
ಟಿಯಾಂಜಿನ್, ಸೆಪ್ಟೆಂಬರ್ 1: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ (SCO Summit) ವೇಳೆ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಇಂದು ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಇಬ್ಬರೂ ನಾಯಕರು ಉಕ್ರೇನ್ ಹಾಗೂ ರಷ್ಯಾದ ನಡುವಿನ ಸಂಘರ್ಷ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು. ಹಾಗೇ, ಪ್ರಧಾನಿ ಮೋದಿ ಮತ್ತು ಪುಟಿನ್ ತಮ್ಮ ದ್ವಿಪಕ್ಷೀಯ ಮಾತುಕತೆಯ ಸಮಯದಲ್ಲಿ ಭಾರತ-ರಷ್ಯಾ ಪಾಲುದಾರಿಕೆಯನ್ನು ಪುನರುಚ್ಚರಿಸಿದರು.
ಉಕ್ರೇನ್ ಬಿಕ್ಕಟ್ಟಿನ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ನಾವು ಉಕ್ರೇನ್ ಬಗ್ಗೆ ಚರ್ಚಿಸುತ್ತಿದ್ದೇವೆ. ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳು ಶಾಂತಿಯನ್ನು ಸಾಧಿಸಲು ಮುಂದುವರಿಯಬೇಕೆಂದು ಆಶಿಸುತ್ತೇವೆ. ಈ ಸಂಘರ್ಷ ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ಭಾರತ ಬಯಸುತ್ತದೆ. ಉಕ್ರೇನ್ ಮತ್ತು ರಷ್ಯಾದ ನಡುವೆ ಶಾಶ್ವತ ಶಾಂತಿಯನ್ನು ಕಂಡುಕೊಳ್ಳುವ ಮಾರ್ಗವು ಇಡೀ ಜಗತ್ತಿನ ಮಾನವೀಯತೆಯ ಕರೆಯಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಚೇತೇಶ್ವರ ಪೂಜಾರಗೆ ಹೃದಯಸ್ಪರ್ಶಿ ಸಂದೇಶ ಕಳುಹಿಸಿದ ಪ್ರಧಾನಿ ಮೋದಿ
“ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ನಾವು ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಈ ಸಂಘರ್ಷವನ್ನು ಸಾಧ್ಯವಾದಷ್ಟು ಬೇಗ ಕೊನೆಗೊಳಿಸಬೇಕು ಮತ್ತು ಶಾಶ್ವತ ಶಾಂತಿಗೆ ಮಾರ್ಗವನ್ನು ತ್ವರಿತವಾಗಿ ಕಂಡುಕೊಳ್ಳಬೇಕು. ಶಾಂತಿಯ ದಿಕ್ಕಿನಲ್ಲಿ ಇತ್ತೀಚೆಗೆ ರಷ್ಯಾ ಹಾಗೂ ಉಕ್ರೇನ್ ಮಾಡಿದ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ” ಎಂದು ಪ್ರಧಾನಿ ಮೋದಿ ಪುಟಿನ್ಗೆ ಸಲಹೆ ನೀಡಿದ್ದಾರೆ.
#WATCH | During his bilateral meeting with Russian President Vladimir Putin in Tianjin, China, Prime Minister Narendra Modi says, “… India and Russia have always stood shoulder to shoulder even in the most difficult situations. Our close cooperation is important not only for… pic.twitter.com/ikpNi1VYqx
— ANI (@ANI) September 1, 2025
“ಪುಟಿನ್ ಅವರೊಂದಿಗಿನ ಭೇಟಿ ಯಾವಾಗಲೂ ಸ್ಮರಣೀಯ. ಡಿಸೆಂಬರ್‌ನಲ್ಲಿ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ನಾವು ಕಾಯುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವರ್ಷ ಡಿಸೆಂಬರ್‌ನಲ್ಲಿ ನಡೆಯಲಿರುವ ಮುಂಬರುವ 23ನೇ ಭಾರತ-ರಷ್ಯಾ ಶೃಂಗಸಭೆಗೆ ಪ್ರಧಾನಿ ಅಧ್ಯಕ್ಷ ಪುಟಿನ್ ಅವರಿಗೆ ಆತ್ಮೀಯ ಆಹ್ವಾನವನ್ನು ನೀಡಿದರು. “140 ಕೋಟಿ ಭಾರತೀಯರು ನಿಮಗಾಗಿ ಕಾತರದಿಂದ ಕಾಯುತ್ತಿದ್ದಾರೆ” ಎಂದು ಮೋದಿ ಹೇಳಿದರು.
ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆಗೆ ಜಗ್ಗದ ಮೋದಿ, ಚೀನಾದಲ್ಲಿ ಷಿ ಜಿನ್ಪಿಂಗ್, ಪುಟಿನ್ ಜತೆ ಮಾತುಕತೆ
“ಕಷ್ಟದ ಸಮಯದಲ್ಲಿ ಕೂಡ ಭಾರತ ಮತ್ತು ರಷ್ಯಾ ಒಟ್ಟಾಗಿ ನಿಂತಿರುವುದು ನಮ್ಮ ವಿಶೇಷ. ಕಠಿಣ ಸಂದರ್ಭದಲ್ಲೂ ಎರಡೂ ದೇಶಗಳು ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ” ಎಂದು ಮೋದಿ ಹೇಳಿದ್ದಾರೆ.
ಪುಟಿನ್ ಹೇಳಿದ್ದೇನು?:
“ನಮ್ಮ ಸಂಬಂಧವು ತತ್ವಗಳನ್ನು ಆಧರಿಸಿದೆ ಎಂದು ನಾವು ಹೇಳಬಹುದು. ನಮ್ಮ ನಡುವೆ ಬಹುಮುಖಿ ಸಹಕಾರವಿದೆ. ಇಂದಿನ ಸಭೆಯು ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತೊಂದು ಉತ್ತಮ ಅವಕಾಶವಾಗಿದೆ. ರಷ್ಯಾ ಮತ್ತು ಭಾರತದ ನಡುವೆ ಅತ್ಯಂತ ವಿಶ್ವಾಸಾರ್ಹ ಸಂಬಂಧವಿದೆ, ಅದು ರಾಜಕೀಯವನ್ನು ಆಧರಿಸಿಲ್ಲ” ಎಂದು ಪುಟಿನ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾದ ತೈಲವನ್ನು ಖರೀದಿಸಿದ ಕಾರಣಕ್ಕೆ ಭಾರತದ ಮೇಲೆ ಹೆಚ್ಚಿನ ಸುಂಕ ಹೇಳಿದ ಬೆನ್ನಲ್ಲೇ ಭಾರತ ಮತ್ತು ರಷ್ಯಾ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಮಾತುಗಳನ್ನಾಡಿವೆ. ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದೆ. ಇದರಲ್ಲಿ ಮಾಸ್ಕೋದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುವುದಕ್ಕೆ ಶೇ. 25ರಷ್ಟು ದಂಡವೂ ಸೇರಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:17 pm, Mon, 1 September 25