Russia Ukraine Conflict Live: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಭಾರತವು ‘ಆಪರೇಷನ್ ಗಂಗಾ’ ಕಾರ್ಯಾಚರಣೆಯ ಮೂಲಕ ಭಾರತ ಸರ್ಕಾರವು ಈವರೆಗೆ 11,000 ಭಾರತೀಯರನ್ನು ಏರ್‌ಲಿಫ್ಟ್ ಮಾಡಿದೆ. ಆದರೆ ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದು, ಅವರ ರಕ್ಷಣೆಗಾಗಿ ಉಕ್ರೇನ್ ಮತ್ತು ಉಕ್ರೇನ್ ಸುತ್ತಮುತ್ತಲ ದೇಶಗಳಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ನಡುವೆ ರಷ್ಯಾ ಮತ್ತು ಅಮೆರಿಕ ನಡುವಣ ವಾಣಿಜ್ಯ ಸಂಘರ್ಷವೂ ತೀವ್ರಗೊಂಡಿದೆ. ಎರಡೂ ದೇಶಗಳ ಪರಸ್ಪರರ ವಿರುದ್ಧ ಹಲವು ನಿರ್ಬಂಧಗಳನ್ನು ವಿಧಿಸಿವೆ. ಅಮೆರಿಕ ಮೂಲಕ ಫೇಸ್‌ಬುಕ್ ಮತ್ತು ಟ್ವಿಟರ್ ಕಂಪನಿಗಳನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ. ರಷ್ಯಾಕ್ಕೆ ಯಾವುದೇ ಹೊಸ ಸೇವೆ ಒದಗಿಸುವುದಿಲ್ಲ ಎಂದು ಮೈಕ್ರೊಸಾಫ್ಟ್ ಸ್ಪಷ್ಟಪಡಿಸಿದೆ. ಐರೋಪ್ಯ ರಾಷ್ಟ್ರಗಳೂ ಸೇರಿದಂತೆ ವಿಶ್ವದ ಹಲವೆಡೆ ಷೇರುಪೇಟೆ ಕುಸಿತ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿತಂಥ ಕೆಟ್ಟ ಪರಿಣಾಮಗಳು ಕಾಣಿಸಬಹುದು ಎಂಬ ಮುನ್ನೋಟ ನೀಡುತ್ತಿವೆ.
ಉಕ್ರೇನ್‌ನಿಂದ ವಾಪಸಾದ ಬಳ್ಳಾರಿ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳನ್ನ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸನ್ಮಾನಿಸಿದ್ದಾರೆ. ಸಬಾ ಕೌಸರ್, ತೈಯಬ್ ಕೌಸರ್, ಶಕೀಬುದ್ದೀನ್ ಹಾಗೂ ಹೃಷಿಕೇಶ್ಗೆ ಜಿಲ್ಲಾ ಉಸ್ತುವಾರಿ ಸಚಿವ ರಾಮುಲು ಸನ್ಮಾನಿಸಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಘೋಷಿಸಿದ್ದು, ಉಕ್ರೇನ್‌ನ ಮನೋವೈದ್ಯಕೀಯ ಆಸ್ಪತ್ರೆಯನ್ನು ರಷ್ಯಾ ವಶಕ್ಕೆ ಪಡೆದಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಘೋಷಿಸಿದ್ದು, ಕಳೆದ 10 ದಿನಗಳಲ್ಲಿ ರಷ್ಯಾದ 10,000 ಸೈನಿಕರ ಹತ್ಯೆ ಮಾಡಲಾಗಿದೆ. ಉಕ್ರೇನ್‌ನ ಪ್ರಮುಖ ನಗರಗಳು ನಮ್ಮ ನಿಯಂತ್ರಣದಲ್ಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಮೇಲೆ ನಡೆಸುತ್ತಿದ್ದ ಯುದ್ಧಕ್ಕೆ ಇಂದು ತಾತ್ಕಾಲಿಕ ಕದನ ವಿರಾಮಕ್ಕೆ ರಷ್ಯಾ ಒಪ್ಪಿಗೆ ನೀಡಿದ ಕೆಲವೇ ಗಂಟೆಗಳಲ್ಲಿ ರಷ್ಯಾದ ಪಡೆಗಳು ಮತ್ತೆ ಉಕ್ರೇನ್‌ನ ಹಲವು ನಗರಗಳಲ್ಲಿ ಶೆಲ್ ದಾಳಿ ನಡೆಸತೊಡಗಿವೆ. ಇದರಿಂದಾಗಿ ಯುದ್ಧದಿಂದ ತೀವ್ರ ಹಾನಿಗೊಳಗಾಗಿದ್ದ ಉಕ್ರೇನ್‌ನ ಬಂದರು ನಗರವಾದ ಮರಿಪೋಲ್‌ನಿಂದ ನಾಗರಿಕರ ಸ್ಥಳಾಂತರಿಸುವಿಕೆಯನ್ನು ಮತ್ತೆ ಸ್ಥಗಿತಗೊಳಿಸಲಾಯಿತು. ರಷ್ಯಾದ ಸೇನಾಪಡೆ ಕದನ ವಿರಾಮವನ್ನು ಘೋಷಿಸಿದ್ದರೂ ಮರಿಪೋಲ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿಯ ಉಪ ಮುಖ್ಯಸ್ಥ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರ ಕುರಿತು ಚರ್ಚೆ ಪ್ರಧಾನಿ ಮೋದಿ ಉನ್ನತಮಟ್ಟದ ಸಭೆ ನಡೆಸಿದ್ದಾರೆ. ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಉಕ್ರೇನ್ ಸ್ಥಿತಿಗತಿ ಕುರಿತು ಪ್ರಧಾನಿ ಮಾಹಿತಿ ಪಡೆಯಲಿದ್ದಾರೆ.
ಮೃತ ನವೀನ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ ನಿವಾಸಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ. ನವೀನ ಇವತ್ತು ನಮ್ಮ ಜೊತೆ ಇಲ್ಲ. ನಮ್ಮೂರಿನ ನವೀನನನ್ನ ಕಳೆದುಕೊಂಡಿದ್ದೇವೆ. ಉಳಿದವರನ್ನ ಕರೆತರುವ ಕೆಲಸ ಆಗಿತ್ತಿದೆ. ಇಪ್ಪತ್ತು ಸಾವಿರ ಜನರು ಉಕ್ರೇನ್ ನಲ್ಲಿದ್ದಾರೆ. ಅದರಲ್ಲಿ ಹದಿನೆಂಟು ಸಾವಿರ ವಿದ್ಯಾರ್ಥಿಗಳಿದ್ದಾರೆ. ಈ ಊರಿನ ಇನ್ನಿಬ್ಬರು ವಿದ್ಯಾರ್ಥಿಗಳು ಅಲ್ಲಿದ್ದಾರೆ. ಅವರನ್ನೂ ಕರೆತರುವ ಕೆಲಸ ಮಾಡಲಾಗುತ್ತಿದೆ. ಬೇರೆ ದೇಶಗಳು ಅಲ್ಲಿನ ಮಕ್ಕಳನ್ನ ಕರೆಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ವಾಪಸ್ ಕರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಉಕ್ರೇನ್‌ನಿಂದ 24 ವಿಮಾನ ಆಗಮಿಸಿದೆ. 24 ವಿಮಾನಗಳಲ್ಲಿ 2,900 ಭಾರತೀಯರು ವಾಪಸಾಗಿದ್ದಾರೆ. ಉಕ್ರೇನ್‌ನಿಂದ ಈವರೆಗೆ 13,300 ಭಾರತೀಯರು ವಾಪಸ್ ಆಗಿದ್ದಾರೆ. ಮುಂದಿನ 24 ಗಂಟೆಗಳಲ್ಲಿ 13 ವಿಮಾನಗಳಲ್ಲಿ ಸ್ಥಳಾಂತರಿಸ್ತೇವೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ತಿಳಿಸಿದ್ದಾರೆ.
ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರಿಗೆ ಕೊನೆಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಖಾರ್ಕೀವ್ ಬಳಿಯ ಪೆಸೊಚಿನ್ ಪ್ರದೇಶದಿಂದ ವಿದ್ಯಾರ್ಥಿಗಳು ಹೊರಟಿದ್ದಾರೆ. ಬಾಗಲಕೋಟೆ ಕೊರಣ ಸವದಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಭಾರತೀಯ ವಿದ್ಯಾರ್ಥಿಗಳು, ಲೆವಿವ್ ಮಾರ್ಗದ ಕಡೆ ಹೊರಡಲು ಬಸ್ ವ್ಯವಸ್ಥೆ ಮಾಡಲಾಗಿದೆ.
ಭಾರತದ ಎಲ್ಲ ವಿದ್ಯಾರ್ಥಿಗಳು ಖಾರ್ಕೀವ್ ತೊರೆದಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಭಾರತದ ವಿದ್ಯಾರ್ಥಿಗಳು ಉಕ್ರೇನ್ ತೊರೆದಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ಅರೀಂದಮ್ ಬಗುಚಿ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ನಾಲ್ವರ ಪೈಕಿ ಇಬ್ಬರು ವಾಪಸ್ ಆಗಿದ್ದಾರೆ. ಉಕ್ರೇನ್‌ನಿಂದ ದೆಹಲಿಗೆ ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಉಳಿದ ಇಬ್ಬರು ಉಕ್ರೇನ್‌ನಲ್ಲಿ ಸುರಕ್ಷಿತವಾಗಿ ಇರುವುದಾಗಿ ಮಾಹಿತಿ ನೀಡಿದ್ದಾರೆ. ಅವರು ಕೂಡ ಇನ್ನೆರಡು ದಿನಗಳಲ್ಲಿ ಉಕ್ರೇನ್‌ನಿಂದ ಆಗಮಿಸುವ ಸಾಧ್ಯತೆ ಇದೆ.
ರಷ್ಯಾದ ಯುದ್ಧದಿಂದಾಗಿ ಈವರೆಗೆ 14 ಲಕ್ಷಕ್ಕೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ. ಪೋಲೆಂಡ್‌ನಲ್ಲಿ 7,87,300 ಜನರು ಆಶ್ರಯ ಪಡೆದಿದ್ದಾರೆ. ಮೊಲ್ಡೊವಾದಲ್ಲಿ 2,28,700 ಜನರು ಆಶ್ರಯ ಪಡೆದಿದ್ದಾರೆ. ಹಂಗೇರಿಯಲ್ಲಿ 1,44,700 ಜನ ಆಶ್ರಯವನ್ನ ಪಡೆದಿದ್ದಾರೆ. ರೊಮೇನಿಯಾದಲ್ಲಿ 1,32,600 ಜನ ಆಶ್ರಯ ಪಡೆದಿದ್ದಾರೆ. ಸ್ಲೋವಾಕಿಯಾದಲ್ಲಿ 1,00,500 ಜನ ಆಶ್ರಯ ಪಡೆದಿದ್ದಾರೆ.
ಪಾರ್ಥೀವ ಶರೀರವನ್ನು ಶೀಘ್ರದಲ್ಲಿ ತರುವ ಪ್ರಯತ್ನ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಮಗನ ಪಾರ್ಥೀವ ಶರೀರ ಬರುವುದಾಗಿ ಹೇಳಿದ್ದಾರೆ. ಉಕ್ರೇನ್ನಲ್ಲಿರೋ ಮಕ್ಕಳನ್ನ ಕರೆಸುವಂತೆ ಹೇಳಿದ್ದೇವೆ ಎಂದು ಮೃತ ನವೀನ ತಂದೆ ಶೇಖರಗೌಡ ಹೇಳಿಕೆ ನೀಡಿದ್ದಾರೆ.
ಮಗನ ಪಾರ್ಥೀವ ಶರೀರ ಇದೆ ಎಂಬುವುದು ಖಚಿತ ಇರಲಿಲ್ಲ. ಸಿಎಂ ಹೇಳಿದ ಮೇಲೆ ಭರವಸೆ ಬಂತು. ಪಾರ್ಥೀವ ಶರೀರ ಬರುತ್ತೆ ಅನ್ನೋ ವಿಶ್ವಾಸವಿದೆ. ನವೀನ ಕೊಹಿನೂರ ವಜ್ರಕ್ಕೆ ಸಮನಾಗಿದ್ದ. ಉಕ್ರೇನ್‌ನಲ್ಲಿ ಸಿಲುಕಿರೋ ಮಕ್ಕಳು ಸುರಕ್ಷಿತವಾಗಿ ಬಂದ ಮೇಲೆ ಅವರಲ್ಲಿ ನನ್ನ ಮಗನನ್ನ ಕಾಣುತ್ತೇನೆ. ಮಾತನಾಡುತ್ತಲೆ ಮಗನನ್ನು ನೆನೆದು ಕಣ್ಣೀರಾದ ನವೀನ ತಾಯಿ ವಿಜಯಲಕ್ಷ್ಮಿ
ಉಕ್ರೇನ್‌ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ ನವೀನ್ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್ ನೀಡಿದ್ದಾರೆ.
ಸುಮಿ ಸಿಟಿಯಲ್ಲಿ ಸಂಕಷ್ಟದಲ್ಲಿರುವ ಭಾರತೀಯರಿಗೆ ಅಭಯಹಸ್ತ ನೀಡಿದ್ದಾರೆ. ಬಾವುಟ ಪ್ರದರ್ಶಿಸಿದ ಭಾರತೀಯರನ್ನು ಎಂಬೆಸಿ ಸಂಪರ್ಕಿಸಿದೆ. ಶೀಘ್ರವೇ ಬಸ್ಗಳ ಮೂಲಕ ಸುಮಿ ಸಿಟಿಯಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಉಕ್ರೇನ್ನಲ್ಲಿನ ಭಾರತೀಯ ಎಂಬೆಸಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಸದ್ಯಕ್ಕೆ ತಾವಿರುವ ಹಾಸ್ಟೆಲ್ಗಳಲ್ಲೇ ಸೇಫಾಗಿರಲು ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹೊರಬರದಂತೆ ಎಂಬೆಸಿ ಸೂಚನೆ ನೀಡಿದೆ.
ಉಕ್ರೇನ್ ದೇಶದಿಂದ ಕಳೆದ 7 ದಿನಗಳಲ್ಲಿ 6,222 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ರೊಮೇನಿಯಾ, ಮೊಲ್ಡೊವಾದಿಂದ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಮುಂದಿನ 2 ದಿನಗಳಲ್ಲಿ 1,050 ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಬಲಿಷ್ಠ ಪುಟಿನ್ ಪಡೆಯ ಸೈನಿಕರನ್ನು ಉಕ್ರೇನ್ ಹೊಡೆದುರುಳಿಸಿದೆ. ರಷ್ಯಾ ವಿರುದ್ಧ ಮಂಡಿಯೂರದೆ ಉಕ್ರೇನ್ ಹೋರಾಟ ಮಾಡಿದೆ. ಉಕ್ರೇನ್ 10 ಸಾವಿರ ರಷ್ಯಾ ಸೈನಿಕರ ಹತ್ಯೆ ಮಾಡಿದೆ. 39 ವಿಮಾನ, 2 ಬೋಟ್, 40 ಹೆಲಿಕಾಪ್ಟರ್ ನಾಶ ಮಾಡಿದೆ. ಜತೆಗೆ 409 ಸೇನಾ ವಾಹನ, 269 ಯುದ್ಧ ಟ್ಯಾಂಕ್ಗಳು ಧ್ವಂಸ ಮಾಡಿದೆ. ಉಕ್ರೇನ್ 60 ಸೇನಾ ಇಂಧನ ವಾಹನಗಳನ್ನು ಧ್ವಂಸ ಮಾಡಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 10 ತಿಂಗಳಿನಿಂದ ಸಾಕಿದ್ದ ಬೆಕ್ಕನ್ನು ಮಂಗಳೂರು ಮೂಲದ ವಿದ್ಯಾರ್ಥಿನಿ ಲಕ್ಷಿತಾ ತನ್ನ ಜೊತೆಗೆ ತಂದಿದ್ದಾಳೆ. ಕೀವ್ನಿಂದ ಲೀಝಾ ಹೆಸರಿನ ಬೆಕ್ಕನ್ನು ಭಾರತಕ್ಕೆ ಲಕ್ಷಿತಾ ಕರೆತಂದಿದ್ದಾಳೆ. ಯುದ್ಧದ ವೇಳೆ ಬಿಕ್ಕು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬಿಟ್ಟು ಬಂದಿದ್ದರೆ ನನಗೆ ಬೆಕ್ಕಿನ ಬಗ್ಗೆಯೇ ಯೋಚನೆ ಆಗುತ್ತಿತ್ತು. ಅಲ್ಲಿ ನಾನು ಸಾಕಿದ ಬೆಕ್ಕನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಉಕ್ರೇನ್ ಜನರು ಕೀವ್ ತೊರೆದಿದ್ದಾರೆ. ಹಾಗಾಗಿ ನಾನು ಲೀಝಾಳನ್ನು ಕರೆದುಕೊಂಡು ಬರಲೇಬೇಕಾಯ್ತು ಎಂದು ಟಿವಿ9ಗೆ ಲಕ್ಷಿತಾ ಹೇಳಿಕೆ ನೀಡಿದ್ದಾಳೆ.
ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ಏರ್ಲಿಪ್ಟ್ ಹಿನ್ನೆಲೆ, ದೆಹಲಿಗೆ ಬಂದಿಳಿದಿದ್ದ ನಾಲ್ಕು ಜನ ವಿದ್ಯಾರ್ಥಿಗಳು ತವರಿಗೆ ಆಗಮಿಸಿದ್ದಾರೆ. 3:50 ರ ವಿಮಾನದಲ್ಲಿ ಕೆಐಎಬಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ತವರಿಗೆ ಬಂದಿಳಿದ ವಿದ್ಯಾರ್ಥಿಗಳನ್ನು ಕಂಡು ಪೋಷಕರು ಖುಷಿಪಟ್ಟಿದ್ದಾರೆ. ಮಗನನ್ನು ಕಂಡು ಖುಷಿಯಿಂದ ಏರ್ಪೋಟ್ನಲ್ಲಿ ಪೋಷಕರು ಸಿಹಿ ತಿನಿಸಿ ಬರಮಾಡಿಕೊಂಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿಕ್ಕಬಳ್ಳಾಪುರ ಮೂಲದ ಮೂರು ವಿದ್ಯಾರ್ಥಿಗಳು ಮತ್ತು ಬೆಂಗಳೂರು ಮೂಲದ ಓರ್ವ ವಿದ್ಯಾರ್ಥಿ ಆಗಮಿಸಿದ್ದಾರೆ.
ರಷ್ಯಾ ವಿರುದ್ಧ ಮಂಡಿಯೂರದೆ ಉಕ್ರೇನ್ ಹೋರಾಡಿದ್ದು, ಬಲಿಷ್ಠ ಪುಟಿನ್ ಪಡೆಯ ಸೈನಿಕರ ಹೊಡೆದುರಿಳಿಸಿದ ಸೇನೆ, 10 ಸಾವಿರ ರಷ್ಯಾ ಸೈನಿಕರ ನೆತ್ತರು ಹೀರಿದ ಉಕ್ರೇನ್ 39 ಪ್ಲೇನ್, 2 ಬೋಟ್, 40 ಹೆಲಿಕಾಪ್ಟರ್ ನಾಶ ಮಾಡಿದೆ. 409 ಸೇನಾ ವಾಹನ, 269 ಯುದ್ಧ ಟ್ಯಾಂಕ್ಗಳು ಧ್ವಂಸವಾಗಿದ್ದು, ಉಕ್ರೇನ್‌ನಿಂದ 60 ಸೇನಾ ಇಂಧನ ವಾಹನಗಳು ಉಡೀಸ್ ಮಾಡಲಾಗಿದೆ.
ಉಕ್ರೇನ್‌ನ ಸುಮಿ ನಗರದಲ್ಲಿ 700 ಭಾರತೀಯರು ಸಿಲುಕಿಕೊಂಡಿದ್ದಾರೆ. ಬಂಕರ್ಗಳಿಂದ ಉಕ್ರೇನ್ ಗಡಿಗೆ ತೆರಳುತ್ತಿರುವ ವಿದ್ಯಾರ್ಥಿಗಳು, ನಮ್ಮ ಜೀವಕ್ಕೆ ಅಪಾಯವಾದರೆ ಭಾರತೀಯ ರಾಯಭಾರ ಕಚೇರಿ ನೇರ ಹೊಣೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಕಳೆದ 10 ದಿನದಿಂದ ಸುಮಿ ನಗರದಲ್ಲಿ ವಿದ್ಯಾರ್ಥಿಗಳು ಸಿಲುಕಿದ್ದರು. ಇದೇ ನಮ್ಮ ಕೊನೆಯ ವಿಡಿಯೋ ಎಂದಿರುವ ವಿದ್ಯಾರ್ಥಿಗಳು, ಭಾರತದ ರಾಯಭಾರ ಕಚೇರಿ ತಕ್ಷಣ ನಮ್ಮನ್ನು ರಕ್ಷಿಸಬೇಕು ಎಂದು ಉಕ್ರೇನ್ನಲ್ಲಿರುವ ಭಾರತದ ವಿದ್ಯಾರ್ಥಿಗಳ ವಿಡಿಯೋ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯರ ಕಣ್ಣೀರು ಹಾಕಿದ್ದು, ಆದಷ್ಟು ಬೇಗ ಕರೆಸಿಕೊಳ್ಳುವಂತೆ ಬೆಂಗಳೂರು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಸುಮಿ ಸಿಟಿಯಲ್ಲಿ ಭಾರತದ 700 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅಪಾರ್ಟ್ಮೆಂಟ್ಗಳು, ಹಾಸ್ಟೆಲ್ಗಳ ಬಂಕರ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸುಮಿ ನಗರದಲ್ಲಿ ಕುಡಿಯುವ ನೀರಿನ ಸಂಪರ್ಕ ಕೂಡ ಸ್ಥಗಿತವಾಗಿದೆ. ಆದಷ್ಟು ಬೇಗ ತಮ್ಮನ್ನು ಕರೆಸಿಕೊಳ್ಳಿ ಎಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ರಷ್ಯಾ ವಿರುದ್ಧ ಹೋರಾಡಲು ವಿದೇಶದಲ್ಲಿದ್ದ ಉಕ್ರೇನಿಗರು ವಾಪಸ್ಸಾಗಿದ್ದಾರೆ. ವಿದೇಶದಿಂದ ಉಕ್ರೇನ್ಗೆ ಮರಳಿರುವ 66,224 ಪುರುಷರು ವಾಪಸ್ಸಾಗಿದ್ದಾರೆ ಎಂದು ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಝ್ನಿಕೋವ್ ಮಾಹಿತಿ ನೀಡಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿ ಭಾರತೀಯರು ಪರದಾಡುತ್ತಿದ್ದು, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇವೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಹೇಳಿಕೆ ನೀಡಿದ್ದಾರೆ. ಸುರಕ್ಷತಾ ಸ್ಥಳಗಳಲ್ಲಿದ್ದು, ಅನಗತ್ಯ ಅಪಾಯಗಳನ್ನು ತಪ್ಪಿಸಿ. ವಿದ್ಯಾರ್ಥಿಗಳ ಜತೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇದು ರಾತ್ರಿ ಹಗಲಿನ ನಡುವೆ ನಿರ್ಧಾರ ಆಗಿ ನಡೆದ ಯುದ್ಧವಲ್ಲ. ಒಂದು ತಿಂಗಳ ಮೊದಲೇ ಯುದ್ಧ ಆಗುತ್ತೆ ಎಂದು ಗೊತ್ತಿತ್ತು.
ಮೊದಲೇ ಮಕ್ಕಳನ್ನು ರಕ್ಷಣೆ ಮಾಡಲು ಏಕೆ ಕ್ರಮ ಕೈಗೊಂಡಿಲ್ಲ ಎಂದು ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ವಿಚಾರವಾಗಿ
ಮಂಗಳೂರಿನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಯು.ಟಿ.ಖಾದರ್ ವಾಗ್ದಾಳಿ ಮಾಡಿದ್ದಾರೆ. ವಿದ್ಯಾರ್ಥಿಗಳು ಕಷ್ಟಪಟ್ಟು ಬಾರ್ಡರ್ಗೆ ಬಂದು ಸೇರಿದ್ದಾರೆ. ಕಷ್ಟಪಟ್ಟು ಜೀವದ ಹಂಗು ತೊರೆದು ಗಡಿಗೆ ಬಂದಿದ್ದಾರೆ. ನಾವೇ ಕರೆತಂದೆವು ಎಂದು ಸರ್ಕಾರ ಪೋಸ್ ಕೊಡುತ್ತಿದೆ. ರಾಜತಾಂತ್ರಿಕತೆ, ವಿದೇಶಾಂಗ ವ್ಯವಹಾರದಲ್ಲಿ ಕೇಂದ್ರ ವಿಫಲವಾಗಿದೆ. ಆಚಾರದ ಸರ್ಕಾರವಲ್ಲ, ಇದು ಕೇವಲ ಪ್ರಚಾರದ ಸರ್ಕಾರ. ಮೋದಿ ಒಂದು ಫೋನ್ ಮಾಡಿದ್ರೆ ಯುದ್ಧ ನಿಲ್ಲುತ್ತದೆಯಂತೆ, ಆದ್ರೆ ಈಗ ಯಾಕೆ ಯುದ್ಧ ನಿಂತಿಲ್ಲ ಎಂದು ಖಾದರ್ ವ್ಯಂಗ್ಯವಾಡಿದ್ದಾರೆ.
ಚಿಕ್ಕೋಡಿ: ಉಕ್ರೇನ್, ರಷ್ಯಾ ಯುದ್ಧ ಹಿನ್ನಲೆ. ಕಾರ್ಕಿವ್ನಿಂದ 15ಕ್ಕೂ ಹೆಚ್ಚು ಕನ್ನಡಿಗ MBBS ವಿದ್ಯಾರ್ಥಿಗಳು ಹೊರ ಬಂದಿದ್ದಾರೆ. ಕಾರ್ಕಿವ್ನಿಂದ ಕೀವ್, ಕೀವ್ ನಿಂದ ಟ್ಯಾಕ್ಸಿ ಮೂಲಕ ಫೋಲಂಡ್ ತಲುಪಿರುವ ವಿದ್ಯಾರ್ಥಿಗಳು ಸದ್ಯ ರವಿಶಂಕರ್ ಗುರುಜೀಯವರ ಆರ್ಟ್ ಆಫ್ ಲಿವಿಂಗ್ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಆಶ್ರಯ ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ, ಬಿಜಾಪುರ ಜಿಲ್ಲೆಯ ವಿದ್ಯಾರ್ಥಿಗಳಿರುವ ತಂಡ, ನಾವೆಲ್ಲರೂ ಕ್ಷೇಮವಾಗಿದ್ದಿವಿ ಎಂದು ವಿಡಿಯೋ ಮಾಡಿ ವಿದ್ಯಾರ್ಥಿಗಳು ಕಳುಹಿಸಿದ್ದು, ರವಿಶಂಕರ್ ಗುರುಜೀಯವರ ಸಹಾಯವನ್ನ ಕನ್ನಡಿಗ MBBS ವಿದ್ಯಾರ್ಥಿ ನಾಗೇಶ್ ಪೂಜಾರಿ ನೆನೆದಿದ್ದಾನೆ. ಈಗಾಗಲೇ ಇಂಡಿಯಾಗೆ ಫ್ಲೈಟ್ ಅಲಾಟಮೆಂಟ್ ಆಗಿದ್ದು, ಅಲ್ಲಿಂದ ಇಂಡಿಯಾಗೆ ಫ್ಲೈಟ್ ಮೂಲಕ ಆಗಮಿಸೋದಾಗಿ ಟಿವಿ9 ಗೆ ಮಾಹಿತಿ ನೀಡಲಾಗಿದೆ.
ಅತ್ಯಂತ ಪರಿಶ್ರಮದಿಂದ ಏರ್ ಲಿಫ್ಟ್ ನಡೆದಿದೆ. ಪ್ರಧಾನಿ ಮಾರ್ಗದರ್ಶನದಲ್ಲಿ ಏರ್ ಲಿಫ್ಟ್ ನಡೆಸುತ್ತಿದ್ದು, ಕದನ ವಿರಾಮದಿಂದ ಈ ಕೆಲಸಕ್ಕೆ ಅನುಕೂಲ ಆಗಲಿದೆ ಎಂದು ರಷ್ಯಾ-ಉಕ್ರೇನ್ ಕದನ ವಿರಾಮ ವಿಚಾರವಾಗಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಸುಮಾರು 15 ಸಾವಿರ ಜನ ಬಂದಿದ್ದಾರೆ. ಉಳಿದವರನ್ನೂ ಕರೆ ತರಲಾಗುವುದು. ಕೊನೆಯ ವ್ಯಕ್ತಿಯನ್ನೂ ಸುರಕ್ಷಿತ ತರೋದೇ ನಮ್ಮ ಜವಾಬ್ದಾರಿ. ಅದನ್ನು ನಮ್ಮ ಕರ್ತವ್ಯ ಅಂತಾನೇ ಮಾಡುತ್ತಿದ್ದೇವೆ ಎಂದು ಹೇಳಿದರು. ಏರ್ ಲಿಫ್ಟ್ ವ್ಯವಸ್ಥೆ ಬಗ್ಗೆ ಕೆಲ ವಿದ್ಯಾರ್ಥಿಗಳ ಅಪಸ್ವರ ವಿಚಾರವಾಗಿ ಮಾತನಾಡಿದ ಅವರು, ಅಲ್ಲಿ ತೊಂದರೆ, ನೋವು ಆಗಿರಬಹುದು. ಯುದ್ಧದಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಬಿಂಗ್ ನಡೆದಿದೆ. ಹೀಗಾಗಿ ಅವರನ್ನು ತಲುಪಲು ತೊಂದರೆ ಆಗಿರಬಹುದು. ನಾವು ಯಾರಿಗೂ ತೊಂದರೆಯಾಗಿಲ್ಲ ಅಂತಾ ಹೇಳುತ್ತಿಲ್ಲ. ಆದರೆ ಪರಿಸ್ಥಿತಿಯೇ ಅಷ್ಟೂ ಭೀಕರವಾಗಿದೆ. ಹೀಗಾಗಿ ತೊಂದರೆಯಾಗಿ ಏನೋ ಮಾತನಾಡಿರುತ್ತಾರೆ. ಅದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಿಲ್ಲ. ಉಳಿದವರನ್ನು ಆದಷ್ಟು ಬೇಗ ಕರೆತರುವುದಷ್ಟೆ ನಮ್ಮ ಕರ್ತವ್ಯ ಎಂದರು.
ಹಾಸನ: ಯುದ್ದಭೂಮಿ ಉಕ್ರೇನ್‌ನಿಂದ ಹಾಸನಕ್ಕೆ ಮತ್ತೋರ್ವ ವಿದ್ಯಾರ್ಥಿನಿ ಮನೆಗೆ ಮರಳಿದ್ದಾಳೆ. ಸತತ ಐದು ದಿನಗಳ ಪ್ರಯತ್ನದಿಂದ ಸರಸ್ವತಿ ಮನೆಗೆ ಮರಳಿದ್ದಾಳೆ. ಹಾಸನದ ಸುದೀಶ್ ಮತ್ತು ನಾಗಮಣಿ ದಂಪತಿ ಪುತ್ರಿ ಸರಸ್ವತಿ, ಜೀವದ ಹಂಗು ತೊರೆದು ರೈಲ್ವೆ ಸ್ಟೇಷನ್ ತಲುಪಿ, ಖಾಸಗಿ ವಾಹನದ ಮೂಲಕ ಪೋಲ್ಯಾಂಡ್ ತಲುಪಿದರು. ಸದ್ಯ ಮನೆಗೆ ಮರಳಿದ ಮಗಳಿಗೆ ಪೋಷಕರು ಪ್ರೀತಿಯ ಸ್ವಾಗತಕೋರಿದ್ದಾರೆ.
ಹಾವೇರಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿಗೆ ಕನ್ನಡಿಗ ನವೀನ್ ಸಾವು ಪ್ರಕರಣ ಹಿನ್ನೆಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸಕ್ಕೆ ಸಿರಿಗೆರೆ ಸಾಣೆಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ನಂತರ ಮಾತನಾಡಿದ ಅವರು, ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ. ನಾವು ಬಯಸೋದೆ ಒಂದು, ಆಗೋದೆ ಒಂದು. ಈಡಿ ವಿಶ್ವದಲ್ಲಿ ಶಾಂತಿ ಕದಡಿ, ಅಶಾಂತಿ ಹೆಚ್ಚಾಗ್ತಿದೆ. ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಅನುಮಾನದಿಂದ ನೋಡುವಂತಾಗಿ ಯುದ್ಧ ನಡಿತಿದೆ. ಮನಸ್ಸಿನಲ್ಲಿ ಯುದ್ಧ ಶುರುವಾಗಿ ಬಹಿರಂಗವಾಗಿ ಶುರುವಾಗುತ್ತೆ. ಯುದ್ಧ ಬೇಗ ಸಮಾಪ್ತಿ ಆಗಲಿ. ಜಗತ್ತಿನ ಯಾರಿಗೆ ನೋವಾದ್ರೂ ನಮಗೆ ನೋವಾದಂತೆ. ಯುದ್ಧ ಕೊನೆಗೊಳ್ಳಲಿ, ಶಾಂತಿ ನೆಲೆಸಲಿ. ಅಲ್ಲಿ ಸಿಲುಕಿರೋ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ, ಅವರ ಕುಟುಂಬಗಳು ದುಃಖದಲ್ಲಿವೆ. ಆ ಸಂಕಷ್ಟಗಳು ದೂರಾಗಿ ವಿದ್ಯಾರ್ಥಿಗಳು ನಾಡನ್ನು ಮುಟ್ಟುವಂತಾಗಲಿ ಎಂದು ಹೇಳಿಕೆ ನೀಡಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಸಾವು ಹಿನ್ನೆಲೆ. ಮೃತ ನವೀನ ನಿವಾಸಕ್ಕೆ ಚಿತ್ರದುರ್ಗ ಬ್ರಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಭೇಟಿ ನೀಡಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ಮಠದ ವತಿಯಿಂದ ಇಪ್ಪತ್ತೈದು ಸಾವಿರ ರುಪಾಯಿ ವಿತರಣೆ ಮಾಡಲಾಗಿದೆ. ನಂತರ ಮಾತನಾಡಿದ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು, ವಿದೇಶಕ್ಕೆ ವೈದ್ಯಕೀಯ ಶಿಕ್ಷಣ ಮಾಡಲು ಹೋದ ನವೀನ ಯುದ್ಧದ ಸಂದರ್ಭದಲ್ಲಿ ಅಸುನೀಗಿದ್ದಾರೆ. ಈಡಿ ರಾಷ್ಟ್ರಕ್ಕೆ ದುಃಖವಾಗಿದೆ. ಈಡಿ ಪರಿವಾರಕ್ಕೆ ಸಾಂತ್ವನ ಹೇಳಿ, ಧೈರ್ಯ ಹೇಳಲು ಅವರ ಮನೆಗೆ ಬಂದಿದ್ದೇವೆ. ಇದೊಂದು ಸಾಂತ್ವನದ ಭೇಟಿಯಾಗಿದ್ದು, ಸಾವು ನೋವು ಸಂಭವಿಸಿದ ಸಮಯದಲ್ಲಿ ಸಾಂತ್ವನ ಹೇಳೋದು ನಮ್ಮ ಆದ್ಯ ಕರ್ತವ್ಯವಾಗಿದೆ. ಯುದ್ಧ ಯಾವತ್ತಿಗೂ ಅನಾರೋಗ್ಯಕರ, ಹಿಂಸಾತ್ಮಕವಾಗಿರುವಂತಹದು. ನಾವ್ಯಾರು ಯುದ್ಧ ಆಗಬೇಕು ಎಂದು ಭಾವಿಸಿದವರಲ್ಲ. ನಾವೆಲ್ಲರೂ ಬಯಸುವುದು ಶಾಂತಿಯುತ ಸಮಾಜವನ್ನು. ಆದಷ್ಟು ಬೇಗ ಯುದ್ಧ ನಿಲ್ಲಬೇಕು ಎಂಬುದು ನಮ್ಮ ವಿನಂತಿ ಎಂದು ಹೇಳಿದರು.
ರಾಜಧಾನಿ ಕೀವ್ ನಲ್ಲಿ ಯಾವುದೇ ಕದನ ವಿರಾಮ ಇಲ್ಲ. ಮರೀಯಾಪೋಲ್, ಖೋಲ್ ನೊವಾಕ್ ನಗರಗಳಿಗೆ ಮಾತ್ರ ಕದನ ವಿರಾಮ ಘೋಷಣೆ ಸೀಮಿತವಾಗಿದೆ. ಆದರೆ ಖಾರ್ಕೀವ್, ಕೀವ್, ಸುಮಿ ನಗರಗಳಲ್ಲಿ ಭಾರತದ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.
ಖಾರ್ಕಿವ್‌ನಲ್ಲಿ ರಷ್ಯಾ ಶೆಲ್ ದಾಳಿಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮೃತಪಟ್ಟಿದ್ದು, ನವೀನ್ ಮೃತದೇಹ ತರಲು ಎಲ್ಲ ರೀತಿ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ. ನಮ್ಮ ವಿದೇಶಾಂಗ ಸಚಿವಾಲಯ ಎಲ್ಲಾ ಪ್ರಯತ್ನ ಮಾಡುತ್ತಿದೆ. ಈವರೆಗೆ ನವೀನ್ ಐಡೆಂಟಿಫೈ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಎಲ್ಲ ಎಂಪಿಗಳು, ನಮ್ಮ ಸಿಎಂ ಕೂಡ ನಿರಂತರ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಆಪರೇಷನ್ ಗಂಗಾ ಅಡಿ ಈವರೆಗೆ ರಾಜ್ಯಕ್ಕೆ 366 ಜನ ಬಂದಿದ್ದಾರೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿಕೆ ನೀಡಿದ್ದಾರೆ.
ಇಂದು ರಾಜ್ಯದ 80 ವಿದ್ಯಾರ್ಥಿಗಳು ದೆಹಲಿಗೆ ಬಂದಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಕರೆತರುವ ಕೆಲಸ ಸರ್ಕಾರ ಮಾಡುತ್ತಿದೆ. ಕರ್ನಾಟಕದ 666 ಜನರ ಪೈಕಿ 366 ಜನ ವಾಪಸಾಗಿದ್ದಾರೆ. ಇನ್ನು 300 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಬರಬೇಕಿದೆ. ರಷ್ಯಾ, ಉಕ್ರೇನ್ ಸರ್ಕಾರದ ಜೊತೆ ನಮ್ಮ ದೇಶದ ಸಚಿವಾಲಯದವರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಮರಿಪೋಲ್ ನಗರಕ್ಕೆ ಹಲವು ದಿನಗಳಿಂದ ನೀರು, ಆಹಾರ ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಚಳಿಯನ್ನು ತಡೆಯಲು ಬೇಕಿದ್ದ ಹೀಟಿಂಗ್ ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯೂ ರಷ್ಯಾ ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದವು. ಜನರು ಅಲ್ಲಿ ಬದುಕಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಿಸಿದ ನಂತರ ಸುರಕ್ಷಿತ ಕಾರಿಡಾರ್ ಘೋಷಿಸಿ, ಅವರಿಗೆ ಹೊರಗೆ ಹೋಗಲು ಅವಕಾಶ ನೀಡಿದೆ ರಷ್ಯಾ ದೇಶ.
ಕದನ ವಿರಾಮ ಘೋಷಣೆಯ ಮೂಲಕ ರಷ್ಯಾ ಅತ್ಯಂತ ಜಾಣ ರಾಜತಾಂತ್ರಿಕ ನಡೆಯಿಟ್ಟಿದೆ. ರಷ್ಯಾ ಪಡೆಗಳು ಹಲವು ದಿನಗಳಿಂದ ಬಂದರು ನಗರಿ ಮರಿಪೊಲ್ಗೆ ದಿಗ್ಬಂಧನ ಹಾಕಿ, ಉಸಿರುಗಟ್ಟಿಸಿದ್ದವು. ಅಲ್ಲಿನ ನಾಗರಿಕರಿಗೆ ಹೊರಗೆ ಹೋದರೆ ಸಾಕು ಎನ್ನುವಂತೆ ಆಗಿತ್ತು. ಇದೀಗ ತನ್ನ ಪಟ್ಟು ಬಿಗಿಗೊಳಿಸಿರುವ ರಷ್ಯಾ, ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡ ನಂತರ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿ, ನಾಗರಿಕರು ಹೊರಗೆ ನಡೆಯಲು ಸುರಕ್ಷಿತ ಕಾರಿಡಾರ್ ಕಲ್ಪಿಸಿಕೊಡುವ ಭರವಸೆ ನೀಡಿದೆ.
ಭಾರತೀಯರಿಗೆ ರಷ್ಯಾ ದೇಶಕ್ಕೆ ಪ್ರವೇಶ ಕಲ್ಪಿಸಲು ರಷ್ಯಾ ಆಡಳಿತ ಸಮ್ಮತಿಸಿದ್ದು, ಸಂಘರ್ಷ ತೀವ್ರವಾಗಿರುವ ಪೂರ್ವ ಗಡಿಗೆ ತನ್ನ ಬಸ್ಗಳನ್ನು ಕಳಿಸಿಕೊಟ್ಟಿದೆ. ರಷ್ಯಾದ ವಿಮಾನಗಳನ್ನೂ ಇದೀಗ ತೆರವು ಕಾರ್ಯಾಚರಣೆಗೆ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಈ ಕಾರ್ಯಾಚರಣೆ ಯಶಸ್ವಿಯಾದರೆ ಇನ್ನೂ ಉಕ್ರೇನ್ನಲ್ಲಿರುವ ಭಾರತದ ಮಕ್ಕಳು ಶೀಘ್ರ ಸ್ವದೇಶಕ್ಕೆ ಮರಳಲಿದ್ದಾರೆ. ರಷ್ಯಾ ಸಹಕರಿಸಲು ಸಿದ್ಧವಿರುವ ವಿಚಾರದ ಬಗ್ಗೆ ವಿಶ್ವಸಂಸ್ಥೆಯಲ್ಲಿರುವ ರಷ್ಯಾ ರಾಯಭಾರಿ ಮಾಹಿತಿ ನೀಡಿದ್ದಾರೆ.
ಉಕ್ರೇನ್‌ನ ವಿವಿಧ ಪ್ರದೇಶಗಳಲ್ಲಿ ಇನ್ನೂ 2000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಇದೀಗ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವೂ ರಕ್ಷಣಾ ಕಾರ್ಯಾಚರಣೆಗಳನ್ನು ಚುರುಕುಗೊಳಿಸಲು ನಿರ್ಧರಿಸಿದ್ದು, ಅಕ್ಕಪಕ್ಕದ ದೇಶಗಳಲ್ಲಿರುವ ರಾಯಭಾರ ಕಚೇರಿ ಸಿಬ್ಬಂದಿಯನ್ನು ಉಕ್ರೇನ್ನಲ್ಲಿರುವ ಭಾರತೀಯರ ಸ್ಥಳಾಂತರ ನಿಯೋಜಿಸಲು ಮುಂದಾಗಿದೆ. ರಷ್ಯಾ ಗಡಿಯ ಮೂಲಕ ರಷ್ಯಾದ ದೇಶದ ಸಮೀಪದ ವಿಮಾನ ನಿಲ್ದಾಣಕ್ಕೆ ಭಾರತೀಯರನ್ನು ಅಲ್ಲಿಂದ ಸ್ವದೇಶಕ್ಕೆ ಕರೆತರುವ ಬಗ್ಗೆಯೂ ಪ್ರಯತ್ನಗಳು ತೀವ್ರಗೊಂಡಿವೆ.
ಕೀವ್ ಮತ್ತು ಖಾರ್ಕಿವ್ ಸೇರಿದಂತೆ ಉಕ್ರೇನ್‌ನ ಹಲವು ಪ್ರಮುಖ ನಗರಗಳಲ್ಲಿ ಸಿಲುಕಿರುವ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಹಿಂದಿರುಗಲು ಇದರಿಂದ ತುಸು ಅವಕಾಶ ಸಿಕ್ಕಿದೆ. ಆದರೆ ಭಾರತದ ವಿಮಾನಗಳಿಗೆ ಉಕ್ರೇನ್ ವಾಯುಗಡಿ ಪ್ರವೇಶಿಸಲು ಅವಕಾಶ ಸಿಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಉಕ್ರೇನ್ ದೇಶವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ದಾಳಿ ಮಾಡಿದ್ದ ರಷ್ಯಾ ಇದ್ದಕ್ಕಿದ್ದಂತೆ ಕದನ ವಿರಾಮ ಏಕೆ ಘೋಷಿಸಿತು ಎಂಬ ಬಗ್ಗೆ ಹಲವು ರೀತಿಯ ಚರ್ಚೆಗಳು ಆರಂಭವಾಗಿವೆ. ಭಾರತೀಯ ಕಾಲಮಾನ ಬೆಳಿಗ್ಗೆ 11.30ರಿಂದ ತಾತ್ಕಾಲಿಕ ಕದನ ವಿರಾಮ ಜಾರಿಗೆ ಬಂದಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿರುವ ವಿದೇಶಿಯರ ರಕ್ಷಣೆಗಾಗಿ 10 ದಿನಗಳ ಕದನ ವಿರಾಮ ಘೋಷಿಸಲಾಗಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಮೇಲೆ ದಾಳಿ ಮಾಡಿ, ಪ್ರಮುಖ ನಗರಗಳನ್ನು ವಶಪಡಿಸಿಕೊಂಡು ರಾಜಧಾನಿ ಕೀವ್ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಸೇನೆ ಇಂದು ಮುಂಜಾನೆ 6 ಗಂಟೆಯಿಂದ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.
Russia declares ceasefire in Ukraine from 06:00 GMT (Greenwich Mean Time Zone) to open humanitarian corridors for civilians, reports Russia’s media outlet Sputnik
— ANI (@ANI) March 5, 2022
ಉಕ್ರೇನ್‌ನಿಂದ ಮನೆಗೆ ವಾಪಸ್ಸು ಬಂದ ಮಗನಿಗೆ ಸಿಹಿ ತಿನ್ನಿಸಿ ಪೋಷಕರು ಸಂಭ್ರಮಿಸಿದ್ದಾರೆ. ಉಕ್ರೇನ್‌ನಿಂದ ವೈದ್ಯಕೀಯ ವಿದ್ಯಾರ್ಥಿಯಾದ ಸಂಜಯ್ ಕುಮಾರ ಮನೆಗೆ ವಾಪಸ್ಸಾಗಿದ್ದಾರೆ. ಖಾರ್ಕಿ ನ್ಯಾಷನಲ್ ಮೆಡಿಕಲ್ ವಿವಿಯಲ್ಲಿ ನಾಲ್ಕನೇ ವರ್ಷದಲ್ಲಿ ಸಂಜಯಕುಮಾರ ಓದುತ್ತಿದ್ದರು. ಕಳೆದ ಒಂದು ವಾರದಿಂದ ಪುತ್ರನ ಬರುವಿಗಾಗಿ ಕಾಯ್ದು ಕುಳಿತಿದ್ದ ತಂದೆ ನಾಗರಾಜ್, ತಾಯಿ ನೀಲಮ್ಮ ಇಂದು ಮನೆಗೆ ಬಂದ ಪುತ್ರನ್ನು ಖುಷಿ ಖುಷಿಯಿಂದ ಸ್ವಾಗತಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಶೆಲ್ ದಾಳಿಗೆ ಬಲಿಯಾಗಿರುವ ನವೀನ ನಿವಾಸಕ್ಕೆ ಮಾರ್ಚ್ 8 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭೇಟಿ ನೀಡಲಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ ನಿವಾಸಕ್ಕೆ ಭೇಟಿ ನೀಡುವಂತೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಕೇಳಿಕೊಂಡಿದ್ದಾರೆ. ದೂರವಾಣಿ ಮೂಲಕ ಇಬ್ಬರನ್ನ ಸಂಪರ್ಕಿಸಿ ನವೀನ ಮನೆಗೆ ಬರಲು ಕೋಳಿವಾಡ ಕೇಳಿಕೊಂಡಿದ್ದು, ಮಾರ್ಚ್ 8 ರ ಬೆಳಿಗ್ಗೆ ಇಬ್ಬರು ಸೇರಿಕೊಂಡು ಹೆಲಿಕ್ಯಾಪ್ಟರ್ ಮೂಲಕ ಕುಟುಂಬಸ್ಥರನ್ನ ಭೇಟಿ ಮಾಡಿ, ಸಾಂತ್ವನ ಹೇಳಲು ಬರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ರಷ್ಯಾ ಸೇನೆ ಉಕ್ರೇನ್ ಮೇಲೆ ಸಮರ ಸಾರಿದೆ. ಉಕ್ರೇನ್ ದೇಶದ ರಾಜಧಾನಿ ಕೀವ್ ಮೇಲೆ ವಾಯುದಾಳಿಯ ಅಲರ್ಟ್ ಮಾಡಲಾಗಿದ್ದು, ನಾಗರಿಕರು ಹತ್ತಿರದ ಅಡಗುತಾಣಗಳಲ್ಲಿ ಆಶ್ರಯ ಪಡೆಯಲು ಸೂಚನೆ ನೀಡಲಾಗಿದೆ. ಉಕ್ರೇನ್ ಮಾಧ್ಯಮಗಳಲ್ಲಿ ಕೂಡ ಈ ಕುರಿತು ವರದಿ ಮಾಡಲಾಗಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ ನಿವಾಸಕ್ಕೆ ಇಂದು ಮಾಜಿ ಸಚಿವ ಎಚ್.ಕೆ.ಪಾಟೀಲ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ನವೀನ ಗ್ಯಾನಗೌಡರ ಬಾಂಬ್ ದಾಳಿಯಲ್ಲಿ ನಮ್ಮನ್ನು ಅಗಲಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇನೆ. ಕುಟುಂಬದವರು ಹಾಗೂ ಗ್ರಾಮಸ್ಥರು ಇನ್ನೇನು ನವೀನ ಆರೇಳು ತಿಂಗಳಲ್ಲಿ ಬರುತ್ತಾನೆ ಅಂತಾ ನಿರೀಕ್ಷೆ ಮಾಡಿದ್ದರು. ಜಗತ್ತಿನಲ್ಲಿ ಒಟ್ಟು ಅಧಿಕಾರ ಕೇಂದ್ರೀಕೃತ ಆಗಬೇಕು ಅನ್ನೋದಕ್ಕೆ ಯುದ್ದ ಆಗಿದೆ. ಮಹಾಯುದ್ಧ ಆಗುತ್ತದೆ ಎಂಬ ಭಯ ಕಾಡುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೆ ಉಕ್ರೇನ್ ನಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಕರೆತರುವ ಕೆಲಸ ಮಾಡಬೇಕು. ಯುದ್ದ ಭೂಮಿಯ ಸಮೀಪ ರಷ್ಯಾದ ಏರ್ಫೋರ್ಟ್ ಇದೆ. ಅಲ್ಲಿಂದ ಭಾರತೀಯರನ್ನು ಕರೆತರುವ ಕೆಲಸ ಮಾಡಬೇಕು.
ನಮ್ಮ ದೇಶಕ್ಕೆ ಎಲ್ಲ ಮಕ್ಕಳು ಸುರಕ್ಷಿತವಾಗಿ ಬರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ್ದು, ಕೂದಲೆಳೆಯ ಅಂತರದಲ್ಲಿ ವಿದ್ಯಾರ್ಥಿಯೋರ್ವ ಬದುಕುಳಿದು ಬಂದಿದ್ದಾನೆ. ರಾಯಚೂರು ನಗರದ ನಿವಾಸಿಯಾದ ಮಯೂರ್ ಉಕ್ರೇನ್‌ನಲ್ಲಿ ಎಂಬಿಬಿಎಸ್ ಮಾಡುತ್ತಿದ್ದರು. ಸದ್ಯ ಯುದ್ಧ ಭೂಮಿಯಿಂದ ಭಾರತಕ್ಕೆ ಮರಳಿದ್ದು, ಈ ಬಗ್ಗೆ ಟಿವಿ9 ಗೆ ವಿದ್ಯಾರ್ಥಿ ಮಯೂರ್ ಪ್ರತಿಕ್ರಿಯಿಸಿದ್ದಾರೆ. ಮೈನಸ್ 10° ಚಳಿಯಲ್ಲಿ 36 ಗಂಟೆ ಕ್ಯೂನಲ್ಲಿ ನಿಂತಿದ್ದೆ. ಪೋಷಕರ ಮಡಿಲು ಸೇರಿದ್ದು ಎಕ್ಸ್ ಪ್ಲೈನ್ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ನಲ್ಲಿದ್ದ ಭಾರತದ ವಿದ್ಯಾರ್ಥಿಗಳ ಏರ್ ಲಿಫ್ಟ್ ಇನ್ನೆರಡು ದಿನದಲ್ಲಿ ಮುಗಿಯಲಿದೆ ಎಂದು ರೂಮೇನಿಯಾದಲ್ಲಿರುವ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿಕೆ ನೀಡಿದ್ದಾರೆ. ಉಕ್ರೇನ್‌ನಲ್ಲಿ 19,700 ಭಾರತೀಯ ವಿದ್ಯಾರ್ಥಿಗಳು ಇದ್ದರು. ಭಾರತ ಸರ್ಕಾರದ ಸಲಹೆ ಮೇರೆಗೆ ಯುದ್ಧ ಆರಂಭಕ್ಕೂ ಮುನ್ನ 4 ಸಾವಿರ ವಿದ್ಯಾರ್ಥಿಗಳು ವಾಪಸ್ಸಾಗಿದ್ದು, ಬಳಿಕ 15 ಸಾವಿರ ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದರು. ಈಗ ರೂಮೇನಿಯಾ ಮೂಲಕ 6 ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. ಭಾರತಕ್ಕೆ ಇದುವರೆಗೆ 11 ಸಾವಿರ ವಿದ್ಯಾರ್ಥಿಗಳ ಆಗಮನವಾಗಿದೆ ಎಂದು ಕೇಂದ್ರದ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ.
ಉಕ್ರೇನ್ ಭೂಮಿಯಲ್ಲಿ ರಷ್ಯಾ ವಿರುದ್ಧ ಹೋರಾಡಲು ನ್ಯಾಟೋ ನಕಾರವೆತ್ತಿದೆ. ಉಕ್ರೇನ್ ವಾಯುಪ್ರದೇಶವನ್ನು ವಿಮಾನ ಹಾರಾಟ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದೆ. ನ್ಯಾಟೋ ಪಡೆಗೆ ಉಕ್ರೇನ್ ಅಧ್ಯಕ್ಷ ಮನವಿ ಮಾಡಿಕೊಂಡಿದ್ದು, ಆದರೆ ಉಕ್ರೇನ್ ಅಧ್ಯಕ್ಷರ ಮನವಿನ್ನ ನ್ಯಾಟೋ ಪಡೆ ತಿರಸ್ಕರಿಸಿದೆ. ಉಕ್ರೇನ್ ವಾಯುಪ್ರದೇಶದ ರಕ್ಷಣೆಗೆ ನ್ಯಾಟೋ ನಕಾರವೆತ್ತಿದ್ದು, ಉಕ್ರೇನ್ ವಾಯು ಪ್ರದೇಶ ರಕ್ಷಣೆಗೆ ನ್ಯಾಟೋ ಮುಂದಾದರೇ, ರಷ್ಯಾ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲೆ ಯುದ್ಧ ಘೋಷಣೆ ಮಾಡಬಹುದು. ಹೀಗಾಗಿ ಉಕ್ರೇನ್ ವಾಯುಪ್ರದೇಶದ ರಕ್ಷಣೆಗೆ ನ್ಯಾಟೋ ಹಿಂದೇಟು ಹಾಕುತ್ತಿದೆ.
ಉಕ್ರೇನ್‌ನಿಂದ ಮರಳಿ ಹೊಸಪೇಟೆಗೆ ವಿದ್ಯಾರ್ಥಿನಿ ನಂದಿನಿ ಹಿಂದಿರುಗಿದ್ದಾರೆ. ನಂದಿನಿ ಅಗಮಿಸುತ್ತಿದ್ದಂತೆ ಪೋಷಕರು ತಬ್ಬಿ ಮುದ್ದಾಡಿ ಸ್ವಾಗತಿಸಿದರು. ಎಂಬಿಬಿಎಸ್ ಓದಲೆಂದು ಉಕ್ರೇನ್ಗೆ ತೆರಳಿದ್ದ ನಂದಿನಿ, ರಷ್ಯಾ – ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿದ್ದರು.
ಬೆಂಗಳೂರು: ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಕರೆತರಲು ಹಗಲಿರುಳು ಶ್ರಮಿಸಲಾಗುತ್ತಿದೆ. ಈಗಾಗಲೇ ಉಕ್ರೇನ್‌ನಿಂದ ಹಲವು ವಿದ್ಯಾರ್ಥಿಗಳನ್ನು ಕರೆತರಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗಡಿಭಾಗಕ್ಕೆ ಬಂದವರನ್ನು ಈಗಾಗಲೇ ಸ್ವದೇಶಕ್ಕೆ ಕರೆತರಲಾಗಿದೆ. ಆದರೆ ಹಲವಾರು ಜನರು ದೇಶ ಬಿಟ್ಟು ಬರಲು ಆಗುತ್ತಿಲ್ಲ. ಅಲ್ಲಿರುವವರನ್ನು ಸಂಪರ್ಕ ಸಾಧಿಸಿ ಕರೆತರಲು ಪ್ರಯತ್ನ ಮಾಡುತ್ತಿದ್ದೇವೆ. ನಾವು ಕೂಡ ಭಾರತದ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಗಡಿಯಲ್ಲಿರುವ ನಮ್ಮ ಮಂತ್ರಿಗಳ ಜೊತೆ ಮಾತಾಡಿದ್ದೇನೆ. ನವೀನ್ ಮೃತದೇಹ ಪತ್ತೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಯುದ್ಧ ನಡೆಯುತ್ತಿರುವುದರಿಂದ ವಿವರ ಪಡೆದು ಮಾತಾಡುವೆ ಎಂದು ಹೇಳಿದರು.
ಉಕ್ರೇನ್‌ನಿಂದ ಭಾರತಕ್ಕೆ ಬಾಗಲಕೋಟೆಯ ಮತ್ತಿಬ್ಬರು ವಿದ್ಯಾರ್ಥಿಗಳು ಮರಳಿದ್ದಾರೆ. ಸ್ಪೂರ್ತಿ ದೊಡ್ಡಮನಿ ಹಾಗೂ ಒವೈಸ್ ಪ್ಲೈಟ್ ಮೂಲಕ ದೆಹಲಿಗೆ ಆಗಮಿಸಿದ್ದಾರೆ. ಸ್ಪೂರ್ತಿ ದೊಡ್ಡಮನಿ ಹಾಗೂ ಒವೈಸ್ ಎಮ್ ಬಿ ಬಿ ಎಸ್ ವಿದ್ಯಾರ್ಥಿಗಳಾಗಿದ್ದು, ಸ್ಪೂರ್ತಿ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿ ಓದುತ್ತಿದ್ದರೇ, ಒವೈಸ್ ವಿ. ಎನ್. ಕರಾಜಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಸ್ಪೂರ್ತಿ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಗ್ರಾಮದ ನಿವಾಸಿಯಾಗಿದ್ದು, ಒವೈಸ್ ಜಿಲ್ಲೆ ಹಳರ ಬಸ್ ನಿಲ್ದಾಣ ಪಕ್ಕದ ಬಡಾವಣೆ ನಿವಾಸಿಯಾಗಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಯುದ್ಧಪೀಡಿತ ಪ್ರದೇಶದಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಖಾರ್ಕಿವ್‌ನಲ್ಲಿ 300, ಸುಮಿಯಲ್ಲಿ 700 ಜನ ಭಾರತೀಯರು ಸಿಲುಕಿಕೊಂಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದ 2,056 ಭಾರತೀಯರನ್ನು ಈವರೆಗೆ 10 ಐಎಎಫ್ ವಿಮಾನಗಳಲ್ಲಿ ಏರ್‌ಲಿಫ್ಟ್ ಮಾಡಲಾಗಿದೆ. ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯರಿಗಾಗಿ 26 ಟನ್‌ನಷ್ಟು ಆಹಾರ ಮತ್ತು ನೀರನ್ನು IAF ವಿಮಾನಗಳು ಸಾಗಿಸಿವೆ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದ್ದು, 1 ವಾರದಲ್ಲಿ 500ಕ್ಕೂ ಹೆಚ್ಚು ವಿವಿಧ ರೀತಿಯ ಕ್ಷಿಪಣಿಗಳ ದಾಳಿ ಮಾಡಲಾಗಿದೆ.
ಉಕ್ರೇನ್ ದೇಶದ ಸುಮಿ ಸಿಟಿಯಲ್ಲಿ ಇನ್ನೂ ನೂರಾರು ಭಾರತೀಯರ ಆಕ್ರಂದನ ಮುಂದುವರೆದಿದೆ. ಭಾರತಕ್ಕೆ ಬೇಗ ಕರೆಸಿಕೊಳ್ಳಿ ಅಂತಾ ಬೆಂಗಳೂರು ವಿದ್ಯಾರ್ಥಿನಿ ಅಳಲು ತೊಡಿಕೊಂಡಿದ್ದಾಳೆ. ಸುಮಾರು 500ಕ್ಕೂ ಹೆಚ್ಚು ಭಾರತೀಯರು ಸುಮಿ ಸಿಟಿಯಲ್ಲಿ ಲಾಕ್ ಆಗಿದ್ದು, ಅಪಾರ್ಟ್ ಮೆಂಟ್, ಹಾಸ್ಟೆಲ್ ಬಿಲ್ಡಿಂಗ್ ಕೆಳಗಡೆ ಬಂಕರ್ಗಳಲ್ಲೇ ವಾಸಿಸುತ್ತಿದ್ದಾರೆ. ಜೊತೆಗೆ ನಿನ್ನೆಯಿಂದ ಸುಮಿ ಸಿಟಿಯಲ್ಲಿ ಕುಡಿಯುವ ನೀರು ಸಂಪರ್ಕವೂ ಸ್ಥಗಿತಗೊಂಡಿದೆ. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಅಂತಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮನವಿ ಮಾಡಿಕೊಂಡಿದ್ದಾರೆ.
ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆ ಉಕ್ರೇನ್‌ನ ಜಫೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಮೇಲೆ ದಾಳಿ ಮಾಡಲಾಗಿದೆ. ಪರಮಾಣು ಸ್ಥಾವರದ ಮೇಲೆ ದಾಳಿ ಮಾಡುವುದು ಅಪರಾಧ ಎಂದು ದಾಳಿ ಬಗ್ಗೆ ಅಮೆರಿಕ ರಾಯಭಾರ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.
ಯುದ್ಧಗ್ರಸ್ಥ ಉಕ್ರೇನ್‌ನಿಂದ ಕಾರವಾರಕ್ಕೆ ವಿದ್ಯಾರ್ಥಿಯೋರ್ವ ಸುರಕ್ಷಿತವಾಗಿ ಮನೆ ಸೇರಿದ್ದಾನೆ. ಪ್ರತೀಕ್ ನಾಗರಾಜ ಶೇಟ್ ಕಾರವಾರಕ್ಕೆ ಬಂದಿದ್ದು, ಸಿಹಿ ತಿನ್ನಿಸಿ ಮಗನನ್ನ ಅಪ್ಪಿ ಪಾಲಕರು ಬರಮಾಡಿಕೊಂಡಿದ್ದಾರೆ. ಪಾಲಕರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪ್ರತೀಕ್ ಶೇಟ್, ಒಂದುವರೆ ತಿಂಗಳ ಹಿಂದಷ್ಟೆ ಎಂಬಿಬಿಎಸ್ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದ. ಉಕ್ರೇನ್ ನ ಉಝೋರ್ಡ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿ ವಿದ್ಯಾರ್ಥಿಯಾಗಿರೋ ಪ್ರತೀಕ್, ಭಾರತೀಯ ರಾಯಭಾರಿ ಅಧಿಕಾರಿಗಳಿಂದ ತಾಯ್ನಾಡು ಸೇರಿದ್ದಾನೆ. ಉಕ್ರೇನ್ ಮೇಲೆ ರಷ್ಯಾ ಯುದ್ದ ಮಾಡ್ತಿರೋದ್ರಿಂದ ಅಲ್ಲಿನ ಜನ ಆಕ್ರೋಶಗೊಂಡಿದ್ದಾರೆ. ಪರಿಸ್ಥಿತಿ ಬಹಳ ಕ್ರಟಿಕಲ್ ಇದ್ದು, ಬೇಗ ಅಲ್ಲಿಂದ ಎಲ್ಲರನ್ನೂ ಕರೆತರಬೇಕು. ಝೋಹಾನಿ ಹಂಗ್ರೆ ಗಡಿಯಿಂದ ಬುಡ್ಡಾಪೆಸ್ಟ್ ಗೆ ವಿದ್ಯಾರ್ಥಿಗಳ ರವಾನೆ ಮಾಡಲಾಗುತ್ತಿದೆ. ಬುಡ್ಡಾಪೆಸ್ಟ್ ನಿಂದ ಇಂಡಿಯನ್ ಎರ್ ಲೈನ್ಸ್ ಮೂಲಕ ದೆಹಲಿಗೆ ಆಗಮಿಸಿದ್ದಾನೆ. ಉಕ್ರೇನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರನ್ನ ಕರೆತರುವ ಕೆಲಸವಾಗಬೇಕು. ಭಾರತೀಯ ರಾಯಭಾರಿಗೆ ಪ್ರತೀಕ್ ಶೇಟ್ ಧನ್ಯವಾದ ಸಲ್ಲಿಸಿದ್ದಾನೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಿಂದ ರಷ್ಯಾ ವಿರುದ್ಧ ಹಲವು ಕಂಪನಿಗಳು ತಿರುಗಿಬಿದ್ದಿವೆ. ರಷ್ಯಾಗೆ ಸ್ಯಾಮ್‌ಸಂಗ್ ಕಂಪನಿ ಎಲೆಕ್ಟ್ರಾನಿಕ್ಸ್ ಸಾಗಣೆ ಸ್ಥಗಿತಗೊಳಿಸಿದೆ.
ಉಕ್ರೇನ್‌ನಲ್ಲಿ ಸಿಲುಕಿದ್ದ 229 ಭಾರತೀಯರನ್ನ ಏರ್‌ಲಿಫ್ಟ್ ಮಾಡಲಾಗಿದೆ. ಆಪರೇಷನ್ ಗಂಗಾ ಹೆಸರಿನಲ್ಲಿ ಭಾರತೀಯರನ್ನ ಏರ್‌ಲಿಫ್ಟ್ ಮಾಡಲಾಗುತ್ತಿದ್ದು, ರೊಮೇನಿಯಾದಿಂದ ದೆಹಲಿಗೆ ವಿಮಾನ ಆಗಮಿಸಿದೆ. ಇಂದು 16 ವಿಮಾನಗಳಲ್ಲಿ ಭಾರತೀಯರನ್ನ ಏರ್‌ಲಿಫ್ಟ್ ಮಾಡಲಾಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಉಕ್ರೇನ್‌ನ ಮರಿಯುಪೋಲ್ ರಷ್ಯಾ ಸೇನೆ ವಶದಲ್ಲಿದ್ದು, ರಷ್ಯಾದ ನಿರ್ದಯ ದಾಳಿಗೆ ಮರಿಯುಪೋಲ್ ಸಿಲುಕಿದೆ. ರಷ್ಯಾದ ದಿಗ್ಬಂಧನದಿಂದ ಹೊರತರಲು ಪ್ರಯತ್ನಿಸಲಾಗುತ್ತಿದ್ದು, ಅಲ್ಲಿನ ಜನರ ನೆರವಿಗಾಗಿ ಉಕ್ರೇನ್ ಸರ್ಕಾರ ಪ್ರಯತ್ನಿಸುತ್ತಿದೆ.
ರಷ್ಯಾದ ಹೊಸ ಮಾಧ್ಯಮ ನೀತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಷ್ಯಾ ಮಾಧ್ಯಮ ನೀತಿಯನ್ನ ಬ್ಲೂಮ್‌ಬರ್ಗ್ ವಿರೋಧಿಸಿದೆ. ರಷ್ಯಾದಲ್ಲಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬ್ಲೂಮ್ಬರ್ಗ್ನಲ್ಲಿ ನ್ಯೂಸ್ ಸ್ಥಗಿತ ಮಾಡಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರೆಸಿದೆ. ರಷ್ಯಾದಲ್ಲಿ ಫೇಸ್‌ಬುಕ್ ಬ್ಲಾಕ್ ಮಾಡಿದಲಾಗಿದ್ದು, ಇದರಿಂದ ಜನರಿಗೆ ಮಾಹಿತಿ ಸಿಗದಂತೆ ಆಗುತ್ತದೆ. ಲಕ್ಷಾಂತರ ಜನರಿಗೆ ವಿಶ್ವಾಸಾರ್ಹ ಮಾಹಿತಿ ಸಿಗಲ್ಲ ಎಂದು ಮೆಟಾ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟು ಇಂದಿಗೆ ಐದನೇ ದಿನವಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ ನಿವಾಸಕ್ಕೆ ಇವತ್ತು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಸಂಜೆ 4 ಗಂಟೆ 15 ನಿಮಿಷಕ್ಕೆ ನವೀನ ಮನೆಗೆ ಭೇಟಿ ನೀಡಲಿರುವ ಸಿಎಂ ಬೊಮ್ಮಾಯಿ, ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿ ಕ್ರಾಸ್ನ ಎಂಪಿಎಂಸಿ ಹೆಲಿಪ್ಯಾಡ್ನಿಂದ ಸಂಜೆ ಐದು ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳಸಲಿದ್ದಾರೆ. ಸಿಎಂ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲಿದ್ದಾರೆ. ವಿಶ್ವ ಶಾಂತಿಗಾಗಿ, ಭಾರತೀಯರ ಸುರಕ್ಷತೆಗಾಗಿ ಪ್ರಾರ್ಥಿಸಿ ಕರವೇ ಪ್ರವೀಣ್ ಶೆಟ್ಟಿ ಮತ್ತು ಕರವೇ ಕಾರ್ಯಕರ್ತರಿಂದ ಮೇಖ್ರೀ ವೃತ್ತದ ಪ್ರಸನ್ನ ಆಂಜನೇಯ ಸ್ವಾಮಿ ವೃತ್ತದಿಂದ ಮಹಾಲಕ್ಷ್ಮೀ ಲೇಔಟ್ವರೆಗೆ ಪಾದಯಾತ್ರೆ ನಡೆಯಲಿದೆ. ಮಹಾಲಕ್ಣ್ಮೀ ಲೇಔಟ್ನಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಿರುವ ಕರವೇ, ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ತ್ವರಿತವಾಗಿ ನಮ್ಮ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆತರಬೇಕೆಂದು ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟು ಇಂದಿಗೆ ಐದನೇ ದಿನವಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ನವೀನ ನಿವಾಸಕ್ಕೆ ಚಿತ್ರದುರ್ಗದ ಡಾ.ಶಿವಮೂರ್ತಿ ಮುರಾಘಾ ಶರಣರು ಇವತ್ತು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ ಒಂದೂವರೆ ಗಂಟೆಗೆ ಭೇಟಿ ನೀಡಲಿದ್ದಾರೆ.
ರಷ್ಯಾದ ಮಾಧ್ಯಮ ನೀತಿ ಬದಲಾಗಿರುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೀತಿ ವಿರೋಧಿಸಿ ಜಾಗತಿಕ ಮಟ್ಟದ ದೈತ್ಯ ಸುದ್ದಿವಾಹಿನಿಗಳಾದ ಸಿಎನ್ಎನ್, ಬಿಬಿಸಿ ಮತ್ತು ಬ್ಲೂಮ್‌ಬರ್ಗ್ ಸುದ್ದಿ ವಾಹಿನಿಗಳು ಹೊರನಡೆದಿವೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯಾಚರಣೆ ಚುರುಕುಗೊಂಡಿದೆ. ಇಂದು ಉಕ್ರೇನ್‌ನಿಂದ ಭಾರತಕ್ಕೆ 16 ವಿಮಾನಗಳು ಬರುವ ನಿರೀಕ್ಷಿಯಿದೆ. ‘ಆಪರೇಷನ್ ಗಂಗಾ’ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೆ 11,000 ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗಿದೆ.
ಉಕ್ರೇನ್ ದೇಶದ ವಾಯು ವಲಯವನ್ನು ನೊ-ಫ್ಲೈ ಜೋನ್ ಎಂದು ಘೋಷಿಸುವ ನ್ಯಾಟೊ ನಿರ್ಧಾರವನ್ನು ಉಕ್ರೇನ್ ಆಡಳಿತ ಟೀಕಿಸಿದೆ. ನ್ಯಾಟೊದ ಈ ನಿರ್ಧಾರವನ್ನು ಅಧ್ಯಕ್ಷ ಝೆಲೆನ್‌ಸ್ಕಿ ತಳ್ಳಿ ಹಾಕಿದ್ದಾರೆ.
ರಷ್ಯಾದಲ್ಲಿ ಫೇಸ್ಬುಕ್ಗೆ ನಿರ್ಬಂಧ ವಿಧಿಸಿರುವ ಅಲ್ಲಿನ ಆಡಳಿತದ ಕ್ರಮದಿಂದ ವಿಶ್ವಾಸಾರ್ಹ ಮಾಹಿತಿ ಸಿಗುತ್ತಿಲ್ಲ. ಲಕ್ಷಾಂತರ ಜನರು ಸಮರ್ಪಕ ಮಾಹಿತಿಯಿಂದ ವಂಚಿತರಾಗುತ್ತಾರೆ ಎಂದು ಫೇಸ್‌ಬುಕ್ ಹೇಳಿದೆ.
ಉಕ್ರೇನ್ ವಿರುದ್ಧ ರಷ್ಯಾ ಸೇನೆಯು ಯುದ್ಧ ಮುಂದುವರಿಸಿರುವಂತೆಯೇ ರಷ್ಯಾದಲ್ಲಿ ಅಮೆರಿಕ ಮೂಲದ ಫೇಸ್‌ಬುಕ್, ಟ್ವಿಟರ್ ಸಾಮಾಜಿಕ ಮಾಧ್ಯಮಗಳನ್ನು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಿರ್ಬಂಧಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಉಕ್ರೇನ್‌ನ ಜಫೋರಿಝಿಯಾ ಪರಮಾಣು ಸ್ಥಾವರದ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ಅಮೆರಿಕ ಖಂಡಿಸಿದೆ. ‘ಪರಮಾಣು ಸ್ಥಾವರದ ಮೇಲೆ ದಾಳಿ ಮಾಡುವುದು ಅಪರಾಧ’ ಎಂದು ಉಕ್ರೇನ್‌ನ ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
Published On - 6:38 am, Sat, 5 March 22