್ ಆದೇಶದ ಅನ್ವಯ ಏಪ್ರಿಲ್ 9ರ ಮಧ್ಯರಾತ್ರಿ ಇಮ್ರಾನ್ ಖಾನ್ ಬಹುಮತ ಸಾಬೀತು ಮಾಡಲು ಮುಂದಾದರು. ಆದರೆ ಅದು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: ರೈಲಿನಲ್ಲಿ ಹೊಗೆಯೇಳುತ್ತಿದೆ ಎಂದು ಭಯಗೊಂಡು ಇಳಿದ ಪ್ರಯಾಣಿಕರಿಗೆ ಮತ್ತೊಂದು ಟ್ರೇನ್ ಡಿಕ್ಕಿ; ಐವರ ದುರ್ಮರಣ