2020ರ ದೆಹಲಿ ಗಲಭೆ ಪ್ರಕರಣದ ಪಿತೂರಿ ಆರೋಪಿ ಉಮರ್ ಖಾಲಿದ್ಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ
Umar Khalid | Delhi Riots Case: ಫೆಬ್ರವರಿ 2020ರ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದ ಆರೋಪಿ ಉಮರ್ ಖಾಲಿದ್ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯವು ವಜಾಗೊಳಿಸಿದೆ.
ಫೆಬ್ರವರಿ 2020ರ ಈಶಾನ್ಯ ದೆಹಲಿ ಗಲಭೆಯ ಪಿತೂರಿ ಆರೋಪಿ ಉಮರ್ ಖಾಲಿದ್ (Umar Khalid) ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಈ ಕುರಿತು ಇಂದು (ಗುರುವಾರ ಮಾರ್ಚ್ 24) ನ್ಯಾಯಾಲಯ ಆದೇಶ ನೀಡಿದೆ. ಉಮರ್ ಖಾಲಿದ್ ಜೆಎನ್ಯುನ ಮಾಜಿ ವಿದ್ಯಾರ್ಥಿಯಾಗಿದ್ದಾರೆ. ಉಮರ್ ಖಾಲಿದ್ರನ್ನು 2020ರ ಸೆಪ್ಟೆಂಬರ್ 14ರಂದು ಬಂಧಿಸಲಾಗಿತ್ತು. ಪ್ರಸ್ತುತ ಅವರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಪ್ರಕರಣದ ವಾದವನ್ನು ಆಲಿಸಿದ ನಂತರ ಮಾರ್ಚ್ 3 ರಂದು ಆದೇಶವನ್ನು ಕಾಯ್ದಿರಿಸಿದ್ದರು. ವಿಚಾರಣೆಯ ವೇಳೆ ಆರೋಪಿಯು ತಮ್ಮ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದೀಗ ನ್ಯಾಯಾಲಯ ಖಾಲಿದ್ಗೆ ಜಾಮೀನು ನಿರಾಕರಿಸಿದೆ.
ಈ ಕುರಿತು ಎಎನ್ಐ ಮಾಹಿತಿ:
A Delhi court on Thursday, March 24, dismissed the bail plea of Umar Khalid, an accused in a larger conspiracy case related to North East Delhi violence of February 2020.
— ANI (@ANI) March 24, 2022
ಉಮರ್ ಖಾಲಿದ್ ಫೆಬ್ರವರಿ 2020ರ ಗಲಭೆಯ ‘ಮಾಸ್ಟರ್‌ಮೈಂಡ್’ ಎಂದು ಆರೋಪಿಸಲಾಗಿದೆ. ಖಾಲಿದ್ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ. ದೆಹಲಿ ಗಲಭೆಯಲ್ಲಿ 53 ಜನರು ಮೃತಪಟ್ಟಿದ್ದರು. ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದೆಹಲಿ ಗಲಭೆಗೆ ಪಿತೂರಿ ನಡೆಸಿದ ಪ್ರಕರಣದಲ್ಲಿ 18 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಇದುವರೆಗೆ ಈ ಆರೋಪಿಗಳಲ್ಲಿ 6 ಜನರು ಜಾಮೀನು ಪಡೆದು ಹೊರಬಂದಿದ್ದಾರೆ.
ಉಮರ್ ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ತ್ರಿದೀಪ್ ಪೈಸ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್ ಸಂಪೂರ್ಣ ಕಟ್ಟುಕಥೆ ಎಂದು ವಾದಿಸಿದ್ದಾರೆ. ಅಲ್ಲದೇ ಖಾಲಿದ್ ಭಾಷಣದ ತುಣುಕುಗಳನ್ನು ಕತ್ತರಿಸಿ ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ಕಾಯ್ದೆಯ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿತ್ತು. ಉಮರ್ ಖಾಲಿದ್ ಜತೆಗೆ ಖಾಲಿದ್ ಸೈಫಿ, ಜೆಎನ್‌ಯು ವಿದ್ಯಾರ್ಥಿಗಳಾದ ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿತಾ, ಜಾಮಿಯಾ ಸಮನ್ವಯ ಸಮಿತಿ ಸದಸ್ಯರಾದ ಸಫೂರ ಜರ್ಗರ್, ಎಎಪಿ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಮತ್ತು ಹಲವರ ವಿರುದ್ಧವೂ ಕಠಿಣ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:
ಉಮರ್ ಖಾಲಿದ್ಗೆ ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಜೈಲು ಅಧಿಕಾರಿಗಳಿಗೆ ನೋಟಿಸ್
Published On - 12:39 pm, Thu, 24 March 22