
ಮನಿಲಾ, ನವೆಂಬರ್ 17: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಮೋದಿ ಅವರನ್ನು “ಗಟ್ಟಿ ವ್ಯಕ್ತಿ ಮತ್ತು ಶ್ರೇಷ್ಠ ನಾಯಕ” ಎಂದು ಬಣ್ಣಿಸಿದ್ದಾರೆ. ಫಿಲಿಪೈನ್ಸ್‌ನಲ್ಲಿ ಇಂದು ನಡೆದ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ತಮ್ಮ ಪಕ್ಕದಲ್ಲಿ ನಿಂತಿದ್ದ ಪ್ರಧಾನಿ ಮೋದಿಯವರನ್ನು ತೋರಿಸಿ “ಇವರು ತುಂಬ ಗಟ್ಟಿ ವ್ಯಕ್ತಿ (ಟಫ್ ಮ್ಯಾನ್)” ಎಂದು ಹೇಳಿದ್ದಾರೆ. ತಮ್ಮ ಇನ್ನೊಂದು ಬದಿ ನಿಂತಿದ್ದ ಜಪಾನ್ ಪ್ರಧಾನಿ ಸನಾಯೆ ತಕೈಚಿ ಅವರತ್ತ ಬೆರಳು ತೋರಿಸಿದ ಟ್ರಂಪ್, “ಹಾಗೇ, ಇವರು ಮೋದಿಗಿಂತಲೂ ಹೆಚ್ಚು ಗಟ್ಟಿಗರಿರಬಹುದು” ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.
ಭಾರತ-ಅಮೆರಿಕ ಸಂಬಂಧಗಳು ಮತ್ತು ಜಾಗತಿಕ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ. ಮೋದಿ ಅವರು ಅತ್ಯಂತ ದೃಢನಿರ್ಧಾರದ ವ್ಯಕ್ತಿತ್ವ ಹೊಂದಿದ್ದು, ತಮ್ಮ ದೇಶದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಪ್ರಬಲ ನಾಯಕತ್ವವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
‘ಇವರೆಲ್ಲರೂ ನನ್ನ ಆತ್ಮೀಯ ಸ್ನೇಹಿತರು’:
ಕ್ವಾಡ್ ಪಾಲುದಾರರಾದ ಪ್ರಧಾನಿ ಮೋದಿ, ಜಪಾನ್ ಪ್ರಧಾನಿ ತಕೈಚಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ನಿಂತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, “ಈ ನಾಯಕರು ಮತ್ತು ಈ ದೇಶಗಳೊಂದಿಗೆ ಅಮೆರಿಕಕ್ಕೆ ಅತ್ಯುತ್ತಮ ಬಾಂಧವ್ಯವಿದೆ. ಆರಂಭದಿಂದಲೂ ನಾನು ಇವರೆಲ್ಲರೊಂದಿಗೆ ದೀರ್ಘಕಾಲದಿಂದ ಒಡನಾಟ ಹೊಂದಿದ್ದೇನೆ, ಇವರೆಲ್ಲರೂ ಅಸಾಧಾರಣ ವ್ಯಕ್ತಿಗಳು. ಇವರು ನನ್ನ ಸ್ನೇಹಿತರು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾ ಸೋಲಿಗೆ ಯುದ್ಧವೇ ಕಾರಣ ಎಂದ ಜೆಡಿ ವ್ಯಾನ್ಸ್; ಟ್ರಂಪ್ ಟೀಂ ಹೇಳಿಕೆಗೆ ಇರಾನ್ ವ್ಯಂಗ್ಯ
ನಂತರ ಶೃಂಗಸಭೆಯ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್, “ಪ್ರಧಾನಿ ಮೋದಿ ನನ್ನ ಆತ್ಮೀಯ ಸ್ನೇಹಿತ, ಒಬ್ಬ ಶ್ರೇಷ್ಠ ನಾಯಕ. ಇಡೀ ವಿಶ್ವದ ಎಲ್ಲರಿಂದಲೂ ಅತ್ಯಂತ ಗೌರವಿಸಲ್ಪಡುವ ವ್ಯಕ್ತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮನಿಲಾದಲ್ಲಿ ಮಹತ್ವದ ಶೃಂಗಸಭೆ:
ಫಿಲಿಪೈನ್ಸ್ ಈ ವರ್ಷ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆಯ (ASEAN) ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಿದ್ದು, ಇದರೊಂದಿಗೆ 2024ರ ನಂತರ ಮೊದಲ ಬಾರಿಗೆ ಕ್ವಾಡ್ ಶೃಂಗಸಭೆಗೂ ಆತಿಥ್ಯ ವಹಿಸಿದೆ. ಕ್ವಾಡ್ ಒಕ್ಕೂಟವು ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನು ಒಳಗೊಂಡಿದೆ. ಕ್ವಾಡ್ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಕ್ವಾಡ್ ಒಂದು ರಚನಾತ್ಮಕ ಮತ್ತು ವಿಶ್ವಾಸಾರ್ಹ ಪಾಲುದಾರಿಕೆ ಎಂದು ಬಣ್ಣಿಸಿದ್ದಾರೆ.
ಮನಿಲಾ ಮತ್ತು ಕ್ವಾಡ್ ರಾಷ್ಟ್ರಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಸ್ಮರಿಸಿದ ಪ್ರಧಾನಿ ಮೋದಿ, 2007ರಲ್ಲಿ ಮೊದಲ ಬಾರಿಗೆ 4 ದೇಶಗಳ ಅಧಿಕಾರಿಗಳು ಮನಿಲಾದಲ್ಲಿ ಸಭೆ ಸೇರಿದ್ದನ್ನು ನೆನಪಿಸಿಕೊಂಡರು. “10 ವರ್ಷಗಳ ನಂತರ, 2017ರಲ್ಲಿ ಇದೇ ನಗರದಲ್ಲಿ ನಾವು ನಮ್ಮ ಮಾತುಕತೆಯನ್ನು ಪುನರಾರಂಭಿಸಿದೆವು. ಇಂದು ಈ ಐತಿಹಾಸಿಕ ನಗರದಲ್ಲಿ ಮತ್ತೊಂದು ಕ್ವಾಡ್ ಸಭೆಯನ್ನು ನಡೆಸುತ್ತಿರುವುದು ಒಂದು ಮಹತ್ವದ ಮೈಲಿಗಲ್ಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮನಿಲಾದಲ್ಲಿ ಮೋದಿ-ಟ್ರಂಪ್ ಭೇಟಿ, ಚೀನಾಗೆ ಸಂದೇಶ ರವಾನಿಸಲಿದೆಯಾ ಕ್ವಾಡ್?
ಪ್ರಧಾನಿ ಮೋದಿ ಹೇಳಿದ್ದೇನು?:
ವಿಶ್ವಾಸಾರ್ಹ ಪೂರೈಕೆ ಸರಪಳಿಗಳು, ಹೊಸ ತಂತ್ರಜ್ಞಾನಗಳು ಮತ್ತು ವಿಪತ್ತು ನಿರ್ವಹಣೆಯವರೆಗೆ ಇಡೀ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಕ್ವಾಡ್ ಒಕ್ಕೂಟವು ವಿಶ್ವಾಸಾರ್ಹ ಪರಿಹಾರಗಳನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನಿಲಾ ಶೃಂಗಸಭೆಯ ವೇಳೆ ಹೇಳಿದ್ದಾರೆ. 4 ದೇಶಗಳ ವಿದೇಶಾಂಗ ಸಚಿವರು ಇದುವರೆಗೆ 5 ಬಾರಿ ಸಭೆ ಸೇರಿದ್ದಾರೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಇದು ಈ ಪಾಲುದಾರಿಕೆಯ ಬಗ್ಗೆ ನಮಗಿರುವ ರಾಜಕೀಯ ಇಚ್ಛಾಶಕ್ತಿ ಮತ್ತು ಹಂಚಿಕೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಕ್ವಾಡ್ ಒಕ್ಕೂಟವನ್ನು ಮುನ್ನಡೆಸುವಲ್ಲಿ ನಾಯಕರು ತೋರುತ್ತಿರುವ ನಾಯಕತ್ವ ಮತ್ತು ಬೆಂಬಲಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಭೆಯು ಕ್ವಾಡ್ ಸಹಕಾರದ ಮುಂದಿನ ಹಂತಕ್ಕೆ ದೃಢವಾದ ಗುರಿಗಳನ್ನು ನಿಗದಿಪಡಿಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ವಾಡ್ ಒಕ್ಕೂಟದ ನಾಯಕರನ್ನು ಭೇಟಿಯಾಗಿ ಗ್ರೂಪ್ ಫೋಟೋದಲ್ಲಿ ಪಾಲ್ಗೊಂಡರು. ಈ ಫೋಟೋದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಸನಾಯೆ ತಕೈಚಿ ಕೂಡ ಕಾಣಿಸಿಕೊಂಡರು. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನು ಒಳಗೊಂಡಿರುವ ಕ್ವಾಡ್ ಒಕ್ಕೂಟವು ಇಂಡೋ-ಪೆಸಿಫಿಕ್ ಪ್ರದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವತ್ತ ಗಮನಹರಿಸಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವ 4 ದೇಶಗಳ ಪ್ರಯತ್ನಗಳ ನಡುವೆಯೇ ನಡೆದ ಈ ಸಭೆಯು, ಡೊನಾಲ್ಡ್ ಟ್ರಂಪ್ ಅವರ ಪ್ರಸ್ತುತ ಅಧ್ಯಕ್ಷೀಯ ಅವಧಿಯ ಮೊದಲ ಕ್ವಾಡ್ ನಾಯಕರ ಮಟ್ಟದ ಸಭೆಯಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:52 pm, Tue, 17 November 26