Kannada News World Russia Ukraine War Russian Navy lead warship sinks Threat of Nuclear Attack Says CIA
51ನೇ ದಿನಕ್ಕೆ ಉಕ್ರೇನ್ ಯುದ್ಧ: ಅತಿಮುಖ್ಯ ಸಮರನೌಕೆ ಕಳೆದುಕೊಂಡ ರಷ್ಯಾಕ್ಕೆ ಹಿನ್ನಡೆ, ಅಣ್ವಸ್ತ್ರ ದಾಳಿಯ ಭೀತಿ
ಸತತ ಹಿನ್ನಡೆಗಳಿಂದ ಕಂಗಾಲಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣ್ವಸ್ತ್ರ ದಾಳಿಗೆ ಮುಂದಾದರೂ ಆಶ್ಚರ್ಯವಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಎಚ್ಚರಿಸಿದ್ದಾರೆ.
ರಷ್ಯಾ ಟ್ಯಾಂಕ್ಗೆ ಗುರಿಯಿಟ್ಟ ಉಕ್ರೇನ್ ಯೋಧ (ಸಂಗ್ರಹ ಚಿತ್ರ)
Follow us on
ಉಕ್ರೇನ್ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಕ್ಷಿಪಣಿಗಳು ರಷ್ಯಾದ ಪ್ರಮುಖ ಯುದ್ಧನೌಕೆ ‘ಮೊಸಕ್ವಾ’ ಮೇಲೆ ಅಪ್ಪಳಿಸಿದ್ದು ಕಪ್ಪು ಸಮುದ್ರದಲ್ಲಿ ಯುದ್ಧನೌಕೆ ಮುಳುಗಿದೆ. ನೌಕೆಗೆ ಕ್ಷಿಪಣಿಗಗಳು ಅಪ್ಪಳಿಸಿದ ನಂತರ ಬೆಂಕಿ ಹೊತ್ತಿಕೊಂಡಿತು. ಹಡಗಿನಲ್ಲಿದ್ದ ಎಲ್ಲ 500 ಸಿಬ್ಬಂದಿಯನ್ನೂ ರಕ್ಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಹಡಗು ಮುಳುಗಿತು ಎಂದು ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ. ಉಕ್ರೇನ್-ರಷ್ಯಾ ಯುದ್ಧವು 51ನೇ ದಿನಕ್ಕೆ ಕಾಲಿಟ್ಟಿದೆ. ಸಮರನೌಕೆ ಮುಳುಗಿರುವುದು ರಷ್ಯಾಕ್ಕೆ ಆಗಿರುವ ದೊಡ್ಡ ನಷ್ಟ ಎಂದು ಅಮೆರಿಕ ವಿಶ್ಲೇಷಿಸಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ಆರಂಭವಾದ ನಂತರ ಮರಿಯುಪೋಲ್ಗೆ ಮುತ್ತಿಗೆ ಹಾಕುವುದೂ ಸೇರಿದಂತೆ ಹಲವು ಕಾರ್ಯಾಚರಣೆಗಳಲ್ಲಿ ದಾಳಿಪಡೆಗಳನ್ನು ‘ಮೊಸಕ್ವಾ’ ಯುದ್ಧನೌಕೆ ಮುನ್ನಡೆಸಿತ್ತು. ಈ ಹಿಂದೆ ಸಿರಿಯಾ ಮೇಲಿನ ರಷ್ಯಾ ದಾಳಿ ಸಂದರ್ಭದಲ್ಲಿಯೂ ಈ ಯುದ್ಧನೌಕೆ ಭಾಗಿಯಾಗಿತ್ತು.
ರಷ್ಯಾ ಉಕ್ರೇನ್ ಸಂಘರ್ಷವು 51ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಈವರೆಗಿನ 10 ಪ್ರಮುಖ ಬೆಳವಣಿಗೆಗಳ ವಿವರ ಇಲ್ಲಿದೆ.
ಯುದ್ಧಗ್ರಸ್ಥ ಉಕ್ರೇನ್ಗೆ ಬೇಟಿ ನೀಡಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಧ್ಯಕ್ಷರ ಭೇಟಿಗೆ ಪೂರ್ವಭಾವಿಯಾಗಿ ಅಮೆರಿಕ ಆಡಳಿತವು ಉಕ್ರೇನ್ಗೆ ಉನ್ನತ ಅಧಿಕಾರಿಗಳ ನಿಯೋಗವನ್ನು ಕಳುಹಿಸಿಕೊಡಲು ಸಮ್ಮತಿಸಿದೆ. ಉಕ್ರೇನ್ ಮೇಲೆ ರಷ್ಯಾ ಕಳೆದ ಫೆಬ್ರುವರಿ 24ರಂದು ದಾಳಿ ಆರಂಭಿಸಿತ್ತು.
ಉಕ್ರೇನ್ನ ರಾಜಧಾನಿ ಕೀವ್ ನಗರದಲ್ಲಿ ಮತ್ತೆ ಸ್ಫೋಟಕಗಳ ಸದ್ದು ಕೇಳಿಬಂದಿದೆ. ದಕ್ಷಿಣ ಉಕ್ರೇನ್ನ ಪ್ರಮುಖ ನಗರ ಖೆರ್ಸೊನ್, ಪೂರ್ವ ಉಕ್ರೇನ್ನ ಖಾರ್ಕಿವ್ ನಗರದ ಮೇಲೆಯೂ ರಷ್ಯಾ ಮತ್ತೆ ಬಾಂಬ್ ದಾಳಿ ಆರಂಬಿಸಿದೆ.
ವಿಶ್ವಸಂಸ್ಥೆಯಲ್ಲಿರುವ ಅಮೆರಿಕ ಮತ್ತು ರಷ್ಯಾದ ಪ್ರತಿನಿಧಿಗಳು ಆಹಾರ ಬೆಲೆಗಳ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದರು. ಉಕ್ರೇನ್ನಿಂದ ಆಮದು ಮಾಡಿಕೊಳ್ಳುವ ಗೋಧಿಯನ್ನು ಅವಲಂಬಿಸಿದ್ದ ಯೆಮೆನ್ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಇದನ್ನೇ ಪ್ರಸ್ತಾಪಿಸಿ ಅಮೆರಿಕದ ಪ್ರತಿನಿಧಿ ಲಿಂಡಾ ಥಾಮಸ್ ಗ್ರೀನ್ಫೀಲ್ಡ್ ವಿಶ್ವಸಂಸ್ಥೆಯ ಸಭೆಯಲ್ಲಿ ರಷ್ಯಾ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾದ ಪ್ರತಿನಿಧಿ ಡಿಮಿತ್ರಿ ಪೊಲಿಂಸ್ಕಿ, ವಿಶ್ವಕ್ಕೆ ಸಹಾಯ ಮಾಡಬೇಕು ಎಂದಿದ್ದರೆ ನಿಮಗೆ ನೀವೇ ಹಾಕಿಕೊಂಡಿರುವ ನಿರ್ಬಂಧ ತೆರವುಗೊಳಿಸಿ. ಬಡದೇಶಗಳಿಗೆ ನೆರವಾಗಿ ಎಂದು ಆಗ್ರಹಿಸಿದರು.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಈವರೆಗೆ ಸುಮಾರು 50 ಲಕ್ಷ ಜನರು ದೇಶ ತೊರೆದು, ವಿವಿಧ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ದೇಶದಲ್ಲಿ ಆಂತರಿಕವಾಗಿ ವಲಸೆ ಹೊರಟು ನಿರಾಶ್ರಿತರಾಗಿರುವವರ ಸಂಖ್ಯೆಯೂ ದೊಡ್ಡಮಟ್ಟದಲ್ಲಿದೆ.
ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ನಿರೀಕ್ಷಿತ ಗೆಲುವು ಈವರೆಗೆ ಸಿಕ್ಕಿಲ್ಲ. ಸತತ ಹಿನ್ನಡೆಗಳಿಂದ ಕಂಗಾಲಾಗಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಣ್ವಸ್ತ್ರ ದಾಳಿಗೆ ಮುಂದಾದರೂ ಆಶ್ಚರ್ಯವಿಲ್ಲ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನಿರ್ದೇಶಕ ವಿಲಿಯಮ್ ಬರ್ನ್ಸ್ ಎಚ್ಚರಿಸಿದ್ದಾರೆ.
ಸ್ವೀಡನ್ ಮತ್ತು ಫಿನ್ಲೆಂಡ್ಗಳು ಸಹ ನ್ಯಾಟೊ ಒಪ್ಪಂದದ ಭಾಗವಾಗಲು ಚಿಂತನೆ ನಡೆಸುತ್ತಿವೆ. ಈ ದೇಶಗಳಿಗೆ ನ್ಯಾಟೊ ಸದಸ್ಯತ್ವ ನೀಡಿದರೆ ರಷ್ಯಾ ಇನ್ನಷ್ಟು ಕೆರಳಿ ಅಣ್ವಸ್ತ್ರ ದಾಳಿಗೆ ಮುಂದಾಗಬಹುದು ಎಂದು ರಷ್ಯಾದ ಮಿತ್ರರಾಷ್ಟ್ರವೊಂದು ಎಚ್ಚರಿಸಿದೆ.
ರಷ್ಯಾ ಪಡೆಗಳು ಹಿಂದೆ ಸರಿದ ಪ್ರದೇಶದಲ್ಲಿ ಯುದ್ಧಾಪರಾಧಗಳು ಬೆಳಕಿಗೆ ಬರುತ್ತಿವೆ. ಜನರ ಕೈ ಹಿಂದಕ್ಕೆ ಕಟ್ಟಿ, ತಲೆಗೆ ಶೂಟ್ ಮಾಡಿ, ಶವಗಳನ್ನು ಹೂತುಹಾಕಿರುವ ಸಾಮೂಹಿಕ ಸಮಾಧಿಗಳು ಹಲವೆಡೆ ಪತ್ತೆಯಾಗಿವೆ. ಫಿರಂಗಿ ದಾಳಿಯಲ್ಲಿಯೂ ಸಾಕಷ್ಟು ಜನರು ಮೃತಪಟ್ಟಿದ್ದಾರೆ.
ಉಕ್ರೇನ್ ಮೇಲಿನ ದಾಳಿಗೆಂದು ರಷ್ಯಾ ನಿಯೋಜಿಸಿದ್ದ ಯೋಧರ ಪೈಕಿ ಈವರೆಗೆ ಸುಮಾರು 20 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಸರ್ಕಾರ ಹೇಳಿದೆ.
ರಷ್ಯಾ ತನ್ನ ಸೇನಾ ಕಾರ್ಯಾಚರಣೆಯ ನೀತಿಯನ್ನೇ ಬದಲಿಸಿಕೊಳ್ಳುತ್ತಿದೆ. ಫಿರಂಗಿ ದಾಳಿಯ ಜೊತೆಗೆ ಕ್ಷಿಪಣಿಗಳನ್ನೂ ಏಕಕಾಲಕ್ಕೆ ದಾಳಿಗೆ ಬಳಸಿಕೊಳ್ಳುವುದರ ಜೊತೆಗೆ ದೊಡ್ಡಮಟ್ಟದಲ್ಲಿ ಸೈನಿಕರನ್ನು ದಾಳಿಗೆ ನಿಯೋಜಿಸುತ್ತಿದೆ. ರಷ್ಯಾದ ಸಾಂಪ್ರದಾಯಿಕ ಯುದ್ಧತಂತ್ರಕ್ಕಿಂತ ಇದು ಭಿನ್ನ ಶೈಲಿ ಎಂದು ಬ್ರಿಟನ್ನ ರಕ್ಷಣಾ ಇಲಾಖೆ ಹೇಳಿದೆ.
ಉಕ್ರೇನ್ನ ರಾಜಧಾನಿ ಕೀವ್ ನಗರ ಗೆಲ್ಲುವ ಕನಸು ಭಗ್ನವಾದ ಹಿನ್ನೆಲೆಯಲ್ಲಿ ಇದೀಗ ರಷ್ಯಾ ತನ್ನ ಪಡೆಗಳನ್ನು ಪೂರ್ವ ಉಕ್ರೇನ್ನತ್ತ ಮರು ನಿಯೋಜಿಸಿದೆ. ಈ ಪ್ರದೇಶಗಳನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆದುಕೊಳ್ಳಲು ದೊಡ್ಡಮಟ್ಟದ ದಾಳಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.