ರೈಲಿನಲ್ಲಿ ಹೊಗೆಯೇಳುತ್ತಿದೆ ಎಂದು ಭಯಗೊಂಡು ಇಳಿದ ಪ್ರಯಾಣಿಕರಿಗೆ ಮತ್ತೊಂದು ಟ್ರೇನ್ ಡಿಕ್ಕಿ; ಐವರ ದುರ್ಮರಣ
ಮೃತಪಟ್ಟ ಎಲ್ಲರ ಗುರುತೂ ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಅಸ್ಸಾಂನವರು ಎಂದು ಹೇಳಲಾಗಿದೆ. ಉಳಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ಐವರು ಮೃತಪಟ್ಟು, ಹಲವರು ಗಾಯಗೊಂಡ ದುರ್ಘಟನೆ ಆಂಧ್ರಪ್ರದೇಶದ ಶ್ರಿಕಾಕುಲಂ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ನಡೆದದ್ದು ಶ್ರೀಕಾಕುಲಂ ಜಿಲ್ಲೆಯ ಬಟುವಾ ಎಂಬ ಹಳ್ಳಿಯಲ್ಲಿ. ಸಿಕಂದರಾಬಾದ್ ಮತ್ತು ಗುವಾಹಟಿ ಎಕ್ಸ್ಪ್ರೆಸ್ ರೈಲು ಈ ಪ್ರದೇಶಕ್ಕೆ ಬರುತ್ತಿದ್ದಂತೆ ಅದರಲ್ಲಿ ಹೊಗೆಯೇಳುತ್ತಿರುವುದನ್ನು ಒಂದಷ್ಟು ಪ್ರಯಾಣಿಕರು ಗಮನಿಸಿ, ಎಮರ್ಜನ್ಸಿ ಚೈನ್ ಎಳೆದರು. ಆಗ ಈ ರೈಲು ನಿಂತಿತು. ಪ್ರಯಾಣಿಕರು ಅದರಿಂದ ಕೆಳಗೆ ಇಳಿದು ಅಲ್ಲೇ ಪಕ್ಕದ ಹಳಿ ಮೇಲೆ ನಿಂತಿದ್ದರು. ಅದೇ ವೇಳೆ ಮತ್ತೊಂದು ದಿಕ್ಕಿನಿಂದ ವೇಗವಾಗಿ ಬಂದ ಭುವನೇಶ್ವರ್-ಮುಂಬೈ ರೈಲು (ಕೊನಾರ್ಕ್ ಟ್ರೇನ್) ಇವರಿಗೆ ಡಿಕ್ಕಿ ಹೊಡೆದಿದೆ. ಈ ರೈಲು ವಿಶಾಖಪಟ್ಟಣಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.
ಮೃತಪಟ್ಟ ಎಲ್ಲರ ಗುರುತೂ ಇನ್ನೂ ಪತ್ತೆಯಾಗಿಲ್ಲ. ಇಬ್ಬರು ಅಸ್ಸಾಂನವರು ಎಂದು ಹೇಳಲಾಗಿದೆ. ಉಳಿದವರು ಯಾರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಗಾಯಗೊಂಡವರನ್ನು ಶ್ರೀಕಾಕುಲಂ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೇ ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ಗೆ ಕಳಿಸಲಾಗಿದೆ.
ಘಟನೆಯ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ ವಿವರಣೆ ನೀಡಲಾಗಿದೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 2013ರಲ್ಲಿ ಒಂದು ಹೀಗಿದ್ದೇ ಘಟನೆ ನಡೆದಿತ್ತು. ಆಲಪ್ಪುಳ-ಧನಬಾದ್ ರೈಲಿನ ಎಸ್-1 ಕಂಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಸುಳ್ಳು ಸುದ್ದಿ ಹಬ್ಬಿತ್ತು. ಹೀಗಾಗಿ ಹೆದರಿದ ಪ್ರಯಾಣಿಕರು ಚೈನ್ ಎಳೆದು ರೈಲಿನಿಂದ ಇಳಿದು ಪಕ್ಕದ ಹಳಿಯಲ್ಲಿ ನಿಂತಿದ್ದಾಗ ಬೊಕಾರೊ ಎಕ್ಸ್ಪ್ರೆಸ್ ಪ್ಯಾಸೆಂಜರ್ ರೈಲು ಅವರಿಗೆ ಡಿಕ್ಕಿ ಹೊಡೆದಿತ್ತು. 9 ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ನೀಳ ತಲೆಗೂದಲನ್ನು ಕತ್ತರಿಸಿ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡ ಅನುಪಮಾ ಗೌಡ; ಇದಕ್ಕಿದೆ ಮಹತ್ತರ ಕಾರಣ
Published On - 9:29 am, Tue, 12 April 22