ನಿವೃತ್ತಿ ಹೊಂದಲು 65 ವರ್ಷ ಬಹಳ ಸಣ್ಣ ವಯಸ್ಸು; ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ
ಎನ್.ವಿ ರಮಣ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಇನ್ನು 5 ತಿಂಗಳಷ್ಟೇ ಅಧಿಕಾರದಲ್ಲಿ ಇರಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಮಣ ಅವರು ಈ ವರ್ಷದ ಆಗಸ್ಟ್ 27ರಂದು 65ನೇ ವರ್ಷಕ್ಕೆ ಕಾಲಿಡುತ್ತಾರೆ.
ನವದೆಹಲಿ: ಒಂದು ವರ್ಷ 4 ತಿಂಗಳ ಅಧಿಕಾರಾವಧಿಯ ನಂತರ ಆಗಸ್ಟ್ 26ರಂದು ನಿವೃತ್ತರಾಗಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ (NV Ramana) ಪ್ರತಿಕ್ರಿಯೆ ನೀಡಿದ್ದು, “65 ವರ್ಷಗಳು ಯಾರಾದರೂ ನಿವೃತ್ತಿ ಹೊಂದಲು ತುಂಬಾ ಚಿಕ್ಕ ವಯಸ್ಸು” ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮಣ “ವಿಶ್ವದ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವಗಳ ಸರ್ವೋಚ್ಚ ನ್ಯಾಯಾಲಯಗಳ ತುಲನಾತ್ಮಕ ವಿಧಾನಗಳು” ಎಂಬ ವರ್ಚುವಲ್ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ನ್ಯಾಯಾಧೀಶರ ನಿವೃತ್ತಿ ವಯಸ್ಸಿನ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ, ನ್ಯಾಯಮೂರ್ತಿ ಎನ್.ವಿ. ರಮಣ, ‘ಹೌದು, ಯಾರಾದರೂ ನಿವೃತ್ತರಾಗಲು 65 ವರ್ಷಗಳು ತುಂಬಾ ಸಣ್ಣ ವಯಸ್ಸು ಎಂಬುದನ್ನು ನಾನು ಕೂಡ ಒಪ್ಪುತ್ತೇನೆ. ನಾನು ಹೈಕೋರ್ಟ್ ನ್ಯಾಯಮೂರ್ತಿಯಾಗಿ 22 ವರ್ಷ ಸೇವೆ ಸಲ್ಲಿಸಿದ್ದೇನೆ. ಭಾರತೀಯ ನ್ಯಾಯಾಂಗಕ್ಕೆ ಸೇರುವ ಸಮಯದಲ್ಲಿ ನಮ್ಮ ನಿವೃತ್ತಿಯ ದಿನಾಂಕದ ಬಗ್ಗೆ ನಮಗೆ ಗೊತ್ತಿರುತ್ತದೆ. ಬೇರೆ ಸರ್ಕಾರಿ ವಲಯಕ್ಕೆ ನ್ಯಾಯಾಂಗವೂ ಹೊರತಾಗಿಲ್ಲ” ಎಂದಿದ್ದಾರೆ.
“ನನಗೆ ಇನ್ನೂ ತಕ್ಕಮಟ್ಟಿಗೆ ಶಕ್ತಿ ಉಳಿದಿದೆ. ನಾನು ಕೃಷಿಕನ ಮಗ. ಇನ್ನೂ ಕೃಷಿ ಮಾಡಲು ಸ್ವಲ್ಪ ಜಮೀನು ಉಳಿದಿದೆ. ನಾನು ಮನುಷ್ಯರೊಂದಿಗೆ ಬೆರೆತು ಬದುಕಲು ಇಷ್ಟಪಡುತ್ತೇನೆ. ಇದು ನನ್ನ ವಿದ್ಯಾರ್ಥಿ ದಿನಗಳಿಂದಲೂ ನನ್ನ ಸ್ವಭಾವ. ನ್ಯಾಯಾಂಗದಿಂದ ನಿವೃತ್ತಿಯಾದರೂ ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುವುದಿಲ್ಲ. ನನ್ನ ನಿವೃತ್ತಿಯ ನಂತರ ಯಾವ ರೀತಿ ನನಗಿಷ್ಟವಾಗುವಂತೆ ಜೀವನ ನಡೆಸಬೇಕೆಂಬುದರ ಬಗ್ಗೆ ನಾನು ಈಗಿನಿಂದಲೂ ಪ್ಲಾನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಸ್ಥಾಪನೆಯಾಗಿ ಸುಮಾರು 40 ವರ್ಷಗಳ ನಂತರ ಮೊದಲ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ನಮ್ಮಲ್ಲಿ ಈಗ ನಾಲ್ಕು ಮಹಿಳಾ ನ್ಯಾಯಾಧೀಶರಿದ್ದಾರೆ. ಇದು ಇಲ್ಲಿಯವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ. ಆದರೆ, ಇಷ್ಟು ಪ್ರಮಾಣದ ಮಹಿಳಾ ನ್ಯಾಯಮೂರ್ತಿಗಳು ಸಾಕಾಗುವುದಿಲ್ಲ ಎಂಬುದು ನನಗೆ ತಿಳಿದಿದೆ. ಇನ್ನೂ ಹೆಚ್ಚಿನ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಕ ಮಾಡಬೇಕೆಂದು ನಾನು ನಿರೀಕ್ಷಿಸುತ್ತೇನೆ. ಇತ್ತೀಚಿನ ನೇಮಕಾತಿಗಳು ಮತ್ತು ಶಿಫಾರಸುಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ ಎಂಬುದನ್ನು ಕೇಳಿ ನನಗೆ ಸಂತೋಷವಾಗಿದೆ. ನಾನು ಹೆಚ್ಚಿನ ಮಹಿಳಾ ನ್ಯಾಯಾಧೀಶರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಖುಷಿ ಪಡುತ್ತೇನೆ. ನಮ್ಮ ಜನಸಂಖ್ಯೆಯು ಸುಮಾರು 140 ಕೋಟಿಯಷ್ಟಿದೆ. ಸಾಮಾಜಿಕ ಮತ್ತು ಭೌಗೋಳಿಕ ವೈವಿಧ್ಯತೆಯು ನ್ಯಾಯಾಂಗದ ಎಲ್ಲಾ ಹಂತಗಳಲ್ಲಿ ತನ್ನ ಪ್ರತಿಬಿಂಬವನ್ನು ಕಂಡುಕೊಳ್ಳಬೇಕು. ನ್ಯಾಯಪೀಠದಲ್ಲಿನ ವೈವಿಧ್ಯತೆಯು ಅಭಿಪ್ರಾಯಗಳ ವೈವಿಧ್ಯತೆಯನ್ನು ಉತ್ತೇಜಿಸುತ್ತದೆ. ವಿಭಿನ್ನ ಹಿನ್ನೆಲೆಯ ಜನರು ತಮ್ಮ ವೈವಿಧ್ಯಮಯ ಅನುಭವಗಳೊಂದಿಗೆ ನ್ಯಾಯಪೀಠವನ್ನು ಶ್ರೀಮಂತಗೊಳಿಸುತ್ತಾರೆ.” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
ಎನ್.ವಿ ರಮಣ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಇನ್ನು 5 ತಿಂಗಳಷ್ಟೇ ಅಧಿಕಾರದಲ್ಲಿ ಇರಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಮಣ ಅವರು ಈ ವರ್ಷದ ಆಗಸ್ಟ್ 27ರಂದು 65ನೇ ವರ್ಷಕ್ಕೆ ಕಾಲಿಡುತ್ತಾರೆ. ಆಗಸ್ಟ್ 26 ಅವರು ಸಿಜೆಐ ಆಗಿ ಅಧಿಕಾರದಲ್ಲಿ ಕೊನೆಯ ದಿನವಾಗಿದೆ. ನಾನು ನ್ಯಾಯಾಂಗದಿಂದ ನಿವೃತ್ತಿಯಾಗುತ್ತೇನೆಯೇ ಹೊರತು ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುವುದಿಲ್ಲ ಎಂದು ಸಿಜೆಐ ಹೇಳಿದ್ದಾರೆ.
ಇದನ್ನೂ ಓದಿ: ಒಮಿಕ್ರಾನ್ ಸೈಲೆಂಟ್ ಕಿಲ್ಲರ್, 25 ದಿನಗಳಾಯಿತು ಇನ್ನೂ ಬಳಲುತ್ತಿದ್ದೇನೆ: ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ
ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಕ ಮಾಡುತ್ತಾರೆ ಎಂಬುದು ಕಟ್ಟುಕತೆ: ಸಿಜೆಐ ಎನ್ ವಿ ರಮಣ