ಸ್ಕಾಟ್​ಲೆಂಡ್​​ನಲ್ಲಿ 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತ ಮೂಲದ ವೈದ್ಯ; 35 ವರ್ಷ ಮಾಡಿದ್ದು ಇದೇ ಕೆಲಸ

| Updated By: Lakshmi Hegde

Updated on: Apr 15, 2022 | 1:37 PM

2018ರಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ವೈದ್ಯನ ವಿರುದ್ಧ ದೂರು ದಾಖಲಿಸಿದರು. ನೋಡನೋಡುತ್ತ ಬರೋಬ್ಬರಿ 54 ಮಹಿಳಾ ದೌರ್ಜನ್ಯದ ಕೇಸ್​ಗಳು ದಾಖಲಾದವು. ಆದರೆ 9 ಪ್ರಕರಣಗಳಲ್ಲಿ ಇವರ ವಿರುದ್ಧ ಆರೋಪ ಸಾಬೀತಾಗಲಿಲ್ಲ.

ಸ್ಕಾಟ್​ಲೆಂಡ್​​ನಲ್ಲಿ 48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಭಾರತ ಮೂಲದ ವೈದ್ಯ; 35 ವರ್ಷ ಮಾಡಿದ್ದು ಇದೇ ಕೆಲಸ
ಭಾರತ ಮೂಲದ ವೈದ್ಯ
Follow us on

ಯುನೈಟೆಡ್​ ಕಿಂಗಡಮ್​​ನ ಸ್ಕಾಟ್​​ಲೆಂಡ್​​ನಲ್ಲಿ ವೃತ್ತಿಯಲ್ಲಿರುವ ಭಾರತೀಯ ಮೂಲದ 72 ವರ್ಷದ ವೈದ್ಯನೊಬ್ಬನ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ಸಾಬೀತಾಗಿದೆ. ಅಂದಹಾಗೇ, ಈ ವೃದ್ಧ ವೈದ್ಯ ಲೈಂಗಿಕ ದೌರ್ಜನ್ಯ ಅಪರಾಧ ಎಸಗಿದ್ದು ಒಬ್ಬರೋ-ಇಬ್ಬರೋ ಮಹಿಳೆಯರ ವಿರುದ್ಧ ಅಲ್ಲ. ಕಳೆದ 35ವರ್ಷಗಳಲ್ಲಿ 48 ಮಹಿಳಾ ರೋಗಿಗಳ ಮೇಲೆ ಲೌಂಗಿಕ ದೌರ್ಜನ್ಯ ಎಸಗಿದ್ದು ಕೋರ್ಟ್​​ನಲ್ಲಿ ಸಾಬೀತಾಗಿದೆ.  ಈತ ತನ್ನ ಬಳಿ ಬರುತ್ತಿದ್ದ ಮಹಿಳಾ ರೋಗಿಗಳಿಗೆ ಮುತ್ತು ಕೊಡುವುದು, ಅನುಚಿತವಾಗಿ ಸ್ಪರ್ಶಿಸುವುದು, ತಪಾಸಣೆಯ ನೆಪದಲ್ಲಿ ರೋಗಿಗಳ ದೇಹದ ವಿವಿಧ ಭಾಗಕ್ಕೆ ಕೈಹಾಕುವುದು, ಅಶ್ಲೀಲ ಮಾತುಗಳನ್ನಾಡುವುದು ಮಾಡುತ್ತಿದ್ದ. ವೈದ್ಯನ ವಿರುದ್ಧದ ಪ್ರಕರಣ ಗ್ಲ್ಯಾಸ್ಗೋ  ಹೈಕೋರ್ಟ್​ ಮೆಟ್ಟಿಲೇರಿತ್ತು.

ವೈದ್ಯನ ಹೆಸರು ಕೃಷ್ಣ ಸಿಂಗ್ ಎಂದಾಗಿದ್ದು,  ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ರೋಗಿಗಳು ನನ್ನ ವಿರುದ್ಧ ಮಾಡಿದ ಆರೋಪಗಳು ತಪ್ಪು. ಕೆಲವು ಸಮಸ್ಯೆಗಳಿಗೆ ಹೀಗೇ ತಪಾಸಣೆ ಮಾಡಬೇಕು ಎಂದು ನಾನು ಭಾರತದಲ್ಲಿ ವೈದ್ಯಕೀಯ ತರಬೇತಿ ಪಡೆಯುವಾಗ ನನಗೆ ಕಲಿಸಿದ್ದಾರೆ. ಅದರಂತೆ ಮಾಡಿದ್ದೇನೆ ಎಂದು  ಈ ವೈದ್ಯ ಕೋರ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

ಈ ವೈದ್ಯ 1983ರಿಂದ 2018ರವರೆಗೆ ವಿವಿಧ ಅಪರಾಧಗಳನ್ನು ಮಾಡಿದ್ದಾರೆ. ಉತ್ತರ ಲನಾರ್ಕ್‌ಷೈರ್ ಎಂಬಲ್ಲಿ ವೃತ್ತಿಯಲ್ಲಿದ್ದಾಗ, ಅಪಘಾತ ವಿಭಾಗದಲ್ಲಿ, ತುರ್ತು ವಿಭಾಗಗಳಲ್ಲೂ ಕೂಡ ವೈದ್ಯ ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಷ್ಟೇ ಅಲ್ಲ, ಕೆಲವು ಮನೆಗಳಿಗೇ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೂ ಇದೇ ರೀತಿ ಮಾಡಿದ್ದಾರೆ ಎಂದು ಸ್ಕಾಟ್​ಲೆಂಡ್​ ಮಾಧ್ಯಮ ವರದಿ ಮಾಡಿದೆ. ಡಾ. ಸಿಂಗ್​ ವಿರುದ್ಧ ಕೋರ್ಟ್​ನಲ್ಲಿ ವಾದ ಮಂಡಿಸಿದ್ದ ಪ್ರಾಸಿಕ್ಯೂಟರ್​ ಏಂಜೆಲಾ ಗ್ರೇ, ಈ ವೈದ್ಯರಿಗೆ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗುವುದು ತಮ್ಮ ವೃತ್ತಿ ಜೀವನದ ಒಂದು ದಿನಚರಿಯಾಗಿಬಿಟ್ಟಿತ್ತು ಎಂದು ಹೇಳಿದ್ದಾರೆ.

2018ರಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಈ ವೈದ್ಯನ ವಿರುದ್ಧ ದೂರು ದಾಖಲಿಸಿದರು. ನೋಡನೋಡುತ್ತ ಬರೋಬ್ಬರಿ 54 ಮಹಿಳಾ ದೌರ್ಜನ್ಯದ ಕೇಸ್​ಗಳು ದಾಖಲಾದವು. ಆದರೆ 9 ಪ್ರಕರಣಗಳಲ್ಲಿ ಇವರ ವಿರುದ್ಧ ಆರೋಪ ಸಾಬೀತಾಗಲಿಲ್ಲ. ಉಳಿದ 48ಕೇಸ್​ಗಳಲ್ಲಿ ಇವರು ಅಪರಾಧಿ ಎಂಬುದು ಸಾಬೀತಾಗಿದೆ. ವಿಚಾರಣೆ ನಡೆಸಿದ ಹೈಕೋರ್ಟ್ ಜಡ್ಜ್​, ಸದ್ಯ ಮುಂದಿನ ತಿಂಗಳು ಶಿಕ್ಷೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ವೈದ್ಯ ಕೃಷ್ಣ ಸಿಂಗ್​ ತಮ್ಮ ಪಾಸ್​ಪೋರ್ಟ್​ನ್ನು ಒಪ್ಪಿಸಲು ಸಿದ್ಧ ಇರುವ ಕಾರಣ, ಅವರೇನೂ ಜೈಲಿನಲ್ಲಿ ಇರುವುದು ಬೇಡ ಎಂದು ಜಾಮೀನು ನೀಡಿದ್ದಾರೆ.

ಇದನ್ನೂ ಓದಿ: Viral: ಗೂಗಲ್​ಮ್ಯಾಪ್​ನಲ್ಲಿ ಕಾಣಿಸಿಕೊಂಡ ಕೈ-ಕಾಲು, ತಲೆಯೇ ಇಲ್ಲದ ಆಕೃತಿ; ಬೆಚ್ಚಿಬಿದ್ದ ಜನ