ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಜನರಲ್ ಗಳನ್ನು ರೀಯಲ್ ಎಸ್ಟೇಟ್ ಏಜೆಂಟ್ ಗಳೆಂದು ಬಣ್ಣಸಿದ ಅಲ್ಲಿನ ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ 73-ವರ್ಷ ವಯಸ್ಸಿನ ಅಯಾಜ್ ಆಮಿರ್ (Ayaz Amir) ಅವರ ಮೇಲೆ ಅಪರಿಚಿತ ಹಲ್ಲೆಕೋರರ ಗುಂಪೊಂದು ಶುಕ್ರವಾರ ರಾತ್ರಿ ಲಾಹೋರ್ ನಲ್ಲಿ (Lahore) ಹಲ್ಲೆ ನಡೆಸಿದೆ. ದುನಿಯಾ ನ್ಯೂಸ್ (Duniya News) ಚ್ಯಾನೆಲ್ ನಲ್ಲಿ ತಮ್ಮ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂತಿರುಗುವಾಗ ಕಾರನ್ನು ಅಡ್ಡಗಟ್ಟಿ ಆಮಿರ್ ಅವರನ್ನು ಹೊರಗೆಳೆದು ಥಳಿಸಲಾಗಿದೆ.
ಮುಖದ ಮೇಲೆ ಗಾಯಗಳನ್ನು ಹೊತ್ತ ಆಮಿರ್ ಅವರು, ‘ಮುಸುಕುಧಾರಿಗಳಾಗಿದ್ದ ಹಲ್ಲೆಕೋರರು ನನ್ನನ್ನು ಥಳಿಸಿ ಬಟ್ಟೆಗಳನ್ನು ಹರಿಯುವುದರ ಜೊತೆಗೆ ಮೊಬೈಲ್ ಫೋನ್ ಮತ್ತು ಪರ್ಸ್ ಕಿತ್ತುಕೊಂಡು ಹೋದರು. ಜನನಿಬಿಡವಾಗಿದ್ದ ರಸ್ತೆಯಲ್ಲಿ ಜನ ಜಮಾಯಿಸಲಾರಂಭಿಸಿದ ಕೂಡಲೇ ಅವರು ಪಲಾಯನಗೈದರು’ ಎಂದು ಹೇಳಿದರು.
ಗುರುವಾರದಂದು ಇಸ್ಲಾಮಾಬಾದ್ ನಲ್ಲಿ ‘ಅಧಿಕಾರ ಬದಲಾವಣೆ ಮತ್ತು ಪಾಕಿಸ್ತಾನದ ಮೇಲೆ ಅದರಿಂದಾದ ಪರಿಣಾಮ’ ವಿಷಯದ ಮೇಲೆ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತಾಡುವಾಗ ಆಮಿರ್, ಪಾಕಿಸ್ತಾನದ ರಾಜಕೀಯದಲ್ಲಿ ಪ್ರಬಲ ಸೇನೆಯ ಪಾತ್ರವನ್ನು ಕಟುವಾಗಿ ಟೀಕಿಸಿದ್ದರು. ಈ ಸೆಮಿನಾರ್ ನಲ್ಲಿ ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಹ ಭಾಗಿಯಾಗಿದ್ದರು.
ಸೇನೆಯ ಜನರಲ್ ಗಳನ್ನು ‘ಪ್ರಾಪರ್ಟಿ ಡೀಲರ್’ ಗಳೆಂದು ಉಲ್ಲೇಖಿಸಿದ ಅವರು ಮೊಹಮ್ಮದ್ ಅಲಿ ಜಿನ್ನಾ ಮತ್ತು ಅಲ್ಲಮ ಇಕ್ಬಾಲ್ ಅವರ ಭಾವಚಿತ್ರಗಳನ್ನು ತೆಗೆದು ಆ ಜಾಗಗಳಲ್ಲಿ ‘ಪ್ರಾಪರ್ಟಿ ಡೀಲರ್’ ಗಳ ಫೋಟೋಗಳನ್ನು ಹಾಕಬೇಕೆಂಬ ಸಲಹೆಯನ್ನೂ ನೀಡಿದರು.
ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಆಮಿರ್, ಆ ಹುದ್ದೆಯಲ್ಲಿ ಅವರು ಆರು ವರ್ಷಗಳಿಂದ ಇದ್ದು ಮತ್ತೊಂದು ಅವಧಿಯ ನಿರೀಕ್ಷೆಯಲ್ಲಿದ್ದಾರೆ ಎಂದಿದ್ದರು.
ಆಮಿರ್ ಅವರ ಭಾಷಣದ ಕೆಲ ಭಾಗಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಅವರಿಂದಾದ ಪ್ರಮಾದಗಳನ್ನು ಸಹ ಎತ್ತಿತೋರಿಸಿದ ಆಮಿರ್, ಅವರು ಕೂಡ ಸೇನಾಡಳಿದಂಥ ಕ್ರಮಗಳನ್ನು ಅನುಸರಿಸಿದರು ಎಂದರು.
ಪಂಜಾಬ್ ಮುಖ್ಯಮಂತ್ರಿ ಹಂಜಾ ಶೆಹಬಾಜ್ ಅವರು ಆಮಿರ್ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಡಿಐಜಿಯಿಂದ ವಿವರಣೆ ಕೇಳಿದ್ದಾರೆ ಮತ್ತು ಹಲ್ಲೆ ನಡೆಸಿದವರನ್ನು ಆದಷ್ಟು ಬೇಗ ಬಂಧಿಸಬೇಕೆಂದು ಆದೇಶಿಸಿದ್ದಾರೆ.
ಆಮಿರ್ ಮೇಲೆ ನಡೆದ ಹಲ್ಲೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಇಮ್ರಾನ್ ಖಾನ್ ಅವರು, ‘ಲಾಹೋರ್ ನಲ್ಲಿ ಹಿರಿಯ ಪತ್ರಕರ್ತ ಅಯಾಜ್ ಆಮಿರ್ ಅವರ ಮೇಲೆ ನಡೆದ ಹಿಂಸಾಚಾರ ಮತ್ತು ಹಲ್ಲೆಯನ್ನು ಕಟುವಾದ ಪದಗಳಲ್ಲಿ ಖಂಡಿಸುತ್ತೇನೆ. ಪತ್ರಕರ್ತರು, ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕರ ವಿರುದ್ಧ ಸುಳ್ಳು ಎಫ್ ಐ ಅರ್ ಗಳನ್ನು ದಾಖಲಿಸುವ ಮೂಲಕ ಪಾಕಿಸ್ತಾನ ಸರ್ವಾಧಿಕಾರದ ದಿನಗಳಿಗೆ ವಾಪಸ್ಸು ಹೋಗುತ್ತಿದೆ. ನೈತಿಕತೆಯ ಎಲ್ಲ ಆಯಾಮಗಳನ್ನು ದೇಶವೊಂದು ಕಳೆದುಕೊಂಡಾಗ ಸಹಜವಾಗೇ ಅದು ಹಿಂಸಾಚಾರದತ್ತ ವಾಲುತ್ತದೆ,’ ಎಂದಿದ್ದಾರೆ.
I condemn in strongest terms the violence against senior journalist Ayaz Amir today in Lahore. Pak descending into the worst kind of fascism with violence & fake FIRs against journalists,opp politicians, citizens.When the State loses all moral authority it resorts to violence.
— Imran Khan (@ImranKhanPTI) July 1, 2022
ಇದನ್ನೂ ಓದಿ: ವ್ಲಾಡಿಮಿರ್ ಪುಟಿನ್ ಜತೆ ಮೋದಿ ಮಾತು; ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಭಾರತದ ನಿಲುವು ಪುನರುಚ್ಚರಿಸಿದ ಪ್ರಧಾನಿ