Sirisha Bandla: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ: ನಭಕ್ಕೆ ನೆಗೆದ ರಿಚರ್ಡ್​ ಬ್ರಾನ್​ಸನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 11, 2021 | 10:00 PM

ಅಮೆರಿಕದ ಶ್ರೀಮಂತ ಉದ್ಯಮಿ ರಿಚರ್ಡ್​ ಬ್ರಾನ್​ಸನ್ ಮತ್ತು ವರ್ಜಿನ್ ಗಾಲಕ್ಟಿಕ್ ಹೋಲ್ಡಿಂಗ್ಸ್​ ಕಂಪನಿಯ ಐವರು ಉದ್ಯೋಗಿಗಳಿದ್ದ ಬಾಹ್ಯಾಕಾಶ ನೌಕೆ ಭಾನುವಾರ ನಭಕ್ಕೆ ನೆಗೆಯಿತು. ಈ ಬಾಹ್ಯಾಕಾಶ ನೌಕೆಯಲ್ಲಿ ಭಾರತ ಮೂಲದ ಸಿರಿಶಾ ಬಾಂದ್ಲಾ ಸಹ ಇದ್ದಾರೆ.

Sirisha Bandla: ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಮುನ್ನುಡಿ: ನಭಕ್ಕೆ ನೆಗೆದ ರಿಚರ್ಡ್​ ಬ್ರಾನ್​ಸನ್
ಅಮೆರಿಕದ ನ್ಯೂ ಮೆಕ್ಸಿಕೊ ನಗರದಿಂದ ನಭಕ್ಕೆ ನೆಗೆದ ರಿಚರ್ಡ್​ ಬ್ರಾನ್​ಸನ್ ಇದ್ದ ಬಾಹ್ಯಾಕಾಶ ನೌಕೆ
Follow us on

ವಾಷಿಂಗ್​ಟನ್: ಅಮೆರಿಕದ ಶ್ರೀಮಂತ ಉದ್ಯಮಿ ರಿಚರ್ಡ್​ ಬ್ರಾನ್​ಸನ್ ಮತ್ತು ವರ್ಜಿನ್ ಗಾಲಕ್ಟಿಕ್ ಹೋಲ್ಡಿಂಗ್ಸ್​ ಕಂಪನಿಯ ಐವರು ಉದ್ಯೋಗಿಗಳಿದ್ದ ಬಾಹ್ಯಾಕಾಶ ನೌಕೆ ಭಾನುವಾರ ನಭಕ್ಕೆ ನೆಗೆಯಿತು. 2004ರಲ್ಲಿ ಕಂಪನಿಯನ್ನು ಆರಂಭಿಸಿದ್ದ ರಿಚರ್ಡ್​ ಬ್ರಾನ್​ಸನ್ ಮುಂದಿನ ವರ್ಷದಿಂದ ಬಾಹ್ಯಾಕಾಶಕ್ಕೆ ಜನರನ್ನು ಟ್ರಿಪ್​ ಕರೆದೊಯ್ಯುವ ಯೋಜನೆ ರೂಪಿಸಿದ್ದಾರೆ.

ಈ ಬಾಹ್ಯಾಕಾಶ ನೌಕೆಯಲ್ಲಿ ಭಾರತ ಮೂಲದ ಸಿರಿಶಾ ಬಾಂದ್ಲಾ ಸಹ ಇದ್ದಾರೆ. ವರ್ಜಿನ್ ಕಂಪನಿಯ ಸರ್ಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷೆ. ಸಂಶೋಧಕರ ಅನುಭವದ ಬಗ್ಗೆ ಈ ಯಾನದಲ್ಲಿ ಇವರು ಗಮನ ಹರಿಸಲಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ ಪ್ರಯಣಿತ್ತಿರುವ ಭಾರತ ಮೂಲದ ಎರಡನೇ ಮಹಿಳೆ ಎನಿಸಿದ್ದಾರೆ.

ನ್ಯೂ ಮೆಕ್ಸಿಕೊ ನಗರದಲ್ಲಿ ಭಾನುವಾರ ಮೋಡಗಳಿಲ್ಲದ ಶುಭ್ರ ಆಗಸಕ್ಕೆ ರಿಚರ್ಡ್​ ಬ್ರಾನ್​ಸನ್ ಮತ್ತು ಉದ್ಯೋಗಿಗಳಿದ್ದ ಬಾಹ್ಯಾಕಾಶ ನೌಕೆ ಟೇಕಾಫ್​ ಆಯಿತು. ಈ ಸಂಸ್ಥೆಯು ರೂಪಿಸಿರುವ ವಿಎಸ್​ಎಸ್​ ಯುನಿಟಿ ಬಾಹ್ಯಾಕಾಶ ನೌಕೆಯು ಭೂಮಿಯಿಂದ 45,000 ಅಡಿಗಳಷ್ಟು ಎತ್ತರದವರೆಗೆ ವಿಮಾನದಲ್ಲಿ ಏರುತ್ತದೆ. ಅಲ್ಲಿ ವಿಮಾನದಿಂದ ಬೇರ್ಪಡುವ ಬಾಹ್ಯಾಕಾಶ ನೌಕೆಯು ರಾಕೆಂಟ್​ ಎಂಜಿನ್​ನ ಶಕ್ತಿಯಿಂದ 2,90,000 ಅಡಿ (89 ಕಿಮೀ) ಎತ್ತರಕ್ಕೆ ಹೋಗಲಿದೆ.

ಬಾಹ್ಯಾಕಾಶ ಯಾನ ಕ್ಷೇತ್ರದಲ್ಲಿ ವರ್ಜಿನ್ ಕಂಪನಿಯ ರಿಚರ್ಡ್​ ಬ್ರಾನ್​ಸನ್ ಮತ್ತು ಅಮೆಜಾನ್ ಕಂಪನಿಯ ಜೆಫ್ ಬಿಜೊಸ್ ನಡುವೆ ಪೈಪೋಟಿಯಿದೆ. ಅಮೆಜಾನ್ ಸಂಸ್ಥೆಯ ಜೆಫ್ ಬಿಜೊಸ್, ತಮ್ಮ ಬ್ಲೂ ಒರಿಜಿನ್ ಸಂಸ್ಥೆಯು ಅಭಿವೃದ್ಧಿಪಡಿಸಿರುವ ರಾಕೆಟ್​ನಲ್ಲಿ ಮುಂದಿನ ವಾರ ಬಾಹ್ಯಾಕಾಶ ಯಾತ್ರೆ ಮಾಡಲಿದ್ದಾರೆ. ವಿಶ್ವದ ಅತಿಶ್ರೀಮಂತ ಪ್ರವಾಸಿಗರಿಗೆ ಬಾಹ್ಯಾಕಾಶ ಪ್ರವಾಸೋದ್ಯಮದ ಅವಕಾಶ ಕಲ್ಪಿಸುವ ಮೂಲಕ ದೊಡ್ಡಮಟ್ಟದ ಹಣಗಳಿಸುವುದು ಈ ಕಂಪನಿಗಳ ಉದ್ದೇಶವಾಗಿದೆ.

70 ವರ್ಷದ ಬ್ರಾನ್​ಸನ್ ಮತ್ತು ಅವರ ಸಹ ಪ್ರಯಾಣಿಕರು ಬಾಹ್ಯಾಕಾಶದಲ್ಲಿ ನಾಲ್ಕು ನಿಮಿಷಗಳ ತೂಕರಹಿತ ಸ್ಥಿತಿ ಅನುಭವಿಸಲಿದ್ದಾರೆ. ಉದ್ದೇಶಿತ ಪ್ರಯಾಣದ ತುತ್ತತುದಿ ತಲುಪಿದ ನಂತರ ಯೂನಿಟಿ ಬಾಹ್ಯಾಕಾಶ ನೌಕೆಯು ವಾಪಸ್ ತನ್ನ ನೆಲೆಗೆ ಹಿಂದಿರುಗಲಿದೆ.

ನೌಕೆಯಲ್ಲಿ ಯಾರೆಲ್ಲಾ ಇದ್ದಾರೆ?
ಡೇವ್ ಮ್ಯಾಕ್: ಇವರೇ ಚೀಫ್ ಪೈಲಟ್. ವರ್ಜಿನ್ ಗ್ಯಾಲಕ್ಟಿಕ್ ಕಂಪನಿಯ ಆರಂಭದ ನೌಕರರಲ್ಲಿ ಒಬ್ಬರು. ಬ್ರಿಟನ್​ನ ರಾಯಲ್ ಏರ್​ಫೋರ್ಸ್​ನ ಮಾಜಿ ಟೆಸ್ಟ್​ ಪೈಲಟ್ ಮತ್ತು ರಿಚರ್ಡ್​ ಬ್ರಾನ್​ಸನ್ ಬೆಂಬಲವಿರುವ ವರ್ಜಿನ್ ಅಟ್ಲಾಂಟಿಕ್ ಏರ್​ವೇಸ್ ಕಂಪನಿಯಲ್ಲಿ ಬೋಯಿಂಗ್ 747 ಪೈಲಟ್​ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಉತ್ತರ ಸ್ಕಾಟ್​ಲೆಂಡ್​ನ ಹಳ್ಳಿಯೊಂದರಲ್ಲಿ ಜನಿಸಿದ ಡೇವ್​ ಮ್ಯಾಕ್ ಬಾಹ್ಯಾಕಾಶಕ್ಕೆ ಹೋಗುತ್ತಿರುವ ಮೊದಲು ಸ್ಕಾಟ್​ಲೆಂಡ್​ ಪ್ರಜೆಯೂ ಹೌದು.

ಮೈಕೆಲ್ ಸೂಚ್: ಅಮೆರಿಕ ವಾಯಪಡೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್. 10,000 ಗಂಟೆಗೂ ಹೆಚ್ಚು ಹಾರಾಟ ಅನುಭವವಿದೆ. ಹತ್ತಾರು ವಿಧದ ವಿಮಾನಗಳ ಹಾರಾಟದ ಅನುಭವವಿದೆ. 2013ರಲ್ಲಿ ವರ್ಜಿನ್ ಕಂಪನಿ ಸೇರಿದರು. 2019ರಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದರು.

ಸಿರಿಶಾ ಬಾಂದ್ಲಾ

ಸಿರಿಶಾ ಬಾಂದ್ಲಾ: ವರ್ಜಿನ್ ಕಂಪನಿಯ ಸರ್ಕಾರಿ ವ್ಯವಹಾರಗಳ ವಿಭಾಗದ ಉಪಾಧ್ಯಕ್ಷೆ. ಸಂಶೋಧಕರ ಅನುಭವದ ಬಗ್ಗೆ ಈ ಯಾನದಲ್ಲಿ ಇವರು ಗಮನ ಹರಿಸಲಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಾಂದ್ಲಾ ಬಾಹ್ಯಾಕಾಶಕ್ಕೆ ಪ್ರಯಣಿತ್ತಿರುವ ಭಾರತ ಮೂಲದ ಎರಡನೇ ಮಹಿಳೆ.

ಕೊಲಿನ್ ಬೆನೆಟ್: ವರ್ಜಿನ್ ಗೆಲಕ್ಟಿಕ್ ಕಂಪನಿಯ ಎಂಜಿನಿಯರ್. ಪ್ರಾಯೋಗಿಕ ಬಾಹ್ಯಾಕಾಶ ಯಾನದಲ್ಲಿ ಕ್ಯಾಬಿನ್ ಪ್ರಕ್ರಿಯೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ. ವರ್ಜಿನ್ ಗೆಲಕ್ಟಿಕ್ ಕಂಪನಿಯ ಕ್ಯಾಲಿಫೋರ್ನಿಯಾ ಘಟಕದಲ್ಲಿ ಆಪರೇಷನ್ಸ್​ ಎಂಜಿನಿಯರ್​ ಆಗಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಬೆತ್ ಮೊಸೆಸ್: ವರ್ಜಿನ್ ಕಂಪನಿಯಲ್ಲಿ ಬಾಹ್ಯಾಕಾಶ ಯಾನಿಗಳ ಮುಖ್ಯತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಬೆತ್ ಮೊಸೆಸ್ ಅವರಿಗೆ ಇದು 2ನೇ ಬಾಹ್ಯಾಕಾಶ ಯಾನ. ಫೆಬ್ರುವರಿ 2019ರಲ್ಲಿ ಬೆತ್ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹೋಗಿದ್ದರು. ಈ ಯಾನದಲ್ಲಿ ಸಿಬ್ಬಂದಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಬೆತ್ ಈ ಮೊದಲು ನಾಸಾದಲ್ಲಿ 24 ವರ್ಷ ಕೆಲಸ ಮಾಡಿದ್ದರು. ಇವರ ಪತಿ ಮೈಕ್ ಮೊಸೆಸ್​ ವರ್ಜಿನ್ ಗ್ಯಾಲಕ್ಟಿಕ್​ ಸಂಸ್ಥೆಯ ಬಾಹ್ಯಾಕಾಶ ಯೋಜನೆಗಳು ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾಗಿದ್ದಾರೆ.

(Richard Bransons Virgin Galactic takes off with Sirisha Bandla for high-altitude launch into space)

ಇದನ್ನೂ ಓದಿ: Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ

ಇದನ್ನೂ ಓದಿ: Explainer: ಹೆಜ್ಜೆ ಮುಂದಿಟ್ಟರೆ ರಕ್ತಪಾತ, ಹಿಂದಿಟ್ಟರೆ ಅವಮಾನ: ಅಡಕತ್ತರಿಯಲ್ಲಿ ರಷ್ಯಾ-ಉಕ್ರೇನ್ ಅಧ್ಯಕ್ಷರು

Published On - 9:26 pm, Sun, 11 July 21