ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ ಮಾತುಕತೆಗೆ ಸಿದ್ಧ: ಚಿಕಾಗೋದಲ್ಲಿ ರಾಹುಲ್ ಗಾಂಧಿ

ಚಿಕಾಗೋದಲ್ಲಿ ರಾಹುಲ್ ಗಾಂಧಿ ಪಾಕಿಸ್ತಾನಕ್ಕೆ ಭಯೋತ್ಪಾದನೆ ನಿಲ್ಲಿಸುವಂತೆ ಸ್ಪಷ್ಟ ಸಂದೇಶ ನೀಡಿದರು, ಆಗ ಮಾತ್ರ ಮಾತುಕತೆ ಸಾಧ್ಯ ಎಂದರು. ಭಾರತದ ವಿದೇಶಾಂಗ ನೀತಿ ಇಸ್ರೇಲ್, ಗಾಜಾ, ಅಮೆರಿಕ-ಇರಾನ್ ಸಂಬಂಧಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿ ಆಧರಿಸಿರಬೇಕು ಎಂದರು. ಚುನಾವಣಾ ವ್ಯವಸ್ಥೆಯಲ್ಲಿ ಲೋಪಗಳಿದ್ದರೂ, ಕಾಂಗ್ರೆಸ್ ಚುನಾವಣೆ ಬಹಿಷ್ಕರಿಸದೆ ಹೋರಾಟ ಮುಂದುವರಿಸಲಿದೆ ಎಂದು ಪ್ರತಿಪಾದಿಸಿದರು. ಭಾರತ ಜಾಗತಿಕವಾಗಿ ತನ್ನ ಧ್ವನಿ ಪರಿಣಾಮಕಾರಿಯಾಗಿ ಕೇಳಿಸಬೇಕು.

ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ ಮಾತುಕತೆಗೆ ಸಿದ್ಧ: ಚಿಕಾಗೋದಲ್ಲಿ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Image Credit source: PTI

Updated on: Nov 20, 2026 | 9:15 AM

ಚಿಕಾಗೋ, ನವೆಂಬರ್ 20: ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತ್ರ ಆ ದೇಶದೊಂದಿಗೆ ಮಾತುಕತೆ ನಡೆಸಲು ಸಾಧ್ಯ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪಾಕಿಸ್ತಾನಿ ವಿದ್ಯಾರ್ಥಿಯೊಬ್ಬರು ಭಾರತ–ಪಾಕಿಸ್ತಾನ ಸಂಬಂಧಗಳ ಬಗ್ಗೆ ಪ್ರಶ್ನೆ ಕೇಳಿದರು. ಉಭಯ ದೇಶಗಳು ಪರಸ್ಪರ ಆರೋಪಗಳನ್ನು ಬದಿಗಿಟ್ಟು, ಸಾಮಾನ್ಯ ಹಿತಾಸಕ್ತಿಗಳಿಗಾಗಿ ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ ಎಂದು ಅವರು ಕೇಳಿದರು.

ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ಅವಕಾಶವಿದೆ. ಆದರೆ, ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. ಮುಗ್ಧ ಜನರು ಭಯೋತ್ಪಾದಕ ದಾಳಿಗಳಿಗೆ ಬಲಿಯಾಗುತ್ತಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸಿದರೆ ಮಾತುಕತೆ ಆರಂಭವಾಗಬಹುದು ಎಂದು ಅಭಿಪ್ರಾಯಪಟ್ಟರು.

Loading...

ಇಸ್ರೇಲ್ ಜೊತೆ ಉತ್ತಮ ಸಂಬಂಧ, ಗಾಜಾ ವಿಚಾರದಲ್ಲಿ ವಿರೋಧ

ಭಾರತದ ವಿದೇಶಾಂಗ ನೀತಿಯ ಬಗ್ಗೆಯೂ ರಾಹುಲ್ ಗಾಂಧಿ ಮಾತನಾಡಿದರು. ಇಸ್ರೇಲ್ ಜೊತೆ ಭಾರತ ಉತ್ತಮ ಸಂಬಂಧ ಹೊಂದಿರಬೇಕು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸಹಕಾರ ಮುಂದುವರಿಯಬೇಕು ಎಂಬುದು ತಮ್ಮ ನಿಲುವು ಎಂದರು. ಆದರೆ, ಇದಕ್ಕಾಗಿ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಬಗ್ಗೆ ಭಾರತ ಮೌನವಾಗಿರಬಾರದು ಎಂದು ಹೇಳಿದರು.

2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿಯನ್ನು ಖಂಡಿಸಿದ ಅವರು, ಮುಗ್ಧ ಜನರ ಹತ್ಯೆಯನ್ನೂ ವಿರೋಧಿಸಿದರು. ಅದೇ ರೀತಿ ಗಾಜಾದಲ್ಲಿ ಇಸ್ರೇಲ್ ನಡೆಸಿದ ದಾಳಿಗಳನ್ನೂ ಖಂಡಿಸಿದರು. ಒಂದು ತಪ್ಪು ಮತ್ತೊಂದು ತಪ್ಪನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:

ರಾಜೀವ್-ಸೋನಿಯಾ ಮೊದಲು ಭೇಟಿಯಾಗಿದ್ದ ಜಾಗಕ್ಕೆ ಗೆಳತಿಯನ್ನು ಕರೆದುಕೊಂಡು ಹೋಗಿದ್ರಂತೆ ರಾಹುಲ್

 

ಭಾರತದ ವಿದೇಶಾಂಗ ನೀತಿ ಇತರ ದೇಶಗಳ ಒತ್ತಡಕ್ಕೆ ಒಳಗಾಗದೆ, ಭಾರತದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಆಧರಿಸಿರಬೇಕು. ಇಸ್ರೇಲ್, ಅಮೆರಿಕ, ರಷ್ಯಾ ಅಥವಾ ಚೀನಾ ಸೇರಿದಂತೆ ಯಾವುದೇ ದೇಶವು ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ನಿಲುವು ವ್ಯಕ್ತಪಡಿಸುವುದನ್ನು ತಡೆಯಬಾರದು ಎಂದು ಅಭಿಪ್ರಾಯಪಟ್ಟರು.

ಅಮೆರಿಕ–ಇರಾನ್ ವಿಚಾರದಲ್ಲಿ ಭಾರತದ ಪಾತ್ರದ ಬಗ್ಗೆ ಪ್ರಶ್ನೆ

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹಾಗೂ ಮಾತುಕತೆಗಳ ವಿಚಾರದಲ್ಲೂ ರಾಹುಲ್ ಗಾಂಧಿ ಭಾರತದ ಪಾತ್ರದ ಬಗ್ಗೆ ಮಾತನಾಡಿದರು. ಪಾಕಿಸ್ತಾನವು ಇರಾನ್ ಮತ್ತು ಅಮೆರಿಕದ ನಡುವೆ ಮಾತುಕತೆ ನಡೆಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವಾಗ ಭಾರತ ಕೇವಲ ನೋಡುತ್ತಾ ಕುಳಿತಿರುವುದು ಆಶ್ಚರ್ಯ ತಂದಿದೆ ಎಂದರು.

ಸ್ವಾತಂತ್ರ್ಯಾನಂತರ ಭಾರತಕ್ಕೆ ತನ್ನದೇ ಆದ ವಿದೇಶಾಂಗ ನೀತಿ ಮತ್ತು ಜಾಗತಿಕ ರಾಜತಾಂತ್ರಿಕ ದೃಷ್ಟಿಕೋನವಿತ್ತು. ಭಾರತದ ಗಾತ್ರ, ಇತಿಹಾಸ ಮತ್ತು ವಿವಿಧ ದೇಶಗಳೊಂದಿಗಿನ ಸಂಬಂಧಗಳನ್ನು ಗಮನಿಸಿದರೆ ಜಾಗತಿಕ ವಿಚಾರಗಳಲ್ಲಿ ಭಾರತ ಸಕ್ರಿಯ ಪಾತ್ರ ವಹಿಸಬೇಕು. ಆದರೆ, ಈಗ ಭಾರತ ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿಯನ್ನು ಪರಿಣಾಮಕಾರಿಯಾಗಿ ಕೇಳಿಸುತ್ತಿಲ್ಲ ಎಂದು ಟೀಕಿಸಿದರು.

ಚುನಾವಣೆ ಬಹಿಷ್ಕರಿಸುವುದಿಲ್ಲ ಎಂದ ರಾಹುಲ್

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ವಿರೋಧ ಪಕ್ಷಗಳ ಆರೋಪಗಳ ನಡುವೆಯೂ ಚುನಾವಣೆಗಳನ್ನು ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು. ಚುನಾವಣೆಗಳಲ್ಲಿ ಸ್ಪರ್ಧಿಸದೇ ಇರುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯೇ ದುರ್ಬಲವಾಗುತ್ತದೆ. ದೇಶಾದ್ಯಂತ ಪಕ್ಷಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲದಂತಾಗುತ್ತದೆ ಎಂದು ಹೇಳಿದರು. ಆದ್ದರಿಂದ ಕಾಂಗ್ರೆಸ್ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ಮುಂದುವರಿಸಲಿದೆ. ಚುನಾವಣಾ ವ್ಯವಸ್ಥೆಯಲ್ಲಿನ ಲೋಪಗಳನ್ನು ಜನರ ಮುಂದೆ ಬಹಿರಂಗಪಡಿಸುವುದೇ ಪಕ್ಷದ ಉದ್ದೇಶ ಎಂದು ತಿಳಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿಯೇ ಕೆಲವು ಅಕ್ರಮಗಳ ಬಗ್ಗೆ ಅನುಮಾನವಿತ್ತು. ಆದರೆ, ಆಗ ಸಾಕಷ್ಟು ಪುರಾವೆಗಳಿಲ್ಲದ ಕಾರಣ ಮಾತನಾಡಲು ಸಾಧ್ಯವಾಗಿರಲಿಲ್ಲ ಎಂದು ಅವರು ಹೇಳಿದರು. ಭಾರತೀಯ ಪ್ರಜಾಪ್ರಭುತ್ವ ಪವಿತ್ರವಾಗಿದ್ದು, ಅದರಲ್ಲಿ ಸಮಸ್ಯೆಗಳಿವೆ ಎಂದು ಹೇಳಲು ಬಲವಾದ ಪುರಾವೆಗಳು ಬೇಕು ಎಂದರು.

ಚುನಾವಣಾ ವ್ಯವಸ್ಥೆಯ ಬಗ್ಗೆ ತಮ್ಮ ಆರೋಪಗಳನ್ನು ಮುಂದುವರಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷಗಳು ಚುನಾವಣೆಯಿಂದ ಹಿಂದೆ ಸರಿಯದೆ ಪ್ರಜಾಪ್ರಭುತ್ವದ ಪ್ರಕ್ರಿಯೆಯೊಳಗೇ ಉಳಿದು ಹೋರಾಟ ನಡೆಸಬೇಕು ಎಂದು ಪ್ರತಿಪಾದಿಸಿದರು. ಚಿಕಾಗೋ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ರಾಬರ್ಟ್ ಪೇಪ್ ಅವರೊಂದಿಗೆ ನಡೆದ ಸಂವಾದದಲ್ಲಿ ರಾಹುಲ್ ಗಾಂಧಿ ಈ ವಿಚಾರಗಳನ್ನು ಹಂಚಿಕೊಂಡರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:14 am, Fri, 20 November 26

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us