ನಡು ಆಗಸದಲ್ಲಿಅಸ್ವಸ್ಥನಾದ ಪೈಲಟ್; ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಿದ ಪ್ರಯಾಣಿಕ, ಈತನಿಗಿರಲಿಲ್ಲ ವಿಮಾನ ಹಾರಾಟದ ಅನುಭವ

| Updated By: ರಶ್ಮಿ ಕಲ್ಲಕಟ್ಟ

Updated on: May 11, 2022 | 9:03 PM

ನಾನು ಇಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದೇನೆ. ನನ್ನ ಪೈಲಟ್ ಅಸ್ವಸ್ಥರಾಗಿದ್ದಾರೆ, ವಿಮಾನವನ್ನು ಹೇಗೆ ಹಾರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಪ್ರಯಾಣಿಕ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಹೇಳಿದ್ದಾರೆ.

ನಡು ಆಗಸದಲ್ಲಿಅಸ್ವಸ್ಥನಾದ ಪೈಲಟ್; ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಿದ ಪ್ರಯಾಣಿಕ, ಈತನಿಗಿರಲಿಲ್ಲ ವಿಮಾನ ಹಾರಾಟದ ಅನುಭವ
ಇಳಿದ ವಿಮಾನ
Image Credit source: Reuters
Follow us on

ನಡು ಆಗಸದಲ್ಲಿ ಪೈಲಟ್ ಅಸ್ವಸ್ಥರಾದಾಗ ವಿಮಾನ ಹಾರಾಟ ಮಾಡಿ ಯಾವುದೇ ಅನುಭವವಿಲ್ಲದ ಪ್ರಯಾಣಿಕರೊಬ್ಬರು ವಿಮಾನವನ್ನು  ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ (Florida airport) ಸುರಕ್ಷಿತವಾಗಿ  ಇಳಿಸಿದ ಘಟನೆ ವರದಿ ಆಗಿದೆ. ಮಂಗಳವಾರ ಮಧ್ಯಾಹ್ನ ನಡೆದ ಘಟನೆಯ ಕುರಿತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(Federal Aviation Administration -FAA )ತನಿಖೆ ನಡೆಸುತ್ತಿದೆ. ಪೈಲಟ್‌ಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾಗಿರಬಹುದು ಎಂದು ನಂಬಲಾಗಿದೆ. ಪೈಲಟ್‌ಗೆ “ಸಂಭವನೀಯ ವೈದ್ಯಕೀಯ ಸಮಸ್ಯೆ” ಇದ್ದಾಗ ಇಬ್ಬರು ಪ್ರಯಾಣಿಕರು ಸಿಂಗಲ್-ಎಂಜಿನ್ ಸೆಸ್ನಾ 208 ನಲ್ಲಿದ್ದರು. ಒಬ್ಬ ಪ್ರಯಾಣಿಕರು ಖಾಸಗಿ ವಿಮಾನವನ್ನು ಪಾಮ್ ಬೀಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Palm Beach international airport) ಸುರಕ್ಷಿತವಾಗಿ ಇಳಿಸಿದರು ಎಂದು ಎಫ್ಎಎ ಹೇಳಿಕೆಯಲ್ಲಿ ತಿಳಿಸಿದೆ. LiveATC.net ಆಡಿಯೊ ಪ್ರಕಾರ “ನಾನು ಇಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದೇನೆ. ನನ್ನ ಪೈಲಟ್ ಅಸ್ವಸ್ಥರಾಗಿದ್ದಾರೆ, ವಿಮಾನವನ್ನು ಹೇಗೆ ಹಾರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಪ್ರಯಾಣಿಕ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಹೇಳಿದ್ದಾರೆ. ಪೈಲಟ್‌ನ ಪರಿಸ್ಥಿತಿ ಹೇಗಿದೆ ಎಂದು ಕೇಳಿದಾಗ ಪ್ರಯಾಣಿಕನು, ಅವನು ಅಸ್ವಸ್ಥನಾಗಿದ್ದು, ಪ್ರಜ್ಞೆ ಇಲ್ಲ ಎಂದಿದ್ದಾರೆ.

ಏರ್ ಟ್ರಾಫಿಕ್ ಕಂಟ್ರೋಲರ್ ಪ್ರಯಾಣಿಕನಲ್ಲಿ ಈಗ ಎಲ್ಲಿದ್ದೀರಿ ಎಂದು ಕೇಳಿದಾಗ, “ನನಗೆ ಯಾವುದೇ ಕಲ್ಪನೆ ಇಲ್ಲ. ನಾನು ಮುಂದೆ ಫ್ಲೋರಿಡಾದ ಕರಾವಳಿ ಕಾಣಿಸುತ್ತಿದೆ, ಬೇರೇನೂ ನನಗೆ ಗೊತ್ತಿಲ್ಲ ಎಂದಿದ್ದಾರೆ.
“ಉತ್ತರ ಅಥವಾ ದಕ್ಷಿಣಕ್ಕೆ ಕರಾವಳಿಯತ್ತ ಹೋಗಲು ಪ್ರಯತ್ನಿಸಿ” ನಾವು ನಿಮ್ಮನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ನಿಯಂತ್ರಣ ಕೊಠಡಿಯಿಂದ ಹೇಳಿದ್ದಾರೆ.


ನಾಲ್ಕು ನಿಮಿಷಗಳ ನಂತರ ಪ್ರಯಾಣಿಕನು “ನೀವು ನನ್ನನ್ನು ಪತ್ತೆ ಮಾಡಿದ್ದೀರಾ? ನನ್ನ ನ್ಯಾವಿಗೇಷನ್ ಪರದೆಯನ್ನು ಆನ್ ಮಾಡಲು ಸಹ ನನಗೆ ಸಾಧ್ಯವಾಗುತ್ತಿಲ್ಲ. ಅದರ ಬಗ್ಗೆ ಎಲ್ಲಾ ಮಾಹಿತಿ ಇದೆ. ನಿಮಗೆ ಅದರ ಬಗ್ಗೆ ತಿಳಿದಿದೆಯೇ?  ಎಂದು ಕೇಳಿದ್ದಾರೆ.

ಏರ್ ಟ್ರಾಫಿಕ್ ಕಂಟ್ರೋಲ್ ಬೋಕಾ ರಾಟನ್‌ನಿಂದ ಹೊರಗಿದ್ದ ವಿಮಾನವನ್ನು ಪತ್ತೆ ಮಾಡಿದೆ. ನಂತರ
ಏರ್ ಟ್ರಾಫಿಕ್ ಕಂಟ್ರೋಲರ್ ಪ್ರಯಾಣಿಕನಿಗೆ ವಿಮಾನ ಇಳಿಸುವುದಕ್ಕೆ ನಿರ್ದೇಶನಗಳನ್ನು ನೀಡಿದ್ದಾರೆ. “ರೆಕ್ಕೆಗಳ ಮಟ್ಟವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿ, ಇಳಿಸುವ ಪ್ರಕ್ರಿಯೆ ಪ್ರಾರಂಭಿಸಬಹುದೇ ಎಂದು ನೋಡಿ, ಕಂಟ್ರೋಲ್​​ಗಳನ್ನು ಮುಂದಕ್ಕೆ ತಳ್ಳಿರಿ ಮತ್ತು ಅತ್ಯಂತ ನಿಧಾನಗತಿಯಲ್ಲಿ ಇಳಿಯಿರಿ ಎಂದು ಹೇಳಿದ್ದಾರೆ.

ಸಿಎನ್ಎನ್​​ಗೆ ಲಭಿಸಿದ ವಿಡಿಯೊದಲ್ಲಿ, ವಿಮಾನವು ನಿಧಾನವಾಗಿ ಮತ್ತು ಸರಾಗವಾಗಿ ಇಳಿಯುವುದನ್ನು ಕಾಣಬಹುದು. ನೀವು ಪ್ರಯಾಣಿಕರೊಬ್ಬರು ವಿಮಾನ ಇಳಿಸಿದ್ದನ್ನು ನೋಡುತ್ತಿರುವಿರಿ ಎಂದು ಏರ್ ಟ್ರಾಫಿಕ್ ಕಂಟ್ರೋಲರ್ ಪೈಲಟ್‌ಗಳಿಗೆ ಹೇಳುತ್ತಿರುವುದನ್ನು ಮತ್ತೊಂದು ರೆಕಾರ್ಡಿಂಗ್​​​ನಲ್ಲಿ ಕೇಳಬಹುದು. ಪ್ರಯಾಣಿಕರು ವಿಮಾನವನ್ನು ಇಳಿಸಿದರು ಎಂದು ನೀವು ಹೇಳಿದ್ದೀರಾ? ಎಂದ ಅಮೆರಿಕನ್ ಏರ್ಲೈನ್ಸ್ ಪೈಲಟ್ ಓ ಮೈ ಗಾಡ್, ಗ್ರೇಟ್ ಜಾಬ್ ಎಂದು ಉದ್ಗರಿಸಿದ್ದಾರೆ.