ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್ ಸಿ ಲಾಹೋಟಿ ನಿಧನ; ಪ್ರಧಾನಿ ಮೋದಿ, ಎನ್.ವಿ.ರಮಣರಿಂದ ಸಂತಾಪ
1978ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಚಂದ್ರ ಲಾಹೋತಿ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿದರು. 1988ರ ಮೇ 3ರಂದು ಮಧ್ಯಪ್ರದೇಶದ ಹೈಕೋರ್ಟ್ನಲ್ಲಿ ಹೆಚ್ಚುವರಿ ಜಡ್ಜ್ ಆದರು.
ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ (Supreme Court Former CJI) ರಮೇಶ್ ಚಂದ್ರ ಲಾಹೋಟಿ ಬುಧವಾರ ದೆಹಲಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು 2004ರ ಜೂನ್ 1ರಂದು ಸಿಜೆಐ (Chief Justice Of India) ಆಗಿ ನೇಮಕಗೊಂಡಿದ್ದರು. 2005ರ ನವೆಂಬರ್ 1ರಂದು ನಿವೃತ್ತಗೊಂಡಿದ್ದರು. 1940ರ ನವೆಂಬರ್ 1ರಂದು ಜನಿಸಿದ ಇವರಿಗೆ ಈಗ 82 ವರ್ಷ ವಯಸ್ಸಾಗಿತ್ತು. 1962ರಿಂದ ವಕೀಲಿ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. 1977ರಲ್ಲಿ ರಾಜ್ಯದ ಉನ್ನತ ನ್ಯಾಯಾಂಗ ಸೇವೆಗೆ ಆಯ್ಕೆಯಾಗಿ, ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಅವರ ನಿಧನಕ್ಕೆ ಪ್ರಧಾನಿ ಮೋದಿ, ಈಗಿನ ಸಿಜೆಐ ಎನ್.ವಿ.ರಮಣ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
1978ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಚಂದ್ರ ಲಾಹೋತಿ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡಲು ಪ್ರಾರಂಭಿಸಿದರು. 1988ರ ಮೇ 3ರಂದು ಮಧ್ಯಪ್ರದೇಶದ ಹೈಕೋರ್ಟ್ನಲ್ಲಿ ಹೆಚ್ಚುವರಿ ಜಡ್ಜ್ ಆದರು. 1989ರಲ್ಲಿ ಅವರ ಸ್ಥಾನ ಕಾಯಂ ಆಯಿತು. ಬಳಿಕ 1994ರ ಫೆಬ್ರವರಿ 7ರಂದು ದೆಹಲಿ ಹೈಕೋರ್ಟ್ಗೆ ಇವರನ್ನು ವರ್ಗಾವಣೆ ಮಾಡಲಾಯಿತು. 1998ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದರು.
ಪ್ರಧಾನಿ ಮೋದಿಯವರಿಂದ ಟ್ವೀಟ್
ಮಾಜಿ ಸಿಜೆಐ ಆರ್.ಸಿ.ಲಾಹೋಟಿ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಲಾಹೋಟಿಯವರ ನಿಧನದ ವಾರ್ತೆ ಕೇಳಿ ನೋವಾಯಿತು. ನ್ಯಾಯಾಂಗ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಹಿಂದುಳಿದವರಿಗೆ ಆಗುವ ಅನ್ಯಾಯಕ್ಕೆ ತ್ವರಿತವಾಗಿ ನ್ಯಾಯ ಸಿಗಬೇಕು ಎಂಬುದು ಅವರ ಆಶಯವಾಗಿತ್ತು ಮತ್ತು ಅದರಕ್ಕೆ ಆದ್ಯತೆ ಕೊಟ್ಟೇ ಕೆಲಸ ಮಾಡುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಹೇಳಿದ್ದಾರೆ. ಹಾಗೇ, ಈಗಿನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರೂ ಟ್ವೀಟ್ ಮಾಡಿದ್ದಾರೆ. ಆರ್.ಸಿ.ಲಾಹೋಟಿ ಅವರು ಕೊನೆ ಉಸಿರು ಇರುವವರೆಗೂ ಭಯವೆಂಬುದು ಬಾಧಿಸದಂತೆ ಸ್ವತಂತ್ರವಾಗಿ ಇದ್ದ ನ್ಯಾಯಾಧೀಶರು. ಅವರ ನಿಧನಕ್ಕೆ ಸಂತಾಪಗಳು ಎಂದಿದ್ದಾರೆ.
ಇದನ್ನೂ ಓದಿ: ಹೋಳಿ ಹಬ್ಬವೆಂದು ವಾಟರ್ ಬಲೂನ್ ಎಸೆದ ಯುವಕ; ಪಲ್ಟಿ ಹೊಡೆದ ಆಟೋ ರಿಕ್ಷಾ: ತಮಾಷೆ ಮಾಡಲು ಹೋಗಿ ಸೀರಿಯಸ್ಸಾದ ಘಟನೆ
Published On - 1:35 pm, Thu, 24 March 22