Ukraine War: 80 ವರ್ಷಗಳ ನಂತರ ಮತ್ತೆ ಜರ್ಮನ್​ ಟ್ಯಾಂಕ್​ಗೆ ರಷ್ಯಾ ಸೇನೆ ಮುಖಾಮುಖಿ; ವ್ಲಾದಿಮಿರ್ ಪುಟಿನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2023 | 3:24 PM

ರಷ್ಯಾವನ್ನು ಮಣಿಸಬಹುದು ಎಂದುಕೊಳ್ಳುತ್ತಿರುವವರಿಗೆ ಆಧುನಿಕ ಯುದ್ಧಾಸ್ತ್ರಗಳ ಬಳಕೆ ಆರಂಭವಾದರೆ ರಷ್ಯಾದೊಂದಿಗೆ ಹೋರಾಡುವುದು ಸುಲಭವಲ್ಲ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ.

Ukraine War: 80 ವರ್ಷಗಳ ನಂತರ ಮತ್ತೆ ಜರ್ಮನ್​ ಟ್ಯಾಂಕ್​ಗೆ ರಷ್ಯಾ ಸೇನೆ ಮುಖಾಮುಖಿ; ವ್ಲಾದಿಮಿರ್ ಪುಟಿನ್
ರಷ್ಯಾದ ಸ್ಟಾಲಿನ್​ಗ್ರಾಡ್ ನಗರದಲ್ಲಿ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್​ ಪ್ರತಿಮೆ ಅನಾವರಣ ಮಾಡಲಾಗಿದೆ.
Follow us on

ಮಾಸ್ಕೋ: 2ನೇ ಮಹಾಯುದ್ಧದ (2nd World War) ಫಲಿತಾಂಶವನ್ನು ನಿರ್ಣಾಯಕವಾಗಿ ಬದಲಿಸಿದ ಮಹತ್ವದ ಸಂಗತಿಗಳಲ್ಲಿ ‘ಸ್ಟಾಲಿನ್​ಗ್ರಾಡ್ ಕದನ’ (Battle of Stalingrad) ಮುಖ್ಯವಾದುದು. ಇದೀಗ ವೋಲ್ಗೊಗ್ರಾಡ್​ ಎಂದು ಕರೆಯಲಾಗುವ ಸ್ಟಾಲಿನ್​ಗ್ರಾಡ್ ನಗರದಲ್ಲಿ ನಡೆದ ಭೀಕರ ಕದನದ 80ನೇ ವರ್ಷಾಚರಣೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತೊಮ್ಮೆ ಹಳೆಯ ನೆನಪುಗಳನ್ನು ನೇವರಿಸಿದರು. ‘ನಾಝಿವಾದದ ಜರ್ಮನಿ ವಿರುದ್ಧ ಹೋರಾಡಿದ್ದಂತೆ ಇದೀಗ ನಾವು ಉಕ್ರೇನ್ ವಿರುದ್ಧ ಹೋರಾಡುತ್ತಿದ್ದೇವೆ’ ಎಂದು ಪುಟಿನ್ ಹೇಳಿದರು.

ಉಕ್ರೇನ್ ಪರವಾಗಿ ಜರ್ಮನಿಯು ಯುದ್ಧಟ್ಯಾಂಕ್​ಗಳನ್ನು ಕಳಿಸಲು ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇತಿಹಾಸವು ತನ್ನಿಂತಾನೆ ಮರುಕಳಿಸುತ್ತಿದೆ’ ಎಂದರು. ‘ಇದನ್ನು ನಂಬಲು ಸಾಧ್ಯವಿಲ್ಲ, ಆದರೂ ಇದು ನಿಜ. ನಾವು ಮತ್ತೊಮ್ಮೆ ಜರ್ಮನಿಯ ಲೆಪಾರ್ಡ್​ ಟ್ಯಾಂಕ್​ಗಳನ್ನು ಎದುರಿಸಲಿದ್ದೇವೆ’ ಎಂದು ಪುಟಿನ್ ಒತ್ತಿ ಹೇಳಿದರು.

ರಷ್ಯಾ-ಉಕ್ರೇನ್ ಕದನದಲ್ಲಿ ಉಕ್ರೇನ್​ಗೆ ತನ್ನ ಭೂಪ್ರದೇಶ ರಕ್ಷಿಸಿಕೊಳ್ಳಲು ಹಲವು ದೇಶಗಳಿಂದ ನೆರವು ಹರಿದು ಬರುತ್ತಿದೆ. ಈ ಪ್ರಯತ್ನಗಳಿಗೆ ಇದೀಗ ಜರ್ಮನಿ ಸಹ ಕೈಜೋಡಿಸಿದ್ದು, ಯುದ್ಧಭೂಮಿಗೆ ಲೆಪಾರ್ಡ್​ ಟ್ಯಾಂಕ್​ಗಳನ್ನು ಕಳಿಸಿಕೊಡಲು, ತನ್ನಿಂದ ಯುದ್ಧ ಟ್ಯಾಂಕ್​ಗಳನ್ನು ಖರೀದಿಸಿರುವ ಪೊಲೆಂಡ್​ ಮತ್ತಿತರ ದೇಶಗಳೂ ಉಕ್ರೇನ್​ಗೆ ಟ್ಯಾಂಕ್​ ರವಾನಿಸಲು ಅನುಮತಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ಅಂತಿಮ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವಿರುವ ಈ ಬೆಳವಣಿಗೆಯನ್ನು ಕದನಕಣದ ಮಹತ್ವದ ತಿರುವು ಎಂದೇ ವಿಶ್ಲೇಷಿಸಲಾಗುತ್ತಿದೆ.

ಫೆಬ್ರುವರಿ 24, 2022ರಲ್ಲಿ ರಷ್ಯಾ ಉಕ್ರೇನ್ ಮೇಲಿನ ದಾಳಿ ಆರಂಭಿಸಿತು. ಆರಂಭದಲ್ಲಿ ಉಕ್ರೇನ್ ಹಿನ್ನಡೆ ಅನುಭವಿಸಿದರೂ ಪಾಶ್ಚಿಮಾತ್ಯ ದೇಶಗಳು ನೆರವಿಗೆ ಧಾವಿಸಿದ ನಂತರ ಉಕ್ರೇನ್ ಶಕ್ತ ರೀತಿಯಲ್ಲಿ ತಿರುಗಿಬಿತ್ತು. ಕೆಲ ತಿಂಗಳುಗಳ ನಂತರ ಪ್ರತಿದಾಳಿ ನಡೆಸಿ, ರಷ್ಯಾ ಗೆದ್ದುಕೊಂಡಿದ್ದ ಭೂಪ್ರದೇಶಗಳನ್ನು ಮರಳಿ ತನ್ನ ವಶಕ್ಕೆ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಯಿತು. ಆದರೆ ರಷ್ಯಾ ಆಗಲೀ, ಉಕ್ರೇನ್ ಆಗಲೀ ಈವರೆಗೆ ನಿರ್ಣಾಯಕ ಜಯ ಗಳಿಸಲು ಸಾಧ್ಯವಾಗಿಲ್ಲ. ಉಕ್ರೇನ್ ವಿರುದ್ಧದ ಯುದ್ಧ ಈ ಹಂತಕ್ಕೆ ಬರಬಹುದು ಎಂದು ರಷ್ಯಾ ಅಧ್ಯಕ್ಷ ನಿರೀಕ್ಷಿಸಿರಲಿಲ್ಲ. ಹೀಗಾಗಿಯೇ ಸ್ಟಾಲಿನ್​ಗ್ರಾಡ್​ನಲ್ಲಿ ಪುಟಿನ್ ಮಾಡಿರುವ ಭಾಷಣಕ್ಕೆ ಮಹತ್ವ ಬಂದಿದೆ.

‘ಯುದ್ಧಭೂಮಿಯಲ್ಲಿ ರಷ್ಯಾವನ್ನು ಮಣಿಸಬಹುದು ಎಂದುಕೊಳ್ಳುತ್ತಿರುವವರಿಗೆ ಆಧುನಿಕ ಯುದ್ಧಾಸ್ತ್ರಗಳ ಬಳಕೆ ವಿಚಾರದಲ್ಲಿ ರಷ್ಯಾದೊಂದಿಗೆ ಹೋರಾಡುವುದು ಸುಲಭವಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ನಾವು ಯಾವ ದೇಶದ ಗಡಿಗೂ ನಮ್ಮ ಟ್ಯಾಂಕ್​ಗಳನ್ನು ಕಳಿಸುತ್ತಿಲ್ಲ. ಆದರೆ ಅಗತ್ಯಬಿದ್ದರೆ ಹೇಗೆ ಬೇಕಾದರೂ ಪ್ರತಿಕ್ರಿಯಿಸಬಲ್ಲೆವು. ರಷ್ಯದೊಂದಿಗೆ ಹೋರಾಡಲು ಬರುವವರು ಈ ಅಂಶವನ್ನು ಮನಗಾಣಬೇಕು’ ಎಂದು ಸೂಚಿಸಿದರು.

ಪುಟಿನ್ ತಮ್ಮ ಭಾಷಣವನ್ನು ಸಂದಿಗ್ಧ ರೀತಿಯಲ್ಲಿ ನಿಲ್ಲಿಸಿದರು. ಆದರೆ ನಂತರ ಮಾತನಾಡಿದ ರಷ್ಯಾ ಸರ್ಕಾರದ ವಕ್ತಾರ ಡಿಮಿಟ್ರಿ ಪೆಸ್ಕೊವ್, ‘ಪಾಶ್ಚಿಮಾತ್ಯ ದೇಶಗಳ ಶಸ್ತ್ರಾಸ್ತ್ರಗಳು ರಷ್ಯಾ ಗಡಿ ತಲುಪಿದರೆ, ನಾವು ನಮಗೆ ಸರಿಕಂಡ ರೀತಿಯಲ್ಲಿ ಪ್ರತಿಕ್ರಿಯಿಸುತ್ತೇವೆ’ ಎಂದಷ್ಟೇ ಹೇಳಿದರು.

2ನೇ ಮಹಾಯುದ್ಧದ ಸ್ಟಾಲಿನ್​ಗ್ರಾಡ್​ ಕದನದಲ್ಲಿ (2ನೇ ಫೆಬ್ರುವರಿ 1943ರಲ್ಲಿ) ರಷ್ಯಾ ಸೇನೆಯು ಜರ್ಮನ್ ಸೇನೆಯ 91,000 ಸೈನಿಕರನ್ನು ಸೆರೆಹಿಡಿದಿತ್ತು. ಸ್ಟಾಲಿನ್​ಗ್ರಾಡ್​ಗೆ ಜರ್ಮನ್ ಸೇನೆ ಹಾಕಿದ್ದ ಮುತ್ತಿಗೆ ಮತ್ತು ರಷ್ಯಾ ಸೇನೆ ನಡೆಸಿದ ವಿಮೋಚನೆಯ ಹೋರಾಟದಲ್ಲಿ ಸೈನಿಕರೂ ಸೇರಿ ಸುಮಾರು 10 ಲಕ್ಷ ಮಂದಿ ಸಾವನ್ನಪ್ಪಿದ್ದರು. ರಷ್ಯನ್ನರ ಯುದ್ಧೋತ್ಸಾಹ, ಸಮರತಂತ್ರದ ಮೇಲ್ಮೆ ಹಾಗೂ ಹೋರಾಟದ ಕೆಚ್ಚಿಗೆ ಸ್ಟಾಲಿನ್​ಗ್ರಾಡ್ ಕದನವನ್ನು ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತದೆ. ಸ್ಟಾಲಿನ್​ಗ್ರಾಡ್​​ನಲ್ಲಿ ಇತ್ತೀಚೆಗಷ್ಟೇ ರಷ್ಯಾದ ಸರ್ವಾಧಿಕಾರಿ ಜೋಸೆಫ್ ಸ್ಟಾಲಿನ್​ರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಇದನ್ನೂ ಓದಿ: Russia Ukraine War: ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ಮತ್ತಷ್ಟು ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ