AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋ ಬೈಡೆನ್-ವ್ಲಾದಿಮಿರ್ ಪುಟಿನ್ ಮುಖಾಮುಖಿ: ಕೊನೆಗೂ ನಡೆಯಿತು ಐತಿಹಾಸಿಕ ಭೇಟಿ

ಎರಡೂ ದೇಶಗಳ ನಡುವಣ ಸಂಬಂಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬ ಪರಿಸ್ಥಿತಿಯನ್ನು ಈ ನಾಯಕರು ಹಿಂದೆಯೇ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಭೇಟಿಯ ಫಲಶ್ರುತಿಯ ಬಗ್ಗೆ ಹೆಚ್ಚು ನಿರೀಕ್ಷೆಗಳಿಲ್ಲ. ಆದರೆ ಪರಸ್ಪರ ಸದಾ ಟೀಕಿಸುತ್ತಿದ್ದ ಇಬ್ಬರು ಪ್ರಭಾವಿಗಳ ಭೇಟಿಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಮಹತ್ವ ಬಂದಿದೆ.

ಜೋ ಬೈಡೆನ್-ವ್ಲಾದಿಮಿರ್ ಪುಟಿನ್ ಮುಖಾಮುಖಿ: ಕೊನೆಗೂ ನಡೆಯಿತು ಐತಿಹಾಸಿಕ ಭೇಟಿ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
TV9 Web
| Edited By: |

Updated on:Jun 16, 2021 | 7:29 PM

Share

ಜಿನೇವಾ: ಅಮೆರಿಕ ಅಧ್ಯಕ್ಷ ಜೋಬೈಡೆನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಸ್ವಿಡ್ಜರ್​ಲೆಂಡ್​ನಲ್ಲಿ ಪರಸ್ಪರ ಮುಖಾಮುಖಿಯಾದರು. ಎರಡೂ ದೇಶಗಳ ನಡುವಣ ಸಂಬಂಧ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂಬ ಪರಿಸ್ಥಿತಿಯನ್ನು ಈ ನಾಯಕರು ಹಿಂದೆಯೇ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಭೇಟಿಯ ಫಲಶ್ರುತಿಯ ಬಗ್ಗೆ ಹೆಚ್ಚು ನಿರೀಕ್ಷೆಗಳಿಲ್ಲ. ಆದರೆ ಪರಸ್ಪರ ಸದಾ ಟೀಕಿಸುತ್ತಿದ್ದ ಇಬ್ಬರು ಪ್ರಭಾವಿಗಳ ಭೇಟಿಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಮಹತ್ವ ಬಂದಿದೆ. ಸ್ವಿಡ್ಜರ್​ಲೆಂಡ್​ ಅಧ್ಯಕ್ಷ ಗಯ್ ಪರ್ಮೆಲಿನ್ ಇಬ್ಬರೂ ನಾಯಕರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದ್ದರು. ಅತಿಥಿ ಗೃಹ ಪ್ರವೇಶಿಸುವ ಮೊದಲು ಇಬ್ಬರೂ ನಾಯಕರು ಕ್ಯಾಮೆರಾಮನ್​ಗಳ ಎದುರು ಕೆಲವೇ ಸೆಕೆಂಡುಗಳ ಹಸ್ತಲಾಘವ ಮಾಡಿದರು. ಸುಮಾರು ಐದು ಗಂಟೆಗಳ ಕಾಲ ಇವರಿಬ್ಬರ ನಡುವೆ ಮಾತುಕತೆ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಹಲವು ತಿಂಗಳುಗಳವರೆಗೆ ಇವರಿಬ್ಬರ ನಡುವೆ ಬಿರುಸಿನ ಹೇಳಿಕೆಗಳ ವಿನಿಮಯ ನಡೆದಿತ್ತು. ಅಮೆರಿಕದ ಹಿತಾಸಕ್ತಿಗಳ ಮೇಲೆ ನಡೆಯುತ್ತಿರುವ ಸೈಬರ್ ದಾಳಿಗಳಲ್ಲಿ ರಷ್ಯಾ ಮೂಲದ ಹ್ಯಾಕರ್​ಗಳ ಕೈವಾಡವಿದೆ ಎಂದು ಬೈಡನ್ ಆರೋಪಿಸಿದ್ದರು. ರಷ್ಯಾದ ವಿರೋಧಪಕ್ಷದ ಹಿರಿಯ ನಾಯಕನ ಬಂಧನ ಮತ್ತು ಅಮೆರಿಕ ಚುನಾವಣೆಗಳಲ್ಲಿ ರಷ್ಯಾದ ಹಸ್ತಕ್ಷೇಪದ ಬಗ್ಗೆಯೂ ಬೈಡೆನ್ ಪ್ರಬಲವಾಗಿ ಆಕ್ಷೇಪಿಸಿದ್ದರು.

ಪುಟಿನ್ ಸಹ ಅಮೆರಿಕ ಮತ್ತು ಅದರ ನಾಯಕರನ್ನು ಟೀಕಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಅಮೆರಿಕದ ಕ್ಯಾಪಿಟಲ್ (ಸಂಸತ್ ಭವನ) ಹಿಂಸಾಚಾರವನ್ನು ಉಲ್ಲೇಖಿಸಿ ಅಮೆರಿಕದ ಸಿದ್ಧಾಂತಗಳು ಮತ್ತು ಗುಪ್ತಚರ ವೈಫಲ್ಯದ ಬಗ್ಗೆ ಪುಟಿನ್ ವ್ಯಂಗ್ಯವಾಡಿದ್ದರು. ತಮ್ಮ ದೇಶದಲ್ಲಿಯೇ ಶಾಂತಿ ಕಾಪಾಡಲು ಸಾಧ್ಯವಾಗದ ಅಮೆರಿಕಕ್ಕೆ ರಷ್ಯಾ ಸರ್ಕಾರವನ್ನು ದೂರುವ, ರಷ್ಯಾದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಟೀಕಿಸುವ ಯಾವುದೇ ಹಕ್ಕು ಇಲ್ಲ ಎಂದು ಹೇಳಿದ್ದರು.

ಎರಡೂ ಪ್ರಬಲ ದೇಶಗಳ ಉನ್ನತ ನಾಯಕರು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಈ ಭೇಟಿಯ ಫಲಶ್ರುತಿಯ ಬಗ್ಗೆ ಎರಡೂ ದೇಶಗಳಲ್ಲಿ ಹೆಚ್ಚೇನೂ ನಿರೀಕ್ಷೆಗಳಿಲ್ಲ. ಆದರೆ ಈಚೆಗೆ ಜೋ ಬೈಡೆನ್ ನೀಡಿರುವ ಹೇಳಿಕೆಗಳನ್ನು ಗಮನಿಸಿದಾಗ ಅವರಿಗೆ ಈ ಹೇಳಿಕೆಗಳ ಬಗ್ಗೆ ತುಸು ಭರವಸೆ ಇದ್ದಂತೆ ಭಾಸವಾಗುತ್ತದೆ. ಎರಡೂ ದೇಶಗಳ ನಡುವಣ ಸಂಬಂಧಲ್ಲಿ ಈಚಿನ ದಿನಗಳಲ್ಲಿ ಸ್ಥಿರತೆ ಮತ್ತು ಮುಂದಿನ ನಡೆಯನ್ನು ಅಂದಾಜಿಸಬಲ್ಲಷ್ಟು ಪ್ರಬುದ್ಧತೆ ಕಂಡುಬರುತ್ತಿದೆ. ಅಮೆರಿಕದ ಅತಿದೊಡ್ಡ ಟೀಕಾಕಾರನ ಭೇಟಿಯಿಂದ ಪರಿಸ್ಥಿತಿ ಒಂದೇ ಸಲಕ್ಕೆ ಬದಲಾಗುವುದಿಲ್ಲ ಎಂಬ ಬಗ್ಗೆಯೂ ಬೈಡೆನ್ ಅವರಿಗೆ ಸ್ಪಷ್ಟತೆ ಇದೆ. ಎರಡೂ ದೇಶಗಳ ಪರಸ್ಪರ ಹಿತಾಸಕ್ತಿ, ವಿಶ್ವದ ಒಳಿತಿಗಾಗಿ ಕೆಲವು ವಿಚಾರಗಳಲ್ಲಿಯಾದರೂ ಸಹಕರಿಸುವುದು ಅನಿವಾರ್ಯ. ನಾವು ಈ ನಿಟ್ಟಿನಲ್ಲಿ ಮುಂದುವರಿಯಲು ಸಾಧ್ಯವೇ ಪ್ರಯತ್ನಿಸುತ್ತೇವೆ ಎಂದು ಜೋ ಬೈಡೆನ್ ಕೆಲ ದಿನಗಳ ಹಿಂದೆ ವಾಷಿಂಗ್​ಟನ್​ನಲ್ಲಿ ವರದಿಗಾರರ ಜೊತೆಗೆ ಮಾತನಾಡುವುದಾಗ ತಿಳಿಸಿದ್ದರು.

ಈ ಭೇಟಿಯ ಕುರಿತು ಹೇಳಿಕೆ ನೀಡಿದ್ದ ವ್ಲಾದಿಮಿರ್ ಪುಟಿನ್​ರ ವಕ್ತಾರ ಡಿಮಿಟ್ರಿ ಪೆಸ್ಕೊವ್, ‘ಈ ಭೇಟಿಯಿಂದ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ. ಎರಡೂ ದೇಶಗಳ ಸಂಬಂಧ ಸುಧಾರಣೆಯ ಪರಿಮಿತಿಯನ್ನು ಮೀರಿ ಹದಗೆಟ್ಟಿದೆ’ ಎಂದು ಹೇಳಿದ್ದರು. ಆದರೆ ಎರಡೂ ದೇಶಗಳ ಉನ್ನತ ನಾಯಕರು ಪರಸ್ಪರ ಭೇಟಿಯಾಗಲು ಮತ್ತು ಕೆಲ ವಿಷಯಗಳ ಬಗ್ಗೆ ಚರ್ಚಿಸಲು ಸಮ್ಮತಿಸಿರುವುದೇ ಒಂದು ಸಕಾರಾತ್ಮಕ ಬೆಳವಣಿಗೆ ಎಂಬ ಆಶಯ ವ್ಯಕ್ತಪಡಿಸಿದರು.

(America President Joe Biden meets Russian Courter part Vladimir Putin its long-anticipated summit)

ಇದನ್ನೂ ಓದಿ: Wuhan Lab ಕೊರೊನಾವೈರಸ್ ವುಹಾನ್ ಲ್ಯಾಬ್​ನಿಂದ ಸೋರಿಕೆಯಾಗಿರಬಹುದು: ಅಮೆರಿಕ ವರದಿ

ಇದನ್ನೂ ಓದಿ: ಲಸಿಕೆ ಪ್ರವಾಸೋದ್ಯಮ: ವಿದೇಶಿಯರಿಗೆ ರಷ್ಯಾಕ್ಕೆ ಆಗಮಿಸಿ ಲಸಿಕೆ ಪಡೆಯಲು ಅವಕಾಶ ನೀಡಿದ ಅಧ್ಯಕ್ಷ ಪುಟಿನ್

Published On - 7:28 pm, Wed, 16 June 21