ಭಾರತೀಯ ಮೂಲದ ಹಿಂದು ಯೋಧನಿಗೆ ಕರ್ತವ್ಯದ ವೇಳೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್

ದರ್ಶನ್​ ಶಾ ಯುಎಸ್​ ಏರ್​ಫೋರ್ಸ್​ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್​ ಮೆರಿಕಲ್​ ರೆಡಿನೆಸ್​ ಸ್ಕ್ವಾಡ್ರನ್​​ನಲ್ಲಿ ಎರೋಸ್ಪೇಸ್​ ಮೆಡಿಕಲ್​ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು.

ಭಾರತೀಯ ಮೂಲದ ಹಿಂದು ಯೋಧನಿಗೆ ಕರ್ತವ್ಯದ ವೇಳೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್
ದರ್ಶನ್ ಶಾಗೆ ತಿಲಕವಿಡಲು ಅನುಮತಿ ಕೊಟ್ಟ ಯುಎಸ್ ಏರ್​ಫೋರ್ಸ್​
Follow us
TV9 Web
| Updated By: Lakshmi Hegde

Updated on:Mar 24, 2022 | 2:55 PM

ಯುಎಸ್ ವಾಯುಸೇನೆಯಲ್ಲಿ (US Airforce) ಇರುವ ಭಾರತೀಯ ಮೂಲದ ಯೋಧರು  ತಮ್ಮ ಸೇನಾ ಸಮವಸ್ತ್ರದೊಟ್ಟಿಗೆ ಹಣೆಗೆ ತಿಲಕ (Tilak)ವನ್ನೂ ಇಟ್ಟುಕೊಳ್ಳಬಹುದಾಗಿದೆ. ಕರ್ತವ್ಯದಲ್ಲಿದ್ದಾಗ ತಿಲಕ ಇಡಲು ಸಂಪೂರ್ಣ ಅನುಮತಿ ಇರುವುದಾಗಿ ಯುಎಸ್ ಏರ್​ಪೋರ್ಸ್  ಹೇಳಿದೆ. ಯುಎಸ್​​ನ ವ್ಯೋಮಿಂಗ್​ ಎಂಬಲ್ಲಿರುವ ಎಫ್​ಇ ವಾರೆನ್​ ಏರ್​ಫೋರ್ಸ್​ ನೆಲೆಯಲ್ಲಿ ಏರ್​ಮ್ಯಾನ್​ ಆಗಿರುವ ಭಾರತ ಮೂಲದ ದರ್ಶನ್​ ಶಾ, ತಾವು ಕರ್ತವ್ಯದಲ್ಲಿದ್ದಾಗಲೂ ಹಣೆಗೆ ಚಾಂಡ್ಲೋ ತಿಲಕ ಇಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದರು. ಈ ಚಾಂಡ್ಲೋ ತಿಲಕವೆಂದರೆ ಇಂಗ್ಲಿಷ್​ ಅಕ್ಷರ U ಆಕಾರದಲ್ಲಿ ಇದ್ದು, ಮಧ್ಯೆ ಬೊಟ್ಟು ಇರುತ್ತದೆ. ಇದು ವೈಷ್ಣವರು ಇಡುವ ಧಾರ್ಮಿಕ ಆಚರಣೆಯ ತಿಲಕ.

ದರ್ಶನ್​ ಶಾ ಯುಎಸ್​ ಏರ್​ಫೋರ್ಸ್​ಗೆ ಸೇರಿ 2 ವರ್ಷಗಳಾದವು. 90ನೇ ಆಪರೇಶನಲ್​ ಮೆರಿಕಲ್​ ರೆಡಿನೆಸ್​ ಸ್ಕ್ವಾಡ್ರನ್​​ನಲ್ಲಿ ಎರೋಸ್ಪೇಸ್​ ಮೆಡಿಕಲ್​ ಟೆಕ್ನೀಷಿಯನ್ ಆಗಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಿನಿಂದಲೂ ಈ ಬೇಡಿಕೆಯನ್ನು ಇಡುತ್ತಲೇ ಬಂದಿದ್ದರು. ಧಾರ್ಮಿಕ ಆಚರಣೆಗೆ ವಿನಾಯಿತಿ ಕೊಡಿ ಎಂದು ಇವರು ಇಟ್ಟ ಬೇಡಿಕೆ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಇದಕ್ಕೆ ವಿಶ್ವದ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು.  ಕೊನೆಗೂ 2022ರ ಫೆ.22ರಂದು ಅವರಿಗೆ ತಿಲಕ್ ಚಾಂಡ್ಲೋ ಧರಿಸಲು ಅನುಮತಿ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾ,  ಸೇನಾ ಕರ್ತವ್ಯದಲ್ಲಿ ಇರುವಾಗ ಸಮವಸ್ತ್ರದೊಂದಿಗೆ ತಿಲಕ ಧರಿಸಲೂ ಅನುಮತಿ ಸಿಕ್ಕಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಟೆಕ್ಸಾಸ್​, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್​​ಗಳಲ್ಲಿರುವ ನನ್ನ ಹಲವು ಸ್ನೇಹಿತರು ಸಂದೇಶಗಳನ್ನು ಕಳಿಸುತ್ತಿದ್ದಾರೆ. ನಮ್ಮ ಪಾಲಕರೂ ಸಿಕ್ಕಾಪಟೆ ಖುಷಿಪಟ್ಟಿದ್ದಾರೆ. ಏರ್​ಫೋರ್ಸ್​​ನಲ್ಲಿ ಇಂಥ ಅವಕಾಶ ಕೊಟ್ಟಿದ್ದು ಎಲ್ಲರಿಗೂ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ದರ್ಶನ್​ ಶಾ, ಯುಎಸ್​ನ ಮಿನ್ನೆಸೋಟಾದ ಈಡನ್​ ಪ್ರೈರೀ ಎಂಬಲ್ಲಿ ಬೆಳೆದಿದ್ದಾರೆ. ಇವರು ಮೂಲತಃ ಗುಜರಾತಿ ಕುಟುಂಬದವಾಗಿದ್ದು, ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತನ್ ಸ್ವಾಮಿನಾರಾಯಣ ಅವರ ಪಂಥಕ್ಕೆ ಸೇರಿದವರು. ಈ ಪಂಥದ ಜನರು ಹಣೆಗೆ ಕೆಂಪು ಬೊಟ್ಟು ಇಟ್ಟು, ಅದರ ಸುತ್ತಲೂ U ಆಕಾರದಲ್ಲಿ ಕಿತ್ತಳೆ ಬಣ್ಣದಲ್ಲಿ ತಿಲಕ ಇಟ್ಟುಕೊಳ್ಳುತ್ತಾರೆ. 2020ರ ಜೂನ್​ನಿಂದ ಸೇನಾ ತರಬೇತಿ ಪಡೆಯುತ್ತಿದ್ದ ಇವರು, ಆಗಿನಿಂದಲೂ ತನಗೆ ಧಾರ್ಮಿಕ ತಿಲಕ ಇಡಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಲೇ ಇದ್ದರು. ಇದೀಗ ಅನುಮತಿ ಸಿಕ್ಕಿದ್ದು ಖುಷಿಯಾಗಿದೆ. ಹೀಗೆ ತಿಲಕ ಧರಿಸಿ ಕೆಲಸ ಮಾಡಲು ಒಂಥರ ರೋಮಾಂಚನವಾಗುತ್ತದೆ ಎಂದೂ ದರ್ಶನ್​ ಶಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Birbhum Violence ಬಿರ್‌ಭೂಮ್​​ನಲ್ಲಿ ಸಜೀವ ದಹನ ಮಾಡುವ ಮುನ್ನ ಥಳಿಸಲಾಗಿತ್ತು: ಮರಣೋತ್ತರ ಪರೀಕ್ಷೆ ವರದಿ

Published On - 2:54 pm, Thu, 24 March 22