ವಿರೋಧಿಗಳನ್ನೆಲ್ಲ ಕೊಂದು ತಿಂದಿದ್ದ ಉಗಾಂಡಾದ ಕ್ರೂರಿ, ನರಭಕ್ಷಕ ಅಧ್ಯಕ್ಷ ಇದಿ ಅಮೀನ್!

|

Updated on: Sep 22, 2023 | 3:29 PM

ಉಗಾಂಡಾದ ಮಾಜಿ ಅಧ್ಯಕ್ಷ ಇದಿ ಅಮೀನ್ ನರಭಕ್ಷಕ ಎಂಬ ವಿಚಾರ ಬೆಳಕಿಗೆ ಬಂದಿದ್ದು ತೀರಾ ತಡವಾಗಿ. ಅವರ ವೈದ್ಯ ಕಿಬೋ ರಿಂಗೋಟಾ ಒಮ್ಮೆ ಅಮೀನ್ ಅವರ ಅಡುಗೆ ಮನೆಯಲ್ಲಿ ಐಸ್ ತೆಗೆಯಲು ಫ್ರಿಡ್ಜ್ ಓಪನ್ ಮಾಡಿದಾಗ ಇಬ್ಬರು ಮನುಷ್ಯರ ದೇಹಗಳನ್ನು ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಇದಾದ ನಂತರ ಇದಿ ಅಮೀನ್ ಮನುಷ್ಯರ ಮಾಂಸ ತಿನ್ನುತ್ತಾರೆ ಎಂಬುದು ಬಯಲಾಯಿತು.

ವಿರೋಧಿಗಳನ್ನೆಲ್ಲ ಕೊಂದು ತಿಂದಿದ್ದ ಉಗಾಂಡಾದ ಕ್ರೂರಿ, ನರಭಕ್ಷಕ ಅಧ್ಯಕ್ಷ ಇದಿ ಅಮೀನ್!
ಇದಿ ಅಮೀನ್
Image Credit source: navabharat times
Follow us on

ನರಭಕ್ಷಕ ಎಂಬ ಪದ ಬಹಳ ಹಿಂದಿನ ಕಾಲದ್ದು. ಆಗೆಲ್ಲ ಮನುಷ್ಯರನ್ನು ಮನುಷ್ಯರೇ ತಿನ್ನುತ್ತಿದ್ದರು ಎಂಬ ಕತೆಗಳನ್ನೆಲ್ಲ ನಾವು ಕೇಳಿ ಅಚ್ಚರಿ ಪಟ್ಟಿದ್ದೇವೆ. ಆದರೆ, ತೀರಾ ಇತ್ತೀಚಿನವರೆಗೂ ಆ ರೀತಿಯ ಮನುಷ್ಯರಿದ್ದರು. ಅದರಲ್ಲಿ ಉಗಾಂಡಾದ ಮಾಜಿ ಅಧ್ಯಕ್ಷ ಇದಿ ಅಮೀನ್ (Idi Amin) ಕೂಡ ಒಬ್ಬರು. ಮಾನವನ ಮಾಂಸವನ್ನು ತಿನ್ನುವ ಅನಾಗರಿಕರನ್ನು ನರಭಕ್ಷಕರು ಎಂದು ಕರೆಯುತ್ತಾರೆ. ಆದರೆ, ಒಂದು ದೇಶದ ಅಧ್ಯಕ್ಷರಾಗಿದ್ದವರೇ ನರಭಕ್ಷಕರಾದರೆ ಆ ದೇಶದ ಪ್ರಜೆಗಳ ಕತೆ ಏನು? ಅವರ ಸ್ಥಿತಿ ಹೇಗಿರಬಹುದು?

ಉಗಾಂಡಾದ ಹಿಟ್ಲರ್ ಎಂದೇ ಕರೆಯಲ್ಪಡುತ್ತಿದ್ದ ಇದಿ ಅಮೀನ್ 6 ಲಕ್ಷ ಜನರನ್ನು ಕೊಂದ ಆರೋಪ ಎದುರಿಸಿದ್ದರು. ಬಹಳ ಕ್ರೂರಿ, ಅನಾಗರಿಕರಾಗಿದ್ದ ಇದಿ ಅಮೀನ್ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಬರೋಬ್ಬರಿ 6 ಅಡಿ 4 ಇಂಚು ಎತ್ತರ ಮತ್ತು 160 ಕೆಜಿ ತೂಕವಿದ್ದ ಇದಿ ಅಮೀನ್ ನೋಡಲು ಕೂಡ ರಾಕ್ಷಸನಂತೆಯೇ ಕಾಣುತ್ತಿದ್ದರು. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರು ಬಾಕ್ಸಿಂಗ್‌ನಲ್ಲಿ ತರಬೇತಿ ಪಡೆದಿದ್ದರು. ಅವರು ಸತತ 9 ವರ್ಷಗಳ ಕಾಲ ಉಗಾಂಡಾದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಕೂಡ ಆಗಿದ್ದರು.

ಆಫ್ರಿಕನ್ ದೇಶವಾದ ಉಗಾಂಡಾದ ನರಭಕ್ಷಕ ಅಧ್ಯಕ್ಷ ಇದಿ ಅಮೀನ್ ಅವರ ಬಗ್ಗೆ ಕುತೂಹಲದ ಸಂಗತಿಗಳು ಇಲ್ಲಿದೆ. ಇದಿ ಅಮೀನ್ 6 ಲಕ್ಷ ಜನರನ್ನು ಕೊಂದ ಆರೋಪವನ್ನೂ ಎದುರಿಸಿದ್ದರು. ಅವರು ನರಭಕ್ಷಕ ಎಂಬ ಸುದ್ದಿ ಹೊರಬಂದಾಗ, ಜನರು ಅವರನ್ನು ದೆವ್ವ, ಮೃಗ, ಅನಾಗರಿಕ ಮತ್ತು ಆಫ್ರಿಕಾದ ಹಿಟ್ಲರ್ ಎಂದು ಕರೆಯಲು ಪ್ರಾರಂಭಿಸಿದರು. ಆದರೆ ಅದ್ಯಾವುದಕ್ಕೂ ಇದಿ ಅಮೀನ್ ತಲೆ ಕೆಡಿಸಿಕೊಳ್ಳಲೇ ಇಲ್ಲ. ಅವರು ತನಗೆ ಇಷ್ಟಬಂದಂತೆಯೇ ಬದುಕಿದರು. 2003ರಲ್ಲಿ ಅವರು ನಿಧನ ಹೊಂದಿದರು.

ಕ್ರೂರತನಕ್ಕೆ ಇನ್ನೊಂದು ಹೆಸರೇ ಇದಿ ಅಮೀನ್:

ತಮ್ಮ ದೇಶದ ಅಧ್ಯಕ್ಷ ಕ್ರೂರಿ ಎಂಬುದು ಉಗಾಂಡಾದ ಜನರಿಗೆ ತಿಳಿದಿತ್ತು. ಆದರೆ ಅವರ ವಿರುದ್ಧ ಧ್ವನಿ ಎತ್ತುವ ಧೈರ್ಯ ಯಾರಿಗೂ ಇರಲಿಲ್ಲ. ಏಕೆಂದರೆ, ಒಮ್ಮೆ ಕೆಲವರು ಇದಿ ಅಮೀನ್ ವಿರುದ್ಧ ಧ್ವನಿ ಎತ್ತಿದಾಗ ಅವರನ್ನು ಸಾರ್ವಜನಿಕವಾಗಿ ಮರದ ಕಂಬಗಳಿಗೆ ಕಟ್ಟಿ, ಬಾಯಿಗೆ ಕಪ್ಪು ಬಟ್ಟೆ ಸುತ್ತಿ ನಂತರ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಬಳಿಕ ಆ ಹೆಣಗಳನ್ನು ಟ್ರಕ್‌ನಲ್ಲಿ ತುಂಬಿ ಇದಿ ಅಮೀನ್‌ ನಿವಾಸಕ್ಕೆ ತರಲಾಗಿತ್ತು. ಆ ಮೃತ ದೇಹಗಳನ್ನು ತಿಂದು ಇದಿ ಅಮೀನ್ ತಮ್ಮ ಹಸಿವನ್ನು ನೀಗಿಸಿಕೊಂಡಿದ್ದರು ಎಂದು ಹೇಳಲಾಗುತ್ತದೆ!

ಇದನ್ನೂ ಓದಿ: Shocking News: ತನ್ನಂತೇ ಕಾಣುವ ಯುವತಿಯನ್ನು ಕೊಂದು, ತಾನೇ ಸತ್ತಿದ್ದೇನೆಂದು ನಂಬಿಸಿದ ಮಹಿಳೆ; ಕೊನೆಗೂ ಬಯಲಾಯ್ತು ಸತ್ಯ

ನರಭಕ್ಷಕ ಉಗಾಂಡಾದ ಅಧ್ಯಕ್ಷರಾಗಿದ್ದು ಹೇಗೆ?:

ನರಭಕ್ಷಕ ವ್ಯಕ್ತಿಯೊಬ್ಬರು ಉಗಾಂಡಾ ದೇಶದ ಅಧ್ಯಕ್ಷರಾಗಿದ್ದು ಹೇಗೆ? ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಸೇನಾ ಬಟ್ಲರ್ ಆಗಿದ್ದ ಇದಿ ಅಮೀನ್ ದೇಶದ ಅಧ್ಯಕ್ಷರಾಗುವವರೆಗಿನ ಕತೆ ಇಲ್ಲಿದೆ.

ಉಗಾಂಡಾದ ಸೇನೆಯಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ ಇದಿ ಅಮೀನ್‌ ಆಗಿಂದಲೇ ಬಹಳ ಅಪಾಯಕಾರಿ ಆಗಿದ್ದರು. ಅವರ 6 ಅಡಿ 4 ಇಂಚು ಎತ್ತರ ಮತ್ತು 160 ಕೆಜಿ ತೂಕದ ದೇಹವೇ ಅವರಿಗೆ ಪ್ಲಸ್ ಪಾಯಿಂಟ್ ಆಯಿತು. ಉಗಾಂಡಾದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ 9 ವರ್ಷಗಳ ಕಾಲ ಅವರು ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು. ಇದು ಅವರಿಗೆ ಸೈನ್ಯದಲ್ಲಿ ಬಡ್ತಿ ಪಡೆಯಲು ಸಹಾಯ ಮಾಡಿತು. ಈ ರೀತಿಯಾಗಿ, 1965ರ ಹೊತ್ತಿಗೆ ಇದಿ ಅಮೀನ್ ಉಗಾಂಡಾದ ಸೇನೆಯ ಜನರಲ್ ಆದರು.

ಉಗಾಂಡಾದ ಸೇನಾ ಜನರಲ್ ಆದ ನಂತರ ಇದಿ ಅಮೀನ್ ಉಗಾಂಡಾದ ಅಧಿಕಾರದ ಮೇಲೆ ಕಣ್ಣಿಟ್ಟರು. ಇದಿ ಅಮೀನ್‌ನನ್ನು ನಂಬಿದ್ದ ಉಗಾಂಡಾದ ಪ್ರಧಾನಿ ಮಿಲ್ಟನ್ ಒಬೋಟೆ 1971ರ ಜನವರಿ 25ರಂದು ಸಿಂಗಾಪುರದಲ್ಲಿದ್ದಾಗ ಅವರ ನಂಬಿಕೆಗೆ ಕೊಳ್ಳಿಯಿಟ್ಟ ಇದಿ ಅಮೀನ್ ರಾಜಧಾನಿ ಕಂಪಾಲಾದಲ್ಲಿ ರಕ್ತಸಿಕ್ತ ದಂಗೆಯನ್ನು ನಡೆಸಿದರು. ಕೇವಲ ಮೂರು ತಾಸಿನ ಸೇನಾ ಕಾರ್ಯಾಚರಣೆಯಲ್ಲಿ ಇಡೀ ದೇಶದ ಅಧಿಕಾರದ ಲಗಾಮು ಇದಿ ಅಮೀನ್ ಕೈಗೆ ಬಂದಿತು.

ಇದನ್ನೂ ಓದಿ: Shocking News: 3 ವರ್ಷದ ಮಗಳನ್ನು ಕೊಂದು ಚಲಿಸುವ ರೈಲಿನಿಂದ ಬಿಸಾಡಿದ ತಾಯಿ; ಆಮೇಲೆ ಆಗಿದ್ದೇ ಬೇರೆ ಕತೆ!

ಹೀಗಾಗಿ, 1971ರ ಜನವರಿ 25 ಉಗಾಂಡಾ ಮತ್ತು ಆಫ್ರಿಕಾಕ್ಕೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಕಪ್ಪು ದಿನವಾಗಿದೆ. ನರಭಕ್ಷಕ ಇದಿ ಅಮೀನ್ ಉಗಾಂಡಾದ ಅಧಿಕಾರವನ್ನು ಪಡೆದ ತಕ್ಷಣ ಅವರು ತನ್ನ ರಕ್ತಸಿಕ್ತ ಬಣ್ಣಗಳನ್ನು ತೋರಿಸಲು ಪ್ರಾರಂಭಿಸಿದರು. ತನ್ನೆಲ್ಲ ವಿರೋಧಿಗಳನ್ನು ಕೊಂದು ಹಾಕಿದ ಇದಿ ಅಮೀನ್ ಉಗಾಂಡಾದಲ್ಲಿ ಸರ್ವಾಧಿಕಾರಿಯಾಗಿ ಮೆರೆದರು.

ಇದಿ ಅಮೀನ್ ಅವರನ್ನು ದೊಡ್ಡಣ್ಣ (ಬಿಗ್ ಬ್ರದರ್) ಎಂದು ಕರೆಯುತ್ತಿದ್ದರು. ಉಗಾಂಡಾದಲ್ಲಿ ಅವರನ್ನು ವಿರೋಧಿಸುವವರಿಗೆ ಬಹಿರಂಗವಾಗಿ ಮರಣದಂಡನೆ ವಿಧಿಸಲಾಗಿತ್ತು. ಆದರೆ ಇದಿ ಅಮೀನ್ ನರಭಕ್ಷಕ ಎಂಬ ವಿಚಾರ ಬೆಳಕಿಗೆ ಬಂದಿದ್ದು ತೀರಾ ತಡವಾಗಿ. ಈ ರಹಸ್ಯವನ್ನು ಮೊದಲು ಬಹಿರಂಗಪಡಿಸಿದ್ದು ಅವರ ವೈದ್ಯ ಕಿಬೋ ರಿಂಗೋಟಾ. ಒಮ್ಮೆ ಡಾ. ಕಿಬೋ ರಿಂಗೋಟಾ ಇದಿ ಅಮೀನ್ ಅವರ ಮನೆಗೆ ವೈದ್ಯಕೀಯ ತಪಾಸಣೆ ಮಾಡಲು ಹೋಗಿದ್ದಾಗ ಫ್ರಿಡ್ಜ್‌ನಿಂದ ಐಸ್ ಪಡೆಯಲು ಇದಿ ಅಮೀನ್ ಅವರ ಅಡುಗೆಮನೆಗೆ ಹೋಗಿದ್ದರು. ಆಗ ಫ್ರಿಡ್ಜ್ ತೆರೆದ ಅವರು ಬೆಚ್ಚಿಬಿದ್ದರು. ಆ ಫ್ರಿಡ್ಜ್​ನಲ್ಲಿ ಇಬ್ಬರು ಮನುಷ್ಯರ ದೇಹಗಳನ್ನು ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಡಾ. ಕಿಬೋ ಈ ಬಗ್ಗೆ ಅಲ್ಲಿಯ ಇತರ ಕೆಲವು ಸಿಬ್ಬಂದಿಯ ಬಳಿ ಕೇಳಿದಾಗ ಅವರು ಇದಿ ಅಮೀನ್ ಅವರ ಫ್ರಿಡ್ಜ್​ನಲ್ಲಿ ಯಾವಾಗಲೂ ಮನುಷ್ಯರ ಅಂಗಗಳು ತುಂಬಿರುತ್ತದೆ ಎಂದು ಗೊತ್ತಾಯಿತು.

ಮುಖ್ಯ ನ್ಯಾಯಮೂರ್ತಿಗಳನ್ನೇ ಕೊಂದು ತಿಂದ ಕ್ರೂರಿ:

1975ರಲ್ಲಿ ಇದಿ ಅಮೀನ್ ಅವರು ತನಗೆ ಅವಿಧೇಯರಾದ ಉಗಾಂಡಾ ದೇಶದ ಮುಖ್ಯ ನ್ಯಾಯಮೂರ್ತಿಗಳನ್ನು ಕೊಲೆ ಮಾಡಿದ್ದರು ಎಂದು ಹೇಳಲಾಗುತ್ತದೆ. ಆ ಮುಖ್ಯ ನ್ಯಾಯಮೂರ್ತಿಯ ಮರಣೋತ್ತರ ಪರೀಕ್ಷೆ ಮಾಡುವಾಗ ಅಲ್ಲಿಗೆ ಬಂದ ಇದಿ ಅಮೀನ್ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರನ್ನು ಅಲ್ಲಿಂದ ಹೊರಡುವಂತೆ ಹೇಳಿದರು. ನಂತರ ಇದಿ ಅಮೀನ್ ಮುಖ್ಯ ನ್ಯಾಯಮೂರ್ತಿಯ ದೇಹವನ್ನು ಕತ್ತರಿಸಿಕೊಂಡು ಆ ಮಾಂಸವನ್ನು ತಿಂದರು ಎಂಬ ಭಯಾನಕ ಕತೆಗಳೂ ಅವರ ಬಗ್ಗೆ ಇವೆ.

ಇದಿ ಅಮೀನ್ ಉಗಾಂಡಾವನ್ನು 8 ವರ್ಷಗಳ ಕಾಲ ಆಳಿದರು. ಈ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ಉಗಾಂಡಾದ ಬೀದಿಗಳಲ್ಲಿ ಹಲವಾರು ಮೃತ ದೇಹಗಳು ಕಾಣುತ್ತಿದ್ದವು. ಇದಿ ಅಮೀನ್ ತನ್ನ ಆಳ್ವಿಕೆಯಲ್ಲಿ ಉಗಾಂಡಾದಲ್ಲಿ 6 ಲಕ್ಷ ಜನರನ್ನು ಕೊಂದಿದ್ದಾರೆ ಎಂದು ಹೇಳಲಾಗುತ್ತದೆ.

6 ಹೆಂಡತಿಯರಿಂದ 45 ಮಕ್ಕಳು:

ಇದಿ ಅಮೀನ್ ಸರ್ಕಾರದ ಹಣದಲ್ಲಿ ಪಾರ್ಟಿಗಳನ್ನು ಮಾಡುತ್ತಿದ್ದರು. ಅವರು 6 ಬಾರಿ ವಿವಾಹವಾಗಿದ್ದರು. 6 ಹೆಂಡತಿಯರಿಂದ 45 ಮಕ್ಕಳನ್ನು ಹೊಂದಿದ್ದರು. ಇದಲ್ಲದೆ, ಅವರ ಬಂಗಲೆಯಲ್ಲಿ 35ಕ್ಕೂ ಹೆಚ್ಚು ಮಹಿಳೆಯರು ಇದ್ದರು. ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಇದಿ ಅಮೀನ್​ನ 100ಕ್ಕೂ ಹೆಚ್ಚು ಮಕ್ಕಳಿಗೆ ಆ 35 ಮಹಿಳೆಯರು ಜನ್ಮ ನೀಡಿದ್ದರು.

ಇದಿ ಅಮೀನ್ ಅವರ ಎರಡನೇ ಪತ್ನಿ ಕೆ ಅಡೋರಾ ತನ್ನ ಗಂಡ ನರಭಕ್ಷಕ ಎಂದು ತಿಳಿದಾಗ ಇದಿ ಅಮೀನ್​ನನ್ನು ದ್ವೇಷಿಸಲು ಪ್ರಾರಂಭಿಸಿದಳು. ನಂತರ ಆಕೆ ತನ್ನ ವೈದ್ಯರೊಂದಿಗೆ ಪ್ರೀತಿಯಲ್ಲಿ ಬಿದ್ದಳು. ಈ ವಿಷಯ ತಿಳಿದ ಇದಿ ಅಮೀನ್ ತನ್ನ ಹೆಂಡತಿ ಕೆ ಅಡೋರಳನ್ನು ಬರ್ಬರವಾಗಿ ಕೊಂದಿದ್ದರು.

ಇದನ್ನೂ ಓದಿ: Viral Video: ಸಮುದ್ರದೊಳಗೊಬ್ಬ ಡೆಂಟಿಸ್ಟ್​; ಇವರ ಕಾರ್ಯಕ್ಷಮತೆಯನ್ನು ಮೆಚ್ಚಿದ ನೆಟ್ಟಿಗರು

1978ರ ಅಕ್ಟೋಬರ್ 30ರಂದು ಇದಿ ಅಮೀನ್ ಸೈನ್ಯವು ತನ್ನ ನೆರೆಯ ದೇಶವಾದ ತಾಂಜೇನಿಯಾದ ಮೇಲೆ ದಾಳಿ ಮಾಡಿತು. ಗಡಾಫಿ ಅಮೀನ್ ಸೈನ್ಯಕ್ಕೆ ಸಹಾಯ ಮಾಡಲು ಲಿಬಿಯಾ ಸೈನ್ಯವನ್ನು ಕಳುಹಿಸಿದರು. ತಾಂಜೇನಿಯಾದೊಂದಿಗೆ ಯುದ್ಧವು 6 ತಿಂಗಳ ಕಾಲ ಮುಂದುವರೆಯಿತು. ನಂತರ ತಾಂಜೇನಿಯಾದ ಸೈನ್ಯವು ಉಗಾಂಡಾದ ರಾಜಧಾನಿ ಕಂಪಾಲಾವನ್ನು 10 ಏಪ್ರಿಲ್ 1979ರಂದು ಪ್ರವೇಶಿಸಿತು. ಇದಾದ ಬಳಿಕ ಇದಿ ಅಮೀನ್‌ ಖಿನ್ನತೆಗೆ ಒಳಗಾದರು. ತನ್ನ ಜೀವವನ್ನು ಉಳಿಸಿಕೊಳ್ಳಲು ಓಡಿಹೋಗಿ, ಉಗಾಂಡಾವನ್ನು ಶಾಶ್ವತವಾಗಿ ತೊರೆದರು.

ಉಗಾಂಡಾದಿಂದ ಓಡಿಹೋದ ಇದಿ ಅಮೀನ್ ಮೊದಲು ತನ್ನ ಸ್ನೇಹಿತ ಕರ್ನಲ್ ಗಡಾಫಿಯಿಂದ ಆಶ್ರಯ ಪಡೆಯಲು ಲಿಬಿಯಾ ತಲುಪಿದರು. ನಂತರ ಸೌದಿ ಅರೇಬಿಯಾವನ್ನು ತಲುಪಿದರು. ಇದಿ ಅಮೀನ್ ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ 24 ವರ್ಷಗಳ ಕಾಲ ವಾಸಿಸುತ್ತಿದ್ದರು. ಈ ಸರ್ವಾಧಿಕಾರಿ 2003ರ ಜುಲೈ 20ರಂದು ನಿಧನರಾದರು. ಉಗಾಂಡಾದ ಜನರು ಇದಿ ಅಮೀನ್‌ನನ್ನು ಎಷ್ಟರ ಮಟ್ಟಿಗೆ ದ್ವೇಷಿಸುತ್ತಿದ್ದರು ಎಂದರೆ ಅವರು ಸತ್ತ ಮೇಲೂ ಅವರ ದೇಹವನ್ನು ತಮ್ಮ ದೇಶದಲ್ಲಿ ಹೂಳಲು ಸಹ ಬಿಡಲಿಲ್ಲ. ಹೀಗಾಗಿ, ಇದಿ ಅಮೀನ್ ಶವ ಕೂಡ ಉಗಾಂಡಾವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ. ಉಗಾಂಡಾವನ್ನು ಆಳಿದ್ದ ಅಧ್ಯಕ್ಷರೊಬ್ಬರು ತನ್ನ ಕ್ರೂರತನದಿಂದಾಗಿ ಅನಾಥ ಶವವಾಗಬೇಕಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ