Viral News: ವಿಶ್ವದ ಅತಿ ಉದ್ದನೆಯ ಮೂಗು ಹೊಂದಿದ ವ್ಯಕ್ತಿಯ ಫೋಟೋ ವೈರಲ್

ಈ ಫೋಟೋದಲ್ಲಿರುವ ಥಾಮಸ್ ವಾಡ್​ಹೌಸ್ ಅವರ ಮೂಗು 7.5 ಇಂಚು ಉದ್ದವಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ವೆಬ್‌ಸೈಟ್‌ನಲ್ಲಿ ಈ ವ್ಯಕ್ತಿಯ ಪುಟವಿದೆ.

Viral News: ವಿಶ್ವದ ಅತಿ ಉದ್ದನೆಯ ಮೂಗು ಹೊಂದಿದ ವ್ಯಕ್ತಿಯ ಫೋಟೋ ವೈರಲ್
ಥಾಮಸ್ ವಾಡ್​ಹೌಸ್
Updated By: ಸುಷ್ಮಾ ಚಕ್ರೆ

Updated on: Nov 16, 2022 | 11:50 AM

ವಿಶ್ವದ ಅತಿ ಉದ್ದ ಉಗುರು ಹೊಂದಿರುವ ವ್ಯಕ್ತಿ, ಅತಿ ಉದ್ದ ಕೂದಲಿನ ವ್ಯಕ್ತಿ ಹೀಗೆ ನಾನಾ ರೀತಿಯ ವಿಚಿತ್ರ ಮತ್ತು ವಿಶೇಷ ವ್ಯಕ್ತಿಗಳ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಆದರೆ, ವಿಶ್ವದ ಅತಿ ಉದ್ದನೆಯ ಮೂಗು (Longest Nose) ಹೊಂದಿರುವ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಾ? ಸೋಷಿಯಲ್ ಮೀಡಿಯಾದಲ್ಲಿ (Social Media) ಜಗತ್ತಿನ ಅತಿ ಉದ್ದನೆಯ ಮೂಗಿನ ವ್ಯಕ್ತಿಯ ಫೋಟೋವೊಂದು ಹರಿದಾಡುತ್ತಿದೆ. ಹಿಸ್ಟಾರಿಕ್ ವಿಡ್ಸ್ (Historic Vids) ಎಂಬ ಟ್ವಿಟ್ಟರ್ ಪೇಜ್​ನಲ್ಲಿ ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಅವರ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ.

ಈ ಫೋಟೋದಲ್ಲಿರುವ ಥಾಮಸ್ ವಾಡ್​ಹೌಸ್ ಅವರ ಮೂಗು 7.5 ಇಂಚು ಉದ್ದವಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ವೆಬ್‌ಸೈಟ್‌ನಲ್ಲಿ ಈ ವ್ಯಕ್ತಿಯ ಪುಟವಿದೆ. ಥಾಮಸ್ ವಾಡ್‌ಹೌಸ್ ಅವರು 18ನೇ ಶತಮಾನದಲ್ಲಿ ವಾಸಿಸುತ್ತಿದ್ದ ಇಂಗ್ಲಿಷ್ ಸರ್ಕಸ್ ಪ್ರದರ್ಶಕರಾಗಿದ್ದರು. ಅವರಿಗೆ 7.5 ಇಂಚು (19 ಸೆಂ.ಮೀ) ಉದ್ದದ ಮೂಗು ಇತ್ತು. ಅವರು ತಮ್ಮ ಮೂಗಿನ ಕಾರಣದಿಂದಲೇ ಸಾಕಷ್ಟು ಪ್ರಸಿದ್ಧರಾಗಿದ್ದರು.


ಈ ಟ್ವೀಟ್ ಅನ್ನು ಸುಮಾರು 1.20 ಲಕ್ಷ ಬಳಕೆದಾರರು ಲೈಕ್ ಮಾಡಿದ್ದಾರೆ ಮತ್ತು 7,200ಕ್ಕೂ ಹೆಚ್ಚು ಬಳಕೆದಾರರು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Health Tips: ಕಟ್ಟಿದ ಮೂಗು ಗಂಟಲು ಕೆರೆತದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲಿದೆ ಕೆಲವು ಮನೆ ಮದ್ದುಗಳು

GWR ತನ್ನ ವೆಬ್‌ಸೈಟ್‌ನಲ್ಲಿ ಥಾಮಸ್ ವಾಡ್​ಹೌಸ್ ಅವರ ಸಾಧನೆಯನ್ನು ಪೋಸ್ಟ್​ ಮಾಡಿದೆ. 1770ರ ದಶಕದಲ್ಲಿ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದ, ಟ್ರಾವೆಲಿಂಗ್ ಫ್ರೀಕ್ ಸರ್ಕಸ್‌ನ ಸದಸ್ಯರಾಗಿದ್ದ ಥಾಮಸ್ ವಾಡ್​ಹೌಸ್ 19 ಸೆಂಟಿಮೀಟರ್ (7.5 ಇಂಚು) ಉದ್ದದ ಮೂಗು ಹೊಂದಿದ್ದರು ಎಂಬುದಕ್ಕೆ ದಾಖಲೆಗಳಿವೆ ಎಂದು ವೆಬ್​ಸೈಟ್​ನಲ್ಲಿ ಹಾಕಲಾಗಿದೆ.

ಇದು ಹಳೆಯ ಕತೆಯಾದರೆ, ಇದೀಗ ಜೀವಂತವಾಗಿರುವ ವ್ಯಕ್ತಿಗಳ ಪೈಕಿ ಅತಿ ಉದ್ದದ ಮೂಗು ಹೊಂದಿರುವ ದಾಖಲೆಯು ಟರ್ಕಿಯ ಮೆಹ್ಮೆತ್ ಓಜಿಯುರೆಕ್ ಅವರದ್ದಾಗಿದೆ. ಈ ದಾಖಲೆಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ GWR ದೃಢಪಡಿಸಿತ್ತು. ಅವರ ಮೂಗು 3.46 ಇಂಚುಗಳಷ್ಟಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ