ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು (Pakistan Economic Crisis) ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸರ್ಕಾರ ಹೆಣಗಾಡುತ್ತಿದ್ದು, ಇಂಧನವನ್ನು ಉಳಿಸುವ ಸಲುವಾಗಿ ಪಾಕಿಸ್ತಾನವು ನಿನ್ನೆಯಿಂದ ಮಾರುಕಟ್ಟೆಗಳು, ಮಾಲ್‌ಗಳು ಮತ್ತು ಮದುವೆ ಮಂಟಪಗಳನ್ನು ಬೇಗನೆ ಮುಚ್ಚುವುದಾಗಿ ಘೋಷಿಸಿದೆ. ಈ ನಿರ್ಧಾರವು ಪಾಕಿಸ್ತಾನ ಸರ್ಕಾರದ ಇಂಧನ ಸಂರಕ್ಷಣಾ ಯೋಜನೆಯಡಿಯಲ್ಲಿ (Energy Conservation Plan) ಕ್ರಮಗಳಲ್ಲಿ ಒಂದಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇಂಧನವನ್ನು ಉಳಿಸಲು ಮತ್ತು ಆಮದು ಮಾಡಿಕೊಳ್ಳುವ ಇಂಧನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ರಾಷ್ಟ್ರೀಯ ಇಂಧನ ಸಂರಕ್ಷಣಾ ಯೋಜನೆಗೆ ಪಾಕಿಸ್ತಾನದ ಸಂಪುಟದ ಸಚಿವರು ಮಂಗಳವಾರ ಅನುಮೋದನೆ ನೀಡಿದ್ದಾರೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ನೀಡಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ಮಾರುಕಟ್ಟೆಗಳು ಮತ್ತು ಮಾಲ್‌ಗಳು ಇನ್ನುಮುಂದೆ ರಾತ್ರಿ 8.30ಕ್ಕೆ ಮುಚ್ಚಲ್ಪಡುತ್ತವೆ. ಪಾಕಿಸ್ತಾನದಲ್ಲಿ ಮದುವೆ ಹಾಲ್‌ಗಳು ರಾತ್ರಿ 10 ಗಂಟೆಗೆ ಮುಚ್ಚಲ್ಪಡುತ್ತವೆ. ಈ ನಿರ್ಧಾರದಿಂದ ನಾವು 60 ಶತಕೋಟಿ ರೂ.ಗಳನ್ನು ಉಳಿಸಬಹುದಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Recession: ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಎಲ್ಲಿ ಹೂಡಿಕೆ ಮಾಡಬಹುದು, ಎಲ್ಲಿ ಮಾಡಬಾರದು? ಇಲ್ಲಿದೆ ಟಿಪ್ಸ್
ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಪಾಕಿಸ್ತಾನ ತೆಗೆದುಕೊಂಡ ಇತರ ಕೆಲವು ಕ್ರಮಗಳೆಂದರೆ, ಫೆಬ್ರವರಿ 1ರಿಂದ ಪಾಕ್ನಲ್ಲಿ ಪ್ರಕಾಶಮಾನ ಬಲ್ಬ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುತ್ತದೆ. ಜುಲೈನಿಂದ ಅಸಮರ್ಥ ಫ್ಯಾನ್‌ಗಳ ಉತ್ಪಾದನೆಯನ್ನು ನಿಲ್ಲಿಸಲಾಗುವುದು. ಈ ಕ್ರಮಗಳು ಇನ್ನೂ 22 ಬಿಲಿಯನ್ ರೂ.ಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.
ಹಾಗೇ, ಎಲ್ಲಾ ಸರ್ಕಾರಿ ಕಟ್ಟಡಗಳು ಮತ್ತು ಕಚೇರಿಗಳಲ್ಲಿ ಇಂಧನದ ಬಳಕೆಯನ್ನು ಕಡಿಮೆ ಮಾಡಲಾಗುತ್ತದೆ. ಮನೆಯಿಂದಲೇ ಕೆಲಸ ಮಾಡುವ ನೀತಿಯನ್ನು 10 ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಪಾಕ್ ರಕ್ಷಣಾ ಸಚಿವರು ಹೇಳಿದ್ದಾರೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ ಯಾವುದೇ ಲೈಟ್ಗಳನ್ನು ಆನ್ ಮಾಡಲಿಲ್ಲ. ಸಂಪೂರ್ಣವಾಗಿ ಸೂರ್ಯನ ಬೆಳಕಿನಲ್ಲಿಯೇ ಸಂಪುಟ ಸಭೆ ನಡೆಸಲಾಯಿತು. ಈ ಮೂಲಕ ಪಾಕಿಸ್ತಾನದ ಜನರಿಗೆ ಸರ್ಕಾರ ವಿದ್ಯುತ್ ಮತ್ತು ಇಂಧನದ ಕಡಿಮೆ ಬಳಕೆಯ ಸಂದೇಶ ರವಾನಿಸಿದೆ.
ಇದನ್ನೂ ಓದಿ: Viral Photo: ಭಾರತಕ್ಕೆ ಶರಣಾದ ಪಾಕಿಸ್ತಾನ: ಹಳೆಯ ಫೋಟೋ ಹಂಚಿಕೊಂಡ ತಾಲಿಬಾನ್
ಸರ್ಕಾರಿ ಇಲಾಖೆಗಳು ಬಳಸುವ ಶೇ.30ರಷ್ಟು ವಿದ್ಯುತ್ ಅನ್ನು ಸಂರಕ್ಷಿಸಲು ಕ್ಯಾಬಿನೆಟ್ ಯೋಜಿಸಿದೆ ಎಂದು ಪಾಕ್ ರಕ್ಷಣಾ ಸಚಿವರು ಹೇಳಿದ್ದಾರೆ. ಇದರಿಂದ 62 ಶತಕೋಟಿ ರೂ. ಉಳಿತಾಯವಾಗಲಿದೆ. ಹಾಗೇ, ಇಂಧನದ ಆಮದನ್ನು ಕಡಿತಗೊಳಿಸುವ ಸಲುವಾಗಿ 2023ರ ಅಂತ್ಯದ ವೇಳೆಗೆ ಎಲೆಕ್ಟ್ರಿಕ್ ಬೈಕ್ಗಳನ್ನು ಪರಿಚಯಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಆಗಸ್ಟ್ ಅಂತ್ಯದಲ್ಲಿ ಪಾಕಿಸ್ತಾನದಲ್ಲಿ ಉಂಟಾದ ದೊಡ್ಡ ಪ್ರವಾಹ 1,500ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು. ಅಲ್ಲದೆ, ಶತಕೋಟಿ ಡಾಲರ್ ಮೌಲ್ಯದ ಹಾನಿಯನ್ನು ಉಂಟುಮಾಡಿತು. ಇದು ಪಾಕ್ ಆರ್ಥಿಕತೆಯ ಮೇಲೆ ಇನ್ನಷ್ಟು ಒತ್ತಡವನ್ನು ಉಂಟುಮಾಡಿತು.