ಯೋಗ ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಮಾಲ್ಡೀವ್ಸ್​​ನಲ್ಲಿ ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಯೋಗ ಕಾರ್ಯಕ್ರಮದ ಮೇಲೆ ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2022 | 8:45 PM

ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ 150 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದ ಕ್ರೀಡಾಂಗಣಕ್ಕೆ ಗುಂಪೊಂದು ನುಗ್ಗಿ ಅಲ್ಲಿರುವವರ ಮೇಲೆ ದಾಳಿ ಮಾಡಿದರು

ಯೋಗ ಇಸ್ಲಾಂ ಧರ್ಮಕ್ಕೆ ವಿರುದ್ಧ ಎಂದು ಮಾಲ್ಡೀವ್ಸ್​​ನಲ್ಲಿ ಭಾರತೀಯ ಹೈಕಮಿಷನ್ ಆಯೋಜಿಸಿದ್ದ ಯೋಗ ಕಾರ್ಯಕ್ರಮದ ಮೇಲೆ ದಾಳಿ
ಮಾಲ್ಡೀವ್ಸ್ ನಲ್ಲಿ ಯೋಗ
Follow us on

ಮಾಲೆ:  ಮಂಗಳವಾರ ಬೆಳಗ್ಗೆ ಮಾಲ್ಡೀವ್ಸ್ (Maldives) ರಾಜಧಾನಿ ಮಾಲೆಯಲ್ಲಿ (Male) ಭಾರತೀಯ ಹೈಕಮಿಷನ್ (Indian High Commission) ಆಯೋಜಿಸಿದ್ದ ಯೋಗ (Yoga) ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಜನರ ಗುಂಪನ್ನು ನಿಯಂತ್ರಿಸಲು ಮಾಲ್ಡೀವ್ಸ್‌ನ ಪೊಲೀಸರು ಅಶ್ರುವಾಯು ಮತ್ತು ಪೆಪ್ಪರ್ ಸ್ಪ್ರೇ ಬಳಸಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳು ಸೇರಿದಂತೆ 150 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದ ಕ್ರೀಡಾಂಗಣಕ್ಕೆ ಗುಂಪೊಂದು ನುಗ್ಗಿ ಅಲ್ಲಿರುವವರ ಮೇಲೆ ದಾಳಿ ಮಾಡಿದರು  ಎಂದು ಹೆಸರು ಹೇಳಲು ಇಚ್ಛಿಸದ ಸಂಘಟಕರಲ್ಲಿ ಒಬ್ಬರು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಇದಕ್ಕೂ ಮುನ್ನ ಪ್ರತಿಭಟನಾಕಾರರು ಯೋಗ ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಎಂಬ ಭಿತ್ತಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಸುಮಾರು ಅರ್ಧ ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಹಿಂದೂ ಮಹಾಸಾಗರದ ದ್ವೀಪಗಳ ಗುಂಪು ಆಗಿರುವ ಮಾಲ್ಡೀವ್ಸ್‌ನಲ್ಲಿ ಇಸ್ಲಾಂ ರಾಜ್ಯ ಧರ್ಮವಾಗಿದೆ.


ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಪ್ರದೇಶವನ್ನು ರಕ್ಷಿಸಲು ಪೆಪ್ಪರ್ ಸ್ಪ್ರೇ ಮತ್ತು ಅಶ್ರುವಾಯು ಬಳಸಿದರು ಎಂದು ಪೊಲೀಸ್ ಅಧೀಕ್ಷಕ ಫತ್ಮತ್ ನಶ್ವಾ ರಾಯಿಟರ್ಸ್ ಗೆ ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ನಶ್ವಾ ತಿಳಿಸಿದ್ದಾರೆ.

ಘಟನೆಯ ಕುರಿತು ಪೊಲೀಸ್ ತನಿಖೆ ಆರಂಭವಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಹೇಳಿದ್ದಾರೆ. “ಇದನ್ನು ಗಂಭೀರ ಕಾಳಜಿಯ ವಿಷಯವಾಗಿ ಪರಿಗಣಿಸಲಾಗುತ್ತಿದೆ ಮತ್ತು ತಪ್ಪಿತಸ್ಥರನ್ನು ಶೀಘ್ರವಾಗಿ ಕಾನೂನಿನ ಮುಂದೆ ತರಲಾಗುವುದು” ಎಂದು ಸೋಲಿಹ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:23 pm, Tue, 21 June 22