ಕೆ ರೈಲ್ ಯೋಜನೆ ವಿರುದ್ಧ ಸಂಸತ್​​ಗೆ ಮೆರವಣಿಗೆ ನಡೆಸಿದ ಕೇರಳದ ಕಾಂಗ್ರೆಸ್ ಸಂಸದರ ಮೇಲೆ ಪೊಲೀಸರ ಹಲ್ಲೆ; ಆರೋಪ ನಿರಾಕರಿಸಿದ ದೆಹಲಿ ಪೊಲೀಸ್

K-rail Project ವಿಜಯ್ ಚೌಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಸತ್​​ಗೆ ಪಾದಯಾತ್ರೆ ಹೊರಟಿದ್ದ ರಾಜ್ಯದ ಕಾಂಗ್ರೆಸ್ ಸಂಸದರನ್ನು ಪೊಲೀಸರು ತಡೆದಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. ಸಂಸದರನ್ನು ತಳ್ಳಲಾಯಿತು ಎಂದು ಹೇಳಲಾಗಿದೆ.

ಕೆ ರೈಲ್ ಯೋಜನೆ ವಿರುದ್ಧ ಸಂಸತ್​​ಗೆ ಮೆರವಣಿಗೆ ನಡೆಸಿದ ಕೇರಳದ ಕಾಂಗ್ರೆಸ್ ಸಂಸದರ ಮೇಲೆ ಪೊಲೀಸರ ಹಲ್ಲೆ; ಆರೋಪ ನಿರಾಕರಿಸಿದ ದೆಹಲಿ ಪೊಲೀಸ್
ಕೇರಳ ಸಂಸದರ ಮೆರವಣಿಗೆ ವೇಳೆ ಪೊಲೀಸರೊಂದಿಗೆ ಜಟಾಪಟಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 24, 2022 | 2:15 PM

ದೆಹಲಿ: ಸಿಲ್ವರ್‌ಲೈನ್ ಸೆಮಿ-ಸ್ಪೀಡ್ ರೈಲು ಕಾರಿಡಾರ್ (SilverLine Project) ಯೋಜನೆಗೆ ಸಂಬಂಧಿಸಿದಂತೆ ಕೇರಳದಲ್ಲಿ (Kerala) ರಾಜಕೀಯ ವಿವಾದ ಗುರುವಾರ ದೆಹಲಿಯಲ್ಲಿ ಪ್ರತಿಧ್ವನಿಸಿದೆ. ರಾಜ್ಯದ ಕಾಂಗ್ರೆಸ್ (Congress) ಸಂಸದರು ಸಂಸತ್​​ಗೆ ಮೆರಣಿಗೆ ನಡೆಸಿದಾಗ ಪೊಲೀಸರು ತಡೆದಿದ್ದಾರೆ. ಕೆಲ ಮುಖಂಡರು ತಮ್ಮ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ವಿಜಯ್ ಚೌಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಸತ್​​ಗೆ ಪಾದಯಾತ್ರೆ ಹೊರಟಿದ್ದ ರಾಜ್ಯದ ಕಾಂಗ್ರೆಸ್ ಸಂಸದರನ್ನು ಪೊಲೀಸರು ತಡೆದಿದ್ದು ಮಾತಿನ ಚಕಮಕಿಗೆ ಕಾರಣವಾಯಿತು. ಸಂಸದರನ್ನು ತಳ್ಳಲಾಯಿತು ಎಂದು ಹೇಳಲಾಗಿದೆ. ಅವರಲ್ಲಿ ಎರ್ನಾಕುಲಂ ಸಂಸದ ಹೈಬಿ ಈಡನ್ ಅವರ ಮುಖಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ. ಗದ್ದಲದ ನಡುವೆ ಪಾಲಕ್ಕಾಡ್ ಸಂಸದ ವಿ ಕೆ ಶ್ರೀಕಂಠನ್ ಅವರು ಸಂಸದರನ್ನು ಸಂಸತ್​​ಗೆ ಹೋಗದಂತೆ ಏಕೆ ತಡೆಯುತ್ತಿದ್ದೀರಿ ಎಂದು ಪೊಲೀಸ್ ಸಿಬ್ಬಂದಿಯನ್ನು ಕೇಳಿದರು. ಸಂಸದರನ್ನು ಅಮಾನುಷವಾಗಿ ನಡೆಸಿಕೊಂಡ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ. ದೆಹಲಿ ಪೊಲೀಸ್ ಪಿಆರ್‌ಒ ಸುಮನ್ ನಲ್ವಾ ಮಾತನಾಡಿ, “ಕೆಲವರು ಮಲಯಾಳಂ ಭಾಷೆಯಲ್ಲಿ ಘೋಷಣೆ ಕೂಗುತ್ತಾ ಮಾಧ್ಯಮದ ಲಾನ್‌ನಿಂದ ಉತ್ತರ ಫೌಂಟೇನ್ ಬ್ಯಾರಿಕೇಡ್ ಪಾಯಿಂಟ್‌ಗೆ ಬಂದರು. ಅವರನ್ನು ಬ್ಯಾರಿಕೇಡ್‌ಗಳಲ್ಲಿ ಸಿಬ್ಬಂದಿ ತಡೆದರು. ತಾವು ಸಂಸದರೆಂದು ಹೇಳಿಕೊಂಡು ಅವರು ಘೋಷಣೆ  ಕೂಗು ಮುಂದುವರಿಸಿದರು. ತಮ್ಮ ಗುರುತಿನ ಚೀಟಿಯನ್ನು ತೋರಿಸಲು ಅವರನ್ನು ಕೇಳಲಾಯಿತು, ಅದನ್ನು ಅವರು ನಿರಾಕರಿಸಿದರು. ಏತನ್ಮಧ್ಯೆ, ಸಂಸದರನ್ನು ಗುರುತಿಸಲು ಸಂಸತ್ ನ ಗೇಟ್ ಸಂಖ್ಯೆ 1 ರ ಭದ್ರತಾ ಪಿಕೆಟ್‌ನಿಂದ ಸಿಬ್ಬಂದಿಯನ್ನು ಕರೆಸಲಾಯಿತು. ಸಿಬ್ಬಂದಿ ಬಂದು ಅವರನ್ನು ಗುರುತಿಸಿದರು ಮತ್ತು ನಂತರ ಅವರನ್ನು ಮುಂದೆ ಹೋಗಲು ಅನುಮತಿಸಲಾಯಿತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೆ-ರೈಲ್ ಎಂದು ಕರೆಯಲ್ಪಡುವ ಯೋಜನೆ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅದೇ ದಿನ ಈ ಘಟನೆ ನಡೆದಿದೆ. ಈ ಯೋಜನೆಯನ್ನು ವಿರೋಧಿಸಿ ಕೇರಳದಲ್ಲಿ ಕಾಂಗ್ರೆಸ್ ಪ್ರತಿಭಟನೆಗಳನ್ನು ನಡೆಸುತ್ತಿದೆ.

ಇದೇ ವೇಳೆ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದರು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಸಂಪರ್ಕಿಸಿದರು.

ಆರ್‌ಎಸ್‌ಪಿ ಸಂಸದ ಎನ್‌ಕೆ ಪ್ರೇಮಚಂದ್ರನ್ ಅವರು ಸಂಸತ್ತಿನ ಸದಸ್ಯರು ಮತ್ತು ಸಂಸತ್ ಭವನಕ್ಕೆ ಹೋಗುತ್ತಿದ್ದೇವೆ ಎಂದು ತಿಳಿಸಿದರೂ ಪೊಲೀಸರು ಸಂಸದರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸದನದಲ್ಲಿ ಹೇಳಿದರು. ಸಂಸತ್ ಭವನದ ಗೇಟ್‌ನಲ್ಲಿ ನಮ್ಮನ್ನು ಸಂಸದರನ್ನು ತಡೆಯಲು ದೆಹಲಿ ಪೊಲೀಸರಿಗೆ ಏನು ಅಧಿಕಾರ? ಅವರು ಸಂಸತ್ತಿನ ಆವರಣವನ್ನೂ ಪ್ರವೇಶಿಸಿದರು” ಎಂದು ಪ್ರೇಮಚಂದ್ರನ್ ಹೇಳಿದರು. ಕಾಂಗ್ರೆಸ್ ಸಂಸದ ಕೆ.ಸುರೇಶ್ ಮಾತನಾಡಿ, ವಿಜಯ್ ಚೌಕ್‌ನಿಂದ ಸಂಸತ್ ಭವನದವರೆಗೆ ಕೆ-ರೈಲ್ ವಿರೋಧಿಸಿ ನಾವು ಹನ್ನೆರಡು ಮಂದಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಕೇರಳದ ಜನರ ಹಿತಾಸಕ್ತಿಗೆ ವಿರುದ್ಧವಾದ ಯೋಜನೆ ಎಂಬ ಕಾರಣಕ್ಕೆ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ದೆಹಲಿ ಪೊಲೀಸರು ನಮ್ಮ ಮೇಲೆ ಹಲ್ಲೆ ನಡೆಸಿದರು, ಕ್ರೂರವಾಗಿ ದಾಳಿ ಮಾಡಿದರು ಎಂದಿದ್ದಾರೆ.

ರಾಜ್ಯಸಭಾ ಸಂಸದ ಕೆ ಸಿ ವೇಣುಗೋಪಾಲ್ ಅವರು ಘಟನೆಯ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಇದು “ರಾಜ್ಯದ ಅಧಿಕಾರದ ದುರುಪಯೋಗ” ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಬಿರ್ಲಾ ಅವರು ಘಟನೆಯ ವಿವರಗಳನ್ನು ಪಡೆಯಲು ಸಂಸದರನ್ನು ತಮ್ಮ ಚೇಂಬರ್‌ಗೆ ಕರೆದರು. ಕೇರಳ ಸಂಸದರ ಪ್ರಕಾರ ಸ್ಪೀಕರ್ ಅವರು ದೆಹಲಿ ಪೊಲೀಸ್ ಆಯುಕ್ತರನ್ನು ಕರೆಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು. ಪ್ರಿವಿಲೆಜ್ ನೋಟಿಸ್ ನೀಡಲಾಗುವುದು ಎಂದು ಅವರು ಹೇಳಿದ್ದಾರೆ ಎಂದು ಸಂಸದರು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್​​​ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: 2020ರ ದೆಹಲಿ ಗಲಭೆ ಪ್ರಕರಣದ ಪಿತೂರಿ ಆರೋಪಿ ಉಮರ್​ ಖಾಲಿದ್​ಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

Published On - 1:55 pm, Thu, 24 March 22