ಓದು ಬರಹ ಕಲಿಯುವ ಅದಮ್ಯ ತುಡಿತದ ಈ ನೇಪಾಳೀ ಮಹಿಳೆ ತನ್ನ ಮಗನೊಂದಿಗೆ ಶಾಲೆಗೆ ಹೋಗುತ್ತಾಳೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 19, 2022 | 12:20 PM

ಸುಮಾರು ಮೂರು ಕೋಟಿ ಜನಸಂಖ್ಯೆಯ ಹಿಮಾಲಯನ್ ರಾಷ್ಟ್ರದ ಸಾಕ್ಷರತಾ ಪ್ರಮಾಣ ಕೇವಲ ಶೇಕಡ 57 ಮಾತ್ರ. ‘ನಾನು ಓದು ಬರಹ ಕಲಿತು ಮನೆಯ ಖರ್ಚುವೆಚ್ಚಗಳನ್ನು ಅರ್ಥಮಾಡಿಕೊಳ್ಳುವಷ್ಟು, ಬರೆದಿಡುವಷ್ಟು ಜ್ಞಾನ ಸಂಪಾದಿಸಿದರೆ ಸಾಕು,’ ಅಂತ ಸುನರ್ ಹೇಳುತ್ತಾಳೆ.

ಓದು ಬರಹ ಕಲಿಯುವ ಅದಮ್ಯ ತುಡಿತದ ಈ ನೇಪಾಳೀ ಮಹಿಳೆ ತನ್ನ ಮಗನೊಂದಿಗೆ ಶಾಲೆಗೆ ಹೋಗುತ್ತಾಳೆ!
ಶಾಲೆಗೆ ಹೊರಟರು ಅಮ್ಮ ಮತ್ತು ಮಗ!
Follow us on

ನೇಪಾಳದ ನೈರುತ್ಯ ಭಾಗಕ್ಕಿರುವ ಪುನರ್ಬಾಸ್ (Punarbas) ಹೆಸರಿನ ಒಂದು ಚಿಕ್ಕ ಗ್ರಾಮದ ನಿವಾಸಿ ಮತ್ತು ಎರಡು ಮಕ್ಕಳ ತಾಯಿಯಾಗಿರುವ ಸುನರ್ (Sunar) ನಮ್ಮೆಲ್ಲರಿಗಿಂತ ಭಿನ್ನ ಮಾರಾಯ್ರೇ. ಯಾಕೆ ಗೊತ್ತಾ? ಆಕೆ ಈಗಿನ್ನೂ 7ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ಅದಕ್ಕೂ ಮಿಗಿಲಾದ ಹಾಗೂ ವಿಶಿಷ್ಟವಾದ ಸಂಗತಿಯೆಂದರೆ ಆಕೆ ತನ್ನ ಹಿರಿಮಗನ ಜೊತೆ ಶಾಲೆಗೆ (school) ಹೋಗುತ್ತಾಳೆ!

ಸುಮಾರು ಮೂರು ಕೋಟಿ ಜನಸಂಖ್ಯೆಯ ಹಿಮಾಲಯನ್ ರಾಷ್ಟ್ರದ ಸಾಕ್ಷರತಾ ಪ್ರಮಾಣ ಕೇವಲ ಶೇಕಡ 57 ಮಾತ್ರ. ‘ನಾನು ಓದು ಬರಹ ಕಲಿತು ಮನೆಯ ಖರ್ಚುವೆಚ್ಚಗಳನ್ನು ಅರ್ಥಮಾಡಿಕೊಳ್ಳುವಷ್ಟು, ಬರೆದಿಡುವಷ್ಟು ಜ್ಞಾನ ಸಂಪಾದಿಸಿದರೆ ಸಾಕು,’ ಅಂತ ಸುನರ್ ಹೇಳುತ್ತಾಳೆ.

‘ನಾನು ಓದನ್ನು ನಿಲ್ಲಿಸಬಾರದಿತ್ತು,’ ಎಂದು ರಾಯಿಟರ್ ಸುದ್ದಿಸಂಸ್ಥೆಯ ಸುದ್ದಿಗಾರನೊಂದಿಗೆ ಮಾತಾಡಿರುವ ಸುನರ್ ಹೇಳಿದ್ದಾಳೆ. ಅಂದಹಾಗೆ ಕೇವಲ 16 ನೇ ವಯಸ್ಸಿನಲ್ಲಿ ಸುನರ್ ತನ್ನ ಮೊದಲ ಮಗುವಿನ ತಾಯಿಯಾದಳು!

‘ಅಮ್ಮನ ಜೊತೆ ಶಾಲೆಗೆ ಹೋಗಲು ಬಹಳ ಖುಷಿಯಾಗುತ್ತದೆ,’ ಸುನರ್ ಓದುವ ಶಾಲೆಯಲ್ಲಿ 6ನೇ ತರಗತಿಯ ವಿದ್ಯಾರ್ಥಿಯಾಗಿರುವ ಆಕೆಯ ಹಿರಿಮಗ, 11-ವರ್ಷ-ವಯಸ್ಸಿನ ರೇಷಮ್ ಹೇಳುತ್ತಾನೆ. ಲಂಚ್ ಬ್ರೇಕ್ ನಲ್ಲಿ ತಾಯಿ-ಮಗ ಒಟ್ಟಿಗೆ ಊಟ ಮಾಡುತ್ತಾರೆ ಮತ್ತು ಮನೆಗೆ ಹತ್ತಿರದ ಕಂಪ್ಯೂಟರ್ ಇನ್ಸ್ಟಿಟ್ಯೂಟ್ಗೆ ಹೋಗುವಾಗ ಸುನರ್ ಸೈಕಲ್ ತುಳಿದರೆ ರೇಷಮ್ ಪಿಲಿಯನ್ ರೈಡರ್ ಆಗುತ್ತಾನೆ.

ಮಗನೊಂದಿಗೆ ಕಂಪ್ಯೂಟರ್ ಸೆಂಟರ್​ಗೆ ಹೊರಟ ಸುನರ್

‘ಶಾಲೆಗೆ ಹೋಗುವಾಗ ನಾವಿಬ್ಬರು ಬಹಳಷ್ಟು ವಿಷಯಗಳನ್ನು ಚರ್ಚಿಸುತ್ತೇವೆ ಮತ್ತು ಈ ಚರ್ಚೆಯಿದ ನಮ್ಮ ಕಲಿಕೆಯ ವ್ಯಾಪ್ತಿ ಹೆಚ್ಚುತ್ತಿದೆ,’ ಎಂದು ರೇಷಮ್ ಹೇಳಿದ್ದಾನೆ. ತಾನು ವೈದ್ಯನಾಗಬೇಕೆನ್ನುವುದು ತನ್ನಮ್ಮನ ಇಚ್ಛೆ ಎಂದು ಅವನು ಹೇಳುತ್ತಾನೆ.

ಇವರಿಬ್ಬರು ಶಿಕ್ಷಣ ಪಡೆಯುತ್ತಿರುವ ಜೀವನ ಜ್ಯೋತಿ ಶಾಲೆಯ ಪ್ರಿನ್ಸಿಪಾಲ್ ಭರತ್ ಬಾಸ್ನೆಟ್ ಹೇಳುವ ಪ್ರಕಾರ ಸುನಾರ್ ಓದಿನಲ್ಲಿ ಬಹಳ ದಡ್ಡಿಯಾಗಿದ್ದರೂ ಕಲಿಯುವ ತುಡಿತ ಆಕೆಯಲ್ಲಿ ಅಪಾರವಾಗಿದೆ.

ಎರಡು ಕೋಣೆಗಳ ಟಿನ್ ಶೆಡ್ಡಿನ ತನ್ನ ಮನೆಯಲ್ಲಿ ಸುನರ್ ದಿನಚರಿ ಸೂರ್ಯೋದಯದೊಂದಿಗೆ ಆರಂಭವಾಗುತ್ತದೆ. ತನ್ನಿಬ್ಬರು ಮಕ್ಕಳು-ರೇಷಮ್ ಮತ್ತು ಅರ್ಜುನ್, ಅತ್ತೆ ಮತ್ತು ತಮ್ಮ ಆಡು-ಮೇಕೆಗಳೊಂದಿಗೆ ಆಕೆ ಇಲ್ಲಿ ವಾಸಿಸುತ್ತಾಳೆ. ಅವರ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ಮನೆಗೆ ಹತ್ತಿರದ ಸಾರ್ವಜನಿಕ ಸ್ಥಳದಲ್ಲೇ ಅವರೆಲ್ಲ ನಿಸರ್ಗದ ಕರೆಯ ಕಾರ್ಯಗಳನ್ನು ತೀರಿಸಿಕೊಳ್ಳುತ್ತಾರೆ.

ಸುನರ್ ಗಂಡ ಭಾರತದ ಚೆನೈಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ ಮತ್ತು ಮನೆಖರ್ಚಿಗೆ ಪ್ರತಿತಿಂಗಳು ಹಣ ಕಳಿಸುತ್ತಾನೆ. ಸುನರ್ ಕುಟುಂಬ ದಲಿತ ಸಮುದಾಯಕ್ಕೆ ಸೇರಿದ್ದು ಮೊದಲೆಲ್ಲ ಅವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿತ್ತು.

‘ಆದರೆ ನನ್ನ ಕುಟುಂಬದೊಂದಿಗೆ ಯಾರೂ ತಾರತಮ್ಯ ಮಾಡುವುದಿಲ್ಲ,’ ಎಂದು ಸುನರ್ ಹೇಳುತ್ತಾಳೆ.

ಬೆಳಗಿನ ಉಪಹಾರವಾಗಿ ಅನ್ನ ಮತ್ತು ಬೇಳೆಯ ಸಾಂಬಾರು ತಿಂದು ಸುನರ್ ಯೂನಿಫಾರ್ಮ್ ಧರಿಸಿ ಶಾಲೆಗೆ ರೆಡಿಯಾಗುತ್ತಾಳೆ. ಮನೆಯಿಂದ 20 ನಿಮಿಷ ನಡೆದರೆ ಆಕೆಯ ಶಾಲೆ ಸಿಗುತ್ತದೆ. ಶಾಲೆ ಕೂಡ ಟಿನ್ ಶೆಡ್ ಆಗಿದ್ದು ಅದರ ಸುತ್ತ ಹಸಿರು ಮರಗಳಿವೆ.

‘ಸುನರ್ ಕ್ಲಾಸ್ ಮೇಟ್ ಆಗಿರುವುದು ಮೋಜಿನ ಸಂಗತಿ,’ ಎಂದು ಆಕೆಯ ಸಹಪಾಠಿಯಲ್ಲೊಬ್ಬನಾಗಿರುವ 14-ವರ್ಷ-ವಯಸ್ಸಿನ ಬಿಜಯ್ ಬಿಕೆ ಹೇಳುತ್ತಾನೆ.
‘ದೀದಿ ಬಹಳ ಸ್ನೇಹ ಸ್ವಭಾವದವಳಾಗಿದ್ದಾಳೆ, ಓದಿನಲ್ಲಿ ನಾನು ಆಕೆಗೆ ಸಹಾಯ ಮಾಡುತ್ತೇನೆ, ಆಕೆಯೂ ನನಗೆ ನೆರವಾಗುತ್ತಾಳೆ,’ ಎಂದು ಅವನು ಹೇಳುತ್ತಾನೆ.

ಶಿಕ್ಷಿತಳಾಗಬೇಕೆನ್ನುವ ಸುನರ್ ಳ ಅದಮ್ಯ ಆಸೆ ನೇಪಾಳದ ಸಹಸ್ರಾರು ಮಹಿಳೆಯರಿಗೆ ಪ್ರೇರೇಪಣೆಯಾಗಲಿದೆ. ಈ ಚಿಕ್ಕ ರಾಷ್ಟ್ರದಲ್ಲಿ ಈಗಲೂ ಕಾನೂನುಬಾಹಿರ ಬಾಲ್ಯ ವಿವಾಹ, ಮಹಿಳೆಯರ ಬಗ್ಗೆ ತಾರತಮ್ಯ ತಾಂಡವಾಡುತ್ತಿವೆ.

‘ಸುನರ್ ಮಾಡುತ್ತಿರುವುದು ಇತರ ಮಹಿಳೆಯರಿಗೆ ಪ್ರೇರಣೆಯಾಗಿದೆ, ಬೇರೆಯವರು ಆಕೆಯನ್ನು ಅನುಸರಿಸಬೇಕು,’ ಎಂದು 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸುನರ್ ನೆರೆಮನೆಯ ಶೃತಿ ಸುನರ್ ಹೇಳುತ್ತಾಳೆ. ಬಡತನದಿಂದಾಗಿ ಅನೇಕ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ.

ಶಾಲೆಗಳಲ್ಲಿ ಬಾಲಕಿಯರಿಗೆ ಮೂಲಭೂತ ಸೌಕರ್ಯವಾದ ಶೌಚಾಲಯಗಳಿಲ್ಲ. ಹರೆಯಕ್ಕೆ ಕಾಲಿಡುವ ವಿದ್ಯಾರ್ಥಿನಿಯರು ಮುಟ್ಟಿನ ದಿನಗಳ ಅವಧಿಯಲ್ಲಿ ಎದುರಾಗುವ ಸಮಸ್ಯೆಗಳಿಂದ ಓದು ಅರ್ಧಕ್ಕೆ ನಿಲ್ಲಿಸಿಬಿಡುತ್ತಾರೆ ಎಂದು ಹೇಳಲಾಗಿದೆ.

ಆದರೆ, ಭಾರತದ ನಗರವೊಂದರಲ್ಲಿ ಮನೆಗೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದ ಸುನರ್ ಓದುವ ಹಂಬಲ ಅದುಮಿಡಲಾಗದೆ ತನ್ನ ದೇಶಕ್ಕೆ ವಾಪಸ್ಸಾಗಿ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾಳೆ. ಕನಿಷ್ಟ 12 ನೇ ತರಗತಿಯವರೆಗೆ ಓದಬೇಕೆನ್ನುವುದು ಆಕೆಯ ಇಚ್ಛೆಯಾಗಿದೆ.

‘ಸದ್ಯಕ್ಕೆ ಇದೇ ನನ್ನ ಯೋಚನೆಯಾಗಿದೆ, ಮುಂದೇನಾಗುತ್ತೋ ನಾನರಿಯೆ,’ ಎಂದು ಸುನರ್ ಮುಗಳ್ನಗುತ್ತಾ ಹೇಳುತ್ತಾಳೆ.