ನವದೆಹಲಿ, ಏಪ್ರಿಲ್ 14: ಭಾರತಕ್ಕೆ ಮಾರಕವಾದ ಉಗ್ರರು, ಡಾನ್ಗಳು ವಿಶ್ವದ ವಿವಿಧೆಡೆ ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಮುಂದುವರಿದಿದೆ. ಹನ್ನೊಂದು ವರ್ಷದ ಹಿಂದೆ ಪಾಕಿಸ್ತಾನದ ಜೈಲೊಂದರಲ್ಲಿ ಸರಬ್ಜಿತ್ ಸಿಂಗ್ ಅವರನ್ನು ಕೊಂದರೆಂದು ಆರೋಪಿಸಲಾಗಿದ್ದ ಆಮಿರ್ ಸರ್ಫರಾಜ್ (Amir Sarfaraz) ಎಂಬ ಅಂಡರ್ವರ್ಲ್ಡ್ ಡಾನ್ ಅನ್ನು ಅಪರಿಚಿತರು ಕೊಂದು ಹಾಕಿದ್ದಾರೆ. ಯಾರು ಈ ಕೃತ್ಯ ಎಸಗಿದ್ದು ಎಂಬುದು ಗೊತ್ತಾಗಿಲ್ಲ. ಇಬ್ಬರು ಅಪರಿಚಿತ ಬಂದೂಕುಧಾರಿಗಳು (unknown gunmen) ಸರ್ಫರಾಜ್ನನ್ನು ಗುಂಡಿಟ್ಟು ಹತ್ಯೆಗೈದಿರುವುದು ವರದಿಯಾಗಿದೆ.
ಪಂಜಾಬ್ನ ನಿವಾಸಿ ಸರಬ್ಜಿತ್ ಸಿಂಗ್ ಅವರನ್ನು ಭಾರತದ ಗುಪ್ತಚರನೆಂದು ಭಾವಿಸಿ ಪಾಕಿಸ್ತಾನವು ಬಂಧಿಸಿತ್ತು. 23 ವರ್ಷ ಲಾಹೋರ್ನ ಕೋಟ ಲಖಪತ್ ಜೈಲಿನಲ್ಲಿದ್ದ ಅವರನ್ನು 2013ರಲ್ಲಿ ಜೈಲಿನ ಇತರ ಕೈದಿಗಳು ಮಾರಣಾಂತಿಕ ಹಲ್ಲೆ ಎಸಗಿದ್ದರು. ಸ್ವಲ್ಪ ದಿನಗಳ ಬಳಿಕ ಸರಬ್ಜಿತ್ ಸಿಂಗ್ ಅಸುನೀಗಿದ್ದರು. ಬಳಿಕ ಅವರ ದೇಹವನ್ನು ಪಾಕಿಸ್ತಾನ ಭಾರತಕ್ಕೆ ಕಳುಹಿಸಿಕೊಟ್ಟಿತು.
2013ರಲ್ಲಿ ಸರಬ್ಜಿತ್ ಸಿಂಗ್ ಮೇಲೆ ಲಾಹೋರ್ ಜೈಲಿನಲ್ಲಿ ಹಲ್ಲೆ ಎಸಗಿದ್ದ ಕೈದಿಗಳಲ್ಲಿ ಆಮಿರ್ ಸರ್ಫರಾಜ್ ಒಬ್ಬನಾಗಿದ್ದ. ಈತ ಪಾಕಿಸ್ತಾನದ ದೊಡ್ಡ ಭೂಗತದೊರೆಗಳಲ್ಲಿ ಒಬ್ಬ. ಸರಬ್ಜಿತ್ ಸಿಂಗ್ ಹತ್ಯೆಯಲ್ಲಿ ಈತ ಆರೋಪಿಯಾಗಿದ್ದರೂ 2018ರಲ್ಲಿ ಪಾಕಿಸ್ತಾನ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯ ಕಾರಣ ಹೇಳಿ ಈತನನ್ನು ಆರೋಪಮುಕ್ತಗೊಳಿಸಿತ್ತು. ಇದೀಗ ಅದೇ ಲಾಹೋರ್ನಲ್ಲಿ ಅಪರಿಚಿತ ಬಂದೂಕುಧಾರಿಗಳು ಸರ್ಫರಾಜ್ನನ್ನು ಕೊಂದುಹಾಕಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ, ಕಾರಿನಲ್ಲಿ ಶವ ಪತ್ತೆ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 1990ರಲ್ಲಿ ಬಾಂಬ್ ಸ್ಫೋಟ ಘಟನೆ ಸಂಭವಿಸಿ 14 ಮಂದಿ ಬಲಿಯಾಗಿದ್ದರು. ಭಾರತದಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಭಾಗಕ್ಕೆ ಹೋಗಿದ್ದ ಪಂಜಾಬ್ನ ಸರಬ್ಜಿತ್ ಸಿಂಗ್ರನ್ನು ಪಾಕಿಸ್ತಾನದ ಸೈನಿಕರು ಹಿಡಿದಿದ್ದರು. ಪಂಜಾಬ್ ಬಾಂಬ್ ಸ್ಫೋಟ ಘಟನೆಯಲ್ಲಿ ಸರಬ್ಜಿತ್ ಕೈವಾಡ ಇದೆ ಎಂದು ಪಾಕಿಸ್ತಾನ ಬಗೆಯಿತು. ಭಾರತದ ಅಧಿಕಾರಿಗಳು ಮತ್ತು ಸರಬ್ಜಿತ್ ಸಿಂಗ್ ಕುಟುಂಬ ಈ ಆರೋಪವನ್ನು ನಿರಾಕರಿಸಿದರೂ ಅವರನ್ನು ಜೈಲಿನಲ್ಲಿ ಕೂಡಿ ಹಾಕಲಾಗಿತ್ತು.
ಲಾಹೋರ್ನ ಕೋಟ ಲಖಪತ್ ಜೈಲಿನಲ್ಲಿ 23 ವರ್ಷ ಕಾಲ ಸರಬಜಿತ್ ಸಿಂಗ್ ಅವರನ್ನು ಇರಿಸಲಾಗಿತ್ತು. ಭಾರತದಲ್ಲಿ ಅಫ್ಜಲ್ ಗುರುವನ್ನು ನೇಣಿಗೆ ಹಾಕಿದ ಬಳಿಕ ಲಾಹೋರ್ ಜೈಲಿನಲ್ಲಿ ಸರಬಜಿತ್ ಸಿಂಗ್ ಮೇಲೆ ಆಮಿರ್ ಸರ್ಫರಾಜ್ ಹಾಗೂ ಇತರ ಕೈದಿಗಳು ಮಾರಣಾಂತಿಕ ಹಲ್ಲೆ ಎಸಗಿದ್ದರು.
ಇದನ್ನೂ ಓದಿ: ಇದು ಕೇವಲ ಟ್ರೇಲರ್: ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ, ಹೊಣೆ ಹೊತ್ತ ಗ್ಯಾಂಗ್ಸ್ಟರ್ ಲಾರೆನ್ಸ್ ಸಹೋದರ
ಬಳಿಕ ಸರಬಜಿತ್ ಸಿಂಗ್ ಅವರನ್ನು ಜಿನ್ನಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಮಿದುಳಿಗೆ ಗಂಭೀರ ಗಾಯಗಳಾದ್ದರಿಂದ ಕೆಲ ದಿನಗಳಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಆಗ 49 ವರ್ಷ ವಯಸ್ಸಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ