ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ರೋಮ್ ಪ್ರವಾಸ ಮುಗಿಸಿ ಇದೀಗ ಯುಕೆ (ಇಂಗ್ಲೆಂಡ್)ಗೆ ತೆರಳಿದ್ದಾರೆ. ನಿನ್ನೆ ಭಾನುವಾರ ಜಿ20 ಶೃಂಗಸಭೆಯ 2ನೇ ಸೆಷನ್ನಲ್ಲಿ ಪಾಲ್ಗೊಂಡ ಬಳಿಕ ಅವರು ಯುಕೆಯ ಸ್ಕಾಟ್ಲೆಂಡ್ನಲ್ಲಿರುವ ಗ್ಲಾಸ್ಗೋಗೆ ಹೋಗಿದ್ದಾರೆ. ಅವರಿಂದು ವಿಶ್ವಸಂಸ್ಥೆಯ 2021ನೇ ಸಾಲಿನ ಹವಾಮಾನ ಬದಲಾವಣೆ ಸಮ್ಮೇಳನ ಅಥವಾ ಕೋಪ್ 26 ಶೃಂಗಸಭೆ (COP26 Summit)ಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಯುಕೆ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇಂದು ಮುಂಜಾನೆ 4 ಗಂಟೆ ಹೊತ್ತಿಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದೀಗ ಗ್ಲಾಸ್ಗೋಗೆ ಬಂದಿಳಿದಿದ್ದೇನೆ. ಹವಾಮಾನ ಬದಲಾವಣೆ ನಿಯಂತ್ರಣ ಮತ್ತು ಅದಕ್ಕೆ ಸಂಬಂಧಪಟ್ಟಂತೆ ಭಾರತ ನಡೆಸುತ್ತಿರುವ ಪ್ರಯತ್ನಗಳನ್ನು ವಿಶ್ವದ ಇತರ ನಾಯಕರ ಎದುರು ವ್ಯಕ್ತಪಡಿಸಲು ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೇ ಒಂದೆರಡು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.
Landed in Glasgow. Will be joining the @COP26 Summit, where I look forward to working with other world leaders on mitigating climate change and articulating India’s efforts in this regard. pic.twitter.com/G4nVWknFg1
— Narendra Modi (@narendramodi) October 31, 2021
ಈ ಹಿಂದೆ ಬೋರಿಸ್ ಜಾನ್ಸನ್ ಭಾರತಕ್ಕೆ ಬರುವವರಿದ್ದರು. ಆದರೆ ಕೊವಿಡ್ 19 ಕಾರಣದಿಂದ ಭೇಟಿ ರದ್ದಾಗಿತ್ತು. ಇದೀಗ ನರೇಂದ್ರ ಮೋದಿಯವರೇ ಅಲ್ಲಿ ಹೋಗಿ ಬೋರಿಸ್ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅವರು ಗ್ಲಾಸ್ಗೋ ಬಂದು ಇಳಿಯುತ್ತಿದ್ದಂತೆ ಅಲ್ಲಿರುವ ಭಾರತೀಯ ಮೂಲದವರು ದೊಡ್ಡದಾಗಿ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿ, ಸ್ವಾಗತಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ಇಂದು ಮೊದಲು ಸ್ಕಾಟ್ಲೆಂಡ್ ಸಮುದಾಯದ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ನಡೆಯಲಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ 26ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಶೃಂಗಸಭೆಯ ಸಮಗ್ರ ಅಧಿವೇಶನದಲ್ಲಿ ಮಾತನಾಡಲಿದ್ದಾರೆ.
ಈ ಕೋಪ್ 26 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕೆಲ್ವಿಂಗ್ರೋವ್ ಆರ್ಟ್ ಗ್ಯಾಲರಿ ಮತ್ತು ಮ್ಯೂಸಿಯಂಗೆ ಭೇಟಿ ಕೊಡುವರು. ವೇಳೆ ಸರ್ಕಾರದ ವಿವಿಧ ವಿಭಾಗದ 120 ಮುಖ್ಯಸ್ಥರು ಇರುವರು. ಇದರಲ್ಲಿ ಪ್ರಿನ್ಸ್ ಚಾರ್ಲ್ಸ್ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಮಂಗಳವಾರ ಪ್ರಧಾನಿ ಮೋದಿಯವರ ಯುಕೆ ಭೇಟಿಯ ಕೊನೇ ದಿನವಾಗಿದ್ದು, ಅಂದು ಸ್ವಿಟ್ಜರ್ಲ್ಯಾಂಡ್, ಫಿನ್ಲ್ಯಾಂಡ್, ಇಸ್ರೇಲ್, ನೇಪಾಳ, ಮಲಾವಿ, ಉಕ್ರೇನ್, ಜಪಾನ್ ಮತ್ತು ಅರ್ಜಿಂಟೀನಾ ದೇಶಗಳೊಂದಿಗೆ ಸರಣಿ ದ್ವಿಪಕ್ಷೀಯ ಸಭೆ ನಡೆಸುವರು. ಅದಾದ ಬಳಿಕ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ರೊಂದಿಗೆ ಕೂಡ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಕನ್ನಡ ಕಸ್ತೂರಿ ರಾಜ್ಯೋತ್ಸವದಂದೇ ಗಾಯಕಿ, ಅಚ್ಚ ಕನ್ನಡತಿ ಕಸ್ತೂರಿ ಶಂಕರ್ ಹುಟ್ಟುಹಬ್ಬ!
Published On - 9:54 am, Mon, 1 November 21