ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ರೋಮ್‌ಗೆ ತೆರಳಿದ್ದಾರೆ. ಇಟಲಿಯ ರಾಜಧಾನಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆಯ ಕುರಿತು ಪ್ರಧಾನ ಮಂತ್ರಿ ಚರ್ಚೆ ನಡೆಸಲಿದ್ದಾರೆ. ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ದಾರೆ. ಕಳೆದ ವರ್ಷ ಕೊವಿಡ್ ಹಿನ್ನೆಲೆಯಲ್ಲಿ ಜಿ20 ಶೃಂಗಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು. ಈ ಬಾರಿ ನೇರವಾಗಿ ರೋಮ್‌ನಲ್ಲಿ ನಡೆಯುತ್ತಿರುವ ಜಿ20 ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಮಂತ್ರಿಯಾದ ನಂತರ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ರೋಮ್ ಪ್ರವಾಸ ಕೈಗೊಂಡಿದ್ದಾರೆ.
ಪಿಎಂ ನರೇಂದ್ರ ಮೋದಿ ಯಾವಾಗಲೂ ಗಾಂಧಿ ಮೌಲ್ಯಗಳನ್ನು ನಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಲು ಒತ್ತಿ ಹೇಳಿದ್ದಾರೆ. ಅವರು ತಮ್ಮ ಭಾಷಣಗಳಲ್ಲಿ ಮಹಾತ್ಮಾ ಗಾಂಧಿಯವರ ಬೋಧನೆಗಳನ್ನು ಉಲ್ಲೇಖಿಸುವುದನ್ನು ನಾವು ನೋಡಿದ್ದೇವೆ. ಮೋದಿ ಭಾರತೀಯರ ಎದುರು ಮಾತನಾಡುವಾಗ ಮಾತ್ರವಲ್ಲದೆ ವಿಶ್ವಸಂಸ್ಥೆಯಿಂದ ಅಥವಾ ಅವರ ಅಂತಾರಾಷ್ಟ್ರೀಯ ಭೇಟಿಗಳ ಸಮಯದಲ್ಲಿ ಜಾಗತಿಕ ಸಮುದಾಯವನ್ನು ಉದ್ದೇಶಿಸಿ ಮಾತನಾಡುವಾಗಲೂ ಸಹ ಗಾಂಧೀಜಿ ತತ್ವಗಳನ್ನು ಪ್ರಸ್ತಾಪಿಸುತ್ತಿರುತ್ತಾರೆ.
ಪ್ರಧಾನಿ ಮೋದಿ ಅವರು ವಿದೇಶಕ್ಕೆ ಭೇಟಿ ನೀಡಿದಾಗಲೆಲ್ಲಾ ಮಹಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಇದೀಗ ರೋಮ್‌ನಲ್ಲಿ ಕೂಡ ಮಹಾತ್ಮ ಗಾಂಧಿ ಪ್ರತಿಮೆಗೆ ಮೋದಿ ನಮನ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 2014ರಲ್ಲಿ ಪಿಎಂ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ವಾಷಿಂಗ್ಟನ್ ಡಿಸಿಯಲ್ಲಿ ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದ್ದರು. ಅದೇ ವರ್ಷ, ಪ್ರಧಾನಿ ಮೋದಿ ನವೆಂಬರ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದಾಗ ಬ್ರಿಸ್ಬೇನ್‌ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ಮಾರ್ಚ್ 2015ರಲ್ಲಿ ತಮ್ಮ ಮಾರಿಷಸ್ ಪ್ರವಾಸದ ಸಮಯದಲ್ಲಿ ಕೂಡ ಪ್ರಧಾನಿ ಮೋದಿ ಅವರು ಬಾಪುಗೆ ಪುಷ್ಪ ನಮನ ಸಲ್ಲಿಸಿದ್ದರು. ಏಪ್ರಿಲ್ 2015ರಲ್ಲಿ ಪ್ರಧಾನಿ ಮೋದಿ ಅವರು ಜರ್ಮನಿಯ ಹ್ಯಾನೋವರ್‌ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
ಅದೇ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಅವರು ತುರ್ಕಮೆನಿಸ್ತಾನದ ಅಶ್ಗಾಬಾತ್‌ನಲ್ಲಿರುವ ಬಾಗ್ಟ್ಯಾರ್ಲಿಕ್ ಕ್ರೀಡಾ ಸಂಕೀರ್ಣದಲ್ಲಿ ಬಾಪು ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಅದೇ ತಿಂಗಳಲ್ಲಿ ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ಬಾಪು ಅವರ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದ್ದರು.
ನವೆಂಬರ್ 2015ರಲ್ಲಿ ಪಿಎಂ ಮೋದಿ ಇಂಗ್ಲೆಂಡ್ಗೆ ಭೇಟಿ ನೀಡಿದಾಗ ಯುಕೆ ಸಂಸತ್ತಿನ ಹೊರಗೆ ಬಾಪು ಅವರ ಪ್ರತಿಮೆಗೆ ಗೌರವ ಸಲ್ಲಿಸಿದ್ದರು. ಅವರ ಜೊತೆ ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಕೂಡ ಇದ್ದರು.
ಮಹಾತ್ಮ ಗಾಂಧಿ ಅವರು ಭಾರತಕ್ಕೆ ಹಿಂದಿರುಗುವ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಹಲವಾರು ವರ್ಷಗಳನ್ನು ಕಳೆದಿದ್ದರು. ಹೀಗಾಗಿ, ಪ್ರಧಾನಿ ಮೋದಿ ಅವರು ಜುಲೈ 2016ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದಾಗ ಮಹಾತ್ಮ ಗಾಂಧಿಯವರೊಂದಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರು ಜೋಹಾನ್ಸ್‌ಬರ್ಗ್‌ನಲ್ಲಿ ಬಾಪುಗೆ ಶ್ರದ್ಧಾಂಜಲಿ ಸಲ್ಲಿಸಿದ್ದರು ಮತ್ತು ಮಹಾತ್ಮಾ ಗಾಂಧಿಯವರ ನಿವಾಸವಾಗಿದ್ದ ಫೀನಿಕ್ಸ್ ಸೆಟ್‌ಮೆಂಟ್‌ನಲ್ಲಿರುವ ಸರ್ವೋದಯಕ್ಕೆ ಗೌರವ ಸಲ್ಲಿಸಿದ್ದರು.
ಜುಲೈ 2016ರಲ್ಲಿ ಪ್ರಧಾನ ಮಂತ್ರಿಯವರ ಕೀನ್ಯಾ ಭೇಟಿಯ ಸಂದರ್ಭದಲ್ಲಿ ಅವರು ನೈರೋಬಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು ಮಹಾತ್ಮ ಗಾಂಧಿಯವರ ಬೋಧನೆಗಳನ್ನು ನೆನಪಿಸಿಕೊಂಡರು ಮತ್ತು ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದ್ದರು.
ಪ್ರಮುಖ ಜಾಗತಿಕ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಮುಖ ವೇದಿಕೆಯಾದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ರೋಮ್ ತಲುಪಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಅವರ ಆಹ್ವಾನದ ಮೇರೆಗೆ ಅಕ್ಟೋಬರ್ 31ರವರೆಗೆ ರೋಮ್ ಮತ್ತು ವ್ಯಾಟಿಕನ್ ಸಿಟಿಗೆ ಭೇಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದರು.
The ideals of the great Bapu reverberate globally.
In Rome, PM @narendramodi paid floral tributes at the bust of Mahatma Gandhi. pic.twitter.com/vDErIkc1Fj
— PMO India (@PMOIndia) October 29, 2021
ರೋಮ್‌ನಲ್ಲಿ ನಾನು 16ನೇ ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ. ಅಲ್ಲಿ ನಾನು ಇತರ ಜಿ20 ನಾಯಕರೊಂದಿಗೆ ಸಾಂಕ್ರಾಮಿಕ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯಿಂದ ಜಾಗತಿಕ, ಆರ್ಥಿಕ ಮತ್ತು ಆರೋಗ್ಯ ಚೇತರಿಕೆಯ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಜಗತ್ತಿನಾದ್ಯಂತ ಕೊವಿಡ್ ಸೋಂಕು ಹರಡಿದ ಬಳಿಕ ನಡೆಯುತ್ತಿರುವ ಮೊದಲ ಜಿ20 ಶೃಂಗಸಭೆ ಇದಾಗಿದೆ. ಇಂದು ಮಧ್ಯಾಹ್ನ 3.30ಕ್ಕೆ ರೋಮ್ನಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ. ಇಂದು ಸಂಜೆ ಇಟಲಿಯ ಪ್ರಧಾನಿ ಮಾರಿಯೋ ಡ್ರಾಘಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಜಿ20 ಶೃಂಗಸಭೆಗಾಗಿ ರೋಮ್‌ಗೆ ತೆರಳಿದ ನರೇಂದ್ರ ಮೋದಿ; ಪ್ರಧಾನಿಯಾದ ಬಳಿಕ ಇದು ಮೊದಲ ಭೇಟಿ