ಲಾಹೋರ್: ಮೊದಲೇ ತಿಂಡಿಯನ್ನು ಕೇಳಿರೋದು ಬಿಟ್ಟಿಯಾಗಿ! ಹಾಗೆ ಕೇಳಿದ್ದಕ್ಕೆ ಬರ್ಗರ್ ನೀಡಲಿಲ್ಲ ಅಂತಾ ಹೋಟೆಲ್ ಒಂದರ 19 ಮಂದಿ ಸಿಬ್ಬಂದಿಗೆ ಪಾಕಿಸ್ತಾನ ಪೊಲೀಸರು ಹೀಗಾ ಮಾಡೋದು!? ನಗರದ ಪೂರ್ವ ಭಾಗದಲ್ಲಿರುವ ಪ್ರಸಿದ್ಧ Johnny & Jugnu ಟ್ರೆಂಡಿ ಹೋಟೆಲ್ಗೆ ನುಗ್ಗಿದ್ದ ಸ್ಥಳೀಯ ಪೊಲೀಸರ ದಂಡು ಅಲ್ಲಿದ್ದ ಅಷ್ಟೂ ಸಿಬ್ಬಂದಿಯನ್ನು ಅಕ್ರಮವಾಗಿ ಬಂಧಿಸಿ, ಏಳು ಗಂಟೆಗಳ ಕಾಲ ತಮ್ಮ ವಶದಲ್ಲೇ ಇಟ್ಕೊಂಡಿದ್ದಾರೆ. ಇದರಿಂದ ಏನೂ ಅರಿಯದ ಆ ಹೋಟೆಲಿನ ಇತರೆ ಗ್ರಾಹಕರು ಅನ್ನಾಹಾರವಿಲ್ಲದೆ ವಾಪಸಾಗಿದ್ದಾರೆ.
ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದು, ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬ ಹೋಟೆಲಿಗೆ ಬಂದು ತಮ್ಮ ಸಿಬ್ಬಂದಿಗೆ ಸಿಕ್ಕಾಪಟ್ಟೆ ಹಸಿವಾಗುತ್ತಿದೆ. ಅವರಿಗೆಲ್ಲಾ ಉಚಿತವಾಗಿ ಬರ್ಗರ್ಗಳನ್ನು ಪಾರ್ಸಲ್ ಕಟ್ಟಿಕೊಡಿ ಎಂದು ಕೇಳಿದ್ದಾನೆ. ಆದರೆ ಹೋಟೆಲ್ ಸಿಬ್ಬಂದಿ ಅದೆಲ್ಲಾ ಆಗಾಕಿಲ್ಲ. ನಾವು ನಿಮಗೆ ಫ್ರೀಯಾಗಿ ಕೊಡುವುದಿಲ್ಲ ಎಂದು ಮಾರುತ್ತರ ಕೊಟ್ಟಿದ್ದಾರೆ, ಅಷ್ಟೇ. ಹಸಿದ ಹೆಬ್ಬುಲಿಗಳಂತೆ ಆ ಪೊಲೀಸರು ಹೋಟೆಲಿನಲ್ಲಿದ್ದ 19 ಮಂದಿಯನ್ನೂ ಎತ್ಹಾಕಿಕೊಂಡು ಹೋಗಿ ರುಬ್ಬಿದ್ದಾರೆ!
ಈ ಸಂಬಂಧ ಈಗ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯೊಂದನ್ನು ನೀಡಿರುವ Johnny & Jugnu ಹೋಟೆಲ್ ಮಾಲೀಕರು ಇದೇನೂ ಮೊದಲಲ್ಲ ಸ್ಥಳೀಯ ಪೊಲೀಸರು ಹೀಗೆ ಮಾಡಿರುವುದು. ಆದರೆ ಇದೇ ಕೊನೆ ಆಗಬೇಕು. ಬಂಧಿತ ಸಿಬ್ಬಂದಿಯ ಪೈಕಿ ಅನೇಕರು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಾ, ಹೊಟ್ಟೆಪಾಡಿಗಾಗಿ ನಮ್ಮ ಹೋಟೆಲಿನಲ್ಲೂ ದುಡಿಯುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ತಮ್ಮ ಪೊಲೀಸರ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.
We are relieved and happy to find out that IG @InamGhani & DIG @SajidKianiPSP took notice of the recent incident at our Phase 6 outlet & have taken sufficient action accordingly.
1/4 #johnnyandjugnu
— Johnny & Jugnu (@itsstillCalu) June 12, 2021
ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮರ್ಯಾದೆ ಹರಾಜು ಆಗುತ್ತಿದ್ದಂತೆ ಎಚ್ಚೆತ್ತ ಉನ್ನತಾಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದ 9 ಮಂದಿ ಪೊಲೀಸರನ್ನು ಮೊನ್ನೆ ಸಸ್ಪೆಂಡ್ ಮಾಡಿದ್ದಾರೆ. ಹೀಗೆಲ್ಲಾ ಮಾಡಬಾರದಿತ್ತು ಎಂದು ಉನ್ನತ ಪೊಲೀಸ್ ಅಧಿಕಾರಿ ಟ್ವೀಟ್ ಮಾಡಿ, ತಮ್ಮ ಪೊಲೀಸರನ್ನು ಎಚ್ಚರಿಸಿದ್ದಾರೆ.
ಪಾಕಿಸ್ತಾನದ ಪೊಲೀಸರಲ್ಲಿ ಭ್ರಷ್ಟಾಚಾರ, ಅಶಿಸ್ತು ವ್ಯಾಪಕವಾಗಿದೆ. ಇಂತಹವರು ಸ್ಥಳೀಯ ರಾಜಕಾರಣಿಗಳ ಆಪ್ತರು. ಹಾಗಾಗಿ ಎಲ್ಲೆ ಮೀರಿ ನಡೆದುಕೊಳ್ಳುತ್ತಾರೆ. ಪಾಕಿಸ್ತಾನದ ಪೊಲೀಸ್ ಇಲಾಖೆಯಲ್ಲಿ ಆಮೂಲಾಗ್ರ ಸುಧಾರಣೆಗಳು ಆಗಬೇಕು ಎಂದು ಪಾಕಿಸ್ತಾನದ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಇತ್ತೀಚೆಗೆ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
(Pakistan police detain 19 eatery staffers at Johnny and Jugnu in Lahore after being denied free burgers 9 cops suspended)
Published On - 11:59 am, Wed, 16 June 21